ಶಿಕ್ಷಣ ಸಂಗಾತಿ
“ಕ್ಷಕರ ಪ್ರೀತಿ ಮಮತೆ ಕಾಳಜಿಗೆ ಬೆಲೆಯೇ ಇಲ್ಲವೇ?!” ವಿಶೇಷಬರಹ ಜಯಲಕ್ಷ್ಮಿ .ಕೆ
ಜಯಲಕ್ಷ್ಮಿ .ಕೆ
“ಶಿಕ್ಷಕರ ಪ್ರೀತಿ ಮಮತೆ
ಕಾಳಜಿಗೆ ಬೆಲೆಯೇ ಇಲ್ಲವೇ?!”


ಶಿಕ್ಷಕರ ಪ್ರೀತಿ ಮಮತೆ ಕಾಳಜಿಗೆ ಬೆಲೆಯೇ ಇಲ್ಲವೇ?!!!
ಒಮ್ಮೆ ದಿನಸಿ ಅಂಗಡಿಗೆ ಹೋಗಿದ್ದೆ. ಆಗ ಸರಕಾರಿ ಶಾಲಾ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದ ನನ್ನ ಪರಿಚಿತರೊಬ್ಬರು ಅಲ್ಲಿಗೆ ಬಂದು ನಾಲ್ಕು ಪುಟ್ಟ ಬ್ರಷ್ ಗಳನ್ನು ಕೊಂಡುಕೊಂಡರು. ಆ ಶಿಕ್ಷಕಿಯ ಮಕ್ಕಳು ಪಿ ಯು ಸಿ ಯಲ್ಲಿ ಓದುತ್ತಿದ್ದ ಕಾರಣ ನಾನು ಕುತೂಹಲದಿಂದ ಮತ್ತು ಬ್ರಷ್ ನ ಸೈಜ್ ಅವರು ಗಮನಿಸಿಲ್ಲ ವೇನೋ ಎಂಬ ಕಾಳಜಿಯಿಂದ ” ಇಷ್ಟು ಸಣ್ಣ ಬ್ರಷ್ ಯಾರಿಗೆ ” ಎಂದು ಕೇಳಿದೆ. ಅದಕ್ಕವರು ” ನಮ್ಮ ಶಾಲೆಯಲ್ಲಿ 4-5 ಮಕ್ಕಳಿದ್ದಾರೆ, ಅವರು ಹಲ್ಲು ಉಜ್ಜದೇ ಶಾಲೆಗೆ ಬರುತ್ತಾರೆ. ಅವರಿಗೆ ಬ್ರಷ್ ಪೇಸ್ಟ್ ಕೊಟ್ಟು ಶಾಲೆಯಲ್ಲಿಯೇ ಹಲ್ಲುಜ್ಜಿಸುತ್ತೇವೆ. ” ಎಂದರು! ನನಗೆ ಅಚ್ಚರಿ ಎನಿಸಿ ಇನ್ನೂ ಒಂದಷ್ಟು ಹೊತ್ತು ಅವರ ಶಾಲಾ ಮಕ್ಕಳ ಬಗ್ಗೆ ಕೇಳುತ್ತಾ ನಿಂತೆ. ” ಅಯ್ಯೋ ಮೇಡಂ, ಹಲ್ಲು ಉಜ್ಜಿಸೋದು, ಕೈ -ಕಾಲು ತೊಳೆಸೋದು ಇಷ್ಟೇ ಅಲ್ಲ…ನಾವು ಸೋಪ್ ಕೊಟ್ಟು ಅವರ ಸ್ಕೂಲ್ ಬ್ಯಾಗ್ ನನ್ನೂ ತೊಳೆಸಿ ಒಣ ಹಾಕಿಸುತ್ತೇವೆ. ಮಕ್ಕಳು ಶಾಲೆಗೆ ದೀರ್ಘ ಕಾಲ ಗೈರು ಹಾಜರಾದರೆ ಅವರ ಮನೆ ಹುಡುಕಿಕೊಂಡು ಹೋಗುತ್ತೇವೆ.. ಮಕ್ಕಳ ತಂದೆ ತಾಯಿಯರಿಂದ ಬಾಯಿಗೆ ಬಂದಂತೆ ಬೈಸಿಕೊಳ್ಳುತ್ತೇವೆ. ಕೆಲವೊಮ್ಮೆಅಂಥ ಮಕ್ಕಳ ಮನೆ ಮಂದಿ ‘ ನಮ್ಮ ಮಕ್ಕಳನ್ನು ಕರೆದುಕೊಂಡು ಹೋಗಲು ನೀವು ಯಾರು? ” ಎಂದು ಶಿಕ್ಷಕರಾದ ನಮ್ಮನ್ನು ಓಡಿಸಿದ್ದೂ ಇದೆ ‘ ಎಂದರು. ಇಷ್ಟೆಲ್ಲಾ ಕಾಳಜಿ ತೋರುವ ಶಿಕ್ಷಕರು ಒಂದು ಏಟು ಕೊಟ್ಟರೆ ಮಾತ್ರ ತಕ್ಷಣ ಅದು ಸುದ್ದಿಯಾಗುತ್ತದೆ. ಶಿಕ್ಷಕರಿಗೆ “ರಾಕ್ಷಸ ” ಬಿರುದು ಪ್ರಾಪ್ತಿಯಾಗುತ್ತದೆ!!
ಇದೇ ವರ್ಷ ಒಂದು ಸಂಘಟನೆಯ ವತಿಯಿಂದ ಸಮೂಹ ನೃತ್ಯ ಸ್ಪರ್ಧೆ ಆಯೋಜನೆಯಾಗಿತ್ತು. ಅಂದು ನೃತ್ಯ ಮಾಡಿದ ಮಕ್ಕಳು ಬಹುಮಾನ ವಿತರಣೆ ಆಗುವ ಮುನ್ನವೇ ಮನೆಗೆ ಹೋಗಿದ್ದರು. ಕಾರ್ಯಕ್ರಮ ಭಾನುವಾರ ಆಗಿದ್ದರೂ ನೃತ್ಯ ಕಲಿಸಿದ ಆ ಶಿಕ್ಷಕಿ ಮಕ್ಕಳನ್ನು ಕರೆ ತಂದು ಅವರಿಗೆ ಡ್ರೆಸ್ ಮಾಡಿಸಿ ( ಇಲ್ಲಿಯೂ ಡ್ರೆಸ್ ಜವಾಬ್ದಾರಿ ಕೂಡಾ ಶಿಕ್ಷಕರದ್ದೇ ) ಮತ್ತೆ ಸ್ಪರ್ಧೆ ಮುಗಿದ ಮೇಲೆ ಮನೆಗೆ ಹೋದರು. ಅವರ ಬಹುಮಾನಗಳನ್ನು ಸಂಚಾಲಕರ ಜಾಗ್ರತೆಯಿಂದ ತೆಗೆದು ಇರಿಸಿದ್ದರು. ಆ ನಂತರ ಒಂದು ರಾತ್ರಿ ಎಂಟು ಗಂಟೆಗೆ ಆ ಶಿಕ್ಷಕಿ ಮಕ್ಕಳ ಬಹುಮಾನ ಮತ್ತು ಪ್ರಶಂಸನಾ ಪತ್ರ ಸಂಗ್ರಹಿಸಿಕೊಂಡರು. ‘ ಶಾಲೆಯಿಂದ ಬರುವಾಗ ಬಸ್ ಸರಿಯಾಗಿ ಸಿಗದೆ ಇಷ್ಟು ಹೊತ್ತಾಯಿತು, ನಾಳೆ ಒಂದು ಸಭೆ ಇದೆ. ಅಲ್ಲಿ ಬಹುಮಾನ ಕೊಟ್ಟರೆ ಮಕ್ಕಳಿಗೆ ಖುಷಿಯಾಗುತ್ತದೆ ಎಂದು ಆಟೋ ಮಾಡಿಕೊಂಡು ಇಲ್ಲಿಗೆ ಬಂದೆ ” ಎಂದರು. ಮಕ್ಕಳ ಖುಷಿಗಾಗಿ ಶಿಕ್ಷಕರು ಪಾಠ -ಪ್ರವಚನ ಅಲ್ಲದೆ ಮಕ್ಕಳ ಎಷ್ಟೋ ಸೇವೆಗಳನ್ನು ಮುಕ್ತ ಮನಸಿನಿಂದ, ಮಕ್ಕಳ ಮೇಲಿನ ಪ್ರೀತಿಯಿಂದ ಮಾಡುತ್ತಾರೆ. ಅವು ಯಾವುವೂ ಬೆಳಕಿಗೆ ಬರುವುದಿಲ್ಲ.ಅದೇ ಶಿಕ್ಷಕಿ ಶಾಲೆಯ ಕೈ ತೋಟಕ್ಕೆ ಒಂದು ಬಕೆಟ್ ನೀರನ್ನು ಮಕ್ಕಳಲ್ಲಿ ತರಿಸಿ ಹಾಕಿದರೆ ಅದು ಮಹಾ ಅಪರಾಧವಾಗುತ್ತದೆ!!
ಗುರುದೇವ ರವೀಂದ್ರನಾಥ ಟಾಗೋರ್ ರವರ ಶಿಕ್ಷಣದ ಪರಿಕಲ್ಪನೆಯಲ್ಲಿ ಕ್ರಿಯಾಶೀಲ ಚಟುವಟಿಕೆಗಳಿಗೆ ಮೊದಲ ಆದ್ಯತೆ. ಮಕ್ಕಳ ಪಾಲಿಗೆ” ಜೀವಂತ ಪ್ರಯೋಗಾಲಯಗಳು ” ಎನಿಸಿರುವ ಶಾಲಾ ಕೈತೋಟಗಳು ಅವರಲ್ಲಿ ಪರಿಸರ ಪ್ರೇಮ ಬೆಳೆಸುವ ಮೂಲ ತಾಣಗಳು. ಅಲ್ಲಿ ಗಿಡ ನೆಡುವ, ಗಿಡಗಳಿಗೆ ನೀರುಣಿಸುವ, ಕಳೆ ಗಿಡಗಳನ್ನು ಕೀಳುವುದೇ ಮೊದಲಾದ ಚಿಕ್ಕ-ಪುಟ್ಟ ಕೆಲಸಗಳನ್ನು ಮಾಡಿಸುವುದು ಖಂಡಿತ ಅಪರಾಧವಲ್ಲ. ಸಸಿಗಳ ಬಗ್ಗೆ ಅರಿವು ಪಡೆದುಕೊಳ್ಳಲು ಇದು ಸಹಕಾರಿ. ಇದರಿಂದ ಮಕ್ಕಳು ಚಿಕ್ಕ ಪುಟ್ಟ ಜವಾಬ್ದಾರಿ ಗಳನ್ನು ನಿಭಾಯಿಸುವುದನ್ನೂ ಕಲಿಯುತ್ತಾರೆ. ಇದು ಪರಿಸರ ವಿಜ್ಞಾನದ ಕಲಿಕೆಯೇ ಅಲ್ಲವೇ? ಅಲ್ಲದೆ ನೀರಿನ ಬಕೆಟ್ ಹಿಡಿದ ಮಾತ್ರಕ್ಕೆ ಮಕ್ಕಳ ಕೈ ಪೆನ್ನು ಹಿಡಿಯಲು ಆಗದಷ್ಟು ಒರಟಾ ಗುವುದೂ ಇಲ್ಲ ( ಸತತವಾಗಿ ಕೆಲಸ ಮಾಡಿಸುವುದಿಲ್ಲ ತಾನೇ)
ನಾವು ಬಾಲ್ಯದಲ್ಲಿ ಸರಕಾರಿ ಶಾಲೆಯಲ್ಲಿ ಓದುತ್ತಿದ್ದಾಗ ಶಾಲಾ ಕೈತೋಟಕ್ಕೆ ನೀರು ಹಾಕುವುದರ ಜೊತೆಗೆ ಎಲ್ಲ ಕೆಲಸಗಳನ್ನು ಕೂಡಾ ಕ್ರಾಫ್ಟ್ ಫಿರೀಡ್ ಗಳಲ್ಲಿ ಬಹಳ ಖುಷಿಯಾಗಿಯೇ ಮಾಡುತ್ತಿದ್ದೆವು. ಯಾವ ಪೋಷಕರು ಕೂಡಾ ಅದು ತಪ್ಪು ಎಂದು ದೂರುತ್ತಿರಲಿಲ್ಲ. ಆದರೆ ಇಂದು ಮಕ್ಕಳಿಂದ ಯಾವುದೇ ಶಾಲಾ ಕೆಲಸ ಮಾಡಿಸುವುದು ಕೂಡಾ ಅಪರಾಧ ಎನಿಸುತ್ತಿದೆ. ಶಿಕ್ಷಕರು ಮಾಡುವ ಎಲ್ಲ ಕೆಲಸಗಳಲ್ಲೂ ತಪ್ಪನ್ನೇ ಹುಡುಕುವ ಮನೋಭಾವ ಬದಲಾಗಬೇಕಿದೆ.ಇಂದಿನ ದಿನ ಗಳಲ್ಲಿ ಶಾಲೆಯಲ್ಲಾಗಲೀ ಮನೆಗಳಲ್ಲಾಗಲೀ ಮಕ್ಕಳು ಓದುವುದು ಬಿಟ್ಟು ಕಲಿಕೆಗೆ ಪೂರಕವಾಗುವ , ಬೇರೆ ಯಾವುದೇ ಉಪಯುಕ್ತ ಕೆಲಸ ಗಳನ್ನು ಮಾಡುವುದಿಲ್ಲ.ಯಾವುದೇ ಸಾಮಾನ್ಯ ಜ್ಞಾನ ಸುಮ್ಮನೆ ಬರುವುದಿಲ್ಲ.
ಅದಕ್ಕೇ ಇರಬೇಕು ಪಿಯುಸಿ ಗೆ ಬಂದರೂ ಬಹಳಷ್ಟು ಮಕ್ಕಳಿಗೆ 5 ಹೂಗಳ ಹೆಸರು, ಐದು ಹಣ್ಣುಗಳ ಹೆಸರು, ಗಿಡ ಮರಗಳ ಹೆಸರು ಯಾವುದೂ ಗೊತ್ತಿಲ್ಲ. ಕರು ಎನ್ನುವಲ್ಲಿ ದನದ ಮರಿ ಎನ್ನುವವರು ಪಿಯುಸಿಯಲ್ಲಿದ್ದಾರೆ.
ಶಿಕ್ಷಕರ ಕೊರತೆ, ಮೂಲಭೂತ ಸೌಲಭ್ಯಗಳ ಅಭಾವ, ಭೋದನೇತರ ಕೆಲಸ ಕಾರ್ಯಗಳ ಹೊರೆ, ಮಕ್ಕಳ ಗೈರುಹಾಜರಿ,ಅವರನ್ನು ಮರಳಿ ಶಾಲೆಗೆ ಕರೆತರಬೇಕಾದ ಜವಾಬ್ದಾರಿ, ಆಡಳಿತಾತ್ಮಕ ಕೆಲಸ – ಕಾರ್ಯ ಗಳ ಒತ್ತಡದ ಇವೆಲ್ಲವುಗಳ ನಡುವೆಯೂ ಮಕ್ಕಳನ್ನು ಪ್ರೀತಿ ಮಮತೆಯಿಂದ ನೋಡಿಕೊಳ್ಳುವ ಅದೆಷ್ಟೋ ಶಿಕ್ಷಕ – ಶಿಕ್ಷಕಿಯರಿದ್ದಾರೆ. ಅವರನ್ನು ಶಾಘನೆಗೈಯದೆ ಎಲ್ಲಿಯೋ ಯಾರೋ ಒಬ್ಬ ಶಿಕ್ಷಕ ಎಲ್ಲಿಯೋ ಮಾಡಿದ ತಪ್ಪನ್ನು ಮತ್ತೆ ಮತ್ತೆ ಭಿತ್ತರಿಸುತ್ತಾ ಮಕ್ಕಳು ಶಾಲೆಯಲ್ಲಿ ಬಿದ್ದರೂ, ಎದ್ದರೂ ” ಶಿಕ್ಷಕರಿಗೆ ಜವಾಬ್ದಾರಿ ಇಲ್ಲ ” ಎಂದು ಶಿಕ್ಷಕ ಕುಲವನ್ನು ಜರೆಯುವುದು ಎಷ್ಟು ಸರಿ? ಅವರ ಪ್ರೀತಿ ಮಮತೆ ಕಾಳಜಿಗೆ ಬೆಲೆಯೇ ಇಲ್ಲವೇ?
ಜಯಲಕ್ಷ್ಮಿ ಕೆ



