“ದಯಾಮರಣ ಮತ್ತು ಕರಿಬಸಮ್ಮ ಎಂಬ ವಾರ್ನಿಂಗ್ ಬೆಲ್” ಗಂಗಾಧರ ಬಿ ಎಲ್ ನಿಟ್ಟೂರ್
ಬದುಕಿನ ಸಂಗಾತಿ ಗಂಗಾಧರ ಬಿ ಎಲ್ ನಿಟ್ಟೂರ್ “ದಯಾಮರಣ ಮತ್ತು ಕರಿಬಸಮ್ಮ ಎಂಬ ವಾರ್ನಿಂಗ್ ಬೆಲ್” ಇದು ಮೊನ್ನೇ ಮೊನ್ನೆಯ ಸುದ್ದಿ. ನಿಮಗೆ ಗೊತ್ತಿರಬಹುದು, ಸುಮಾರು 13 ವರ್ಷಗಳಿಂದ ಕೋಮಾ ಆವಸ್ಥೆಯಲ್ಲಿ ಇದ್ದ ಹರೀಶ್ ರಾಣಾ ಎಂಬ ವ್ಯಕ್ತಿ 2026 ರ ಮಾರ್ಚ್ 24 ರಂದು ಕೊನೆಯುಸಿರೆಳೆದರು. ದಯಾಮರಣಕ್ಕೆ ಒಳಗಾದ ಭಾರತದ ಮೊದಲ ವ್ಯಕ್ತಿ ಇವರು. ದಯಾಮರಣಕ್ಕೆ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿದ ಸುಪ್ರೀಂಕೋರ್ಟ್ ಮಾರ್ಗಸೂಚಿಯೊಂದಿಗೆ ಅನುಮತಿ ನೀಡಿದ ಮೊದಲ ಪ್ರಕರಣ ಇದು. ಪ್ರಸ್ತುತ ಸುಪ್ರೀಂ ಕೋರ್ಟ್ ದಯಾಮರಣಕ್ಕೆ ಅನುಮತಿ ನೀಡಿದೆ. ಆದರೆ ಇಂದು ಕಾನೂನು ಮಾನ್ಯತೆಗೆ ಒಳಪಟ್ಟಿರುವ ಈ ದಯಾಮರಣ ಕಾಯ್ದೆಯ ಹಿಂದೆ ಹಲವಾರು ವರ್ಷಗಳ ಹೋರಾಟದ ಹೆಜ್ಜೆ ಗುರುತುಗಳಿವೆ . ಭಾರತದಲ್ಲಿ ಸುಮಾರು 1980 ರ ದಶಕದಲ್ಲಿಯೇ ದಯಾಮರಣದ ಕೂಗು ಮೊಳಗಿತ್ತು . ಈ ಹೊತ್ತಿಗೆ ಹಲವು ದೇಶಗಳಲ್ಲಿ ಈ ಕಾನೂನು ಜಾರಿಯಾಗಿತ್ತು . ಭಾರತದ ಜ್ಞಾನ್ ಕೌರ್, ಕಾಮನ್ ಕಾಸ್ ರಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ 1996 ರ ಹೊತ್ತಿಗೆ ದಯಾಮರಣ ಚರ್ಚೆ ತೀವ್ರಗೊಳ್ಳುತ್ತಾ ಸಾಗಿತು. ಆದರೆ ಬದುಕುವ ಹಕ್ಕನ್ನು ಮಾತ್ರ ಬಲವಾಗಿ ನಂಬಿದ್ದ ಭಾರತದಂಥ ಒಂದು ಸಾಂಪ್ರದಾಯಿಕ ದೇಶಕ್ಕೆ ಇದು ಸೂಕ್ತವಲ್ಲ ಎಂಬ ಹಿನ್ನೆಲೆಯಲ್ಲಿ ಈ ಪ್ರಸ್ತಾವಕ್ಕೆ ಸರ್ಕಾರ ಹಾಗೂ ಸುಪ್ರೀಂ ಕೋರ್ಟ್ ಅಸ್ತು ಹೇಳಿರಲಿಲ್ಲ. ಆದಾಗ್ಯೂ ಎಲ್ಲಾ ವಿರೋಧದ ನಡುವೆಯೂ ಈ ದಯಾಮರಣ ಕಾಯ್ದೆಗೆ ಸಂಬಂಧಿಸಿದಂತೆ 2011 ರಲ್ಲಿ ಐತಿಹಾಸಿಕ ತೀರ್ಪು ಹೊರ ಬಿದ್ದಿತು. 37 ವರ್ಷಗಳ ಕಾಲ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ (Persistent Vegetative State) ದಾದಿ ಅರುಣಾ ಶಾನ್‌ಬಾಗ್ ಪರವಾಗಿ ಅವರ ಸ್ನೇಹಿತೆ ಪಿಂಕಿ ವಿರಾನಿ ದಯಾಮರಣ ಕೋರಿ ಅರ್ಜಿ ಸಲ್ಲಿಸಿದ್ದರು. ಈ ಪ್ರಕರಣದಲ್ಲಿ ಪರೋಕ್ಷ ದಯಾಮರಣಕ್ಕೆ ಅನುಮತಿ ನೀಡಲಾಯಿತು. ಆದರೆ ಸೂಕ್ತ ಮಾರ್ಗಸೂಚಿಗಾಗಿ ಮುಂದುವರಿದ ಹೋರಾಟದ ಪರಿಣಾಮವಾಗಿ 2018 ರಲ್ಲಿ ಸುಪ್ರೀಂ ಕೋರ್ಟ್ ತನ್ನ ಮತ್ತೊಂದು ಐತಿಹಾಸಿಕ ತೀರ್ಪಿನಲ್ಲಿ ಬದುಕುವ ಹಕ್ಕಿನಂತೆ ಗೌರವಯುತವಾಗಿ ಸಾಯುವುದು ಕೂಡ ಒಂದು ಮೂಲಭೂತ ಹಕ್ಕು ಎಂದು ಪರಿಗಣಿಸಿತು. ಆದರೆ ನಿರ್ದಿಷ್ಟ ಮಾರ್ಗಸೂಚಿ ನೀಡುವಲ್ಲಿ ಇನ್ನೂ ವಿಳಂಬವಾದ ನಿಟ್ಟಿನಲ್ಲಿ ದಯಾಮರಣ ಹೋರಾಟಗಾರರ ಹೋರಾಟ ಮತ್ತಷ್ಟು ತೀವ್ರ ಗೊಂಡಿತು. ಅಂತಿಮವಾಗಿ 2025 ರ ಫೆಬ್ರವರಿ ತಿಂಗಳಲ್ಲಿ ನಿಷ್ಕ್ರಿಯ ದಯಾಮರಣಕ್ಕೆ ಅನುಮತಿ ದೊರಕಿತು. ಆದಾಗ್ಯೂ ಭಾರತದಲ್ಲಿ ಸಕ್ರಿಯ ದಯಾಮರಣ (ಅಂದರೆ ಚುಚ್ಚುಮದ್ದಿನ ಮೂಲಕ ಅಥವಾ ವಿಷಕಾರಿ ದ್ರವ್ಯ ನೀಡಿ ಪ್ರಾಣ ತೆಗೆಯುವುದು) ಇಂದಿಗೂ ಕಾನೂನುಬಾಹಿರ. ಇದನ್ನು ಕೊಲೆ ಅಥವಾ ಆತ್ಮಹತ್ಯೆಗೆ ಪ್ರೇರಣೆ ಎಂದು ಪರಿಗಣಿಸಲಾಗುತ್ತದೆ. ಈ ವಿಷಯದ ಕುರಿತು ವೈಯುಕ್ತಿಕವಾಗಿ ಇಷ್ಟೊಂದು ಕುತೂಹಲ ಹುಟ್ಟಲು ಕಾರಣ ಹಲವಾರು ವರ್ಷಗಳಿಂದ ದಯಾಮರಣಕ್ಕಾಗಿ ಹೋರಾಡುತ್ತಿರುವ ದಾವಣಗೆರೆಯ ಎಚ್.ಬಿ ಕರಿಬಸಮ್ಮ ಎಂಬ ನಿವೃತ್ತ ಶಿಕ್ಷಕಿ ಹಾಗೂ ಆದರ್ಶ ಮಹಿಳೆ. ಅವರ ಸಂದರ್ಶನದ ಬರೆಹವಿದು. Iಇದು ಅವರ ಮೂಲಕ ದಯಾಮರಣ ಬೇಡುತ್ತಿರುವ ನೊಂದ ಹೃದಯಗಳ ಆಳಕ್ಕಿಳಿದು ಅಂತರಂಗವನ್ನು ಅವಲೋಕಿಸುವ ಒಂದು ಚಿಕ್ಕ ಪ್ರಯತ್ನವೂ ಹೌದು. ಕಾಡಿದ ಕುತೂಹಲ : ಸುಮಾರು ಹತ್ತದಿನೈದು ವರ್ಷಗಳ ಹಿಂದೆ ಈ ಸುದ್ದಿ ನನ್ನ ಕಿವಿಗೆ ಬಿದ್ದಾಗ, ಬದುಕುವುದಕ್ಕಾಗಿ ಹೋರಾಡುವ ಜನರ ಮಧ್ಯೆ ಸಾವಿಗಾಗಿಯೂ ಹೋರಾಡುವ ಜನಗಳಿದ್ದಾರೆ ಎಂಬುದನ್ನು ಕೇಳಿದಾಗ ಅಂತಹ ವಿಶೇಷ ಅನಿಸಿರಲಿಲ್ಲ. ಸಾಯುವ ಮಾತಾಡುವುದು, ಸಾಯಲು ಬಯಸುವುದು ಹೇಡಿಗಳ ಲಕ್ಷಣ ಎಂದು ಕೆಲವರು ಹೇಳುತ್ತಿದ್ದನ್ನು ಕೇಳಿ ಈ ಕುರಿತು ಚಿಂತಿಸಲು ಕೂಡ ಯಾವುದೋ ಅಳುಕು ಕಾಡುತ್ತಿತ್ತು. ಆದರೂ ಸಾಯುವ ಹಕ್ಕಿಗಾಗಿ ಹೋರಾಡುತ್ತಿರುವ ದಾವಣಗೆರೆ ಎಚ್.ಬಿ ಕರಿಬಸಮ್ಮನವರನ್ನು ಒಮ್ಮೆ ಕಂಡು ಮಾತಾಡಿಸಿ ಆ ಸಾಯುವ ಮನೋ ತೀವ್ರತೆಗೆ ಅಂತಹ ಘನ ಕಾರಣ ಏನಿರಬಹುದು ಎಂಬುದನ್ನು ಕೇಳಿ ಬರಬೇಕೆಂಬ ಕುತೂಹಲ ಮಾತ್ರ ಮನದೊಳಗೆ ಮೂಡಿ, ಆಗಾಗ್ಗೆ ಕಾಡುತ್ತಿತ್ತು. ಆ ಭೇಟಿಗೆ ಈಗ ಕಾಲ ಕೂಡಿ ಬಂತು. ಆದರೆ ಈ ಸುದೀರ್ಘ ಕಾಲಾವಧಿಯಲ್ಲಿ ಮನಸ್ಸು ಕರಿಬಸಮ್ಮನಂತಹ ಅದೆಷ್ಟೋ ಕೋಟ್ಯಾಂತರ ಜನತೆಯ ಸಾವಿನ ಬಯಕೆಯ ಕಾರಣವನ್ನು ಬರೀ ಕೇಳಿರಲಿಲ್ಲ ಹತ್ತಿರದಿಂದ ಕಂಡಿತ್ತು ಕೂಡ. ಹಾಗಾಗಿ ಅವರ ಭೇಟಿಯ ಸಂದರ್ಭದಲ್ಲಿ ಪ್ರಶ್ನೆಗಳನ್ನು ಕೇಳುವ ಅವಶ್ಯಕತೆ ಬರಲೇ ಇಲ್ಲ. ಅವರ ಎದೆಯೊಳಗಿನ ಬೇಗುದಿಗೆ ಪರಿಹಾರವಿದೆಯೇ ? ಇದ್ದರೂ ಅದು ಕೇವಲ ಮರಣವೇ ? ಎಂಬುದರ ಕುರಿತಷ್ಟೇ ಮನಸ್ಸು ಪರಿ ಪರಿಯಾಗಿ ಆಲೋಚಿಸಲು ತೊಡಗಿತ್ತು . ಬದುಕಿ ಬಾಳಬೇಕು, ನೆಮ್ಮದಿಯ ನಾಳೆಗಳನ್ನು ಕಂಡುಕೊಳ್ಳಬೇಕು, ನಾವು – ನಮ್ಮವರೆಂಬ ಬಾಂಧವ್ಯ ಬೆಸುಗೆಯಲ್ಲಿ ಆಪ್ತತೆಯ ಸೊಗಸು ಕಾಣಬೇಕು ಎಂಬಿತ್ಯಾದಿ ಕನಸುಗಳ ಹೃದಯದಿಂದ ಹೊಸೆದು, ಉಸಿರಾಗಿಸಿಕೊಂಡು ನನಸಾಗಿಸಿಕೊಳ್ಳಲು ಬಯಸುವ ಹೃದಯಗಳು ಅದ್ಯಾಕೆ ಹೀಗೆ ತಮಗಿನ್ನು ಸಾವು ಒಂದೇ ಪರಿಹಾರ ಎಂದು ತೀರ್ಮಾನಿಸಿ ಬಿಡುವ ಹಂತ ತಲುಪಿ ಬಿಡುತ್ತವೆ ಎಂದು ಗಾಢವಾಗಿ ಯೋಚಿಸಿದಾಗ ಎಂತಹ ಗಟ್ಟಿ ಗುಂಡಿಗೆಯೂ ಕೂಡ ಕರಗದಿರದು, ಎಂತಹ ಕಲ್ಲು ಹೃದಯವೂ ಕೂಡ ದ್ರವಿಭೂತವಾಗದಿರದು. ಮರಣದಲ್ಲಿ ಮಹಾನವಮಿ ಬಯಸುವ ಕಲಿಬಸಮ್ಮ ಎಂಬ ಆತ್ಮ ಚೇತನ : ಎಚ್.ಬಿ ಕರಿಬಸಮ್ಮನವರು ಶಿಕ್ಷಕಿಯಾಗಿ, ಗೃಹಿಣಿಯಾಗಿ, ಸಮಾಜ ಸೇವಕಿಯಾಗಿ ಜೀವನದ ಅನೇಕ ಏಳು-ಬೀಳು, ಸಿಹಿ-ಕಹಿ, ವೈರುಧ್ಯಗಳನ್ನು ಬಲು ಹತ್ತಿರದಿಂದ ಕಂಡ 86 ರ ವಯೋವೃದ್ಧೆ, ಮಾಗಿದ ಜೀವ. ನಾಲ್ಕು ದಶಕಗಳ ಕಾಲ ಸ್ವಮೂತ್ರ ಸೇವನೆ, ಡಯಾಬಿಟಿಸ್, ನೆಟ್ಟಗಾಗದ ಬೆನ್ನು ಹುರಿ ( ಸ್ಲಿಪ್ ಡಿಸ್ಕ್ ) ಇತ್ಯಾದಿ ದೈಹಿಕ ಬಾಧೆ, ನೋವು ಕಿತ್ತು ತಿನ್ನುತ್ತಿದೆ. ಬಾಲ್ಯದಲ್ಲೇ ವೈಧವ್ಯಕ್ಕೆ ತುತ್ತಾದ ಅವರು ಮರು ಮದುವೆ ಆದರೂ, ಜೀವನದ ಒಳ ಹೊರಹುಗಳ ಮರ್ಮಾಘಾತಗಳು ಅವರನ್ನು ಬಿಡದೆ ಕಾಡಿವೆ. ಸೂಕ್ಷ್ಮಾತಿ ಸೂಕ್ಷ್ಮ ಮನಸ್ಸಿನ ಅವರು ಅನೇಕ ಮಾನಸಿಕ ತುಮುಲಗಳಿಂದ ಬೆಂದು ಹೋಗಿದ್ದಾರೆ. ಹತ್ತು ಹಲವು ಸಾಮಾಜಿಕ ಅನಿಷ್ಟಾದಿಗಳನ್ನು ಹತ್ತಿರದಿಂದ ಕಂಡು ನಲುಗಿದ್ದಾರೆ. ಒಟ್ಟಾರೆ ಅವರ ಮನಸ್ಸು ಮುರಿದು ಹೋಗಿದೆ, ಹೃದಯ ಜಜ್ಜಿ ಹೋಗಿದೆ. ಹಾಗಾಗಿ ಅವರೀಗ ಸಾವೆಂಬ ಶೂಲಕ್ಕೇರಲು ಸಿದ್ಧವಾಗಿ ನಿಂತಿದ್ದಾರೆ !. ಆದರೂ. ಅವರ ಕಂಗಳಲ್ಲಿ ಯಾವುದೋ ಚೈತನ್ಯ ಪ್ರಜ್ವಲಿಸುತ್ತಿದೆ. ಕನಸುಗಳು ಬಾಡಿಲ್ಲ, ಎದೆ ನಡುಗಿಲ್ಲ, ಅಚಲತೆ ಅಡಗಿಲ್ಲ. ಇಂತಹ ದಿಟ್ಟ, ಛಲಗಾತಿ ಕರಿಬಸಮ್ಮ ಸಾವು ಬಯಸುತ್ತಾರೆಂದರೆ ಅವರನ್ನು ಹಾಗೆ ಸಾಯಲು ಬಿಡಲು ಯಾರಿಗಾದರೂ ಖಂಡಿತ ಮನಸ್ಸಾಗದು. ಸಾವಿನ ಈ ಬಯಕೆ – ಬೇಡಿಕೆ, ಆ ಆರ್ತನಾದ ಕೇವಲ ಕರಿಬಸಮ್ಮ ಒಬ್ಬರದ್ದೂ ಮಾತ್ರವಲ್ಲ. ಆ ಧ್ವನಿಯ ಹಿಂದೆ ಸಮಾಜದ ಕಟ್ಟಕಡೆಯ ವ್ಯಕ್ತಿಯ ಎದೆಯಾಳದ ನೋವಿದೆ. ಕೈಲಾಗದವರ, ನಿರ್ಗತಿಕರ, ದೀನ-ದಲಿತರ, ಬಡ-ಬಗ್ಗರ, ನೊಂದು-ಬೆಂದವರ ಅಸಹಾಯಕತೆಯ ಕೂಗಿದೆ. ಸಾಮಾಜಿಕ ಏಣಿ-ಶ್ರೇಣಿ ವ್ಯವಸ್ಥೆ, ಅಸಮಾನತೆ, ದೌರ್ಜನ್ಯ, ಭ್ರಷ್ಟಾಚಾರ, ಮೋಸ-ವಂಚನೆ, ಕ್ರೌರ್ಯ, ಅನುಭವಿಸಿದವರ ಅಳಲಿದೆ. ವೈಫಲ್ಯತೆ ಮತ್ತು ಹಿಂಸೆಯ ವಿರುದ್ಧದ ಆಕ್ರೋಶವಿದೆ ಎಂಬುದು ಅವರನ್ನು ಹತ್ತಿರದಿಂದ ಕಂಡವರಿಗೆ ಮಾತ್ರ ಮನವರಿಕೆಯಾಗುತ್ತದೆ. ಸಾವನ್ನು ಬೇಡುವವರು ಹೇಡಿಗಳು ಎನ್ನುವ ವೀರಾಧಿವೀರರಿಗೆ ಕರಿಬಸಮ್ಮನಂಥವರ ಮೂಕ ವೇದನೆ ಹಾಗೂ ಸಾಮಾಜಿಕ ಕಳಕಳಿ ಅರ್ಥವಾಗಬೇಕಿದೆ. ಸಾವನ್ನು ಬೇಡುವ ಮನದ ಹಿಂದಿರುವ ನೆಮ್ಮದಿಯ ಬದುಕಿನ ಹೆಬ್ಬಯಕೆಯನ್ನೂ ಸಮಾಜ ಅರಿಯಬೇಕಿದೆ. ದಯಾ ಮರಣದ ಸುತ್ತ ಮುತ್ತ : ದೈಹಿಕವಾಗಿ ಜರ್ಝರಿತವಾದವರು, ವಾಸಿಯಾಗದ ರೋಗದಿಂದ ಬಳಲುತ್ತಿರುವವರು, ಸಾವಿನ ಹೊರತು ಬೇರೇನೂ ತಮಗೆ ಬೇಕಿಲ್ಲ ಎಂದು ಬೆಂದು ಬಸವಳಿದು ಮಾನಸಿಕ ಖಿನ್ನತೆಗೊಳಗಾದವರು, ಜೀವನದಲ್ಲಿ ಬದುಕುಳಿಯುವ ಎಲ್ಲಾ ಭರವಸೆಗಳನ್ನು ಕಳೆದುಕೊಂಡ ವಯೋವೃದ್ಧರಿಗೆ ದಯಾಮರಣ ದಯಪಾಲಿಸಿ ಎಂಬುದು ಕರಿಬಸಮ್ಮನವರ ಹೋರಾಟ. ಸುಮಾರು 36 ವರ್ಷಗಳ ಅವರ ಈ ಸತತ ಹೋರಾಟಕ್ಕೆ ಬೆಂಬಲ ಪಡೆಯುವ ನಿಟ್ಟಿನಲ್ಲಿ ಅವರು ಅನೇಕ ಎಡರು ತೊಡರುಗಳನ್ನು ಅನುಭವಿಸಿದ್ದಾರೆ. ಹಲವರ ಮನೆ, ಹಾದಿ-ಬೀದಿಗಳನ್ನು ಎಡತಾಕಿದ್ದಾರೆ. ಆದರೂ ಹಿಡಿದ ಪಟ್ಟು ಬಿಡದ ಅವರ ಹೋರಾಟದ ಮನೋಭಾವಕ್ಕೆ ಅಲ್ಲಲ್ಲೇ ಬೆಂಬಲ ವ್ಯಕ್ತವಾಗಿದ್ದು, ಈವರೆಗೆ 20 ಸಾವಿರಕ್ಕೂ ಅಧಿಕ ಜನರ ಸಹಿ ಸಂಗ್ರಹಿಸಿದ್ದಾರೆ. 2012 ರಲ್ಲಿ ಸದನದಲ್ಲಿ ಕೂಡ ದಯಾಮರಣದ ಕುರಿತು ಸುದೀರ್ಘ ಚರ್ಚೆ ನಡೆಯಲು ಕಾರಣೀಭೂತರಾಗಿದ್ದಾರೆ. ರಾಷ್ಟ್ರಪತಿ, ಮುಖ್ಯಮಂತ್ರಿ, ಪ್ರಧಾನ ಮಂತ್ರಿ, ಸಚಿವರು, ಮಂತ್ರಿ ಮಹೋದಯರಿಗೂ ಕೂಡ ಪತ್ರ ಮುಖೇನ ದಯಾಮರಣದ ಕುರಿತು ಗಮನ ಸೆಳೆಯುವಲ್ಲಿಯೂ ಯಶಸ್ವಿಯಾಗಿದ್ದಾರೆ. ಕೆಲ ಸ್ವಾಮೀಜಿಗಳನ್ನು ಖುದ್ದಾಗಿ ಭೇಟಿ ನೀಡಿ ಬೆಂಬಲಕ್ಕಾಗಿ ಮನವಿ ಮಾಡಿದ್ದಾರೆ. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲೂ ಧರಣಿ ನಡೆಸಿ ಬಂದಿದ್ದಾರೆ. ದಯಾಮರಣದ ಕಾಯ್ದೆ ಜಾರಿಯಾದಲ್ಲಿ ದುರುಪಯೋಗದ ಸಾಧ್ಯತೆಗಳೇ ಹೆಚ್ಚು, ಇದು ಶಿಕ್ಷಾರ್ಹ ಅಪರಾಧ ಹಾಗೂ ಇದು ಕೊಲೆಗೆ ಸಮ ಎಂಬ ಎರಡು ಮಹತ್ವದ ಕಾರಣ ನೀಡಿ ಸುಪ್ರೀಂಕೋರ್ಟ್ ಪ್ರಸ್ತಾವವನ್ನು ತಿರಸ್ಕರಿಸುತ್ತಲೇ ಬಂದಿತ್ತು . ಹಾಗಾಗಿಯೇ ಕರಿಬಸಮ್ಮನವರು ತೀರಾ ಅಗತ್ಯ ಇರುವವರಿಗೆ ಮಾತ್ರ ಈ ಕಾಯ್ದೆ ಅನ್ವಯವಾಗಲಿ ಎಂಬ ಕಾರಣಕ್ಕಾಗಿ ಕೆಲ ಸಲಹೆಗಳನ್ನು ಕೂಡ ತಮ್ಮ ಮನವಿಯಲ್ಲಿ ಮಂಡಿಸಿದ್ದರು. ಖಾಸಗಿ ಆಸ್ಪತ್ರೆ ಹೊರತುಪಡಿಸಿ ಜಿಲ್ಲಾ ಮತ್ತು ತಾಲೂಕು ಮಟ್ಟದ ಸರ್ಕಾರಿ ಆಸ್ಪತ್ರೆಯಲ್ಲಿ ಮಾತ್ರ ಈ ದಯಾಮರಣದ ಒಂದು ಪ್ರತ್ಯೇಕ ವಿಭಾಗ ತೆರೆಯುವಂತೆ ಕೋರಿದ್ದಾರೆ. ಸಾವು ಬಯಸುವವರ ಸಮ್ಮತಿಯ ಸ್ಪಷ್ಟತೆ ಮತ್ತು ನಿಖರತೆಯ ಪರಿಶೀಲನೆಗೆ ಬೆಂಚ್‌ಕೋರ್ಟ್ ನಿರ್ಮಿಸುವಂತೆ ಬೇಡಿಕೆ ಇಟ್ಟಿದ್ದಾರೆ. ಸ್ಥಳೀಯ ಜಿಲ್ಲಾಧಿಕಾರಿ, ನ್ಯಾಯಾಧೀಶರು, ತಜ್ಞ ವೈದ್ಯಾಧಿಕಾರಿ ಸೇರಿದಂತೆ ಒಟ್ಟು 15-20 ನಿವೃತ್ತ ಅಧಿಕಾರಿಗಳು, ತಜ್ಞರು, ಪ್ರಾಜ್ಞರನ್ನೊಳಗೊಂಡ ಸಮಿತಿ ರಚಿಸುವುದು ಸೇರಿದಂತೆ ಇತ್ಯಾದಿ ವಿಚಾರಗಳನ್ನು ಪ್ರಸ್ತುತಪಡಿಸಿದ್ದಾರೆ. ದಯಾ ಮರಣ ದಯಪಾಲಿಸಿರುವ ದೇಶಗಳು : ಈಗಾಗಲೇ ನೆದರೆಂಡ್, ಸ್ವಿಡ್ವರ್ಲ್ಯಾಂಡ್, ಬೆಲ್ಲಿಯಂ, ನಾರ್ವೆ, ಸ್ವೀಡನ್, ಫಿಗ್ಲೆಂಡ್, ಲುಕ್ಸೆಂಬರ್ಗ್, ಅಲ್ವೇನಿಯಾ, ಥಾಯ್ಲೆಂಡ್ ಹಾಗೂ ಅಮೇರಿಕಾ, ಒರೆಗಾನ್ನ ಕೆಲವೆಡೆ ದಯಾಮರಣಕ್ಕೆ ಅವಕಾಶ ಕಲ್ಪಿಸಲಾಗಿದ್ದು ಭಾರತದಲ್ಲೂ ಇದಕ್ಕೆ ಮಾನ್ಯತೆ ನೀಡಬೇಕು ಎಂದು ಹೋರಾಡುತ್ತಲೇ ಇದ್ದರು ಕರಿಬಸಮ್ಮ. ಭಾರತದಲ್ಲಿ ದಯಾ ಮರಣದ ಬಗೆಗಿನ ದೃಷ್ಟಿಕೋನ : ಹೇಳಿ ಕೇಳಿ ಭಾರತ ದೇವರು, ಧರ್ಮ, ಸಂಪ್ರದಾಯಕ್ಕೆ ಹೆಚ್ಚು ಮಾನ್ಯತೆ ನೀಡುವ ದೇಶ. ದಯಾಮರಣದ ಕೋರಿಕೆ ಭಾರತದ ದೃಷ್ಟಿಯಲ್ಲಿ ಅಪರಾಧವಾಗಿ ಕಾಣುತ್ತಿದೆ. ಇದು ಕೇವಲ ಭಾವನಾತ್ಮಕ ಮಾತ್ರವಲ್ಲ ವಾಸ್ತವ ಬದುಕಿನೊಡನೆ ಮಿಳಿತಗೊಂಡಿರುವ ಬೇಡಿಕೆ ಎಂಬುದನ್ನು ಮನವರಿಕೆ ಮಾಡಿಕೊಡುವ ಪ್ರಯತ್ನ ನಡೆಯಬೇಕಿದೆ. ಅಮಾನವೀಯವಾಗಿ ಅತ್ಯಾಚಾರಕ್ಕೆ ಒಳಗಾಗಿ ಅನೇಕ ವರ್ಷಗಳ ಕಾಲ ಜೀವಚ್ಛವವಾಗಿ ನರಳಿದ ಮುಂಬೈನ ಕೆಎಂಇ ಆಸ್ಪತ್ರೆಯ ನರ್ಸ್ ಅರುಣ ಶಾನಬಾಗ್ ಅವರು ದಯನೀಯ ಸ್ಥಿತಿಯಲ್ಲೇ ಕೊನೆಯುಸಿರೆಳೆದರು. ಅವರ ಸ್ಥಿತಿ ಕಂಡು ಕರಗಿದ್ದ ಅವರ ಸ್ನೇಹಿತೆ ಪತ್ರಕರ್ತೆ ಪಿಂಕಿ ಏರಾನಿ ಕೂಡ ಸುಪ್ರೀಕೋರ್ಟ್‌ಗೆ ಮನವಿ ಸಲ್ಲಿಸಿದ್ದರು. ಅವರ ಮನವಿಗೆ ನೇರಾ ಪುರಸ್ಕಾರ ದೊರೆಯಲಿಲ್ಲ. ಇಂತಹ ಅದೆಷ್ಟೋ ಮನವಿಗಳು ನೆನೆಗುದಿಗೆ ಬಿದ್ದಿರುವಾಗ ನನ್ನ ಮನವಿಗೆ ಮನ್ನಣೆ ಸಿಗುವುದೇ ಎಂಬುದು ಯಕ್ಷಪ್ರಶ್ನೆಯಾಗಿತ್ತು. ಆದರೆ ಈಗ ಅದಕ್ಕೆ ಪರಿಹಾರ ದೊರಕಿದೆ ಎನ್ನುತ್ತಾರೆ ಕರಿಬಸಮ್ಮ. ಪ್ರಯತ್ನ, ಪ್ರತಿಭೆ, ಆಶಾವಾದಿತನ, ವಿವೇಚನೆ ಎಲ್ಲಕ್ಕೂ ಮಂಕು ಕವಿಸಿ ಮರ್ಮಾಘಾತ ಉಂಟು ಮಾಡುವ ಕಾಣದ ಕೈಗಳ ಕೈ ಚಳಕ ತಿಳಿದಾಗ, ಯಾರದ್ದೋ ಮೋಸ ದ್ರೋಹಕ್ಕೆ ತಾವು ನೋವು ನಲಿವುಗಳಿಗೆ ಗುರಿಯಾಗಿ ಭವಿಷ್ಯವನ್ನು ಕಳೆದುಕೊಳ್ಳುವವರನ್ನು ಕಂಡಾಗ, ನೆಮ್ಮದಿಯಾಗಿ ಬದುಕುವುದಕ್ಕೆ ಸಾಧ್ಯವಾಗುತ್ತಿದೆಯೇ ಎಂಬ ಜಿಜ್ಞಾಸೆ ಮೂಡಿದಾಗ , ಜೀವನದುದ್ದಕ್ಕೂ ನೆಮ್ಮದಿಯ ಹರಸಿ ನೋವುಂಡ ಜೀವಗಳು ಸಾವಿನಲ್ಲಾದರೂ ನೆಮ್ಮದಿ ಕಂಡುಕೊಳ್ಳಲಿ ಎಂದು ಆಶಿಸುವುದು ಅನಿವಾರ್ಯ. ಇಂತಹ ಸಂದರ್ಭಗಳಿಗೆ ಖಂಡಿತ ದಯಾ ಮರಣವೇ ಮದ್ದು ಎನ್ನದೆ ವಿಧಿಯಿಲ್ಲ ಎಂದು ನೋವಿನಿಂದ ನುಡಿಯುತ್ತಾರೆ ಕರಿಬಸಮ್ಮ . ದಯಾಮರಣದ ಜಾರಿಗೆ ಸುಪ್ರೀಕೋರ್ಟ್ ದುರುಪಯೋಗದ ನೆಪವೊಂದನ್ನೆ ಮುಂದೆ ಇಟ್ಟುಕೊಂಡು ಮನವಿ ತಳ್ಳಿದಾಗ, ಪ್ರಸ್ತುತ
“ದಯಾಮರಣ ಮತ್ತು ಕರಿಬಸಮ್ಮ ಎಂಬ ವಾರ್ನಿಂಗ್ ಬೆಲ್” ಗಂಗಾಧರ ಬಿ ಎಲ್ ನಿಟ್ಟೂರ್ Read Post »


