ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಎರಡನೇ ಮಗಳು ಪ್ರಥಮ ವರ್ಷದ ಪದವಿ ತರಗತಿಗೆ ಸೇರ್ಪಡೆಯಾದಳು. ಮೂರನೇ ಮಗಳು ತಾನು ಸ್ವಲ್ಪ ತಡವಾಗಿಯೇ ಪಿಯುಸಿಗೆ ಸೇರಿಕೊಳ್ಳುತ್ತೇನೆ. ಅಮ್ಮನ ಜೊತೆ ಸಹಾಯಕ್ಕೆ ಇರುತ್ತೇನೆ ಎಂದಳು. ಸುಮತಿಯ ಆರೋಗ್ಯ ಮೊದಲಿಗಿಂತ ಕ್ಷೀಣಿಸುತ್ತಿರುವುದು ಇಬ್ಬರ ಗಮನಕ್ಕೂ ಬಂದಿತ್ತು. ಹಾಗಾಗಿ ತಂಗಿ ಹೇಳಿದಾಗ ಅಕ್ಕ ಸರಿ ಅಂದಳು. ಸುಮತಿಯ ಕುಟುಂಬಕ್ಕೆ ಆಪ್ತರಾದ ಡ್ರೈವರ್, ಸಾಹುಕಾರರು ಹಾಗೂ ಅಮ್ಮ ಸಕಲೇಶಪುರದಲ್ಲಿರುವ ಅನಾಥಾಶ್ರಮಕ್ಕೆ ಭೇಟಿ ನೀಡುವಾಗ ಜೊತೆಯಲ್ಲಿ ಇರುತ್ತಿದ್ದರು. ಹಾಗಾಗಿ ಅನಾಥಾಶ್ರಮದಲ್ಲಿ ಮಕ್ಕಳ ಮೇಲ್ವಿಚಾರಣೆ ಹಾಗೂ ಅವರಿಗೆ ಶಿಕ್ಷಕಿಯಾಗಿ ಕಲಿಕೆಗೆ ಸಹಾಯ ಮಾಡಲು ಯಾರೂ ಇಲ್ಲದಿರುವುದು ಡ್ರೈವರ್ ಗೆ ತಿಳಿದಿತ್ತು. ಅವರು ಅಮ್ಮನೊಂದಿಗೆ ಸುಮತಿಯ ಎರಡನೇ ಮಗಳ ವಿಚಾರವನ್ನು ಪ್ರಸ್ತಾಪಿಸಿದರು. ಸುಮತಿಯ ಎರಡನೇ ಮಗಳು ದ್ವಿತೀಯ ಪಿಯುಸಿಯನ್ನು ಉತ್ತಮ ಅಂಕ ಗಳಿಸಿ ತೇರ್ಗಡೆಯಾಗಿದ್ದಳು ಹಾಗೂ ಈಗ ಪ್ರಥಮ ವರ್ಷದ ಪದವಿಗೆ ಅಡ್ಮಿಶನ್ ಪಡೆದುಕೊಂಡಿದ್ದಳು. ಈ ವಿಚಾರ ಅಮ್ಮನಿಗೂ ತಿಳಿದಿತ್ತು. ಆ ಹುಡುಗಿಗೆ ಅನಾಥಾಶ್ರಮದಲ್ಲಿ ಕೆಲಸ ದೊರೆತರೆ ಸುಮತಿಯ ಕುಟುಂಬಕ್ಕೆ ಸಹಾಯವಾಗಬಹುದು ಹಾಗೂ ಆ ಹುಡುಗಿಯು ತನ್ನ ವಿದ್ಯಾಭ್ಯಾಸವನ್ನು ಯಾವುದೇ ಅಡಚಣೆ ಇಲ್ಲದೆ ಮುಂದುವರೆಸಬಹುದು ಎಂಬುದು ಸುಮತಿಯ ಕುಟುಂಬದ ಆಪ್ತರಾದ ಡ್ರೈವರ್ ಹಾಗೂ ಅವರ ಪತ್ನಿಯ ಆಲೋಚನೆಯಾಗಿತ್ತು. ಡ್ರೈವರ್ ಹೇಳಿದ ವಿಚಾರವನ್ನು ಕೇಳಿ…. “ಸರಿ ನಾನು ಒಮ್ಮೆ ಡಾಕ್ಟರ್ ರೊಂದಿಗೆ ಈ ವಿಚಾರವನ್ನು ಪ್ರಸ್ತಾಪಿಸಿ ನೋಡುತ್ತೇನೆ”…. ಎಂದರು. 

“ಹಾಗೆಯೇ ಆಗಲಿ ಅಮ್ಮ…. ನೀವು ಮತ್ತು ಸಾಹುಕಾರರು ಮೊದಲಿನಿಂದಲೂ ಟೀಚರ್ ಹಾಗೂ ಮಕ್ಕಳ ಕಾಳಜಿಯನ್ನು ವಹಿಸುತಿದ್ದೀರಿ ಹಾಗೂ ಅವರಿಗೆ ಸಹಾಯ ಮಾಡುತ್ತಿದ್ದೀರಿ….. ನಿಮ್ಮಿಂದ ಅವರು ನೆಮ್ಮದಿಯಿಂದ ಬದುಕುವಂತಾಗಿದೆ”…. ಎಂದರು. ಸುಮತಿಯ ಎರಡನೇ ಮಗಳು ಟೈಪಿಂಗ್ ಕಲಿಯುವಾಗ ಪ್ರತಿ ತಿಂಗಳೂ ಫೀಸ್ ಕಟ್ಟಲು ಅಮ್ಮನಿಂದ ಹಣವನ್ನು ಪಡೆಯಲು ಬರುತ್ತಿದ್ದಳು ಹಾಗೂ ಹೊಸದಾಗಿ ಇಲ್ಲಿಗೆ ವಾಸ್ತವ್ಯ ಹೂಡಿದ ನಂತರ ಅವಳಿಗೆ ರಜೆ ಇರುವಾಗ ತನ್ನ ಸಹಾಯಕ್ಕಾಗಿ ಅಮ್ಮ ಅವಳನ್ನು ಬಂಗಲೆಗೆ ಕರೆಸಿಕೊಳ್ಳುತ್ತಿದ್ದರು ಹಾಗಾಗಿ ಅವಳ ಪರಿಚಯ ಅಮ್ಮನಿಗಿತ್ತು. ಒಂದು ದಿನ ಸಂಜೆ ಸುಮತಿ ಮತ್ತು ಅವಳ ಎರಡನೇ ಮಗಳನ್ನು ಬಂಗಲೆಗೆ ಬರುವಂತೆ ಅಮ್ಮ ಕೆಲಸಗಾರರೊಂದಿಗೆ ಹೇಳಿ ಕಳಿಸಿದರು.

ಅಮ್ಮ ತಮ್ಮನ್ನು ಏಕೆ ಕರೆದಿರಬಹುದು? ಎನ್ನುವ ಜಿಜ್ಞಾಸೆಯೊಂದಿಗೆ ಇಬ್ಬರೂ ಅಮ್ಮನನ್ನು ಭೇಟಿ ಮಾಡಲು ಬಂದರು. ಅಮ್ಮನನ್ನು ಕಂಡೊಡನೆ ಇಬ್ಬರೂ ವಂದಿಸಿದರು. ಸದಾ ಹಸನ್ಮುಖಿಯಾಗಿರುತ್ತಿದ್ದ ಅಮ್ಮ ತಾಯಿ-ಮಗಳನ್ನು ಕಂಡ ಕೂಡಲೇ….”ಹೇಗಿದ್ದೀರಿ ಸುಮತಿ…. ಇವಳ ವಿದ್ಯಾಭ್ಯಾಸ ಹೇಗೆ ನಡೆಯುತ್ತಿದೆ? ಎಂದು ಕೇಳಿದರು….. “ಎಲ್ಲವೂ ನಿಮಗೆ ಗೊತ್ತಿರುವ ವಿಚಾರ ಅಲ್ಲವೇ ಅಮ್ಮಾ…. ಇನ್ನು ನಾನೇನು ಹೇಳಲಿ?… ನಿಮ್ಮ ಕೃಪೆಯಿಂದ ನಾವು ಚೆನ್ನಾಗಿದ್ದೇವೆ”…. ಎಂದಳು ಸುಮತಿ. ಮಗಳನ್ನು ನೋಡುತ್ತಾ….. “ನೀನು ಏನು ಹೇಳುತ್ತೀಯ ಹುಡುಗಿ?…. ಎಂದು ಅಮ್ಮ ಕೇಳಿದಾಗ… “ನನ್ನ ಅಮ್ಮ ಹೇಳಿದ್ದೇ ನನ್ನ ಉತ್ತರ ಅಮ್ಮ”…. ಎಂದಳು ಹುಡುಗಿ ವಿನಯದಿಂದ.

“….ನಿಮ್ಮಿಬ್ಬರನ್ನು ನಾನು ಇಲ್ಲಿಗೆ ಕರೆಸಿರುವುದು ಏಕೆಂದರೆ, ನಾವು ನಡೆಸುತ್ತಿರುವ ಅನಾಥಾಶ್ರಮದ ಬಗ್ಗೆ ನಿಮಗೆ ತಿಳಿದಿದೆಯಲ್ಲವೇ?…. ಅಲ್ಲಿ ಈಗ ಮೇಲ್ವಿಚಾರಕಿ ಹಾಗೂ ಶಿಕ್ಷಕಿ ಇಲ್ಲ…. ಹಾಗಾಗಿ ನಿಮ್ಮ ಈ ಮಗಳನ್ನು ಅಲ್ಲಿಗೆ ನೇಮಿಸಬೇಕು ಎಂದು ಡಾಕ್ಟರ್ ಮತ್ತು ನಾನು ತೀರ್ಮಾನಿಸಿದ್ದೇವೆ…. ನೀವೇನು ಹೇಳುತ್ತೀರಿ? ಎಂದು ಸುಮತಿಯನ್ನು ಅಮ್ಮ ಕೇಳಲು, ….. “ಅಮ್ಮಾ…. ಇವಳಿನ್ನೂ ಚಿಕ್ಕ ಹುಡುಗಿ…. ಅಷ್ಟು ದೊಡ್ಡ ಜವಾಬ್ದಾರಿಯನ್ನು ಇವಳು ನಿಭಾಯಿಸಲು ಸಾಧ್ಯವೇ?…. ಒಂದನೇ ತರಗತಿಯಿಂದ ಎಂಟನೇ ತರಗತಿಯವರೆಗೂ ಇವಳು ಅಲ್ಲಿಯೇ ಓದಿ ಬೆಳೆದವಳು…. ಆದರೂ….. ಇವಳ ವಯಸ್ಸಿಗೆ ಇದು ಬಹಳ ದೊಡ್ಡ ಜವಾಬ್ದಾರಿ ಎಂದು ನನಗೆ ಅನಿಸುತ್ತಿದೆ”…. ಎಂದಳು. ಸುಮತಿಯ ಮಾತನ್ನು ಕೇಳಿದ ಅಮ್ಮ….. “ಸಂಪೂರ್ಣ ಜವಾಬ್ದಾರಿಯನ್ನು ಇವಳ ಮೇಲೆ ನಾವು ಹೊರಿಸುತ್ತಿಲ್ಲ…. ಅವಳಿಗೆ ಸಹಾಯ ಮಾಡಲು ನಮ್ಮ ಇನ್ನೊಂದು ಅಂಗವಿಕಲ ಶಾಲೆಯ ಮೇಲ್ವಿಚಾರಕರು ಇರುತ್ತಾರೆ…. ಇವಳು ಅಲ್ಲಿಯೇ ಮಕ್ಕಳ ಜೊತೆಗೆ ವಾಸವಿದ್ದು, ಅವರ ಕಲಿಕೆಗೆ ಸಹಾಯ ಮಾಡಬೇಕು ಅವರನ್ನು ನೋಡಿಕೊಳ್ಳಬೇಕು….ಜೊತೆಗೆ ಇವಳೂ ಅಲ್ಲಿಂದ ಕಾಲೇಜಿಗೆ ಹೋಗಿ ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಬಹುದು…. ಹೇಗೂ ಅಲ್ಲಿನ ನಿಯಮಗಳೇನೆಂದು ಇವಳಿಗೆ ತಿಳಿದಿದೆ…. ಒಂದರಿಂದ ಹತ್ತನೇ ತರಗತಿಯವರೆಗೂ ಓದುತ್ತಿರುವ ವಿದ್ಯಾರ್ಥಿಗಳು ಅಲ್ಲಿದ್ದಾರೆ…. ಇವಳು ಬಹಳ ಬುದ್ಧಿವಂತಳಿದ್ದಾಳೆ… ಹಾಗಾಗಿ ಅಲ್ಲಿನ ಮಕ್ಕಳಿಗೆ ಪಠ್ಯದ ವಿಷಯಗಳಲ್ಲಿ ಇವಳು ಸಹಾಯ ಮಾಡಬಹುದು….

ನಿಮ್ಮ ಮಗಳಿಗೆ ತಿಂಗಳಿಗೆ ಇಂತಿಷ್ಟು ಎಂದು ಸಂಬಳವನ್ನು ನಾವು ಕೊಡುತ್ತೇವೆ…. ಇದರಿಂದ ನಿಮಗೆ ಸಹಾಯವಾಗುತ್ತದೆ…. ಇನ್ನೊಬ್ಬಳು ಮಗಳು ಕೂಡಾ ನಿಮ್ಮ ಜೊತೆ ಇದ್ದು ಕಾಲೇಜಿಗೆ ಸೇರಬಹುದು…. ನಿಮ್ಮ ಕೊನೆಯ ಮಗಳು ಹೇಗೂ ನವೋದಯ ಶಾಲೆಯಲ್ಲಿ ಓದುತ್ತಿದ್ದಾಳೆ…. ಪಿಯುಸಿಯವರೆಗೂ ಅವಳ ಚಿಂತೆ ನಿಮಗಿರುವುದಿಲ್ಲ… ಎಲ್ಲವೂ ಸರ್ಕಾರವೇ ನೋಡಿಕೊಳ್ಳುತ್ತದೆ…. ಈಗ ಇವಳೂ ಅಲ್ಪ ಸ್ವಲ್ಪ ಸಂಪಾದನೆ ಮಾಡುವುದರಿಂದ ನಿಮಗೂ ಸಹಾಯವಾಗುತ್ತದೆ…. ಇವಳು ವಿದ್ಯಾಭ್ಯಾಸವನ್ನು ಮುಗಿಸಿದ ನಂತರ ನಮ್ಮ ಬೇರೆ ಶಾಲೆಗಳಲ್ಲಿಯೂ ಕೆಲಸ ಮಾಡಬಹುದು…. ಇವಳಿಗೆ ವಾಸಕ್ಕೆ ಅನಾಥಾಶ್ರಮದಲ್ಲಿ ಬೇಕಾದ ಸೌಕರ್ಯವನ್ನು ಮಾಡಿಕೊಡಲಾಗುತ್ತದೆ….ಇವಳಿಗೆ ಸಹಾಯಕ್ಕಾಗಿ ಅಲ್ಲಿ ಒಬ್ಬ ಅಡುಗೆಯವರು ಇರುತ್ತಾರೆ…. ವಾರಕ್ಕೊಮ್ಮೆ ನಿಮ್ಮನ್ನು ಬಂದು ಭೇಟಿ ಮಾಡುತ್ತಾಳೆ…. ಇಲ್ಲಿ ನಿಮ್ಮ ಯೋಗ ಕ್ಷೇಮವನ್ನು ನೋಡಿಕೊಳ್ಳಲು ಇನ್ನೊಬ್ಬ ಮಗಳು ಇರುತ್ತಾಳೆ ಅಲ್ಲವೇ?…. ಆಲೋಚಿಸಿ ಆದಷ್ಟು ಬೇಗ ನಿಮ್ಮ ತೀರ್ಮಾನವನ್ನು ತಿಳಿಸಿ. ನಾವು ಕೂಡ ಆಗಾಗ ಅಲ್ಲಿ ಭೇಟಿ ನೀಡುತ್ತಿರುತ್ತೇವೆ…. ಇವಳು ಅನುಸರಿಸಬೇಕಾದ ಕ್ರಮಗಳ ಬಗ್ಗೆ ನಿರ್ದೇಶನಗಳನ್ನು ನೀಡುತ್ತಿರುತ್ತೇವೆ…. ನಮ್ಮ ನೆರಳಿನಲ್ಲಿ ಅವಳು ಇರುತ್ತಾಳೆ….ಹೇಗೂ ನೀವು ಶಿಕ್ಷಕಿ…. ನಿಮ್ಮ ಜೊತೆ ರಜೆಯಲ್ಲಿ ಆಗಾಗ ಇವಳು ಕೂಡ ಶಾಲೆಗೆ ಬರುತ್ತಿದ್ದಳಲ್ಲವೇ? …. ಹಾಗಾಗಿ ಮಕ್ಕಳಿಗೆ ಕಲಿಸಲು ಕಷ್ಟವಾಗದು ಎಂಬುದು ನನ್ನ ಅನಿಸಿಕೆ… ಇನ್ನು ತೀರ್ಮಾನ ನಿಮ್ಮಿಬ್ಬರದು…. ಎಂದರು ಅಮ್ಮ ನಸುನಗುತ್ತಾ.


About The Author

Leave a Reply

You cannot copy content of this page

Scroll to Top