ಕಾವ್ಯ ಸಂಗಾತಿ
ಡಾ ಸಾವಿತ್ರಿ ಕಮಲಾಪೂರ
“ಗಾಳಿ ಸುದ್ದಿ”


ಎಲ್ಲೆಡೆಯೂ ಹರಡುತ್ತಿದೆ
ಗಾಳಿ ಸುದ್ದಿ ಸುಳ್ಳು ಸುದ್ದಿ
ಪತ್ರಿಕೆ ಹಂಚುವ ಹುಡುಗನ ಕೈಯಲ್ಲಿ ಚಾಕು
ಗೀಟಾರ ನುಡಿಸುವವನ ಕೈಯಲ್ಲಿ ಬಂದೂಕು ಬಾಂಬು ಅನುಬಾಂಬು
ಸತ್ತು ಮಲಗಿದ ಗಾಂಧಿ
ಎದ್ದು ಬಂದಿದ್ದಾನೆ
ಚರಕ ಸುತ್ತುವ ಕೈಯಲ್ಲಿ
ಚುಟ್ಟಾ ಗುಟ್ಕಾ
ಓದುತ್ತ ಕುಳಿತ ಪಡ್ಡೆ ಹುಡುಗರು
ಹಾಡುತ್ತಾ ಕುಣಿಯುತ್ತಾ ಹಳ್ಳ ಸೇರಿದರು
ಒಂದೋ ಎರಡೋ
ನೂರೆಂಟು ಸುದ್ದಿ ಕೇಳಿ
ತಲೆಕೆಟ್ಟು ಓಡಿ ಹೋದಳು
ಕಟ್ಟಿಕೊಂಡ ಹೆಂಡತಿ
ಗಂಡನಿಗೆ ದಿಕ್ಕೆ ತೋರದು
ದಿಕ್ಕಾಪಾಲು
ಹುಡುಕುತ್ತಾ ಹೊರಟ ಕುಟುಂಬ
ನಾಪತ್ತೆ ಎಲ್ಲವೂ ನಿಗೂಢ
ಗುಡಾಚಾರಿಗಳ ಸಂಚಾರ
ಗೂರ್ಖಾ ಅಂಜಿ ಓಡಿ ಹೋದ
ಗುಂಡು ಹಾರಿಸುವ
ಗೋಲಿ ಯುವಕ
ಗುಂಡು ಹಾಕಿದ
ಎತ್ತ ಎತ್ತಲೋ
ಭೂವಿಯ ಸುತ್ತಲೂ
ಕಮಂಡಲ
ಬೆಳಗು ಮೂಡುವ ರವಿ
ಕಾಣೆಯಾಗಿದ್ದಾನೆ
ಕತ್ತಲು ಬೆಳಗುವ ಚಂದ್ರ ನಾಪತ್ತೆ
ನಿಗೂಢ ಜಗತ್ತು
ವಿಚಿತ್ರ ಸಂಚಾರ
ಇದು ಆಕಸ್ಮಿಕವಂತೆ
ಅಂತೆ ಕಂತೆಯೊಳಗಿನ ಗಾಳಿ ಸುದ್ದಿ
ಕರ್ಣ ಕಿವುಡು
ಕಣ್ಣು ಕುರುಡು
ಆದರೂ ಕೇಳುತ್ತಿರುವೆ
ಕಾಣಲಾರದ ಪರದೆಯೊಳಗಿನ
ನಾಟಕ ಅಂತರಾತ್ಮದೊಳಗಿನ
ವಿಹಂಗಮ ನೋಟ
ಡಾ ಸಾವಿತ್ರಿ ಕಮಲಾಪೂರ



