ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಅನಲ ಅಳಿಯನಾದ ಬಗೆ ಹೀಗೆ
‘ಮೇಧಾಶ್ವವನ್ನು ಯಾವ ಕಾರಣಕ್ಕೂ ಬಿಡಲಾರೆ. ನನ್ನ ಜೊತೆಗೆ ಹೋರಾಟ ಮಾಡಿಯೇ ಕುದುರೆಯನ್ನು
ಕರೆದೊಯ್ಯಬೇಕು ನೀನು. ಇದು ಖಚಿತ’ ಎಂಬ ನೀಲಧ್ವಜ ಉದ್ಘೋಷಿತ ಸಂದೇಶ ನನ್ನನ್ನು ಬಂದು ತಲುಪಿತು.
ನನಗಾದದ್ದು ಅಚ್ಚರಿ.
ಅಗ್ನಿಯ ಮಾತಿನಂತೆ ಯುದ್ಧವನ್ನು ನಿಲ್ಲಿಸಿದ್ದವನು ನೀಲಧ್ವಜ. ಕುದುರೆಯನ್ನವನು ಬಿಟ್ಟುಕೊಡುತ್ತಾನೆ
ಎನ್ನುವುದು ನನಗಿದ್ದ ಸರಳ ಸಹಜ ಅಂದಾಜು. ಆದರೆ ಇದ್ದಕ್ಕಿದ್ದಂತೆಯೇ ಅವನು ಮನಸ್ಸು ಬದಲಾಯಿಸಿದ್ದ.
ಮಾಹಿಷ್ಮತಿಯರಸನ ಮನ ತಕ್ಷಣ ಬದಲಾದುದಕೆ ಏನದು ಕಾರಣ ಎಂಬ ಮೂಲ ಮರ್ಮಲತೆಯನ್ನು ಹುಡುಕಿಹೊರಟ
ನನಗೆ ತಿಳಿದುಬಂದದ್ದು ಜ್ವಾಲೆಯೆಂಬವಳ ಮಾತು.
ಜ್ವಾಲೆ, ನೀಲಧ್ವಜನ ಪ್ರೀತಿಯ ರಾಣಿ. ಅರ್ಜುನನ ಕುದುರೆಯನ್ನು ಬಿಟ್ಟು ಕಳುಹಿಸಬೇಕು ಎಂದು ಮಂತ್ರಿಗಳಲ್ಲಿ
ನೀಲಧ್ವಜ ಮಾತನಾಡುತ್ತಿದ್ದುದು ಅವಳಿಗೆ ತಿಳಿಯಿತಂತೆ. ಅವಳಿಗದು ಮೆಚ್ಚುಗೆಯಾಗಲಿಲ್ಲ. “ಹೆದರಿಕೆ ಅದೇತಕೆ!
ಬಿಡದಿರು ಕುದುರೆಯನ್ನು. ನಿಲ್ಲಿಸದಿರು ಯುದ್ಧವನ್ನು. ಅರ್ಜುನನಿಗೆದುರಾಗಿ ನಿಂತು ಕದನವ ಮಾಡು” ಎಂಬ ಸಲಹೆ
ಇತ್ತಳಂತೆ ತನ್ನೊಡೆಯನಿಗೆ. ಅದಾವ ಮಾಯೆಯಲ್ಲಿ ಅವಳ ಮಾತಿನ ಸುಳಿಗೆ ಸಿಲುಕಿದನೋ ಆ ನೀಲಧ್ವಜ! ಹಯವ
ಬಿಟ್ಟುಕೊಡದಿರುವ ಛಲವ ಹೊತ್ತುಮೆರೆಯುತಿಹ ಸಂದೇಶವ ನನಗೆ ಕಳುಹಿಸಿಕೊಟ್ಟ.
ಜ್ವಾಲೆಯ ಮನೋಭೂಮಿಕೆ ಹೊಸದೆನಿಸಿತು ನನಗೆ. ಸಾಮಾನ್ಯವಾಗಿ ಕ್ಷಾತ್ರಪುರುಷರು ಕಲಹದೆಡೆಗೆ
ಕುತೂಹಲಿಗಳಾಗಿರುತ್ತಾರೆ. ಅವರ ಆಸಕ್ತಿಯದು ಸಹಜ. ಹೆಂಗಳೆಯರು ಯುದ್ಧ ಬೇಡವೆಂದು ಗಂಡಂದಿರನ್ನು ತಡೆಯುವ
ಪ್ರಯತ್ನ ಮಾಡುತ್ತಾರೆ. ಕದನವಾದರೆ ತನ್ನವನಿಗೆ ಅದೇನಾದೀತೋ ಎಂಬ ಆತಂಕ ಅವರಲ್ಲಿರುತ್ತದೆ. ಆದರೆ ಈ ಜ್ವಾಲೆ
ಯುದ್ಧದಿಂದ ವಿಮುಖನಾಗಿ ಶಾಂತಿಯೆಡೆಗೆ ಮನಸ್ಸು ಮಾಡಿದ ರಮಣನ ಮನಸ್ಸನ್ನು ಮತ್ತೆ ಕ್ರಾಂತಿಯೆಡೆಗೆ ಸೆಳೆಯುವ
ಮನಸ್ಸು ಮಾಡಿದ್ದಳು. ರಮಣನ ಪ್ರಾಣದೆಡೆಗೆ ಅವಳಿಗೆ ಮಮಕಾರ ಭಾವ ಇರಲಿಲ್ಲವೇ?! ಗೊತ್ತಿಲ್ಲ.
ಅವಳಿಗೆ ನನ್ನ ಮೇಲೇನಾದರೂ ದ್ವೇಷವಿತ್ತೇ! ನನಗೆ ಅರಿವಿಲ್ಲ. ನಾನ್ಯಾವತ್ತೂ ಅವಳಲ್ಲಿ ಮಾತನಾಡಿದ್ದಿಲ್ಲ.
ಜಗಳ ಆಡಿದ್ದಿಲ್ಲ. ಹಾಗಿರುವಾಗ ನನ್ನ ಮೇಲೆ ಅವಳಿಗೆ ದ್ವೇಷ ಇರಲು ಸಾಧ್ಯವೇ! ತಿಳಿಯಲಿಲ್ಲ.
ಇನ್ನೊಂದು ಬಗೆಯ ಯೋಚನೆ ಮೂಡಿತು ನನಗೆ ಆ ಕ್ಷಣದಲ್ಲಿ. ಯುದ್ಧ ಸಂಧಾನಕಾರನಾಗಿ ನಡೆದುಕೊಂಡವನು
ಅಗ್ನಿ. ಅವನು ನೀಲಧ್ವಜನ ಅಳಿಯ. ಮಾಹಿಷ್ಮತಿಯಲ್ಲಿಯೇ ನೆಲೆನಿಂತು ಆ ನಗರದ ಅಳಿಯನಂತೆ ಗುರುತಿಸಿಕೊಂಡವನು.
ಮಗಳನ್ನು ಮದುವೆಯಾದ ಅಳಿಯನ ಮೇಲೇನಾದರೂ ಕೋಪ ಇರಬಹುದೇ ಜ್ವಾಲೆಗೆ?! ಎಂಬ ಆಲೋಚನೆ ನನ್ನಲ್ಲಿ
ಉದಯಿಸಿತು.
ಈ ಬಗೆಯ ಚಿಂತನೆ ನನ್ನಲ್ಲಿ ಮೂಡುವುದಕ್ಕೆ ಸಕಾರಣವಿತ್ತು. ನೀಲಧ್ವಜನ ಮಗಳು ಅಗ್ನಿಯನ್ನು ಪ್ರೀತಿಸಿ
ಮದುವೆ ಆದವಳು.
ನೀಲಧ್ವಜ ಜ್ವಾಲೆಯರ ಮಗಳು ಅಪ್ರತಿಮ ರೂಪವತಿಯಾಗಿದ್ದಳು. ಗುಣಶೀಲೆ ಎನಿಸಿಕೊಂಡಿದ್ದಳು. ಹೀಗಿದ್ದ
ಚೆಲುವೆ ಯೌವ್ವನಾವಸ್ಥೆಯನ್ನು ತಲುಪಿದಾಗ ನೀಲಧ್ವಜನಲ್ಲಿ ಮಗಳ ಮದುವೆಯ ಯೋಚನೆ ಮೂಡಿತು. ಮೂರೂ

ಲೋಕಗಳಲ್ಲಿ ಖ್ಯಾತಿ ಗಳಿಸಿದ, ವೀರರೆಂದು ಹೆಸರು ಪಡೆದ, ಸಿರಿವಂತರೆAದು ಗುರುತಿಸಿಕೊಂಡ ಪುರುಷರ ಚಿತ್ರವನ್ನು
ಅವಳೆದುರು ಹಿಡಿದು, “ಇವರಲ್ಲಿ ನಿನ್ನ ಪತಿಯಾಗುವವರು ಯಾರೆಂದು ನೀನೇ ಹೇಳು ಮುದ್ದು ಮಗಳೇ” ಎಂದ.
ತಂದೆಯ ಮಾತಿನಂತೆ ಚಿತ್ರಪಟದೆಡೆಗೆ ಹರಿಣಿನೇತ್ರವನ್ನು ಹರಿಸಿದ ಸುಂದರಿಗೆ ಚೆಲುವನಾಗಿ ಕಂಡದ್ದು ಅಗ್ನಿದೇವ.
ತಂದೆ ತಂದು ಕೈಗಿಟ್ಟಿದ್ದ ಚಿತ್ರಪಟದಲ್ಲಿ ಅಗ್ನಿ ಗಂಧರ್ವ ಯಕ್ಷ ದೇವತೆಗಳನ್ನು ತನ್ನ ಚೆಲುವಿನಿಂದಲೇ ಅಪಹಾಸ್ಯ ಮಾಡಿ
ನಗುತ್ತಿದ್ದ. ಸಕಲ ಭೂಮಂಡಲದ ರಾಜಾಧಿರಾಜರನ್ನು ಮೀರುವಂತೆ ತೋರುತ್ತಿದ್ದ. ಮನ್ಮಥರಾಜ ವಸಂತರಾಜರನ್ನೂ
ಮೀರಿದ ಸೌಂದರ್ಯವನ್ನು ಆವಾಹಿಸಿಕೊಂಡು ಕುಳಿತಿದ್ದ. ತಕ್ಷಣವೇ ನೀಲಧ್ವಜಕುವರಿಯ ಚಿತ್ತ ಚಿತ್ರಪಟದಲ್ಲಿದ್ದ
ಅಗ್ನಿದೇವನ ಹೃದಯವನ್ನು ಕೂಡಿಕೊಂಡಿತು. “ಎನಗಿನ್ನು ಇವನೇ ರಮಣ” ಎಂದಳು ತಂದೆಯಲ್ಲಿ, ನಸುನಾಚಿಕೆ
ತೋರುತ್ತ.
ನಡೆಯಲಾರದ್ದರೆಡೆಗೆ, ಸಾಧ್ಯವಾಗದ್ದರ ಕಡೆಗೆ ಮಗಳು ಮನಸ್ಸು ಹರಿಸಿದ್ದಾಳೆ ಎನಿಸಿತು ನೀಲಧ್ವಜನಿಗೆ.
ಅದನ್ನೇ ತನುಜೆಗೆ ಹೇಳಿದ. ತಂದೆಯ ಮಾತು ಅಪಥ್ಯವಾಯಿತು ಆ ಚೆಲುವೆಗೆ. ಜನಕನನ್ನು ಜರಿದವಳು ಅರಮನೆಯನ್ನು
ತೊರೆದುಹೋದಳು.
ತಾರುಣ್ಯವೆಂದರೆ ಹಾಗೆಯೇ. ಹೃದಯ ಏನನ್ನು ಬಯಸುತ್ತದೆಯೋ ಅದು ದಕ್ಕದಾದಾಗ ನಿರಾಸೆ ಮೂಡುತ್ತದೆ;
ಹಠ ಕುಡಿಯೊಡೆಯುತ್ತದೆ. ಪಡೆಯದಿರಲಾರೆ ಮನ ಬಯಸಿದ ಅನಲನನ್ನು ಎಂದುಕೊಂಡಳು ನೀಲಧ್ವಜಸುತೆ.
ಅರಮನೆಯನ್ನು ತೊರೆದವಳು ನರ್ಮದಾ ತೊರೆಯ ತೀರವನ್ನು ಸೇರಿದಳು, ತೀರದಾಸೆಯನ್ನು ಎದೆಯಲ್ಲಿ
ಹೊತ್ತುಕೊಂಡು. ನಾನಾ ವಿಧಗಳಲ್ಲಿ ಅಗ್ನಿದೇವನನ್ನು ಅರ್ಚಿಸಿದಳು.
ಅವಳ ಪೂಜೆಯ ಸೊಗಸದು ಅಗ್ನಿಗೆ ಮೆಚ್ಚುಗೆಯಾಯಿತು. ಅವಳನ್ನು ಮದುವೆಯಾಗುವ ಇಚ್ಛೆ ಅವನಲ್ಲಿಯೂ
ಮೂಡಿತು.
ಬ್ರಾಹ್ಮಣ ವೇಷವನ್ನು ತಾಳಿದ ಅನಲ ಕಾಣಿಸಿಕೊಂಡದ್ದು ನೀಲಧ್ವಜನ ಆಸ್ಥಾನದಲ್ಲಿ. ಸಭೆಗೆ ಬಂದ
ಭೂಸುರನನ್ನು ಸ್ವಾಗತಿಸಿದ ನೀಲಧ್ವಜ. ಬಂದ ಕಾರಣವನ್ನು ನಯವಾಗಿ ಕೇಳಿದ. “ಕನ್ಯೆಯನ್ನು ಬಯಸಿ ಬಂದಿದ್ದೇನೆ.
ನಿನ್ನ ಸುತೆಯನ್ನು ಕೊಡು ಎನಗೆ. ರಾಜನಾಗಿರುವ ನೀನು ಬ್ರಾಹ್ಮಣನಾದ ನನಗೆ ಮಗಳನ್ನು ಮದುವೆ
ಮಾಡಿಕೊಡಬಹುದು. ಶಾಸ್ತçದ ಅಭ್ಯಂತರವಿಲ್ಲ” ಎಂದ ಬ್ರಾಹ್ಮಣ ವೇಷದ ಅನಲ.
ಮಗಳು ಅಗ್ನಿಯನ್ನು ಮದುವೆಯಾಗುವ ಮನಸ್ಸು ಮಾಡಿದ್ದಾಳೆ. ಏನು ಮಾಡಲಿ! ಎಂದು ಅಸಹಾಯಕತೆ
ತೋರಿದ ನೀಲಧ್ವಜ. ತಕ್ಷಣವೇ ತಾನೇ ಅಗ್ನಿ ಎಂಬ ಸತ್ಯವನ್ನು ಅರುಹಿದ ಅನಲ.
ನೀಲಧ್ವಜನ ಆಪ್ತಮಂತ್ರಿ ಪರೀಕ್ಷಿಸಿದ. ಅವನು ಅಗ್ನಿಯೆನ್ನುವುದು ಸಾಬೀತಾಯಿತು. ನೀಲಧ್ವಜನ ಸತಿಯೂ
ಪರೀಕ್ಷೆ ಮಾಡಿದಳು. ವಿಪ್ರ ವೇಷವದು ನಕಲು. ನಿಜವಾಗಿಯೂ ಅಗ್ನಿಯವನು ಎನ್ನುವುದವರ ಅರಿವಿಗೆ ಬಂತು. ನೀಲಧ್ವಜ
ಅಗ್ನಿಯಲ್ಲಿ “ಮಗಳನ್ನು ನಿನಗೆ ಮದುವೆ ಮಾಡಿಕೊಡುತ್ತೇನೆ. ಆದರೆ ನೀನು ಇದೇ ನಗರದಲ್ಲಿ ಇರಬೇಕು” ಎಂದ. ಅಗ್ನಿ
ಒಪ್ಪಿದ. ಅನಲ ನೀಲಧ್ವಜನ ಅಳಿಯ ಎನಿಸಿಕೊಂಡ.
ಹೀಗೆ ಅಳಿಯನಾದ ಅಗ್ನಿಯ ಮೇಲೆ ರಾಣಿ ಜ್ವಾಲೆಗೆ ಏನಾದರೂ ಅಸಮಾಧಾನ ಇತ್ತೋ ಏನೋ! ಈ
ಕಾರಣದಿಂದಲೇ ಅವನು ಏರ್ಪಡಿಸಿದ ಸಂಧಾನವದು ಅವಳಿಗೆ ಸಹ್ಯವಾಗಲಿಲ್ಲವೋ ಏನೋ!

ನೀಲಧ್ವಜ ಸೇನೆಯೊಡನೆ ಮತ್ತೆ ಕದನ ಹೂಡುವುದೀಗ ಅನಿವಾರ್ಯವಾಗಿಬಿಟ್ಟಿತ್ತು ನಮಗೆ. ಕುದುರೆಯ
ಕಾಲುಗಳು ಮಾಹಿಷ್ಮತಿ ನಗರವನ್ನು ತೊರೆದು ಮುಂದೆ ಚಲಿಸಬೇಕಾದರೆ ನಮ್ಮ ಕಾಲುಗಳು ಕದನರಂಗಕ್ಕಿಳಿಯಬೇಕಿತ್ತು.


About The Author

Leave a Reply

You cannot copy content of this page

Scroll to Top