ಕಾವ್ಯ ಸಂಗಾತಿ
ಕೆ.ಬಿ.ವೀರಲಿಂಗನಗೌಡ್ರ ಅವರ
“ಜಮಾ-ಖರ್ಚು”


ಅವರು
ನನ್ನನ್ನು ಕಳೆದುಕೊಂಡರು
ಕಳೆದುಕೊಳ್ಳುವ ನಡಾವಳಿಯನ್ನು
ಹಿಂದಿನ ರಾತ್ರಿಯೇ ಬರೆದುಕೊಂಡಿದ್ದರು
ಬೆಳಗು ನನ್ನ ಪಾಲಿಗಷ್ಟೇ ಕಾರ್ಗತ್ತಲಾಗಿತ್ತು
ಅವರು
ನಾಯಿಯಂತೆ
ಬಾಲ ಅಲ್ಲಾಡಿಸಿಕೊಂಡು
ಬಾಗಿಲಿಗೆ ಬಂದು ನಿಂತೇ ನಿಲ್ತಾನೆ
ನಾವು ಕಳೆದರೂ ಅವ ಕೂಡ್ತಾನೆಂದು ನಡಾವಳಿ ದಿನವೇ ಲೆಕ್ಕಾಚಾರವಾಗಿತ್ತಂತೆ
ಅವರು
ಆಲಯದಿಂದ ದಬ್ಬಿದರು
ಬಯಲಲಿ ಅಣ್ಣ ಅಕ್ಕ ತಬ್ಬಿದರು
ತಬ್ಬಲಿತನ ನನಗಂತೂ ಕಾಡಲಿಲ್ಲ
ಕಾಡು ಕಡಲು ಹಾಡು ಸಂತೈಸಿದವು
ಅವರು
ಕಳೆದುಕೊಳ್ಳದಿದ್ದರೆ
ಕೂಡಿಕೊಳ್ಳುವ ಪ್ರೀತಿಯನ್ನು
ಅಕ್ಷರಶಃ ನಾನು ಅನುಭವಿಸುತ್ತಿರಲಿಲ್ಲ
ಬುದ್ಧ ಬಸವರು ಅರ್ಥವೂ ಆಗತಿರಲಿಲ್ಲ
ಇಷ್ಟೇ
ಅವರು
ಬುದ್ಧಿವಂತರು
ನನ್ನನ್ನು ಕಳೆದುಕೊಳ್ಳಲು
ತುಂಬಾ ಬುದ್ಧಿ ಖರ್ಚು ಮಾಡಿದ್ದಾರೆ
ದೇವರು ಅವರಿಗೆ ಅಷ್ಟೂ ಜಮೆ ಮಾಡಲಿ
ನನ್ನಂತಹವರನ್ನು ಮತ್ತೆ ಮತ್ತೆ ಕಳೆದುಕೊಳ್ಳಲಿ.
ಕೆ.ಬಿ.ವೀರಲಿಂಗನಗೌಡ್ರ.



