ಕಾವ್ಯ ಸಂಗಾತಿ
ದೇವರಾಜ್ ಹುಣಸಿಕಟ್ಟಿ
“ಮೂಡಬಹುದು ದೇವರು..”


ಹರೆಯದ ಕೈ ಗೊಂಬೆ..
ಮೊನ್ನೆ ಮೊನ್ನೆಯಿಂದ
ಅಂಗೈಯಲಿ ಆಡುತಿದೆ..
ಬಾಲ್ಯದಲಿ ಅಪ್ಪ ಕೊಡಿಸಿದ ಗೊಂಬೆ.. ಈಗ ಆಡಿಲ್ಲ..
ಈಗೀಗ ಈ ಗೊಂಬೆ ಜೊತೆಗೆ ಆಡದಿರಲಾಗುವುದಿಲ್ಲ..
ಅರಸುತ್ತ ಹೆಜ್ಜೆ ಹೆಜ್ಜೆಗೂ
ಕನಸುತ್ತ ಇರುಳಿರುಳಿಗೂ
ಅರಳುವ ಮುದುಡುವಾಟದಲಿ…
ತಲ್ಲಿನವಾಗಿ…
ಆಗಸದ ನೆರಳು
ಸಾಗರದ ಅಲೆಗಳ ಮೇಲೆ
ಮೂಡದಂತೆ ಒಂದೊಂದೇ..
ನೀಲಿ ಚಿತ್ರಗಳು ತೆರೆದುಕೊಳ್ಳುತ್ತವೆ..
ಕಣ್ಣು ತಟದಲಿ…
ಬೆತ್ತಲಾದ ಚಿತ್ರಗಳು ಅಲೆಗಳಂತೆ..
ದಡಕ್ಕೆ ಚಿಮ್ಮಿ ಮರಳುತ್ತವೆ..
ಮತ್ತೊಂದು ಸರದಿಗೆ..
ಕಾಯುತ್ತ ಕನಸುವವರೆಗೆ…
ಮನದ ಪಟದಲಿ…
ಒಂದೊಂದು ಆಟಕೂ
ಮೋಜಿನ ಮಂಪರು…
ಆರ್ಭಟ ಯುದ್ದೋನ್ಮಾದ..
ಅರೆಗಳಿಗೆ..
ಅಗ್ನಿ ಪರ್ವತ ದಿಂದ
ಲಾವಾರಸ ಚಿಮ್ಮಿ ಹಾಗೆ.. ಹೊರಗೆ…
ಬರಿದಾಗುವವರೆಗೆ..
ಆಗಾಗ ಲೊಮ್ಮೆ ಅಪರೂಪಕ್ಕೆ
ರಕ್ತ ಚಂದನದಿ ಸ್ನಾನ ಮಾಡಿದ ಗರ್ಭ ಗುಡಿಯ ಹೊಕ್ಕು ಬರುವುದೂ ಇದೆ ಗೊಂಬೆ…
ಅಲ್ಲಿ ಆಗ ಮೂಡಬಹುದು ದೇವರು..!
ದೇವರಾಜ್ ಹುಣಸಿಕಟ್ಟಿ



