ಕಾವ್ಯ ಸಂಗಾತಿ
“ಗಜಲ್ ಜುಗಲ್ ಬಂದಿ”
ಅರುಣಾ ನರೇಂದ್ರ
ವೈ ಎಂ ಯಾಕೊಳ್ಳಿ


ಬಾಡದ ಹೂವ ಕಿತ್ತೆಸೆಯಬಹುದೇ ಮುಡಿಯಿಂದ ತೆಗೆದು
ಜಿಗಿತ ಪ್ರೀತಿ ಚಿವುಟಿ ಒಗೆಯಬಹುದೇ ಎದೆಯಿಂದ ತೆಗೆದು
ಹೆಣ್ಣು ಮಣ್ಣು ಹೊನ್ನಿ ಗಾಗಿ ನೆತ್ತರು ಹರಿದಿದೆ ಈ ಭೂಮಿ ಮೇಲೆ
ನೋವಾಯಿತೆಂದು ಕರುಳ ಕಿತ್ತು ಹಾಕಬಹುದೇ ಒಡಲಿಂದ ತೆಗೆದು
ಗಿಡದಲ್ಲಿ ಅರಳಿದ ಹೂವಿಗಿಂತ ಕೃತಕ ಹೂಗಳೆ ಚಂದ ತೋರುತ್ತವೆ
ಬೆಂಕಿ ಸುಟ್ಟಿತೆಂದು ದೀಪವನು ಗಾಳಿಗಿಡಬಹುದೇ ಒಳಗಿಂದ ತೆಗೆದು
ಇಲ್ಲಿ ಮುಖವಾಡಗಳೇ ಮಾತಾಡುತ್ತಿವೆ ಯಾವುದನ್ನು ನಂಬುವುದು
ಸತ್ಯ ಕಹಿಯೆಂದು ಸುಳ್ಳನ್ನೇ ಮೆರೆಸಬಹುದೇ ಪಾಪದಿಂದ ತೆಗೆದು
ಅವ ಇಟ್ಟಂತೆ ಇರಬೇಕು ನಾವೆಲ್ಲ ಇರುವಷ್ಟು ದಿನ ನಗು ನಗುತ
ಮೌನವಾದ ಅರುಣಾಗೆ ಮೂಗಿ ಅನ್ನಬಹುದೇ ಯಾದಿಯಿಂದ ತೆಗೆದು
—-

ಎದೆಯ ಮಾತನು ಬಿಚ್ಚಿ ಆಡಬಹುದೇ ಆಳದಿಂದ ತಗೆದು
ಮೂಡಿದ ಒಲವನು ತೊರೆಯಬಹುದೇ ಎದೆಯಿಂದ ತಗೆದು
ಜಾತಿಮತ ಪಂಥಗಳ ಹೆಸರಲ್ಲಿ ಉಸಿರಾಡುತ್ತಿದೆ ಜಗವು
ಮನುಜಮತ ಉಳಿಯಬಹುದೇ ಮೋಸದಿಂದ ತಗೆದು
ಒಡಲ ಕೂಸೆ ಒಮ್ಮೊಮ್ಮೆ ದೂರ ವಾಗಬಹುದು ಮರೆತು
ಕರುಳ ಕುಡಿಯನು ದೂರ ತಳ್ಳಬಹುದೆ ಸಿಟ್ಟಿನಿಂದ ತಗೆದು
ತೋರಿಕೆಯ ಮಾತುಗಳು ಆಡಂಬರದ ಆಟಗಳು ಮೆರೆಯುತ್ತಿವೆ
ಕೃತ್ರಿಮತೆಯೆದುರು ನಿಜ ಮರೆಸಬಹುದೆ ಹುಸಿಯಿಂದ ತಗೆದು
ಲೋಕವನಾಳುವ ಮಾಲೀಕನೊಬ್ಬ ಮೇಲಿಹನು ಜೋಗಿ
ಅವನ ತಕ್ಕಡಿಯಲ್ಲಿದೆ ನಮ್ಮ ಆಟ ಗೆಲ್ಲಬಹುದೆ ತಂತ್ರದಿಂದ ತಗೆದು
ಡಾ ವೈ ಎಮ್ ಯಾಕೊಳ್ಳಿ



