ಅಂಕಣ ಸಂಗಾತಿ
ವೃತ್ತಿ ವೃತ್ತಾಂತ
ಸುಜಾತಾ ರವೀಶ್
ವೃತ್ತಿಬದುಕಿನ ಹಿನ್ನೋಟ-34
ಮರಳಿ ಮೈಸೂರಿಗೆ


ಮೈಸೂರಿಗೆ ವರ್ಗಾವಣೆ ಬಯಸಿದವರಲ್ಲಿ ನನ್ನದು ಐದನೆಯ ಸಂಖ್ಯೆಯಾಗಿತ್ತು. ಖಂಡಿತ ಈ ಬಾರಿ ಮೈಸೂರಿಗೆ ವರ್ಗಾವಣೆ ಸಿಗುತ್ತದೆ ಎಂದು ಯೂನಿಯನ್ ನವರು ಸಹ ಹೇಳಿದ್ದರು.
ಈ ನಡುವೆ ಶಾಖಾಧಿಕಾರಿಗಳ ಬದಲಾವಣೆ ಆಗಿ ಸಿ ಕೆ ರವಿ ಅವರು ವರ್ಗಾವಣೆ ಹೊಂದಿ ಮೈಸೂರು ಶಾಖೆ 5 ಕ್ಕೆ ಹೋದರು. ನಮ್ಮ ನಂಜನಗೂಡು ಶಾಖೆಗೆ ಶಿವಶರಣ್ ಎನ್ನುವವರು ಶಾಖಾಧಿಕಾರಿಗಳಾಗಿ ಬಂದರು. ಮುಂದೆ ಅವರು ನಮ್ಮ ವಿಭಾಗೀಯ ಕಚೇರಿಯ ಮಾರ್ಕೆಟಿಂಗ್ ಮ್ಯಾನೇಜರ್ ಸಹ ಆದರು. ನನಗೆ ಸಾಲ ವಿಭಾಗದಿಂದ ಪಿ ಎಸ್ ಜನರಲ್ ಅಂದರೆ ಪಾಲಿಸಿ ಸೇವಾ ಸಾಮಾನ್ಯ ವಿಭಾಗಕ್ಕೆ ಬದಲಾವಣೆ ದೊರಕಿತು. ಈ ವಿಭಾಗದ ಕೆಲಸಗಳೆಂದರೆ ಪಾಲಿಸಿಗಳನ್ನು ಬೇರೆ ಶಾಖೆಗಳಿಗೆ ವರ್ಗಾವಣೆ ಮಾಡುವುದು, ಪಾಲಿಸಿಗಳಿಗೆ ಸಂಬಂಧಿಸಿದ ಅಸೈನ್ ಮೆಂಟ್ ಮತ್ತು ನಾಮ ನಿರ್ದೇಶನಗಳನ್ನು ಮಾಡುವುದು, ಪಾಲಿಸಿಗಳನ್ನು ಒಂದು ಪ್ರಕಾರದಿಂದ ಮತ್ತೊಂದು ಪ್ರಕಾರಕ್ಕೆ ಬದಲಾಯಿಸುವುದು, ಅಂದರೆ ಪ್ರೀಮಿಯಮ್ ಪಾವತಿಯ ವಿಧಾನ ಬದಲಾವಣೆ ಹಾಗೂ ಕಳೆದು ಹೋದ ಬಾಂಡ್ ಗಳ ಬದಲಾಗಿ ಡುಪ್ಲಿಕೇಟ್ ಬಾಂಡ್ ಗಳನ್ನು ಮಾಡಿಕೊಡುವುದು. ಇವೆಲ್ಲಾ ಸಹ ತುಂಬಾ ಆಸಕ್ತಿದಾಯಕ ಕೆಲಸಗಳೇ ಆಗಿದ್ದವು. ಇಲ್ಲಿ ಈ ಜಾಗಕ್ಕೆ ಸಹಾಯಕರು ಇರಲಿಲ್ಲ .ನಾನೇ ಮಾಡಿದ ಮೇಲೆ ಆಡಳಿತ ಅಧಿಕಾರಿಗಳು ಪಾಸ್ ಮಾಡುತ್ತಿದ್ದರು. ನೇರವಾಗಿ ಪಾಲಿಸಿ ದಾರರ ಜೊತೆಗೆ ವ್ಯವಹರಿಸುತ್ತಿದ್ದುದರಿಂದ ಒಂದು ರೀತಿ ಕೆಲಸದಲ್ಲಿ ಸಂತೃಪ್ತಿ ದೊರಕುತ್ತಿತ್ತು. ಬೇಕಾದ ಕೆಲಸವನ್ನು ಬೇಗನೆ ಮಾಡಿಕೊಟ್ಟಾಗ ಅವರುಗಳು ಧನ್ಯವಾದ ಹೇಳಿ ಖುಷಿಯಾಗುತ್ತಿದ್ದರೆ ಅದು ಸಾರ್ಥಕ ಭಾವನೆ ಮೂಡಿಸುತ್ತಿತ್ತು.
ಈ ಮಧ್ಯೆ ಜೂನ್ ೨೦೦೩ ರಲ್ಲಿ ಒಂದು ಸಣ್ಣ ಅಪಘಾತ ಆಯಿತು. ದಿನ ಅಶೋಕಪುರಂ ರೈಲ್ವೆ ಸ್ಟೇಷನ್ಗೆ ಹೋಗಲು ರವೀಶ್ ಅವರ ಹಳೆಯ ಲೂನವನ್ನು ತೆಗೆದುಕೊಂಡು ಹೋಗುತ್ತಿದ್ದೆ. ಅಂದು ಬುಧವಾರ ಜೂನ್ ತಿಂಗಳ ಕಡೆಯ ವಾರ. ಆಗ ನಮಗೆ ಜುಲೈನಿಂದ ಹೊಸ ಸಾಂದರ್ಭಿಕ ರಜೆಗಳು ಹಾಗಾಗಿ ಎರಡು ಉಳಿದಿದ್ದನ್ನು ಗುರುವಾರ ಮತ್ತು ಶುಕ್ರವಾರ ಹಾಕಿಕೊಂಡು ಬಿಡೋಣ ಅಂದುಕೊಂಡಿದ್ದೆ. ಅಂದು ಮನೆ ಬಿಡುವಾಗಲೇ ಸ್ವಲ್ಪ ತಡವಾಗಿತ್ತು. ಒಂದು ಚೂರು ವೇಗವಾಗಿಯೇ ಹೋಗುತ್ತಿದ್ದೆ ಅಲ್ಲಿ ಶಿವನ ದೇವಸ್ಥಾನದ ಹಿಂದಿನ ರಸ್ತೆಯಿಂದ ಒಂದು ಹುಡುಗಿ ಇದ್ದಕ್ಕಿದ್ದಂತೆ ಸೈಕಲ್ ನಲ್ಲಿ ಮುಖ್ಯ ರಸ್ತೆಗೆ ನುಗ್ಗಿದಳು. ನಾನು ರಭಸವಾಗಿ ಹೋಗುತ್ತಿದ್ದರಿಂದ ಇಬ್ಬರೂ ವಾಹನ ಡಿಕ್ಕಿ ಹೊಡೆದು ಬಿದ್ದೆವು. ಆ ಹುಡುಗಿಗೆ ಸ್ವಲ್ಪ ಗಾಯಗಳಾಗಿದ್ದವು ನನಗೂ ಮಂಡಿ ಮುಖ ಎಲ್ಲಾ ಕೆತ್ತಿ ಹೋಗಿತ್ತು. ಪಕ್ಕದಲ್ಲಿ ಇದ್ದ ಆಸ್ಪತ್ರೆಗೆ ಆ ಹುಡುಗಿಯನ್ನು ಕರೆದುಕೊಂಡು ಹೋದರು. ನನ್ನ ಜೊತೆ ನಂಜನಗೂಡಿಗೆ ಹೋಗುತ್ತಿದ್ದ ಬ್ಯಾಂಕ್ ಉದ್ಯೋಗಿ ಸುಜಾತ ಎನ್ನುವವರು ಮತ್ತು ಅವರ ತಂದೆ ರೈಲು ಸಿಗದೇ ಅದೇ ದಾರಿಯಲ್ಲಿ ವಾಪಸ್ ಬಂದರು. ನನ್ನನ್ನು ಆಟೋ ಮಾಡಿ ಮನೆಗೆ ಕಳಿಸಿ ನನ್ನ ಗಾಡಿಯನ್ನು ಅಲ್ಲೇ ಹತ್ತಿರದಲ್ಲಿದ್ದ ಅವರ ಮನೆಯಲ್ಲಿ ಇಟ್ಟುಕೊಂಡರು. ಆ ಹುಡುಗಿಯ ಮನೆಯವರು ಅಲ್ಲೇ ಇದ್ದ ಮತ್ತೊಬ್ಬರು ನನ್ನ ಗಾಡಿ ನಂಬರ್ ಕೊಟ್ಟಿದ್ದರಿಂದ ಪೊಲೀಸ್ ಠಾಣೆಯಲ್ಲಿ ದೂರು ಕೊಟ್ಟಿದ್ದರು. ಆ ಹುಡುಗಿಯದೆ ತಪ್ಪು ಆಗಿದ್ದರು ಸಹ ದೊಡ್ಡ ವಾಹನದವರ ಮೇಲೆ ತಪ್ಪು ಹೊರಿಸುವುದು ಸಹಜ ಆಗಿದ್ದರಿಂದ ನಮ್ಮನ್ನೇ ದೋಷಿಗಳನ್ನಾಗಿ ಮಾಡಿದರು. ಪೋಲಿಸಿನವರ ಜೊತೆ ಸೇರಿ ನಮ್ಮಿಂದ ಹಣ ಕಿತ್ತುಕೊಳ್ಳುವ ಹುನ್ನಾರ ಅವರದು ಕಡೆಗೆ ಪೊಲೀಸಿನವರ ಮಧ್ಯಸ್ಥಿಕೆಯಿಂದ 5000 ಅವರಿಗೆ ತೆತ್ತಬೇಕಾಯಿತು . ಪಾಪ ರವೀಶ್ ಅಬರು ಈ ಸಂಬಂಧ ಪೋಲೀಸ್ ಠಾಣೆಗೆ ಓಡಾಡಿ ಎಲ್ಲಾ ಇತ್ಯರ್ಥ ಮಾಡಿಸಿದರು. ಆಗ ತಕ್ಷಣಕ್ಕೆ ನಮ್ಮ ತಂದೆಯೇ ಹಣದ ವ್ಯವಸ್ಥೆ ಮಾಡಿಕೊಟ್ಟರು. ಆನಂತರ ನಾನು ಮತ್ತೆ ಗಾಡಿ ಓಡಿಸಲೇ ಇಲ್ಲ.
ವರ್ಗಾವಣೆ ಆದೇಶಗಳು ಬಂದು ಜನವರಿ 10ನೆಯ ತಾರೀಕು ನಾನು ನಂಜನಗೂಡಿನಿಂದ ರಿಲೀವ್ ಆಗಬೇಕಿತ್ತು ಆ ಬಾರಿ ನಾನೊಬ್ಬಳೇ ವರ್ಗಾವಣೆ ಹೊಂದುತ್ತಿದ್ದವಳು. ಹಾಗಾಗಿ ಇಡೀ ಶಾಖೆಗೆ ಸಿಹಿ ಮತ್ತು ಖಾರದ ವಿತರಣೆ ಮಾಡಿ ಆಪ್ತ ಗೆಳತಿಯರಿಗೆ ಹೋಟೆಲ್ ರಾಮ್ ಪ್ರಸಾದ್ ನಲ್ಲಿ ಸಂಜೆ ಮಸಾಲೆ ದೋಸೆಯ ಪಾರ್ಟಿ ಕೊಟ್ಟೆ. ಸುಲೋಚನ ಮತ್ತು ಶಶಿಕಲಾ ಇಬ್ಬರು ಪ್ರತ್ಯೇಕವಾಗಿ ಒಂದೊಂದು ಡ್ರೆಸ್ ಉಡುಗೊರೆ ಕೊಟ್ಟರು. ಮಿಕ್ಕ ಮಹಿಳಾ ಸಹೋದ್ಯೋಗಿಗಳೆಲ್ಲ ಸೇರಿ ಒಂದು ಚಿನ್ನದ ಓಲೆಯನ್ನು ಉಡುಗೊರೆ ಕೊಟ್ಟರು. ನಾನು ಅವರಿಗೆಲ್ಲ ಅಲಾರಾಂ ಗಡಿಯಾರವನ್ನು ಕಾಣಿಕೆಯಾಗಿ ಕೊಟ್ಟೆ. ಸುಲೋಚನ ಅವರ ಮನೆಗೆ ಅವರೇ ಸೂಚಿಸಿದಂತೆ ಒಂದು ಇಡ್ಲಿ ಕುಕ್ಕರ್ ಕೊಡಿಸಿದೆ.

ಇನ್ನು ರೈಲಿನ ಗೆಳತಿಯರಿಗೆ ಅಂದು ಬೆಳಗಿನ ತಿಂಡಿ ನಾನು ಪಾರ್ಟಿ ರೂಪದಲ್ಲಿ ಕೊಡುತ್ತೇನೆ ಎಂದು ಹೇಳಿ ಅಮ್ಮನ ಸಹಾಯದಿಂದ ಬಿಸಿಬೇಳೆ ಬಾತ್ ಮೊಸರನ್ನ ಮಾಡಿಕೊಂಡು ಮೈಸೂರು ಪಾಕು ಹಾಗೂ ಚಿಪ್ಸ್ ಗಳೊಂದಿಗೆ ರೈಲಿನಲ್ಲಿ ನಮ್ಮ ಆಹಾರ ಪಾರ್ಟಿ ಮುಗಿಸಿದರು. ಅವರೆಲ್ಲ ಸೇರಿ ಒಂದು ಜೊತೆ ಬೆಳ್ಳಿಯ ದೀಪ ಹಾಗೂ ಊದುಬತ್ತಿ ಸ್ಟ್ಯಾಂಡನ್ನು ಉಡುಗೊರೆಯಾಗಿ ಕೊಟ್ಟರು. ಇಂದಿಗೂ ಅವುಗಳನ್ನು ಬಳಸುತ್ತಿದ್ದೇನೆ.

ಅಂತೂ ಇಂತೂ ಮೈಸೂರು ಬಿಟ್ಟು 7 ವರ್ಷಗಳ ನಂತರ ಮತ್ತೆ ಮೈಸೂರಿಗೆ ವರ್ಗಾವಣೆ ಹೊಂದಿ ಸಮಾಧಾನದ ನಿಟ್ಟುಸಿರು ಬಿಟ್ಟ ಹಾಗೆ ಆಯಿತು. ಮೈಸೂರು ಶಾಖೆ 2ಕ್ಕೆ ನನ್ನ ಪೋಸ್ಟಿಂಗ್ ಆಗಿತ್ತು. ಆಗ ಅದು ಮೈಸೂರಿನ ಸಬರ್ಬ್ ಬಸ್ ಸ್ಟ್ಯಾಂಡ್ ಎದುರಿಮ ಸುಂದರ್ ಆರ್ಕೇಡ್ ಕಟ್ಟಡದಲ್ಲಿ ಇತ್ತು .೧೦ ಜನವರಿ ೨೦೦೪ ರಂದು ಶನಿವಾರ ಅಲ್ಲಿಂದ ರಿಲೀವ್ ಆಗಿದ್ದು. ಸೋಮವಾರ ಡ್ಯೂಟಿಗೆ ರಿಪೋರ್ಟ್ ಆಗಬೇಕಿತ್ತು(ಮುಂದುವರೆಯುವುದು)
ಸುಜಾತಾ ರವೀಶ್




