ಕಾವ್ಯ ಸಂಗಾತಿ
ಅಶ್ಫಾಕ ಪೀರಜಾದೆ
“ಕವಿ ಹೃದಯ ಹಾಡುತ್ತಿಲ್ಲ !”


ಈ ನಿಶ್ಶಬ್ಧದ ನಿಗೂಢ ಗರ್ಭದಿಂದ
ಕೇಳಿ ಬರಬಹುದೆ ಸಣ್ಣದಾದ ಸದ್ದು
ಬಿಸಿ ಉಸಿರಿನ ಮಿಡಿತ ತಾಕಬಹುದೆ
ಕಾಣಬಹುದೆ ಅಗೋಚರ ಸತ್ಯ
ಎಲ್ಲ ಅಸ್ಪಷ್ಟ ಮಂಜು ಮುಸುಕು
ನಾಲಿಗೆ ಸೀಳಿ ತಗೆದರೂ ಒಂದು ಮಾತು ಇಲ್ಲ
ಮಿದುಳೆಲ್ಲ ತಡಕಾಡಿ ಬರೆದರೂ ಒಂದಕ್ಷರ
ಆತ್ಮದ್ದು ಮೌನ ರೋಧನ
ಮೋಡ ಕಟ್ಟದೆ ಮುಗಿಲಿನಿಂದ
ಮರಭೂಮಿಗೆ ಮಳೆಯ ಮುನ್ಸೂಚನೆಯೇ !
ಒಳಗೊಳಗೆ ಶಾಂತ ಸುನಾಮಿ
ಪೆನ್ನು ಪಾರ್ಶ್ವವಾಯು ಪೀಡಿತ
ಮಿದುಳು ಖಾಲಿ ಕಾಗದ
ಅಸ್ಖಲಿತ ಭಾವನೆಗಳ ಬಟಾ ಬಯಲು
ಮೋದಲಿನಂತೆ ಕೌದಿಯೊಳಗೆ ಕನಸು ಮೊಟ್ಟೆಯಿಡುತ್ತಿಲ್ಲ
ಮೊಳಕೆಯೊಡಿತ್ತಿಲ್ಲ ಕಾಳು ಮಡಿಕೆಯೊಳಗೆ
ಪುಸ್ತಕದಲಿ ನವಿಲುಗರಿ ಈಗ
ಮರಿ ಹಾಕುವುದು ಮರೆತಿದೆ
ಬಸಿರಾಗುವುದಿಲ್ಲ ಭಾವನೆಗಳು
ಸ್ಪರ್ಶಕೆ ನನಸ್ಸು ಸ್ಪಂದಿಸುತ್ತಿಲ್ಲ
ಸಂವೇದನಾ ರಹಿತ ಹೃದಯ
ಒಲವ ಕ್ಷಾಮ ಕಾಡುತಿದೆ
ಖಾಲಿತ! ತಬ್ಬಲಿತನ!!
ಯಾಕೋ ಗೊತ್ತಿಲ್ಲ ಇತ್ತೀಚೆಗೆ
ಕತ್ತಲೆ ಕರಗುತ್ತಿಲ್ಲ ಸೂರ್ಯನ ಬೆಳಕಿಗೂ
ಕವಿ ಹೃದಯ ಹಾಡುವುದು ನಿಲ್ಲಿಸಿದೆ
ಸಂಭವಿಸು ಪುನರುತ್ಥಾನ ಕಾಯುತಿರುವೆ ಮುಗಿಲಿನತ್ತ ಮುಖ ಮಾಡಿ ಅನ್ನದಾತನಂತೆ
ತಮ್ಮವರೆಲ್ಲರನ್ನು ಕಳೆದುಕೊಂಡು
ಒಂಟಿಯಾಗಿ ಯದ್ಧ ವಿರಾಮಕೆ ಪ್ರಜೆಯಂತೆ..
ಅಶ್ಫಾಕ ಪೀರಜಾದೆ.



