ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಡು ಕಪ್ಪಿನ
ರಾಶಿ ರಾಶಿ ಇದ್ದಿಲಿನ ಚೂರುಗಳಿಗೆ
ಬೆಂಕಿ ತಾಕಿಸಿ ಮತ್ತೆ ಉರಿಸುವಂತೆ
ಎದೆಯಾಳದಲ್ಲಿ
ಬೆಂದು ಬೂದಿಯಾಗದೆ
ಉಳಿದಿರುವ ನಿನ್ನ ನೆನಪುಗಳಿಗೆ
ವಿನಾಕಾರಣ ತನ್ನಷ್ಟಕ್ಕೆ ತಾನೇ
ಸಣ್ಣ ಕಿಡಿಯೊಂದು
ಹೊತ್ತಿಕೊಂಡು ಬಿಡುತ್ತದೆ..!

ನಿನ್ನ ನೆನಪಿನ ಹೊಗೆಯೇಳುತ್ತದೆ
ನನ್ನ ಉಚ್ಛ್ವಾಸ ನಿಸ್ವಾಸಗಳ
ತಲೆಕೆಳಗಾಗಿಸಿ ಉಸಿರುಗಟ್ಟಿಸುತ್ತದೆ
ಜೀವ ಹಿಂಡಿ ಪ್ರಾಣ ಹಾರಿತು
ಎನ್ನುವ ಹೊತ್ತಿಗೆ
ಹೃದಯ ಬಗ್ಗನೇ ಉರಿದು
ಉಗುಳುತ್ತದೆ
ಪ್ರೇಮವಿಲಾಪದ ಕೆಂಡದುಂಡೆಗಳ
ವೈಶಾಖದ ಸೂರ್ಯನಂತೆ..!

ತುದಿ ಮೊದಲಿಲ್ಲದ
ಅನಂತ ನೆನಪುಗಳ ರಾಶಿಯಲ್ಲಿ
ಛಿದ್ರಗೊಳ್ಳುವ  ಹೃದಯ
ಚೂರಾದ ಇದ್ದಿಲುಗಳಂತೆ
ಹಗುರವಾಗಿ
ಮುಕ್ತಿ ದೊರಕದೆ
ನಾಮಾವಶೇಷವಾಗುತ್ತದೆ..!

ಅರಳುವುದಿಲ್ಲ ಮತ್ತೆಂದೂ..
ಬೆಂದ ಎದೆಯ ಬನದಲ್ಲಿ
ನವ ಪ್ರೇಮದ ಚಿಗುರು..!
ಉರಿದ ಇದ್ದಿಲುಗಳ ರಾಶಿಯನ್ನೇ
ನಿನ್ನ ಪ್ರೇಮದ ನೆನಪುಗಳಲ್ಲಿ
ಮತ್ತೆ ಹೊತ್ತಿಸುತ್ತೇನೆ..!

ಬೆಂದು ಬೂದಿಯಾಗಿ ಬಿಡಬೇಕೆಂಬ
ಜಿದ್ದಿಗೆ ಬೀಳದೆ
ನಿನ್ನ ದಿವ್ಯ ನಿರ್ಲಕ್ಷ್ಯಕ್ಕೆ ಒಳಗಾಗಿ
ಕಡುಕಪ್ಪು ಇದ್ದಿಲಿನಂತಾಗುವ
ಕಳಂಕವನ್ನು
ಸುಲಭದಲ್ಲಿ ಕಳಚಿಕೊಳ್ಳಲಾಗದೆ
ಪ್ರೇಮದ ಹೆಸರಲ್ಲಿ
ಸುಮ್ಮನೆ ಉರಿಯುತ್ತೇನೆ..!

ಎಷ್ಟೇ ಬೆಂದರೂ ನೊಂದರೂ
ಭುಗಿಲೇಳುವ
ಪ್ರೇಮದ ಜ್ವಾಲೆಯಂತಾಗದೆ
ಇಷ್ಟಿಷ್ಟೇ ಉರಿವ
ಇದ್ದಿಲುಗಳ ಚೂರಾಗುತ್ತೇನೆ..!

ಕಡೆಗೊಮ್ಮೆ
ಈ ಬದುಕು ಥೇಟ್ ಇದ್ದಿಲಿನಂತೆ
ಇಷ್ಟಿಷ್ಟೇ ನಶಿಸಿ ಹೋಗುತ್ತಿರುವ
ಹೊತ್ತಿನಲ್ಲೂ
ನಿನ್ನಂತೆ ನೂರೆಂಟು ಬಣ್ಣ ಬದಲಿಸದೆ
ಮೂಲದಲ್ಲೇ ಕ್ಷಯವಾಗುವ
ಅದರ ಅಸಲಿಯತ್ತಿಗೆ
ತಲೆಬಾಗುತ್ತಾ…

ಅಳಿದುಳಿದ
ಪ್ರೇಮದ ಪಳೆಯುಳಿಕೆಗಳನ್ನು
ಒಟ್ಟುಗೂಡಿಸಿ ಸುಟ್ಟುಕೊಳ್ಳುತ್ತಾ  
ನನ್ನನ್ನು ನಾನೇ
ಎಂದಾದರೊಮ್ಮೆ
ನಿನ್ನನ್ನು ಪ್ರೇಮಿಸಿದ ತಪ್ಪಿಗೆ
ಬೆಂದುರಿದ ಗುರುತು ಸಿಗದಂತೆ
ನಿಚ್ಚಳವಾಗಿ
ಕೊನೆಗಾಣಿಸಿಕೊಳ್ಳುತ್ತೇನೆ
ಅದೇ ಇದ್ದಿಲಿನ ಹಾಗೆ…!


About The Author

1 thought on “ಪ್ರಶಾಂತ್ ಬೆಳತೂರು ಅವರ ಕವಿತೆ ” ಇದ್ದಿಲು ಮತ್ತು ಪ್ರೇಮ””

Leave a Reply

You cannot copy content of this page

Scroll to Top