ಕಾವ್ಯಯಾನ
ನೆನಪ ತಿಜೋರಿ ಶಾಲಿನಿ ಆರ್. ನೆನಪಿಗೊಂದು ಮೊಳೆ ಹೊಡೆಯುತಿದ್ದೇನೆ, ಯಾರಿರದ ಇರುಳಲಿ ಚಂದಿರನ ಬೆಳಕಲಿ, ಮೆಲ್ಲನೆ ಅರಳಿದ ನೈದಿಲೆಗು ಸಂಕೋಚ, ಸದ್ದು ಕೇಳಿಸಿತೇ ಅವನಂಗಳಕು! ಸುದ್ದಿಯಾಗದಿರಲಿದು ಹೊಸ್ತಿಲಾಚೆ, ಮರಳಿ ಮನದ ಮೂಲೆಗೆ ನೆನಪುಗಳ ಜೇಡ ಬಲೆ ಸುಮ್ಮನೆ ಜಿನುಗಿದ ಕಣ್ಣಹನಿಗೂ ದಿಗಿಲು, ನಗುವ ಕತ್ತಲಿಗೂ ಬಿಕ್ಕು ಕೇಳಿಸಿತೇ? ಮತ್ತೆ ನೋಡುತ್ತೇನೆ ಗೋಡೆಯ ಕ್ಯಾಲೆಂಡರ್ ದಿನದ ಅಂಕ, ನಗೆಯ ಅನುರಣಿತ ಬೇಡದೆ ಉಳಿದ ಮಾವಿನ ಚೂರುಗಳು ಮರುಗುವಾಗ ಮನದಾಚೆಯ ಹೆದ್ದಾರಿಲಿ ಭಾರಿ ಮಳೆಯ ಸದ್ದು ತೊಯ್ದರು ತೋಯದ ನಿರ್ಲಿಪ್ತ ಮನ ತುಕ್ಕು ಹಿಡಿದಿದೆ ಬಾಗಿಲ ಚಿಲಕ ನಿಟ್ಟುಸಿರ ಹನಿಗೆ ನಿಲ್ಲುವ ಗಳಿಗೆಯಲಿ ಹರಿವ ಹುನ್ನಾರಿದು ನೀರಿನ ಸಲಿಗೆ ಹಿಡಿದ ಬಟ್ಟಲಲಿ ಪಡೆವ ಆಕಾರ ನೆನಪ ಕಡಲಿಗೆ ಓ! ನೆನಪ ತಿಜೋರಿಯ ಕೀಲಿ ಕೈ ಕಳೆದಿದೆ, ಹೆಕ್ಕಿ ಹೇಗೆ ಎತ್ತಿಡಲಿ ಹೇಳೆ, ಮರಳಿ ಪೆಟ್ಟಿಗೆಗೆ ಮತ್ತೆ ಮತ್ತೆ ಕಳೆದು ಹೋಗದಂತೆ ನಾಳೆಗೆ , ಮತ್ತೆ ಅವನಿಗೆ ತಿಳಿಯದಂತೆ ಕೊನೆವರೆಗೆ… ******









