ಕಥಾ ಸಂಗಾತಿ
ಶ್ರೀದೇವಿ. ಮ. ಗುಮ್ಮಗೋಳ
“ಬಾಡಿದ ಮೊಗ್ಗು ಅರಳಿತು”


pic=chat gpt
ಅಂದು ನಾನು ಯುನಿವರ್ಸಿಟಿ ಕ್ಲಾಸ್ ಮುಗಿಸಿ ಮನೆಗೆ ಹೋಗಲು ಬಸ್ ಸ್ಟಾಪ್ ನಲ್ಲಿ ನಿಂತಿದ್ದೆ. ಹಿಂದಿನಿಂದ ಬೆನ್ನಿಗೆ ಯಾರೊ ಗುದ್ದಿದಂತಾಯಿತು. ಹೊರಳಿ ನೋಡಿದೆ.
“ಎಯ್ ಭಾರತಿ…. ಹೇಗಿದ್ದಿಲೇ…. ನಾನು ಸುಜಾತಾ. ಎಷ್ಟ ವರಷ ಆತು ನಿನ್ನ ನೋಡಿ….. ಹೆಂಗದ್ದಿ ಹಂಗ ಇದಿ….. ಒಂಚೂರು ಬದಲಾಗಿಲ್ಲ” ಎಂದ ಅವಳನ್ನೆ ದಿಟ್ಟಿಸಿ ನೋಡತೊಡಗಿದೆ.
ಗುಲಾಬಿ ಬಣ್ಣದ ಸೀರೆ ಉಟ್ಟು ಬಿಳಿ ಬಣ್ಣದ ರವಿಕೆ ತೊಟ್ಟಿದ್ದಳು. ಮುಖ ನೋಡಿ ಗುರುತು ಹಿಡಿದೆ. ಅವಳು ನನ್ನ ಪ್ರೈಮರಿ ಸ್ಕೂಲಿನ ಸ್ನೇಹಿತೆ ಕ್ಲಾಸ್ ಮೇಟ್ ಸುಜಾತಾ. ಆಗ ನಾವು ಹಳ್ಳಿಯಲ್ಲಿದ್ದೇವು. ನಮ್ಮ ತಂದೆ ನೀರಾವರಿ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರು. ನನ್ನ ಪ್ರೈಮರಿ ಎಜುಕೇಶನ್ ಹಳ್ಳಿಯಲ್ಲೆ ಆಯಿತು. ನಂತರ ನಮ್ಮ ತಂದೆಗೆ ವರ್ಗವಾಗಿ ನಗರಕ್ಕೆ ಬಂದೇವು.
“ಓ… ನೀನಾ ಅರಾಮ ಅದೇನಿ. ನೀನು ಇಲ್ಲಿ….. ಕಾಲೇಜ ಅಡ್ಮಿಶನ್ ಮಾಡ್ಸಿದಿಯಾ….? ನಾನು ಎಂ.ಏ ಎಕ್ಸಟರ್ನಲ್ ಮಾಡಾಕ್ಕತ್ತೇನಿ… ನಿನ್ನ ನೋಡಿ ಎಷ್ಟೊ ವರಷಗಳಾದವು ಬಾ ಇಲ್ಲಿ ಕೂತು ಮಾತಾಡೋಣ” ಎಂದು ಪಕ್ಕದಲ್ಲೆ ಇದ್ದ ಪಾರ್ಕಗೆ ಕರೆದುಕೊಂಡು ಹೋದೆ.
ಸಮೀಪದಲ್ಲೆ ಇದ್ದ ಒಂದು ಬೆಂಚ್ ಮೇಲೆ ಇಬ್ಬರು ಕುಳಿತೇವು. ಒಬ್ಬರಿಗೊಬ್ಬರು ಕುಶಲೋಪಚರಿ ಮಾತನಾಡಿದೇವು. ಅವಳು ಸಮೀಪದ ಒಂದು ಹಳ್ಳಿಯಲ್ಲಿ ಸ್ಕೂಲ್ ಟೀಚರ್ ಆಗಿ ಕೆಲಸ ಮಾಡುತ್ತಿದ್ದಾಳೆ ಎಂದು ಹೇಳಿದಳು.
“ಲೇ… ಅಂದು ನೀನು ನನಗೆ ಸಹಾಯ ಮಾಡದ ಇದ್ದಿದ್ದರ ನಾ ಇವತ್ತು ಟೀಚರ್ ಆಗಿರ್ತಿದ್ದಿಲ್ಲ. ನನ್ನ ಮಾವನ ಊರಲ್ಲಿ ಪಾತ್ರೆ ಮುಸುರೆ ತಿಕ್ಕುತ ನಾಲ್ಕೈದು ಮಕ್ಕಳ ತಾಯಿಯಾಗಿ ಹಳ್ಳಿಯಲ್ಲಿ ಕೆಲಸಕ್ಕೆ ಬಾರದವಳಾಗಿ ಬದಕ್ತಿದ್ನಿ. ಶಿಕ್ಷಣದಿಂದ ವಂಚಿತಳಾಗ್ತಾ ಇದ್ನಿ. ನನ್ನ ಮದುವೆಯೊಳಗ ಆದ ಘಟನೆಯಿಂದ ಮನಿಯವರಿಗೂ ತಿಳುವಳಿಕೆ ಬಂದು ನನಗ ಓದು ಮುಂದ ವರಿಸಿದರು. ಈಗ ಟೀಚರಾಗಿ ಹಳ್ಳಿಯಲ್ಲಿ ಕೆಲಸಾ ಮಾಡಕ್ಕತ್ತೇನಿ. ಅದಕ ನೀನ.. ಕಾರಣ ನಿನಗ.. ಎಷ್ಟ ಥ್ಯಾಂಕ್ಸ ಹೇಳಿದರು ಸಾಲದು….” ಅಂದ್ಲು.
“ಎಯ್ ಬಿಡ ಸುಜಾತಾ… ಆ ಟೈಮ್ನಾಗ ನನಗ ಏನೊ ತಿಳಿತೊ… ಏನೊ ಒಟ್ಟನಲ್ಲಿ ನೀನು ಶಿಕ್ಷಣದಿಂದ ವಂಚಿತಳಾಗುದು ತಪ್ಪತು ಅನ್ನುದು ನನಗ ಬಾಳ ಖುಷಿ ಅನಸ್ತದ….. ನಡಿ ನಮ್ಮನಿಗ ಹೋಗುನ ನಿನ್ನ ನೋಡಿ ಮನಿಯೊಳಗ ಅಪ್ಪ ಅವ್ವನು ಖುಷಿ ಪಡತಾರ” ಅಂದೆ.
“ಇಲ್ಲ ಇನ್ನೊಂದಿನ ಬರತೇನಿ ನಿನ್ನ ಅಡ್ರೆಸ್ ಕೊಡು.” ಎಂದು ನನ್ನ ವಿಳಾಸ ಇಸಿದುಕೊಂಡಳು.
ನನ್ನ ನೆನಪುಗಳು ಬಾಲ್ಯ ದಿನಗಳತ್ತ ಜಾರಿದವು.
************
ಸುಜಾತಾ ಮತ್ತು ನಾನು ಒಂದೇ ತರಗತಿಯಲ್ಲಿ ಓದುತಾ ಇದ್ವಿ. ಸುಜಾತಾ ಅಪ್ಪ ಹೊಲದಲ್ಲಿ ಕೂಲಿ ಕೆಲಸ ಮಾಡುತ್ತಿದ್ದ. ತುಂಬಾ ಬಡವರು. ಇಬ್ಬರು ಅಣ್ಣಂದಿರು. ಸುಜಾತಾ ಓದುವದರಲ್ಲಿ ಮುಂದಿದ್ದಳು. ಯಾವಾಗಲೂ ಕ್ಲಾಸಿಗೆ ಫಸ್ಟ ಬರುತ್ತಿದ್ದಳು.
ಮಾಸ್ತರು “ನೋಡ್ರಿ ಸುಜಾತನ ನೋಡಿ ಕಲಿರಿ…. ಅವರಪ್ಪ ಕೂಲಿ ಕೆಲಸಾ ಮಾಡತಾನು. ಆದರೂ… ಹೆಂಗ ಕಷ್ಟ ಪಟ್ಟ ಓದತಾಳು.” ಎಂದು ಹೇಳುತ್ತಿದ್ದರು. ನಾವಿಬ್ಬರೂ ಆಗ ಏಳನೇ ತರಗತಿಯಲ್ಲಿದ್ದಿವಿ. ಸಜಾತಾ ಒಂದು ವಾರ ಶಾಲೆಗೆ ಬರಲಿಲ್ಲ. ಅವರಜ್ಜಿ ತೀರಿಕೊಂಡಿದ್ದರು. ಮೂರ್ನಾಲ್ಕು ತಿಂಗಳಿಗೆ ಪರೀಕ್ಷೆ ಇತ್ತು. ಶಾಲೆಗೆ ಬರಲು ಶುರು ಮಾಡಿದ ಮೇಲೆ ಯಾಕೊ ಸುಜಾತ ಮೊದಲಿನ ತರಹ ಲವಲವಿಕೆಯಿಂದ ನಗನಗತಾ ಇರಲಿಲ್ಲ. ಯಾವಾಗಲೂ ಒಬ್ಬಂಟಿಯಾಗಿ ಮೌನವಾಗಿರ ತೊಡಗಿದಳು. ನಾನು ಆಟಕ್ಕೆಲ್ಲಾ ಅವಳನ್ನು ಒತ್ತಾಯದಿಂದ ಹಿಡಿದೇಳದುಕೊಂಡು ಹೋಗುತ್ತಿದ್ದೆ.
ಅವಳ ಬದಲಾಗಿರುವದನ್ನು ನೋಡಿ ಒಂದ ದಿನ ಕೇಳಿದೆ “ಸುಜಿ…ಯಾಕೆ ಒಂತಾರ ಅದಿ. ಹಿಂಗ್ಯಾಕ ಮಾಡಕ್ಕತ್ತಿ….. ನನ್ನ ಜೊತಿ ಆಟನು ಅಡವಲ್ಲಿ. ಚಂದಂಗ….. ಮಾತಾಡುವಲ್ಲಿ ಹಂಗಂದರ… ನಾನ ನಿನ್ನ ಚಾಳಿ ಟೂ ಬಿಡತೇನಿ ನೋಡ ಮತ್ತ…”
ಆಗ ಸುಜಾತ ಅಳತೊಡಗಿದಳು. ನಾನು ಅವಳನ್ನು ಗಟ್ಡಿಯಾಗಿ ಹಿಡಿದು ತಬ್ಬಿಕೊಂಡು “ಯಾಕ ಸುಜಿ…ಯಾಕ ಅಳಾತಿ…. ಏನ ಆತು ಹೇಳು..”
“ಲೇ ಭಾರಿ… ನಮ್ಮನ್ಯಾಗ ನಮ್ಮಾವನ ಜೋಡಿ ನನಗ ಮದ್ವಿ…..ಮಾಡತರಂತ ನನಗ ಇಷ್ಟ ಇಲ್ಲ ನಾನ ಓದಬೇಕು. ಸಾಲಿ ಕಲಿಬೇಕು” ಅಂದು ಒಂದೇ ಸವನೇ ಅಳತೊಡಗಿದಳು.
ನನಗೂ ಅಳು ಬಂದಂಗ ಆತು. “ಲೇ ಹಂಗರ ನೀನು… ನನ್ನ ಬಿಟ್ಟ ಹೋಗ್ತಿ… ನೀನು ಹೋಗುದ ಬ್ಯಾಡ. ಸ್ಯಾಣ ಅದಿ ನೀ… ಸಾಲಿ ಕಲಿಬೇಕು” ಎಂದೆ. ಇಬ್ಬರು ಒಬ್ಬರಿಗೊಬ್ಬರು ಸಮಾದಾನ ಮಾಡಿಕೊಂಡು ಮನಿಗೆ ಹೋದೆವು.
ಮುಂದಿನ ವಾರ ಅವಳ ಮದುವೆ ಇತ್ತು. ಏಕೊ ನನಗೂ ಪಾಪ ಅನಿಸಿತ್ತು. ಎನ ಮಾಡೊದು ತಿಳಿಯಲಿಲ್ಲ. ಹಿರಿಯರನ್ನು ಎದುರಿಸಿ ನಡೆಯುವಂತ ದಿನಗಳು ಆಗಿರಲಿಲ್ಲ. ಮನೆಯಲ್ಲಿ ನನ್ನ ಅಪ್ಪ ಅಮ್ಮ ಸುಶಿಕ್ಷಿತರಾಗಿದ್ದರು. ಶಾಲೆಯ ಎಲ್ಲ ವಿಷಯಗಳನ್ನ ನಾನು ಮನೆಯಲ್ಲಿ ಹೇಳತಾ ಇದ್ದೆ.
ಮರುದಿನ ಊಟಕ್ಕೆ ಕೂತಾಗ ಅಪ್ಪ ಅಮ್ಮನಿಗೆ “ಅಪ್ಪ ಅಮ್ಮಾ ಪಾಪ ಸುಜಾತನ್ನ ಮದ್ವಿ ಮಾಡತಾರಂತ….ಅವಳಗ ಮದ್ವಿ ಆಗಾಕ ಇಷ್ಟನ ಇಲ್ಲಂತ. ಪಾಪ ಅಳಾಕ್ಕತ್ತಿದ್ಲು. ಅಕೀನ ಮದ್ವಿ ನಿಲ್ಲಸಾಕ ಬರುದಿಲ್ಲಾ? ” ಅಂತ ಕೇಳದೆ.
ನಮ್ಮ ತಂದೆ “ಅಯ್ಯೊ! .. ಇಷ್ಟ ಸಣ್ಣ ವಯಸ್ಸಿಗೆ ಮದುವಿ ಮಾಡಾಕತ್ತಾರು….. ಬಾಲ್ಯ ವಿವಾಹ ಕಾನೂನಿನ ಪ್ರಕಾರ ಅಪರಾಧ. ಇದಕ್ಕೆ ದಂಡ ಮತ್ತು ಶಿಕ್ಷೆ ಐತಿ… ಏನ್ ತಿಳಲಾರದ ಅನಕ್ಷರಸ್ಥರು…. ಹಿಂಗ… ಮಕ್ಕಳ ಭವಿಷ್ಯನ ಹಾಳ ಮಾಡತಾರು…. ನನ್ನ ಸ್ನೇಹಿತನೊಬ್ಬ ಮಕ್ಕಳ ಮತ್ತು ಕಲ್ಯಾಣ ಇಲಾಖೆಯೊಳಗ ಕೆಲಸಾ ಮಾಡತಾನು ನಾನು ವಿಚಾರಸತೇನಿ” ಅಂದರು.
“ಅಪ್ಪಾ …ಅಪ್ಪಾ ಹೆಂಗರ ಮಾಡಿ ಸುಜಾತನ ಮದ್ವಿ ನಿಲ್ಲುಂಗ ಮಾಡು” ಅಂತ ಗೋಗರದೆ. ನನ್ನಪ್ಪ ಪೊನಿನಲ್ಲಿ ಯಾರದೊ ಜೊತೆ ಮಾತನಾಡಿದರು.
*******

ಅಂದು ಮನೆಯ ಮುಂದೆ ಸುಜಾತಳ ಮದುವೆ ನಡೆಯುತ್ತಿತ್ತು. ಸುಜಾತ ಕೆಂಪು ಸೀರೆಯನ್ನು ಉಟ್ಟು, ಹಣೆಗೆ ಕುಂಕುಮ ಕೈ ತುಂಬ ಹಸಿರು ಬಳೆ ತೊಟ್ಟು ವಧುವಿನಂತೆ ಶೃಂಗಾರಗೊಂಡಿದ್ದಳು. ಆದರೆ ಮುಖದಲ್ಲಿ ಹರ್ಷವಿರಲಿಲ್ಲ. ಅಳು ಒತ್ತಿ ಒತ್ತಿ ಬರುತ್ತಿತ್ತು. ಅಲಂಕರಿಸಿದ ತಾಟಿನಲ್ಲಿ ಬಾಡಿದ ಹೂವನ್ನು ಇಟ್ಟಂತೆ ಬಾಸವಾಗುತ್ತಿತ್ತು. ಅರಳುತಿರುವ ಮೊಗ್ಗನ್ನು ಚಿವುಟಿದಂತೆನಿಸಿತು. ಅವಳ ಸೋದರ ಮಾವನಿಗೆ ಅವಳು ಬುಜಕ್ಕಿಂತಲೂ ಕೆಳಗೆ ಅವನ ಮೊಣಕೈ ಗೆ ಬರುತ್ತಿದ್ದಳು. ನಾನು ಒಳಗೊಳಗೆ ವ್ಯಥೆ ಪಡುತ್ತಿದ್ದೆ ಅಪ್ಪನಿಗೆ ಹೇಳಿದ್ದೆ. ಅಪ್ಪನಿಂದ ಮದುವೆ ನಿಲ್ಲಸಲು ಆಗುವದಿಲ್ಲವೆಂದು ಕಾಣಿಸುತ್ತದೆ. ಇಲ್ಲವಾದರೆ ಇಷ್ಟೊತ್ತಿಗೆ ಅಪ್ಪ ಸುಜಾತಳ ತಂದೆ ತಾಯಿಗೆ ತಿಳಿ ಹೇಳಿ ಮದುವೆ ನಿಲ್ಲಿಸಿತ್ತಿದ್ದರು. ಪಾಪ ಸುಜಾತಾಳನ್ನು ತಾನಿನ್ನು ಶಾಲಿಯಲ್ಲಿ ನೋಡಲು ಸಾದ್ಯವಿಲ್ಲ ಎಂದುಕೊಂಡು ಒಳಗೆ ಮನಸ್ಸಿಗೆ ನೋವಾಯಿತು.
ಅಷ್ಟರಲ್ಲಿ ಯಾವುದೊ ಗಾಡಿಯೊಂದು ಜನರ ಮಧ್ಯೆ ಬಂದು ನಿಂತಿತು. ತಿರುಗಿ ನೋಡಿದೆ ಜೀಪಿನಿಂದ ಸೀರೆಯುಟ್ಟ ಇಬ್ಬರು ಹೆಂಗಸರು ಒಬ್ಬ ಪೊಲಿಸ್ ಮತ್ತು ಮತ್ತೊಬ್ಬ ದಡೂತಿ ಮನುಷ್ಯನಿದ್ದ. ಪೊಲಿಸ್ ನನ್ನು ನೋಡಿ ಜನರೆಲ್ಲಾ ಗಾಬರಿಯಾದರು. ಅವರು ಸುಜಾತಳ ತಂದೆ ತಾಯಿಯನ್ನು ಕರೆಯಿಸಿದರು.
ಪೊಲಿಸ್ “ನೋಡಮ್ಮಾ ಹದಿನೆಂಟು ವರುಷದ ಒಳಗಿನ ಹೆಣ್ಣು ಮಕ್ಕಳನ್ನ ಮದುವೆ ಮಾಡು ಹಾಗಿಲ್ಲ. ಅದರಲ್ಲೂ ಇನ್ನೂ ಸಾಲಿ ಕಲಿಯುತ್ತಿರುವ ಇಂತಹ ಪುಟ್ಟ ಮಕ್ಕಳನ್ನು ಮದುವೆ ಮಾಡಿಸುವದು ಅಪರಾಧ. ಮೊದಲು ಮದುವೆಯನ್ನು ನಿಲ್ಲಿಸಿ ಇಲ್ಲಾ ಅಂದರೆ ಜೈಲಗೆ ಹೋಗಬೇಕಾಗುತ್ತದೆ ದಂಡ ಕಟ್ಟಬೇಕಾಗುತ್ತದೆ.” ಎಂದು ಗದರಿಸಿದ. ಇಬ್ಬರು ಹೆಂಗಸರು ಬಂದು ಸುಜಾತಳನ್ನು ಮದುವೆ ಮಂಟಪದಿಂದ ಹೊರಗೆ ಕರೆದು ಕೊಂಡು ಬಂದು ಅವಳ ಉಡುಗೆ ತೊಡುಗೆಗಳನ್ನು ಬದಲಾಯಿಸಲು ಹೇಳಿದರು. ಹೆದರಿದ ಸುಜಾತಳ ತಂದೆ ತಾಯಿ ಅವರು ಹೇಳಿದಂತೆ ಮದುವೆ ನಿಲ್ಲಿಸಿದರು. ನಾನು ನನ್ನ ಗೆಳತಿ ಸುಜಾತಳನ್ನು ಹೋಗಿ ತಬ್ಬಿಕೊಂಡೆ. ಬಾಡಿದ ಅವಳ ಮುಖದಲ್ಲಿ ಮಂದಹಾಸವನ್ನು ಕಂಡೆ. ಬಾಡಿದ ಮೊಗ್ಗು ಸಂತೊಷದಿಂದ ಹಿರಿ ಹಿರಿ ಹಿಗ್ಗಿತು. ನಳನಳಸಿತು.
…….
ಅದರ ಮುಂದಿನ ವರುಷ ನಮ್ಮ ತಂದೆಗೆ ನಗರಕ್ಕೆ ವರ್ಗವಾಗಿ ನಾವು ಊರು ಬಿಟ್ಟು ಹೋದೇವು. ಸುಜಾತ ಮತ್ತು ನನ್ನ ಸಂಪರ್ಕವೇ ಇರಲಿಲ್ಲ. ಈಗ ಅವಳು ಸಿಕ್ಕಿದ್ದು ನನಗೆ ಬಹಳವೇ ಸಂತೋಷ ತಂದಿತ್ತು. ಅಂದೇನಾದರೂ ಅವಳ ಮದುವೆ ನಿಲ್ಲದಿದ್ದರೆ ಮೊಗ್ಗಾಗಿದ್ದ ಸುಜಾತ ಹೂವಾಗಿ ಅರಳುವ ಮುಂಚೆಯೇ ಬಾಡಿ ಹೋಗುತ್ತಿದ್ದಳು. ಇಂದು ಅವಳ ಮುಖ ನೋಡಿ ಬಾಡಿದ ಮೊಗ್ಗು ಅರಳಿ ನಕ್ಕಂತೆ ಕಂಡಿತು.
ಶ್ರೀದೇವಿ. ಮ. ಗುಮ್ಮಗೋಳ



