ವಾರದ ಕವಿತೆ
ಹೆಸರಿಲ್ಲದ ಕವಿತೆ ಸ್ಮಿತಾಅಮೃತರಾಜ್. ಸಂಪಾಜೆ ಹೆಸರಿಲ್ಲದ ಕವಿತೆ ನಾನು ಹಠಕ್ಕೆ ಬಿದ್ದವಳಂತೆ ತಾಳ್ಮೆಯಿಂದ ಕಾಯುತ್ತಲೇ ಇದ್ದೇನೆ ಹಾಗೇ ಬಂದು ಹೀಗೇ ಹೋದ ಕವಿತೆಯನ್ನೊಮ್ಮೆ ಎಳೆದು ತಂದೇ ತೀರುವೆನೆಂಬಂತೆ. ಗೊತ್ತಿದೆ, ಬಲವಾದ ಕಾರಣವಿಲ್ಲದೆ ಕವಿತೆ ಕಾಣೆಯಾಗುವುದಿಲ್ಲ. ಅಥವಾ ಮತ್ಯಾವುದೋ ಗಳಿಗೆ ಸದ್ದಿಲ್ಲದೇ ಪಕ್ಕಕ್ಕೆ ಬಂದು ಆತುಕೊಳ್ಳುವ ಅದರ ಆತುರಕ್ಕೆ ಅವಸರ ಸಲ್ಲವೆಂಬುದೂ.. ಕಾಡಿದ್ದು ಒತ್ತರಿಸಿ ಬಂದು ಯಾವುದೋ ಒಂದು ಕ್ಷಣದಲ್ಲಿ ಪದಗಳಾಗಿದ್ದಕ್ಕೆ.. ನಿನಗೆ ಪದ್ಯ ಹೊಸೆಯುವುದೊಂದೇ ಕೆಲಸವಾ? ನಮಗೆ ನೋಡು ಓದೋಕ್ಕಾದರೂ ಪುರುಸೊತ್ತು ಬೇಡವಾ? ಪಾಪ! ಹೌದಲ್ವಾ! ಅವರ ನಿರ್ಭಾವುಕ ಪ್ರಶ್ನೆಗೆ ಕವಿತೆಯೂ ಬೆಚ್ಚುತ್ತಿದೆ. ಈಗೀಗಲಂತೂ ನಮ್ಮೂರ ಹಸಿರ ಕಡೆಗೆ ಎಲ್ಲರ ಕಣ್ಣು . ಕವಿತೆ ಅದಕ್ಕೆ ಇಲ್ಲೇ ಬೇರು ಬಿಟ್ಟಿದೆ ಅಂತ ತಾರೀಫು ಬೇರೆ. ಬೀಜ ಬಿತ್ತಿ, ಮೊಳಕೆ ಚಿಮ್ಮಿ, ರೆಕ್ಕೆ ಹಾಯುವವರೆಗೂ ನಮ್ಮ ಕಣ್ಣನ್ನೇ ಕಾವಲಿಗಿಟ್ಟದ್ದರ ಕುರಿತು ಅವರಿಗೆ ಕುತೂಹಲವೇ ಇಲ್ಲ. ಹಸಿರು ಫಲಬಿಡಲು ಗೊಬ್ಬರವೂಡದಿದ್ದರೆ ನಡೆದೀತೇ? ಇವತ್ತೂ ಅಷ್ಟೆ, ಹತ್ತಾಳು ಕೆಲಸಕ್ಕೆ ಸಂಬಳ ಕಡಿಮೆ; ಕೆಲಸ ಜಾಸ್ತಿ ಹೆಂಗಳೆಯರೇ ಸೈ ಅಂತ ಒಳಗಿನ ಮಾತು ಹೊರಕ್ಕೆ ಬರುವುದಿಲ್ಲ. ಬೆಳಗಿನೊಂದಾರ್ತಿಯದ್ದು ಲಗುಬಗೆಯಲಿ ಮುಗಿಸಿ ಈಗ ಮಧ್ಯಾಹ್ನಕ್ಕೆ ಏದುಸಿರಿನ ತಯಾರಿ ದೊಡ್ಡ ಹಂಡೆಯ ನೀರು ಬಿಸಿಯಾಗುತ್ತಿದೆ ಒಲೆ ಉರಿ ಹೆಚ್ಚುತ್ತಿದೆ ಅಕ್ಕಿ ಕುದಿ ಹತ್ತುತ್ತಿದೆ. ಹೊರಗಿನ ತುರ್ತು; ಒಳಗಿನ ಒತ್ತಡಕ್ಕೆ ಒಗ್ಗಿಕೊಳ್ಳುತ್ತಲೇ ಹದಗೊಳ್ಳುತ್ತಿದೆ ಧ್ಯಾನ. ಎರಡರ ಕುದಿ ಒಳಕ್ಕಿಳಿದಾಗ ಆಳದಿಂದ ಮುಗುಳೊಡೆಯುತ್ತಿದೆ ಹೆಸರಿಲ್ಲದ ಹೊಸತೊಂದು ಭಾವ. ಅಕಾ! ಹೊತ್ತು ಗೊತ್ತು ಬೇಡವಾ? ಕವಿತೆ ಈ ಹೊತ್ತಲ್ಲದ ಹೊತ್ತಿನಲ್ಲಿ ಹೀಗೆ ಬಂದು ಕೂಡುವುದಾ?!.









