ಕಾವ್ಯಯಾನ
ಯುದ್ದ ಮಲ್ನಾಡ್ ಮಣಿ ಮಾಯ ಜಾಲದ ಮಾಂತ್ರಿಕನೊಬ್ಬನ ಮಾಯೆಯಾಟದ ಛಾಯೆಯ ಕರಿನೆರಳು ಸುಡುತಿದೆ ಭೂಮಂಡಲವನ್ನು. ತುಪಾಕಿಗಳ ಗುಂಡಿನ ಘನಘೋರ ಶಬ್ದ ಗಗನ ಚುಂಬಿಯಾಗಿತ್ತು ನರ ಮಂಡಲದ ವಿಷವರ್ತುಲದಲ್ಲಿ ವಿಲವಿಲ ಒದ್ದಾಡಿ ಬೆತ್ತಲಾಗಿ ನಿಂತಿದೆ ಬದುಕು. ಅರೆಗಳಿಗೆಯ ಅಲ್ಪಸುಖದಲ್ಲಿ ತಲ್ಲೀನನಾಗಿದ್ದೆ, ಚಾಟಿಯ ಏಟು ಬೀಸಿ ಬರುತ್ತಿತ್ತು ನನ್ನೆಡೆಗೆ, ತಂಗಾಳಿಯಲ್ಲಿ ವಿಷ ಬೆರತದ್ದು ಗೊತ್ತಾಗಲೆ ಇಲ್ಲ. ಯದ್ಧಕ್ಕೆ ಸಜ್ಜು ಮಾಡುತ್ತಿದ್ದೆ ತುಕ್ಕು ಹಿಡಿದ ಅಲಗನ್ನು ಮಸೆಯುತ್ತಿದ್ದೆ, ವೈರಿಯು ಅದನ್ನೆ ನಡೆಸಿರಬೇಕು. ನನಗೆ ಶತ್ರು ಭಯ, ಶತ್ರುವಿಗೆ ನನ್ನ ಭಯ, ಆದರು ಮೆರೆಯುತ್ತಿದ್ದೆವು ಐಶ್ವರ್ಯ ಮದದಿಂದ. ಯುದ್ಧಕ್ಕೆ ಕ್ಷಣಗಣನೆ,ಹುಮ್ಮಸ್ಸು, ಹುರುಪು, ಕತ್ತಿಗೆ ತಣಿಯದ ರಕ್ತ ದಾಹ. ಶತ್ರು ವಿನಾಶದಲ್ಲಿ ನನಗೆ ತಿಳಿಯಲಿಲ್ಲ ನನ್ನವರ ಹಸಿವು ಏಕೆ? ನನ್ನದು ತೋರಿಕೆಯ ಸಂಭ್ರಮ, ಶ್ರೀಮಂತಿಕೆಯ ತೋರು ನೋಟ. ಅಸ್ತ್ರ ಪ್ರಯೋಗಕ್ಕೆ ಸನ್ನದ್ದರಾಗಿದ್ದ ನಮ್ಮಿಬ್ಬರಿಗು ಅದಾವ ಮಾಟಗಾರ ಮಂತ್ರಿಸಿದನೊ…. ಆ ಮಾಯೆ ನಮ್ಮಿಬ್ಬರ ದೇಹದ ರಕ್ತ ಹೀರುತ್ತಿರುವುದು ತಿಳಿಯಲೆ ಇಲ್ಲ. ಆ ಮಾಯೆ ಅಮಾಯಕ ನನ್ನ ಜನರನ್ನು ಹೆಣಮಾಡುತ್ತಿರುವುದು ತಿಳಿಯಲೇ ಇಲ್ಲ. ಮದ್ದು ನನ್ನಲ್ಲಿರಲಿಲ್ಲ ನನ್ನಲ್ಲಿದ್ದ ಮದ್ದು ರಕ್ತ ಸುರಿಸುವುದಕ್ಕೆ ಮಾತ್ರ.









