ಶರಣ ಸಂಗಾತಿ
ಸಾವಿಲ್ಲದ ಶರಣರು ಮಾಲಿಕೆ-
ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ
ಕರ್ನಾಟಕ ಗಾಂಧಿ
ಶ್ರೀ ಹರ್ಡೇಕರ್ ಮಂಜಪ್ಪನವರು,
ಡಾ ಶಶಿಕಾಂತ್ ಪಟ್ಟಣ ರಾಮದುರ್ಗ


ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ಬಸವ ಭಕ್ತ ಲಿಂಗಾಯತ ಧರ್ಮದ ಪ್ರಚಾರಕ ಚಿಂತಕ ಸಾಹಿತಿ ಹರ್ಡೇಕರ ಮಂಜಪ್ಪನವರ ಕೊಡುಗೆ ಕರ್ನಾಟಕಕ್ಕೆ ಅಪಾರವಾಗಿದೆ.
ಹರ್ಡೇಕರ ಮಂಜಪ್ಪನವರು ಕರ್ನಾಟಕದ ಸಾಮಾಜಿಕ, ಪತ್ರಿಕೋದ್ಯಮ ಶೈಕ್ಷಣಿಕ, ಸಾಹಿತ್ಯ ಕ್ಷೇತ್ರಗಳನ್ನೊಳಗೊಂಡಂತೆ ಅನೇಕ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿರುವ ಸಮಾಜಸೇವಕರು. ಆಮೂಲಕ ಕರ್ನಾಟಕದ ಗಾಂಧಿ ಎಂದು ಹೆಸರಾಗಿದ್ದವರು.
ಕೌಟುಂಬಿಕ ಹಿನ್ನಲೆ ಮತ್ತು ಶಿಕ್ಷಣ
1886ರ ಫೆಬ್ರುವರಿ 18 ರಂದು ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬನವಾಸಿಯಲ್ಲಿ ಬಡ ಕುಟುಂಬ ಒಂದರಲ್ಲಿ ಜನಿಸಿದರು. ಇವರ ಅಣ್ಣನೆ ಇವರ ಪಾಲನೆಯನ್ನು ಮಾಡಿದ್ದಲ್ಲದೆ, ಇವರ ಎಲ್ಲ ಧ್ಯೇಯ ಸಾಧನೆಗಳಿಗೆ ಒತ್ತಾಸೆಯಾಗಿ ನಿಂತನು. ಮಂಜಪ್ಪನವರು ಕಲಿತಿದ್ದು ಕೇವಲ ಕನ್ನಡ, 7ನೆಯ ತರಗತಿಯವರೆಗೆ. ತಮ್ಮ ಸ್ವಂತ ಪ್ರಯತ್ನಗಳಿಂದ ಇಂಗ್ಲಿಷ್ ಕಲಿಯಲು ಪ್ರಯತ್ನಿಸಿದರೂ ಸಹ ಅದರಲ್ಲಿ ಹೆಚ್ಚಿನ ಪ್ರಗತಿಯಾಗಲಿಲ್ಲ. 1903ರಲ್ಲಿ ಮುಲ್ಕಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಬಳಿಕ ಅವರು ಉದ್ಯೋಗಕ್ಕೆ ಹತ್ತಬೇಕಾಯಿತು. ಶಿರಸಿಯಲ್ಲಿ ತಾವು ಕಲಿತ ಶಾಲೆಯಲ್ಲಿಯೆ ಸಹಶಿಕ್ಷಕರಾದರು. 1905 ರಲ್ಲಿ ಪ್ರತ್ಯೇಕ ಶಾಲೆಯ ಏಕೋಪಾಧ್ಯಾಯರಾದರು.
ಪತ್ರಿಕಾ ಜೀವನ
ಮಂಜಪ್ಪನವರು ಅಂದಿನ ರಾಷ್ಟ್ರೀಯತೆ ವಾತಾವರಣದಿಂದ ಪ್ರಭಾವಿತರಾಗಿ ತಮ್ಮ ಶಿಕ್ಷಕ ವೃತ್ತಿಗೆ ರಾಜೀನಾಮೆ ಕೊಟ್ಟರು. ಇವರ ಅಣ್ಣನೂ ಸಹ ತಮ್ಮ ಕೆಲಸವನ್ನು ಬಿಟ್ಟುಬಿಟ್ಟರು. ಇವರಿಬ್ಬರೂ ಜೊತೆಯಾಗಿ 1906ರ ಸೆಪ್ಟಂಬರದಲ್ಲಿ “ಧನುರ್ಧಾರಿ” ಎನ್ನುವ ಪತ್ರಿಕೆಯನ್ನು ದಾವಣಗೆರೆಯಿಂದ ಪ್ರಕಟಿಸತೊಡಗಿದರು. ಈ ಪತ್ರಿಕೆಯು ಲೋಕಮಾನ್ಯ ತಿಲಕರು ಮಹಾರಾಷ್ಟ್ರದಲ್ಲಿ ಹೊರಡಿಸುತ್ತಿದ್ದ ಮರಾಠಿ ಪತ್ರಿಕೆ ಕೇಸರಿಯ ಲೇಖನಗಳ ಕನ್ನಡ ಅನುವಾದವನ್ನು ಪ್ರಕಟಿಸುತ್ತಿತ್ತು. ಪತ್ರಿಕೆಯ ಉಗ್ರಧೋರಣೆಯನ್ನು ಇಷ್ಟಪಡದ ಮುದ್ರಕರು ಬಾಡಿಗೆ ಹೆಚ್ಚಿಸಿದ್ದರಿಂದ ಪತ್ರಿಕೆ ನಿಂತುಹೋಯಿತು. 1908ರಲ್ಲಿ ಸ್ವಂತ ಮುದ್ರಣಯಂತ್ರ ಹೊಂದಿ ಪತ್ರಿಕೆಯನ್ನು ಮತ್ತೆ ಪ್ರಾರಂಭಿಸಿದರು. ಆದರೆ 1915ರಲ್ಲಿ ಧನುರ್ಧಾರಿ ಮತ್ತೆ ನಿಂತುಹೋಯಿತು.
ಸತ್ಯಾಗ್ರಹ ಆಶ್ರಮ ಕಟ್ಟಿದರು
_____________________
ಅಥಣಿ ಶ್ರೀ ಮುರುಗೇಂದ್ರ ಶಿವಯೋಗಿಗಳ ಪರಮ ಭಕ್ತರಾದ ಶ್ರೀ ಹರ್ಡೇಕರ ಮಂಜಪ್ಪನವರು ಅವರಿಂದ ಲಿಂಗ ದೀಕ್ಷೆಯನ್ನು ಪಡೆದರು. ಮುಂದೆ ವಿಜಯಪುರದ ಶ್ರೀ ಬಂಥನಾಳ ಸಂಗನಬಸವ ಸ್ವಾಮಿಗಳ ಆಜ್ಞೆಯಂತೆ ಅವರಿಂದ ಜಂಗಮ ದೀಕ್ಷೆ ಪಡೆದರು.
ರಾಷ್ಟ್ರೀಯ ನಾಯಕರಿಂದ ಪ್ರಭಾವಿತರಾದ ಮಂಜಪ್ಪನವರು 1910ರಲ್ಲಿ ಬ್ರಹ್ಮಚರ್ಯ ವ್ರತದ ಪ್ರತಿಜ್ಞೆ ಮಾಡಿದರು. 1914ರಲ್ಲಿ ತಿಲಕರನ್ನು ಭೆಟ್ಟಿಯಾದರು. 1920 ಅಗಸ್ಟದಲ್ಲಿ ಖಾದಿವ್ರತ ಕೈಗೊಂಡರು. ಹರಿಹರ ರೇಲ್ವೆ ಸ್ಟೇಶನ್ದಿಂದ 5 ಕಿ.ಮಿ. ದೂರದಲ್ಲಿ, ತುಂಗಭದ್ರಾ ನದಿಯ ದಂಡೆಯ ಮೇಲೆ ಬಾಳಪ್ಪ ಎನ್ನುವ ತಮ್ಮ ಗೆಳೆಯರ ಭೂಮಿಯಲ್ಲಿ ಒಂದು ಆಶ್ರಮ ಕಟ್ಟಿಸಿಕೊಂಡರು. ಅದಕ್ಕೆ “ಸತ್ಯಾಗ್ರಹ ಆಶ್ರಮ” ಎಂದು ಹೆಸರಿಡಲಾಯಿತು. 1923 ರಲ್ಲಿ ಈ ಆಶ್ರಮವನ್ನು ಪ್ರವೇಶಿಸಿದರು. 1924ರಲ್ಲಿ ಸಾಬರಮತಿಗೆ ಹೋಗಿ ಗಾಂಧೀಜಿಯವರ ಜೊತೆಗೆ ಕೆಲ ದಿನ ಇದ್ದರು. 1924ರಲ್ಲಿ ಬೆಳಗಾವಿಯಲ್ಲಿ ಕಾಂಗ್ರೆಸ್ ಅಧಿವೇಶನ ನಡೆದಾಗ ಬಸವೇಶ್ವರ ಸೇವಾದಳ ಎನ್ನುವ ಸ್ವಯಂಸೇವಕರ ಸಂಘಟನೆಯನ್ನು ರಚಿಸಿ ಅಧಿವೇಶನದ ಯಶಸ್ಸಿಗೆ ಕಾರಣರಾದರು. ಮಹಾತ್ಮಾ ಗಾಂಧಿಯವರಿಗೆ ಅಥಣಿ ಶ್ರೀ ಮುರುಗೇಂದ್ರ ಶಿವಯೋಗಿಗಳ ಆಜ್ಞೆಯಂತೆ ಶ್ರೀ ಲಕ್ಷ್ಮಣ ರಾವ್ ಬೀಡೆ ಅವರ ಸತ್ಯಾಗ್ರಹಿ ಬಸವೇಶ್ವರ ಎಂಬ ಪುಸ್ತಕವನ್ನು ಮಹಾತ್ಮಾ ಗಾಂಧಿ ಅವರ ಓದಿಗೆ ತಲುಪಿಸಿದರು.
ವಿಧಾಯಕ ಯೋಜನೆಗಳು
1925 ರಲ್ಲಿ ಮಂಜಪ್ಪನವರ ತಾಯಿ ತೀರಿಕೊಂಡರು. ಆಬಳಿಕ ಮಂಜಪ್ಪನವರು ಕರ್ನಾಟಕದ ಉದ್ದಗಲಕ್ಕೂ ಹಳ್ಳಿಗಳಲ್ಲಿ ಸಂಚರಿಸಿದರು. ಗ್ರಾಮೋದ್ಧಾರದ ಅನೇಕ ವಿಧಾಯಕ ಕಾರ್ಯಕ್ರಮಗಳನ್ನು ನೆರವೇರಿಸಿದರು. “ರಾಟಿ ಸಂಘ”ಗಳನ್ನು ಸ್ಥಾಪಿಸಿದರು. ನೈತಿಕ ಪ್ರಚಾರ ಮಾಡಿದರು.
1927 ರ ಮೇ 13ರಂದು ಮಂಜಪ್ಪನವರು ಆಲಮಟ್ಟಿಯಲ್ಲಿ ವಿದ್ಯಾಲಯವನ್ನು ಸ್ಥಾಪಿಸಿದರು. ಈ ವಿದ್ಯಾಲಯದಲ್ಲಿ ಕೇವಲ ಔಪಚಾರಿಕ ಶಿಕ್ಷಣವನ್ನಲ್ಲದೆ , ಜೀವನ ಶಿಕ್ಷಣ ಎನ್ನುವ ಹೆಸರಿನಲ್ಲಿ ಕೈಕಸಬುಗಳನ್ನೂ ಸಹ ಕಲಿಸಲಾಗುತ್ತಿತ್ತು. ಗಾಂಧೀಜಿಯವರೂ ಸಹ ಆನಂತರದ ತಮ್ಮ ಶಿಕ್ಷಣಪದ್ಧತಿಯಲ್ಲಿ ಇಂತಹದೆ ನಯಿ ತಾಲೀಮ ಎನ್ನುವ ವಿಧಾನವನ್ನು ಅಳವಡಿಸಿಕೊಂಡರು.
1930 ರಲ್ಲಿ ಮಂಜಪ್ಪನವರು “ಉದ್ಯೋಗ” ಎನ್ನುವ ಮಾಸಪತ್ರಿಕೆಯನ್ನು ಹಾಗು ಮಕ್ಕಳ ಸಾಹಿತ್ಯಮಾಲೆಯನ್ನು ಪ್ರಾರಂಭಿಸಿದರು. 1931ರಲ್ಲಿ ಶರಣಸಂದೇಶ ಎನ್ನುವ ಮಾಸಪತ್ರಿಕೆಯನ್ನು ಹೊರಡಿಸತೊಡಗಿದರು.
1924 ರಲ್ಲಿ ಮತ್ತು 1934 ರಾಲಿ ಗಾಂಧೀಜಿ ಕರ್ನಾಟಕಕ್ಕೆ ಬಂದಾಗ ಮಂಜಪ್ಪನವರು ಅವರ ಜೊತೆಗಿನ ಸುತ್ತಾಟದಲ್ಲಿ ಪಾಲ್ಗೊಂಡರು.
1946ರಲ್ಲಿ ಮಂಜಪ್ಪನವರು ಪ್ರಗತಿ ಗ್ರಂಥಮಾಲೆಯನ್ನು ಪ್ರಾರಂಭಿಸಿದರು.
ನಿಧನ
1947 ಜನೆವರಿ 3 ರಂದು ಹರ್ಡೇಕರ ಮಂಜಪ್ಪನವರು ನಿಧನರಾದರು.
ಸಾಹಿತ್ಯ
ಹರ್ಡೀಕರ ಮಂಜಪ್ಪನವರು ಅನೇಕ ಲೇಖನಗಳನ್ನು ಹಾಗು ಪುಸ್ತಕಗಳನ್ನು ರಚಿಸಿದ್ದಾರೆ. ಅವರ ಕೃತಿಗಳು ಇಂತಿವೆ:
ಸ್ವಕರ್ತವ್ಯ ಸಿದ್ಧಾಂತ
ಬುದ್ಧಿಯ ಮಾತು
ವಾರದ ಮಲ್ಲಪ್ಪನವರ ಚರಿತ್ರೆ
ಸ್ತ್ರೀನೀತಿ ಸಂಗ್ರಹ
ಆರೋಗ್ಯ ಜೀವನ
ಬುದ್ಧ ಚರಿತ್ರೆ
ಗಾಂಧೀ ಚರಿತ್ರೆ
ರಾಮತೀರ್ಥರ ಉಪನ್ಯಾಸ
ಭಾರತೀಯರ ದೇಶಭಕ್ತಿ
ಬಸವ ಚರಿತ್ರೆ
ಆಧುನಿಕ ಜರ್ಮನಿ
ವೀರಶೈವ ಸಮಾಜ ಸುಧಾರಣೆ
ಕೇರ ಹಾರ್ಡಿ
ಖಾದಿ
ಬ್ರಹ್ಮಚರ್ಯ
ಅಹಿಂಸೆ
ಸತ್ಯಾಗ್ರಹ ಧರ್ಮ
ಬಸವ ಬೋಧಾಮೃತ
ಸುಬೋಧಸಾರ
ಎಚ್ಚತ್ತ ಹಿಂದುಸ್ಥಾನ
“ಕಳೆದ ನನ್ನ 30 ವರ್ಷಗಳ ಕಾಣಿಕೆ” 1936 ರಲ್ಲಿ ಪ್ರಕಟವಾದ ಇದು ಹರ್ಡೀಕರ ಮಂಜಪ್ಪನವರ ಆತ್ಮ ಚರಿತ್ರೆಯಾಗಿದೆ ಮತ್ತು ಕನ್ನಡದ ಮೊದಲ ಆತ್ಮ ಚರಿತ್ರೆ ಎಂದು ದಾಖಲೆಯಾಗಿದೆ.
ಕರ್ನಾಟಕ ನಾಡು ನುಡಿ ಸಂಸ್ಕೃತಿಗಾಗಿ ಲಿಂಗಾಯತ ಧರ್ಮದ ತತ್ವ ಸಿದ್ಧಾಂತಗಳ ಪ್ರಸಾರಕ್ಕಾಗಿ ಬಸವ ಜಯಂತಿಯನ್ನು ಮೊಟ್ಟ ಮೊದಲು ಆರಂಭಿಸಿದ ಸರಳ ಸಜ್ಜನಿಕೆಯ ಸಾಕಾರ ಮೂರ್ತಿ ಶ್ರೀ ಹರ್ಡೇಕರ್ ಮಂಜಪ್ಪನವರು ನಾಡು ದೇಶ ಕಂಡ ಅಪರೂಪದ ಶಿವಯೋಗ ಸಾಧಕರು. ಇಂತಹ ದಿವ್ಯ ಚೇತನಕ್ಕೆ ನೂರು ನೂರು ನಮನಗಳು.
_________________________
ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ





ಹರ್ಡೇಕರ ಮಂಜಪ್ಪ ಅವರ ಹೆಸರಷ್ಟೇ ಕೇಳಿದ್ದೆವು. ಅವರ ಬಗೆಗೆ ಸಂಪೂರ್ಣ ಮಾಹಿತಿ ಗೊತ್ತಿರಲಿಲ್ಲ. .ಆದರೆ ಈಗ ಅವರ ಸಮಗ್ರ ಜೀವನ ಚರಿತ್ರೆಯನ್ನು ತಮ್ಮ ಲೇಖನದ ಮೂಲಕ ತಿಳಿದುಕೊಂಡ ಹಾಗಾಯ್ತು ಸರ್.
ಸುತೇಜ
ಬೆಳಗಾವಿ
ಸರ್ ನಿಜಕ್ಕೂ ತುಂಬಾ ಅರ್ಥಪೂರ್ಣ ಲೇಖನ
Excellent article sir
ತುಂಬಾ ಚೆನ್ನಾಗಿ ಮೂಡಿ ಬಂದಿದೆ ಸರ್ ನಿಮ್ಮ ಲೇಖನ
ತುಂಬಾ ಮಾಹಿತಿಯುಳ್ಳ ಸುಂದರ ಹಾಗೂ ಮನಮುಟ್ಟುವ ಲೇಖನ ಸರ್
ಹರ್ಡೇಕರ್ ಮಂಜಪ್ಪನವರ ಹುಟ್ಟು ಹಾಗೂ ಜೀವನ ಚರಿತ್ರೆ ಸಂಗ್ರಹಿಸಿ ಅತ್ಯಂತ ಮನ ಮುಟ್ಟುವಂತಹ ಅಪರೂಪದ ಪ್ರಬುದ್ಧ ಲೇಖನ ಸರ್