ಧಾರಾವಾಹಿ ಸಂಗಾತಿ-112
ಒಬ್ಬ ಅಮ್ಮನ ಕಥೆ
ರುಕ್ಮಿಣಿ ನಾಯರ್
ಅನಾಥಾಶ್ರಮದ ಕೆಲಸಕ್ಕೆ ಹೊರಟ ಮಗಳು

ಬಂಗಲೆಯಿಂದ ಇಬ್ಬರೂ ಮನೆಗೆ ಬಂದ ನಂತರ ಮೂರನೇ ಮಗಳ ಜೊತೆಗೆ ಕುಳಿತು ಅಮ್ಮ ಹೇಳಿದ ವಿಷಯದ ಬಗ್ಗೆ ಚರ್ಚಿಸಿದರು. ಇಷ್ಟು ಸಣ್ಣ ವಯಸ್ಸಿನಲ್ಲಿಯೇ ಅನಾಥಾಶ್ರಮದ ಮಕ್ಕಳ ಮೇಲ್ವಿಚಾರಣೆ ನನ್ನ ಮಗಳಿಂದ ಸಾಧ್ಯವೇ? ಕಲಿಸುವ ವಿಷಯದಲ್ಲಿ ಎರಡು ಮಾತಿಲ್ಲ. ಅವಳು ಖಂಡಿತ ಅಲ್ಲಿನ ಮಕ್ಕಳ ಶಾಲೆಯ ಪಠ್ಯ ವಿಷಯಗಳ ಕಲಿಕೆಯ ಸಹಾಯಕ್ಕೆ ತನ್ನನ್ನು ಸಂಪೂರ್ಣವಾಗಿ ತೊಡಗಿಸಿಕೊಳ್ಳುತ್ತಾಳೆ. ಅದರಲ್ಲಿ ನನಗೆ ಸಂಶಯವಿಲ್ಲ. ಆದರೆ ಅಲ್ಲಿನ ಕೆಲಸ ಕಾರ್ಯಗಳನ್ನು ನೋಡಿಕೊಳ್ಳಲು, ಮಕ್ಕಳ ವಿಷಯದಲ್ಲಿ ಕಟ್ಟುನಿಟ್ಟಾಗಿ ಇರಲು ನನ್ನ ಮಗಳು ಸಮರ್ಥಳೇ? ಈ ಚಿಕ್ಕ ಹುಡುಗಿಯ ಮಾತನ್ನು ಅಲ್ಲಿನ ಮಕ್ಕಳು ಅನುಸರಿಸಿಯಾರೇ? ಆ ಮಕ್ಕಳ ನಡುವೆ ಈಕೆಯು ಕೂಡ ಮಕ್ಕಳಂತೆ ಅಲ್ಲವೇ? ಅಲ್ಲಿನ
ಖರ್ಚು- ವೆಚ್ಚ, ಉಳಿತಾಯ ಇತರೆ ವಿಷಯಗಳ ಬಗ್ಗೆ ಇವಳಿಗೆ ಯಾವುದೇ ಅರಿವಿಲ್ಲ. ಅಮ್ಮ ಹೇಳಿದಂತೆ ಅವಳಿಗೆ ಸಹಾಯಕ್ಕಾಗಿ ಅಲ್ಲಿ ಎಲ್ಲರೂ ಇರುತ್ತಾರೆ. ಅವಳು ಕೂಡ ಅಲ್ಲಿ ಇದ್ದುಕೊಂಡು ತನ್ನ ವಿದ್ಯಾಭ್ಯಾಸ ಮುಂದುವರಿಸಬಹುದು ಎಂದು ಹೇಳಿದ್ದಾರೆ. ಮೂರು ವರ್ಷದ ಪದವಿ ತರಗತಿಯನ್ನು ಮುಗಿಸಿದ ನಂತರ ಅವಳಿಗೆ ಯಾವುದಾದರೂ ಒಳ್ಳೆಯ ಕೆಲಸ ಸಿಗಬಹುದು. ಬಿ ಎಡ್ ತರಬೇತಿ ಪಡೆದು ಹೈ ಸ್ಕೂಲ್ ಶಿಕ್ಷಕಿಯೂ ಆಗಬಹುದು. ಅಲ್ಲದೇ ಕನ್ನಡ ಮತ್ತು ಇಂಗ್ಲಿಷ್ ಎರಡು ಭಾಷೆಗಳಲ್ಲಿ ಟೈಪಿಂಗ್ ಸಹ ಕಲಿತಿದ್ದಾಳೆ. ನಮಗೂ ಈಗ ಹಣದ ಅಗತ್ಯವಿದೆ. ಇವಳಿಗೊಂದು ಒಳ್ಳೆಯ ಕೆಲಸ ಸಿಕ್ಕರೆ ಮುಂದೆ ನಾವು ಒಳ್ಳೆಯ ದಿನಗಳನ್ನು ನೋಡಬಹುದು.
ನನಗೆ ಸಹಾಯ ಮಾಡುವುದಕ್ಕಾಗಿ ನನ್ನ ಮಕ್ಕಳು ಯಾವುದೇ ರೀತಿಯ ಕೆಲಸವನ್ನು ಮಾಡಲು ತಯಾರಿದ್ದಾರೆ. ಹೈಸ್ಕೂಲ್ ಹಂತದಲ್ಲಿರುವಾಗಲೇ ತಮಗೆ ರಜೆ ಇದ್ದಾಗ ಕಾಫಿ ತೋಟಕ್ಕೆ ಹೋಗಿ, ಕಾಫಿ ಹಣ್ಣುಗಳನ್ನು ಕೊಯ್ದು ತಮಗೆ ಸಾಧ್ಯವಾದಷ್ಟು ಹಣವನ್ನು ಗಳಿಸಿ ನನ್ನ ಕೈಲಿಟ್ಟಿದ್ದಾರೆ. ನಾವು ಓದುತ್ತಿರುವ ಮಕ್ಕಳು ಎನ್ನುವ ಅಹಂಭಾವವಿಲ್ಲದೆ ಸೊಂಟಕ್ಕೆ ಗೋಣಿ ಚೀಲವನ್ನು ಕಟ್ಟಿ, ನಾನು ತುಂಬಿಸಿಕೊಟ್ಟ ಊಟದ ಬುತ್ತಿಯನ್ನು ತೆಗೆದುಕೊಂಡು ಹೋಗಿ, ಹಣ್ಣು ಕೊಯ್ಯುವ ಅಭ್ಯಾಸ ಇಲ್ಲದಿದ್ದರೂ ಕೂಲಿ ಕೆಲಸಗಾರರ ಜೊತೆ ಸೇರಿ ಹುಮ್ಮಸ್ಸಿನಿಂದ ನನ್ನ ಮೂವರು ಮಕ್ಕಳೂ ಅವರ ಜೊತೆ ಹಣ್ಣುಗಳನ್ನು ಕೊಯ್ದು ದೊಡ್ಡ ಚೀಲದಲ್ಲಿ ತುಂಬಿಸಿ ಟ್ರ್ಯಾಕ್ಟರ್ ಗೆ ಹಾಕಿ, ಕಾಫಿ ಕಣದಲ್ಲಿ ಅವರ ಚೀಲಗಳನ್ನು ಗುರುತಿಸಿ ತೆಗೆದು ಅದನ್ನು ತೂಕ ಹಾಕಿಸಿ, ಪಲ್ಪರ್ ಮಾಡುವಲ್ಲಿಗೆ ತೆಗೆದುಕೊಂಡು ಹೋಗಿ ಕೊಟ್ಟು ಸಂಬಳವನ್ನು ಪಡೆದು ಖುಷಿಯಿಂದ ತಮ್ಮ ಸಂಪಾದನೆಯನ್ನು…. ‘ಅಮ್ಮಾ…..ನೋಡು…. ನಾವೆಷ್ಟು ಸಂಪಾದನೆ ಮಾಡಿದ್ದೇವೆ…. ಎಂದು ಕಣ್ಣರಳಿಸಿ ಸಂತೋಷದಿಂದ ನನ್ನ ಕೈಲಿಟ್ಟಿದ್ದಾರೆ….. ಒಂದು ಬಿಡಿಗಾಸನ್ನು ಕೂಡಾ ನಮಗಾಗಿ ಕೊಡಿ ಎಂದು ಆ ಮಕ್ಕಳು ಕೇಳಿಲ್ಲ….”ಬೇಡ ಮಕ್ಕಳೇ ನಿಮಗಿದು ಅಭ್ಯಾಸವಿಲ್ಲದ ಕೆಲಸ…. ನೀವಿನ್ನೂ ಚಿಕ್ಕವರು…..ತೋಟದ ಗಿಡಗಳ ನಡುವೆ ಇಳಿಜಾರಿನಲ್ಲಿ ಕೂಡ ಇಳಿದು ಹಣ್ಣುಗಳನ್ನು ಕೊಯ್ಯಬೇಕು…. ನಿಮ್ಮಿಂದ ಇದು ಸಾಧ್ಯವಾಗದು…. ಎಂದು ನಾನು ಹೇಳಿದಾಗ…. ಏನು ಆಗೋದಿಲ್ಲ ಅಮ್ಮಾ… ಅಲ್ಲಿ ಕೆಲಸ ಮಾಡುವ ಕೆಲಸಗಾರರು ನಮಗೆ ಪರಿಚಿತರಲ್ಲವೇ?…. ರೈಟರ್ ಕೂಡ ಹೇಗೆ ಹಣ್ಣುಗಳನ್ನು ಕೊಯ್ಯಬೇಕೆಂದು ನಮಗೆ ತಿಳಿಸುತ್ತಾರೆ”….
ಎಂದು ಹೇಳಿ ನನ್ನ ಸಮ್ಮತಿಯನ್ನು ಪಡೆದುಕೊಂಡು ಹಣ್ಣು ಕೊಯ್ಯುವ ಕೆಲಸಕ್ಕೆ ಕೂಡ ಹೋಗಿದ್ದಾರೆ. ಆದರೆ ಅನಾಥಾಶ್ರಮದ ಕೆಲಸ ಹೆಚ್ಚು ಜವಾಬ್ದಾರಿಯುತವಾದದ್ದು. ಇದನ್ನು ನಿಭಾಯಿಸಲು ನನ್ನ ಈ ಮಗಳ ಕೈಲಿ ಸಾಧ್ಯವೇ? ಇವಳಿಂದೇನಾದರೂ ಪ್ರಮಾದವಾದರೆ ಕಷ್ಟವಲ್ಲವೇ? ನಾನು ‘ಹೂಂ’ ಅಂದರೆ ಇವಳು ಖಂಡಿತ ಈ ಕೆಲಸಕ್ಕೆ ಹೋಗುತ್ತಾಳೆ. ನೋಡೋಣ ಅವಳ ತೀರ್ಮಾನ ಏನೆಂದು ಎಂದು ಯೋಚಿಸುತ್ತಾ…. ಮಗಳೇ, ನೀನು ಅಮ್ಮ ಹೇಳಿದ ಈ ಕೆಲಸವನ್ನು ಮಾಡಬಲ್ಲೆಯೇ? ನಿನ್ನಿಂದ ಇದು ಸಾಧ್ಯವೇ? ಎಂದು ಸುಮತಿ ಕೇಳಿದಾಗ…. ಅಮ್ಮಾ …ಸ್ವಲ್ಪ ದಿನ ಹೋಗಿ ಅಲ್ಲಿ ಇದ್ದು ಕೆಲಸ ಮಾಡಿ ನೋಡುತ್ತೇನೆ…. ಸಾಧ್ಯವಾದರೆ ಮುಂದುವರೆಸುತ್ತೇನೆ… ಇಲ್ಲದಿದ್ದರೆ ಆ ಕೆಲಸವನ್ನು ಬಿಟ್ಟು ಬಂದು ಇಲ್ಲಿ ನಿನ್ನ ಜೊತೆ ಇರುತ್ತೇನೆ….. ನನ್ನ ಡಿಗ್ರಿ ಮುಗಿದ ಕೂಡಲೇ ಯಾವುದಾದರೂ ಸಣ್ಣ ಪುಟ್ಟ ಕೆಲಸ ಸಿಕ್ಕರೂ ಸೇರಿಕೊಂಡು ನಿನ್ನ ಜವಾಬ್ದಾರಿಯನ್ನು ಸ್ವಲ್ಪವಾದರೂ ಕಡಿಮೆ ಮಾಡಬೇಕು ಎನ್ನುವ ಹಂಬಲ ನನಗೆ ಇದೆ ಅಮ್ಮ…. ನಾನು ಅನಾಥಾಶ್ರಮಕ್ಕೆ ಹೋಗುತ್ತೇನೆ …. ಹೇಗಿದ್ದರೂ ಅದು ನಾನು ಕಳೆದ ಪರಿಸರವಲ್ಲವೇ? ವಾರಕ್ಕೊಮ್ಮೆ ಬಂದು ನಿನ್ನನ್ನು ನೋಡಬಹುದಲ್ಲವೇ?…. ಎಂದಾಗ ಸುಮತಿ ಮಗಳನ್ನು ಅಪ್ಪಿಕೊಂಡಳು. ಅವಳ ಕಣ್ಣುಗಳು ತುಂಬಿ ಬಂತು. ಈ ಮಗಳು ನನ್ನ ಜೊತೆ ಇದ್ದಿದ್ದೇ ಕಡಿಮೆ. ಇವಳಿಗೆ ನಾಲ್ಕುವರೆ ವರ್ಷವಿದ್ದಾಗ ಅನಾಥಾಶ್ರಮಕ್ಕೆ ಸೇರಿದ ಹುಡುಗಿ, ಎಂಟನೇ ತರಗತಿಯಿಂದ 10ನೇ ತರಗತಿವರೆಗೂ ನನ್ನ ಹಿರಿಯ ಮಗಳ ಮನೆಯಲ್ಲಿದ್ದಳು. ಈಗ ಒಂದೆರಡು ವರ್ಷದಿಂದ ನನ್ನ ಜೊತೆ ಇದ್ದಾಳಷ್ಟೇ…. ಹೆಣ್ಣು ಮಕ್ಕಳು ಹೇಗಿದ್ದರೂ ಮುಂದೆಯಾದರೂ ನನ್ನನ್ನಗಲಿ ಇನ್ನೊಬ್ಬರ ಮನೆಗೆ ಹೋಗಬೇಕಾದವರೇ…. ಆದರೆ ಅಲ್ಲಿಯವರೆಗೂ ನನ್ನ ಜೊತೆಗಿರುವ ಅದೃಷ್ಟವಿಲ್ಲವೇ ದೇವರೇ?…. ಮಗಳ ಜೊತೆ ಇದ್ದು ಆಸೆ ಪೂರೈಸಿಲ್ಲ….
ಇಷ್ಟು ಬೇಗ ಮತ್ತೊಮ್ಮೆ ಅಗಲಿಕೆಯೇ? ಎಂದು ತನ್ನಲ್ಲೇ ಸ್ವಗತ ಹೇಳಿಕೊಂಡಳು. ತನ್ನ ಮಗಳನ್ನು ಅನಾಥಾಶ್ರಮದಲ್ಲಿ ಕೆಲಸಕ್ಕೆ ಕಳುಹಿಸದೆ ಬೇರೆ ದಾರಿ ಇರಲಿಲ್ಲ. ಅಕ್ಕನ ತೀರ್ಮಾನ ಕೇಳಿದಾಗ ತಂಗಿಗೆ ಬಹಳ ದುಃಖವಾಯಿತು. ಏಕೆಂದರೆ ಅಕ್ಕ ಎಂದರೆ ಅವಳಿಗೆ ಬಹಳ ಪ್ರೀತಿ. ಅಕ್ಕನ ಜೊತೆ ಕಾಲ ಕಳೆಯುವುದೆಂದರೆ ಅವಳಿಗೆ ಎಲ್ಲಿಲ್ಲದ ಸಂತೋಷ. ಅಕ್ಕನ ಜೊತೆ ಕಳೆದ ಕ್ಷಣಗಳು ಅವಳ ಅತ್ಯಂತ ಸಂತೋಷದ ಸಮಯವಾಗಿದ್ದವು. ಕೊನೆಯ ತಂಗಿಯು ಜೊತೆಯಲ್ಲಿಲ್ಲ ಅವಳು ದೂರದ ನವೋದಯ ಶಾಲೆಯಲ್ಲಿ ಓದುತ್ತಿರುವಳು. ವಾರ್ಷಿಕ ರಜೆ ಇದ್ದಾಗ ಮಾತ್ರ ಮನೆಗೆ ಬರುವಳು. ಈಗ ಅಕ್ಕ ಅನಾಥಾಶ್ರಮದ ಮೇಲ್ವಿಚಾರಕಿ ಹಾಗೂ ಶಿಕ್ಷಕಿಯಾಗಿ ಕೆಲಸಕ್ಕೆ ಸೇರಿಕೊಳ್ಳುತ್ತಿದ್ದಾಳೆ. ತಾಯಿಯ ಜೊತೆ ಇರುವುದೆಂದರೆ ಅವಳಿಗೆ ಸಂತೋಷದ ವಿಚಾರವೇ, ಆದರೂ ಸಣ್ಣ ವಯಸ್ಸಿನಿಂದ ಅಕ್ಕನ ಜೊತೆ ಅಕ್ಕನ ಪ್ರೀತಿಯಲ್ಲಿ ಕಳೆದ ಅವಳಿಗೆ ಈಗ ಅವಳು ಮತ್ತೆ ದೂರ ಹೋಗುತ್ತೇನೆ ಎಂದಾಗ ಸಂಕಟವಾಯಿತು. ಆದರೂ ಅವಳಿಗೂ ತಮ್ಮ ಮನೆಯ ಪರಿಸ್ಥಿತಿಯ ಅರಿವಿದ್ದ ಕಾರಣ ಏನೂ ಮಾತನಾಡದೆ ಸಮ್ಮತಿ ಸೂಚಿಸಿದಳು. ಸುಮತಿ ಬಂಗಲೆಗೆ ಹೋಗಿ ಅಮ್ಮನನ್ನು ಭೇಟಿ ಮಾಡಿ, ನನ್ನ ಮಗಳು ಅನಾಥಾಶ್ರಮದಲ್ಲಿ ಕೆಲಸಕ್ಕೆ ಸೇರಿಕೊಳ್ಳಲು ಸಮ್ಮತಿಸಿದ್ದಾಳೆ ಎನ್ನುವ ವಿಚಾರವನ್ನು ಅಮ್ಮನಿಗೆ ತಿಳಿಸಿದಳು. ವಿಷಯ ತಿಳಿದು ಅಮ್ಮನಿಗೆ ಸಂತೋಷವಾಯಿತು. ಶಾಲೆ ಪ್ರಾರಂಭವಾಗುವ ಮೊದಲೇ ಆದಷ್ಟು ಬೇಗ ಮುಂದಿನ ವಾರವೇ ಅಲ್ಲಿಗೆ ಹೋಗುವ ತಯಾರಿಯನ್ನು ಮಾಡಿಕೊಳ್ಳಲು ಮಗಳಿಗೆ ತಿಳಿಸಲು ಅಮ್ಮ ಸುಮತಿಗೆ ಹೇಳಿದರು.




