ಅಂಕಣ ಸಂಗಾತಿ ಮನದ ಮಾತುಗಳು ಜ್ಯೋತಿ ಡಿ ಬೊಮ್ಮಾ ಯುದ್ದಕಾಲೇ ವಿಪರೀತ ಬುದ್ದಿ. ನಮ್ಮ ಕಡಿ ಬಿಸಿಲಿನ ಕಾವು ಏರಲತರ ಆ ಕಡಿ ಯುದ್ದದ ಕಾವು ಎರಲತದ.ಯುದ್ದ ಅಂದ್ರ ನಾವು ಸಣ್ಣವರಾಗಿದ್ದಾಗ ಪುಸ್ತಕದಾಗ ಓದಿದ್ದು ಒಬ್ಬ ರಾಜ ಮತ್ತೊಬ್ಬ ರಾಜನ ಮ್ಯಾಲ ಯುದ್ದ ಮಾಡಿ ಅವನ ರಾಜ್ಯ ವಶಪಡಿಸಿಕೊಳ್ಳೊದು ಅಂತ ಓದಿದ್ದೆವು. ಕಲ್ಪನೆ ಮಾಡಕೊಳ್ಳಕೊ ಆಗದ ವಯಸ್ಸು ಅದು. ಆಮ್ಯಾಲ ರಾಮಾಯಣ ಮಹಾಭಾರತ ಧಾರಾವಾಹಿಗಳದಾಗ ಯುದ್ದ ಅಂದ್ರ ಹಿಂಗಿರತದ ಅಂತ ತಿಳಕೊಂಡೆವು.ಆ ಕಡೆಯಿಂದ ಸಾವಿರಾರು ಜನ ಈ ಕಡಿಯಿಂದ ಸಾವಿರಾರು ಜನ , ಯಾರು ಯಾರಿಗಿ ಹೊಡಿಲತಾರ ಕಡಿಲತಾರ ಎಂದು ತಿಳಕೊಳ್ಳೊವಷ್ಟರಲ್ಲಿ ಯುದ್ದ ಮುಗಿದಿರತಿತ್ತು. ಕತ್ತಿ , ಚೂರಿ , ಕೊಡಲಿ ಇಂತಹ ಆಯುಧಗಳಿಂದ ಯುದ್ದ ಮಾಡತಾರ ಅಂದಕೊಂಡಿದ್ದೆವು.ಪೌರಾಣಿಕ ಸಿನಿಮಾದೊಳಗ , ಇತಿಹಾಸ ತಿಳಸೋ ಸಿನಿಮಾದೊಳಗೆಲ್ಲ ಇಂತಹ ಯುದ್ದ ತೊರಿಸ್ತಿದ್ರು. ಮತ್ತ ನಮೂನಿ ನಮೂನಿ ಬಿಲ್ಲು ಬಾಣಗಳು.ರಾಮಾಯಣ ಮಹಾಭಾರತ ಧಾರಾವಾಹಿದೊಳಗ ಅದೇಷ್ಟು ನಮೂನಿ ಬಾಣಗಳು ತೊರಿಸ್ತಿದ್ರು ಅಂದ್ರ , ಬೆಂಕಿ ಉಗೊಳೋ ಬಾಣಗಳು , ಕಬ್ಬಿಣದ ಮಳಿ ಉಗೊಳೊ ಬಾಣಗಳು , ಹುಲಿ ಮುಖದ ಬಾಣಗಳು , ಹಾವಿನ ಮುಖದ ಬಾಣಗಳು. ಅವುಗಳನ್ನು ನೋಡ್ತ ಎಷ್ಟು ಕೂತುಹಲದಿಂದ ಕೂಡ್ತಿದ್ದಿವಂದ್ರ ಧಾರಾವಾಹಿ ಮುಗದ ಮ್ಯಾಲ ಬಾಳ ಬ್ಯಾಸರ ಆಗ್ತಿತ್ತು. ಹೈಸ್ಕೂಲ್ ಗೆ ಬಂದ ಮ್ಯಾಲ ಸಮಾಜ ವಿಜ್ಞಾನ ಪಠ್ಯ ದಾಗ ಓದಿದ ಯುದ್ದಗಳ ಕಲ್ಪನೆ ಸ್ವಲ್ಪ ಅಪ್ಗ್ರೆಡ್ ಆಗಿತ್ತು.ಮೊದಲನೆ ಮಹಾಯುದ್ದದಲ್ಲಿ ಮೊಟ್ಟಮೊದಲ ಬಾರಿಗೆ ಯುದ್ದ ವಿಮಾನಗಳು, ಯುದ್ದ ನೌಕೆಗಳು , ಟ್ಯಾಂಕರ್ ಗಳು , ಜಲಾಂತರ್ಗಾಮಿ ಗಳು ಬಳಸಲಾಯಿತು . ಅಲ್ಲಿವರೆಗೂ ಯುದ್ದಗಳೆಂದರೆ ಎರಡು ಪಡೆಗಳು ಕೈಯಿಂದ ಹೊಡೆದಾಡಿಕೊಳ್ಳುವದು ಎಂದು ತಿಳಿದಿದ್ದ ನಮಗೆ ಹೊಸ ಯುದ್ಧ ರೀತಿ ತಿಳಿಯಿತು. ಒಂದನೆ ಮಹಾಯುದ್ದ , ಎರಡನೇ ಮಹಾಯಯದ್ದ , ಹಿರೋಷಿಮಾ ನಾಗಾ ಸಾಕಿ ಮೇಲೆ ಹಾಕಿದ ಅಣುಬಾಂಬ್ ಅದರ ಪರಿಣಾಮಗಳು ಇವೆಲ್ಲವೂ ಪಠ್ಯ ದಲ್ಲಿ ಓದಿ ತಿಳಿದ ವಯಸ್ಸಿನಲ್ಲಿ ಯುದ್ದ ಯಾತಕ್ಕಾಗಿ ಮಾಡ್ತಾರೆ ಎಂಬ ಯೋಚನೆ ಅಷ್ಟು ಕಾಡ್ತಿರಲಿಲ್ಲ. ಯುದ್ದ ಮಾಡುವದರ ಮುಖ್ಯ ಉದ್ದೇಶ ಮಹತ್ವಾಕಾಂಕ್ಷೆ ಮತ್ತು ಹಕ್ಕಿನ ಹೋರಾಟಕ್ಕಾಗಿ.ಎರಡೂ ಪಡೆಗಳು ತಮ್ಮ ತಮ್ಮ ಜಾಗದಾಗ ಸರಿ ಅಂತ ನಿರ್ಣಯಿಸಿದ ಮ್ಯಾಲ ಯುದ್ದಕ್ಕ ಮಾಡ್ಲಕ್ಕ ಕಾರಣಗಳು ಬೇಕಾದಷ್ಟು ಸಿಗತಾವ. ನಮ್ಮ ಮನುಕುಲಕ್ಕ ಅಣುಬಾಂಬ್ ಯಾಕ್ ಬೇಕು.ಇದರಿಂದ ಉಪಯೋಗ ಏನು. ಇದು ಜಗತ್ತಿಗಿ ಘಾತಕ ಅಂತ ಗೊತ್ತಿದ್ರು ದೇಶಗಳು ಇದನ್ನು ಯಾಕ ತಯ್ಯಾರಿಸ್ತಾರ. ಎಲ್ಲಾ ದೇಶದವ್ರಿಗೂ ತಮ್ಮ ತಮ್ಮ ದೇಶದ ಬಲ ತೋರಿಸಿಕೊಳ್ಳಕ್ಕ.ದೊಡ್ಡಸ್ತಿಕೆಗಾಗಿ ಮಾತ್ರ. ಒಂದು ದುರ್ಬಲ ಸಂದರ್ಭದಲ್ಲಿ ಅಣುಬಾಂಬ್ ಪ್ರಯೋಗಿಸಿದ್ರು ಅಂತಿಟ್ಟಕೊಳ್ಳೊಣ.ಅದರ ಪರಿಣಾಮ ಎಲ್ರಿಗೂ ಗೊತ್ತು.ಜಪಾನಿನ ನಾಗಾಸಾಕಿ ಪ್ರದೇಶ ಇನ್ನೂ ಆ ಘಟನೆಯಿಂದ ಚೇತರಿಸಿಕೊಳ್ಳತಿಲ್ಲ.ಎಷ್ಟು ತಲೆಮಾರು ದಾಟಿದ್ರು ಅಂಗವಿಕಲತೆ ತೊಲಗಸಲ್ಕಿಕ್ಕೆ ಆಗತಿಲ್ಲ. ಇಂತಹ ಒಡಲೊಳಗೆ ಕೆಂಡ ಇಟ್ಟಕೊಂಡ ದೇಶಗಳು ಎನನ್ನ ಸಾಧಿಸಬಹುದು. ಯುದ್ದಗಳು ನಮ್ಮ ಜಗತ್ತಿನ ಪ್ರಗತಿಯನ್ನು ಐವತ್ತು ವರ್ಷ ಹಿಂದಕ್ಕ ದೂಡತಾವ.ಮನುಷ್ಯ ತನ್ನ ಬುದ್ದಿ ಉಪಯೋಗಿಸಿ ಏನೆಲ್ಲ ಸಾಧಿಸಿ ಗಳಿಸಿದ್ದ ಎಲ್ಲವೂ ಯುದ್ದ ನಾಶ ಮಾಡ್ತದ.ಆದ್ರು ದೇಶಗಳಿಗೆ ತಮ್ಮ ಪ್ರತಿಷ್ಟೆ ಮುಖ್ಯ. ಒಬ್ಬರ ಮೇಲೊಬ್ಬರು ಬಾಂಬ್ ಎಸೆದು ಎಲ್ಲಾ ನೆಲಸಮ ಮಾಡಿ ಹೆಮ್ಮೆಯಿಂದ ಬೀಗತಾರ.ಅದು ಪರಿಣಮ ಬೀರೋದು ಜನಸಾಮಾನ್ಯರ ಮ್ಯಾಲ. ನೆಲ ಆಸ್ತಿ ಜೀವ ಕಳಕೊಂಡವರ ಪಾಡು ಯಾರಿಗೂ ಕಾಣಲ್ಲ.ಬರೀ ದೇಶಗಳ ಸೋಲು ಗೆಲವು ಮಾತ್ರ ವಿಷಯ ಆಗ್ತದ. ಈ ವಿಶ್ವ ಸಂಸ್ಥೆ ಇರುವದು ಎಲ್ಲಾ ದೇಶಗಳು ಪರಸ್ಪರ ಶಾಂತಿ ಸಹಬಾಳ್ವೆಯಿಂದ ತಂಟೆ ತಕರಾರು ಇಲ್ಲದೆ ಬದುಕಲು ತಿಳಿಸುವದಕ್ಕಾಗಿ ಇರತದ. ಈಗ ಈ ಸಂಸ್ಥೆ ಏನು ಮಾಡ್ತಿದೆ ಅಂತ ಪ್ರಶ್ನೆ ಕಾಡತದ.ಒಂದಿಲ್ಲೊಂದು ಯುದ್ದ ನಡಿತಾನೆ ಅವ. ಸುಮ್ಮನೆ ಇದ್ದ ಇರಾನ್ ಮ್ಯಾಲ್ ಅದ್ಯಾಕ ಅಮೇರಿಕಾ ಕಾಲಕೆರಕೊಂಡು ಜಗಳಕ್ಕ ನಿಂತು. ಅಣುಬಾಂಬ್ ಇರಾನ ದೇಶದಾಗಷ್ಟೆ ಅದ ಏನು. ಬೇರೆ ಅದೇಷೋ ದೇಶಗಳದಾಗೂ ಅವ.ಇಸ್ರೆಲ್ , ಪ್ಯಾಲೆಸ್ಟೈನ್ ಜಗಳಕ್ಕ ಒಂದು ಕಾರಣ ಇತ್ತು.ಸಮರ್ಥನೆ ಅವರವರು ಯಾವಾಗ್ಲೂ ಮಾಡಿಕೊಳ್ಳತಾನೆ ಇರತಾರ.ಇದು ಎಲ್ಲಾ ಜಗಳದಾಗೂ ಇರತದ . ಆದ್ರ ಸ್ವಲ್ಪ ವಿವೇಚನೆ ಯಿಂದ ವಿಚಾರ ಮಾಡ್ದರ ಪ್ರಬಲರು ದುರ್ಬಲರ ಮ್ಯಾಲ ಯುದ್ದ ಮಾಡೋದು ಪೌರುಷ ಅನಿಸಿಕೊಳ್ಳಲ್ಲ.ಭಯೋತ್ಪಾದಕ ದಂತ ಕೃತ್ಯ ತಡೆಗಟ್ಟಬೇಕಾದ್ರ ಕೆಲವೊಮ್ಮೆ ಮಾರಕ ನಿರ್ಣಯ ಗಳನ್ನು ತಗೋಬೇಕಾಗತದ.ಭಯೋತ್ಪಾದ ನೆ ತಡೆಗಟ್ಟಲು ಪ್ರಯತ್ನಿಸತಿದ್ದರಂದ್ರೆ ಬೆಂಬಲಿಸೊಣ. ಆದ್ರ ಈ ಅಮೇರಿಕಾ ಕಾಲ ಕೆರದು ಜಗಳಕ್ಕ ಬರೊದು ಖಂಡಿಸಲೇಬೇಕು. ಯುದ್ದ ಗಳು ಎರಡು ದೇಶದ ನಡುವೆ ನಡೆದ್ರು ಪರಿಣಾಮ ಇಡೀ ಜಗತ್ತು ಎದುರಿಸಬೇಕಾಗತದ.ದೇಶಗಳು ಖಂಡಗಳು ದೂರ ದೂರ ಇದ್ರೂ ಗಾಳಿ ಬೆಳಕು ಎಲ್ಲ ಕಡೆ ಹಬ್ಬಿದಂಗ ನಮ್ಮ ದೈನಂದಿನ ಕೆಲಸಗಳಿಗಿ ಬೇಕಾದ ವಸ್ತುಗಳು ಇಡೀ ಜಗತ್ತಿನ ಎಲ್ಲಾ ಭಾಗಗಳಿಗೂ ಹರಿದಾಡತಾವ.ಯುದ್ದಗಳಿಂದ ಇಂತಹ ವಸ್ತು ಗಳ ಆಮದು ರಪ್ತು ಕಾರ್ಯಗಳು ನಿಂತು ಜನಸಾಮಾನ್ಯರು ಹೈರಾಣ ಆಗಬೇಕಾಗತದ. ಯುದ್ದ ನಡಿತಿರೋ ದೇಶಗಳ ಚಿತ್ರಣ ನೋಡಿದ್ರ ಮನಸ್ಸು ವಿಷಾದ ಆಗತದ.ಎಂತೆಂಥ ದೊಡ್ಡ ದೊಡ್ಡ ಕಡ್ಡಡಗಳೆಲ್ಲ ನೆಲಸಮ ಮಾಡ್ತಿದ್ದಾರ.ಈಗ ಒಂದು ಸಮಾಧಾನ ಅಂದ್ರ ಯುದ್ದದ ಸೂಚನೆ ಸಿಗ್ತಂದ್ರ ಜನರಿಗೆ ತಾವಿರುವ ಸ್ಥಳ ಖಾಲಿ ಮಾಡ್ಸಿ ಬ್ಯಾರೆ ಸುರಕ್ಷಿತ ಸ್ಥಳ ಕ್ಕ ಕಳ್ಸತಾರಂತ.ಜೀವ ಉಳದ್ರ ಸಾಕು ಅನ್ನಕೊಂಡ್ರ ತಮ್ಮ ಎಲ್ಲಾ ಜೀವಮಾನದ ಗಳಿಕಿ ಕಳಕೊಂಡು ಅವ್ರ ಬದುಕು ಉಹಿಸಿಕೊಳ್ಳಕ್ಕ ಆಗಲ್ಲ.ಕ್ಷೀಪಣಿಗಳು ಒಬ್ಬರ ದೇಶದ ಮ್ಯಾಲ ಒಬ್ಬರು ಹಾರಿಸಿ ಇಡೀ ಊರೆಲ್ಲ ನೆಲಸಮ ಮಾಡೊದ್ರಾಗ ಯಾವ ಪುರುಷಾರ್ಥ ಅದ..ಸಣ್ಣ ಮಕ್ಕಳು ಕಲಿಯೋ ಸಾಲಿಮ್ಯಾಲ್ ಬಾಂಬ್ ಹಾಕಿ ಮಕ್ಕಳ ಸಾವಿಗಿ ಕಾರಣ ಆಗೊ ದೇಶಗಳ ವಿಕೃತಿಗೆ ಧಿಕ್ಕಾರ. ಅಲ್ಲೆಲ್ಲೊ ಯುದ್ದ ಆಗತಿದ್ರ ಅದರ ಪರಿಣಾಮ ನಮ್ಮ ದೇಶದವ್ರು ಅನುಭವಿಸಬೇಕಾಗ್ಯಾದ.ಬರಿ ನಮ್ಮ ದೇಶ ಅಷ್ಟೇ ಅಲ್ಲ. ಇಡೀ ಮನುಕುಲಕ್ಕೆ ತೊಂದರೆ ಆಗಲತದ.ನಮ್ಮ ಜನರು ಸಿಲಿಂಡರ್ ಸಲುವಾಗಿ ಕಷ್ಡಪಡತಿದ್ದಾರ.ಕಾಡು ಕಡದು ಕಟ್ಟಿಗಿ ಉಪಯೊಗಿಸಿ ಕಾಡು ಹಾಳು ಮಾಡಬ್ಯಾಡ್ರಿ ಅಂತ ಕಾಡಿನ ಅಕ್ಕಪಕ್ಕದ ಜನಕ್ಕ ಸರ್ಕಾರ ಉಚಿತ ಗ್ಯಾಸ ಸಿಲಿಂಡರ್ ವ್ಯವಸ್ಥೆ ಮಾಡಿತ್ತು. ಈಗ ಬಹುತೇಕ ಮನಿ ಗಳಲ್ಲಿ ಕಟ್ಟಗಿ ಉಪಯೋಗಿಸೋದು ಕಮ್ಮಿ ಆಗ್ಯಾದ ಈ ಯುದ್ದದ ಪರಿಣಾಮದಿಂದ ಗ್ಯಾಸ್ ಅಭಾವವಾಗಿ ಮತ್ತ ಜನ ಕಟ್ಟಿಗಿಗಿ ಮೊರೆ ಹೋಗಬೇಕಾಗ್ಯಾದ.ಈಗ ಮತ್ತೊಮ್ಮೆ ಕೋವಿಡ್ ದಾಗ ಅನುಭವಿಸಿದ ಸಂಕಟ ನೆನಪಿಗೆ ಬರಲತದ.ಈ ಯುದ್ದಗಳು ಹಿಂಗ ಮುಂದುವರೆದ್ರ ಇನ್ನೂ ಎನೇನು ಅಭಾವ ಎದುರಿಸಬೇಕೋ ಎನೋ. ಈ ಯುದ್ದಗಳಿಂದ ಜಗತ್ತಿಗೆ ಉಪಯೋಗ ಇಲ್ಲ.ಆದ್ರೂ ಮತ್ತೊಬ್ಬರ ಜೋಡಿ ಜಗಳ ಆಡೋದೇ ದೊಡ್ಡಸ್ತಿಕೆ ಅನ್ನಕೊಳ್ಳೋ ಮೂರ್ಖರು ಇರೊ ತನಕ ಇವು ಹಿಂಗ ನಡಿತಾವ.ಎಲ್ಲೊ ಕುಂತು ಯುದ್ದಕ್ಕ ಪ್ರೇರಣೆ ನಿಡೋರು ಸುರಕ್ಷಿತ ವಾಗೆ ಇರತಾರ.ಸಾಮಾನ್ಯರ ಪಾಡು ಅನ್ನಲಕ್ಕ ಆಗಲ್ಲ ಆಡಲಕ್ಕ ಆಗಲ್ಲ.ದೇಶಗಳು ದೊಡ್ಡಸ್ತಿಕಿಯಿಂದ ಬೆನ್ನತಟ್ಟಕೊಳ್ಳತಾವ , ದೇಶವಾಸಿಗಳು ಯುದ್ಧದ ಕಾರ್ಮೊಡದೊಳಗ ಕಾಣೆಯಾಗತಾರ. ಜ್ಯೋತಿ , ಡಿ.ಬೊಮ್ಮಾ. ಜ್ಯೋತಿ ಡಿ , ಬೊಮ್ಮಾ ಅವರು ಕಲಬುರಗಿ ಜಿಲ್ಲೆಯವರು. ನಾಲ್ಕು ಕವನ ಸಂಕಲನಗಳು , ಎರಡು ಪ್ರಭಂಧ ಸಂಕಲನಗಳನ್ನು ಪ್ರಕಟಿಸಿದ್ದಾರೆ.ಪ್ರತಿ ತಿಂಗಳು ಸಂಗಾತಿ ಪತ್ರಿಕೆಗಾಗಿ ಅವರ ದೇಸಿ ನುಡಿಗಟ್ಟಿನಲ್ಲಿ ಅಂಕಣ ಬರಹವನ್ನು ಪ್ರಕಟಿಸುತ್ತಾರೆ.