ಲಹರಿ ಸಂಗಾತಿ
ಜಯಶ್ರೀ. ಜೆ. ಅಬ್ಬಿಗೇರಿ.
“ಮರಗಳ ಜೀವಕೆ ಮರುಗುತಿದೆ ಜೀವ”


ಹಸಿರು ಸೀರೆ ಹೊದ್ದು ನಿಂತ ದಟ್ಟಡವಿಯನ್ನು ಕಂಡಾಗ ಪಿಳಿಪಿಳಿ ಕಣ್ನು ಬಿಡುತ್ತ ವಿಸ್ಮಯ ಕಂಡಂತೆ ನೋಡುತ್ತ ನಿಂತು ಬಿಡುತ್ತೇನೆ ಹಾಗಂತ ಮಲೆನಾಡಿನಲ್ಲಿ ಹುಟ್ಟಿ ಬೆಳೆದವಳಲ್ಲ ನಾನು. ಪಕ್ಕಾ ಬಯಲು ಸೀಮೆ ನನ್ನದು. ಕಣ್ಣು ಹಾಯಿಸಿದುದ್ದಕ್ಕೂ ಬಯಲೇ ಬಯಲು. ಅಲ್ಲೊಂದಿಷ್ಟು ಇಲ್ಲೊಂದಿಷ್ಟು ಗಿಡ ಗಂಟೆ ಪೊದೆಗಳ ಸಮೂಹ ಕ್ವಚ್ಛಿತ್ತಾಗಿ ಕಾಣಸಿಗುತ್ತದೆ.
ನನ್ನಪ್ಪನ ಮನೆಯ ಹಿತ್ತಲಲ್ಲಿ ಆಳವಾಗಿ ಬೇರು ಚಾಚಿ ಆಕಾಶದೆತ್ತರಕ್ಕೆ ಬೆಳೆದ ತೆಂಗಿನ ಮರವೊಂದಿತ್ತು. ಅದನ್ನು ಬಾಚಿ ತಬ್ಬಿಕೊಳ್ಳಲು ಹವಣಿಸುತ್ತಿದ್ದ ಅಚ್ಚ ಮಲ್ಲಿಗೆ ಹೂವಿನ ಕಂಟಿ, ಅವ್ವ ಪೂಜೆಗೆಂದೇ ಬೆಳೆಸಿದ ಬಟ್ಟಲು ಹೂಗಳು ಕೆಂಪು ದಾಸವಾಳ ಹೂಗಳಿಗೆ ಮನಸೋತು ಮೊಗ್ಗು ಹೇಗೆ ಹಿಗ್ಗಿ ಹಿಗ್ಗಿ ಹೂವಾಗುತ್ತೆ ಎಂಬುದನ್ನು ಕಾಣಲು ಕಾತರಿಸಿ ಗಿಡ ಏಳುವ ಮೊದಲೇ ಎದ್ದು ನಿದ್ದೆಗಣ್ಣಿನಲ್ಲಿ ಕಣ್ಣು ತಿಕ್ಕುತ್ತ ಅದೆಷ್ಟೋ ದಿನಗಳು ನಿಂತರೂ ತುಟಿ ಬಿರಿದ ಮೊಗ್ಗು ತನ್ನ ಗುಟ್ಟು ಬಿಟ್ಟು ಕೊಡಲೇ ಇಲ್ಲ.
ನಮ್ಮ ವಂಶದ ಬಹಳಷ್ಟು ಕುಡಿಗಳು ಈ ತೆಂಗಿನ ಮರದ ಕೆಳಗೆ ಆಡಿ ಬೆಳೆದವರು ಹೀಗಾಗಿ ನಮಗೆಲ್ಲ ಇದು ಅಚ್ಚು ಮೆಚ್ಚು. ನಮ್ಮ ಸೋದರತ್ತೆ ಇದನ್ನು ಬಹು ವರ್ಷಗಳ ಹಿಂದೆ ನೆಟ್ಟಿದ್ದರಂತೆ ಎಂದು ನಮ್ಮ ಅಪ್ಪ ಮೇಲಿಂದ ಮೇಲೆ ಬಲು ಹೆಮ್ಮೆಯಿಂದ ಹೇಳುತ್ತಿರುತ್ತಾರೆ. ತೀರಾ ಇತ್ತೀಚಿನವರೆಗೂ ನಮಗೆಲ್ಲ ಕಾಯಿ ಎಳೆನೀರು ಕೊಟ್ಟು ಪ್ರೀತಿಸುತ್ತಿತ್ತು. ಮೊನ್ನೆ ಮಳೆಗಾಲದಲ್ಲಿ ನಮ್ಮ ತೆಂಗಿನ ಮರವನ್ನೇ ಗುರಿಯಾಗಿಸಿಕೊಂಡು ಸಿಡಿಲೊಂದು ಹೊಡೆದು ಅದರ ಕತ್ತು ಹಿಸುಕಿದಾಗ ಮನೆಯ ಮಂದಿಯ ಕಣ್ಣುಗಳೆಲ್ಲ ತೇವವಾದವು. ಮನೆಯ ಅತ್ಯಂತ ಪ್ರೀತಿಯ ಸದಸ್ಯನನ್ನು ಕಳೆದುಕೊಂಡವರಂತೆ
ದುಃಖಿಸಿದೆವು.
ಆಗಷ್ಟೇ ಅಭಿವೃದ್ಧಿಯಾಗುತ್ತಿರುವ ಊರಿಗೆ ದೂರವಾಗಿರುವ ಏರಿಯಾದಲ್ಲೊಂದು ನಿವೇಶನವನ್ನು ಕೊಂಡು ಮನೆ ಕಟ್ಟಿಸಿ ಗೃಹ ಶಾಂತಿಗೆ ಸ್ನೇಹಿತ ಬಂಧು ಬಳಗದವರನ್ನು ಕರೆದಾಗ ಮನಿ ಬಾಳ ಚಂದ ಕಟ್ಟಿಸಿರಿ ಆದರ ಇದು ಊರಿಗೆ ಬಾಳ ದೂರಾಗೈತಿ ಇದ ಊರಾಗ ಆಗಿದ್ರ ಇನ್ನು ಚುಲೋ ಆಗತ್ತಿತ್ತು. ಅನ್ನೋದು ಎಲ್ಲರ ಸಾಮಾನ್ಯ ದೂರಾಗಿತ್ತು.
ಮಾಲಿನ್ಯ, ಟ್ರಾಫಿಕ್ನಿಂದ ದೂರವಾಗಿ ಪ್ರಶಾಂತವಾಗಿರುವ ಸ್ಥಳವನ್ನು ಆರಿಸಿಕೊಂಡು ಸ್ವಂತ ಮನೆಯ ಭಾಗ್ಯ ಪಡೆದಿದ್ದೆ. ಸುತ್ತ ಇರುವ ಹಸಿರು ಗಿಡಗಳಿಂದ ಆಹ್ಲಾದಕರ ಪರಿಸರ ಪ್ರತಿ ದಿನ ಪ್ರತಿಕ್ಷಣ ನನ್ನ ಮನಸ್ಸನ್ನು ಉಲ್ಲಸಿತವಾಗಿರುವಂತೆ ಮಾಡಿತ್ತು. ಎದುರಿಗಿರುವ ಪರಿಚಯದ ಶಾಂತಕ್ಕನ ಮನೆಯ ಕಾಂಪೌoಡ್ ಗೋಡೆಗೆ ತಗುಲಿದಂತಿರುವ ಗುಲಾಬಿ ಬಣ್ಣದ ಕಾಗದ ಹೂಗಳು ಕಣ್ಮನ ತಣಿಸುತ್ತಿದ್ದವು. ಚಳಿಗಾಲದ ಮುಂಜಾವುಗಳಲ್ಲಿ ಬೀದಿಯೆಲ್ಲ ಮಂಜಿನ ತೆರೆ ಹೊದ್ದುಕೊಂಡಾಗ ಶಾಂತಕ್ಕನ ಮನೆಯ ಕಾಗದ ಹೂಗಳು ಅಸ್ಪಷ್ಟವಾಗಿ ಕಣ್ಣಿಗೆ ಬಿದ್ದು ಹೊಸ ಆನಂದವನ್ನು ತರುತ್ತಿದ್ದವು. ಬಲಗಡೆ ನನ್ನ ಪತಿದೇವರ ಸಹೋದ್ಯೋಗಿಯ ನಿವಾಸದ ಮುಂದೆ ವಿಧ ವಿಧ ಹೂಗಳು ತರಾವರಿ ಗುಲಾಬಿ ಹೂಗಳು ಸದಾ ನಗುತ್ತ ನಿಂತಿರುವ ರೀತಿಗೆ ಎಂಥವರು ಮನಸೋತು ತಮಗೂ ಬೇಕೆಂದು ಹೂವಿನ ಕಂಟಿಗಳನ್ನು ಬಲು ಆಸೆಯಿಂದ ಕೇಳಿ ಪಡೆಯುತ್ತಿದ್ದರು.
ಮಲ್ಲಿಗೆ ಮಲ್ಲಮ್ಮನೆಂದೇ ಹೆಸರಾಗಿದ್ದ ಮಲ್ಲಮ್ಮನ ಮನೆ ಎಡಕ್ಕಿದೆ. ಗಗನದೆತ್ತರಕ್ಕೆ ಬೆಳೆದು ನಿಂತ ಬೇವಿನ ಮರದ ಪಕ್ಕಕ್ಕಿರುವ ಮಲ್ಲಿಗೆ ಗಿಡ.ಇಡೀ ಏರಿಯಾದಲ್ಲೆಲ್ಲ ತನ್ನ ಪರಿಮಳದ ಘಮ ಹಿಡಿಸಿರುತ್ತೆ.
ರಜೆಯ ದಿನಗಳಲ್ಲಂತೂ ಹಬೆಯಾಡುವ ಕಾಫಿಯನ್ನು ಆಸ್ವಾದಿಸುತ್ತ ಮಲ್ಲಿಗೆ ಸುವಸನೆಯನ್ನು ಆಘ್ರಾಣಿಸುತ್ತ ದಿನಪತ್ರಿಕೆಯ ಮೇಲೆ ಕಣ್ಣಾಡಿಸುವದು ನನಗೆ ತುಂಬಾ ಇಷ್ಟ. ರಾತ್ರಿ ಮಗಳನ್ನು ಕಾಂಪೌoಡ್ ಕಟ್ಟೆಯ ಮೇಲೆ ಕೂರಿಸಿ ಬೆಳದಿಂಗಳ ಬೆಳಕಲ್ಲಿ ತುತ್ತು ತಿನ್ನಿಸಿ ಲಾಲಿ ಹಾಡಿದ್ದೂ ಈ ಪರಿಮಳಕ್ಕೋಸ್ಕರವೆ!
ಮನೆ ಕಟ್ಟುವ ಮೊದಲೇ ಸೋದರತ್ತೆಯಂತೆ ತೆಂಗಿನ ಮರದ ಸಸಿ ನೆಟ್ಟು ಫಲಕ್ಕಾಗಿ ಕಾಯುತ್ತಿದ್ದೆ. ವಸಂತ ಕಾಲದಲ್ಲಿ ಮಲ್ಲಕ್ಕನ ಬೇವಿನ ಗಿಡದಲ್ಲಿ ಶುಭೋದಯಕ್ಕೂ ಮುನ್ನವೇ ಕೋಗಿಲೆಯ ಇಂಚರ ಕೇಳಿ ಮಗಳು ಕಣ್ಣುಜ್ಜುತ್ತ ಕೋಗಿಲೆಯ ಕಾಣಲು ಅವರ ಮನೆಯ ಕಾಂಪೌoಡಿಗೆ ಜಿಗಿಯುತ್ತಿದ್ದಳು.
ಹಲವು ಬಾರಿ ಗಿಳಿಗಳ ಹಿಂಡು ಬೇವಿನ ಮರದ ಮೇಲೆ ತಮ್ಮ ಬಿಡಾರ ಹೂಡಿದಾಗ ಓಣಿಯ ಮಕ್ಕಳ ಹಿಂಡು ಅಲ್ಲಿಂದ ಕಾಲು ಕೀಳುತ್ತಿರಲಿಲ್ಲ. ಗೀಜಗ ತನ್ನ ಗೂಡನ್ನು ಬೇವಿನ ಮರದಲ್ಲಿ ಕಟ್ಟಿ ನಮ್ಮಂಥ ದೊಡ್ಡವರ ಕಣ್ಣುಗಳನ್ನು ದೊಡ್ಡದಾಗಿ ತೆರೆಯುವಂತೆ ಮಾಡಿತ್ತು. ಎಷ್ಟೋ ತರಹದ ಹಕ್ಕಿಗಳಿಗೆ ಆಶ್ರಯ ನೀಡಿ ನಮ್ಮ ಕಿವಿಗಳನ್ನು ಪಕ್ಷಿಗಳ ಕಲರವದಿಂದ ತುಂಬಿಸಿತ್ತು.
ಗಾಳಿ ಕಾಲದಲ್ಲಿ ಎಲೆಗಳೆಲ್ಲ ಉದುರಿ ಕಸ ಬುಟ್ಟಿ ಬುಟ್ಟಿಯಗಿ ಬರುತ್ತೆ ಕಸ ಉಡುಗಿ ಉಡುಗಿ ನನ್ನ ರಟ್ಟಿ ಸೋತಾವೆನ್ನುವದು ಮಲ್ಲಕ್ಕನ ಮೇಲ್ಮಾತಿನ ಬೇಜಾರು. ಹೊಸ ಚಿಗುರು ಬಂದು ಶೋಭಾಯಮಾನವಾಗಿ ಕಂಡಾಗ ಮುಗುಳ್ನಗುತ್ತ ಉಗಾದಿ ಹಬ್ಬಕ್ಕ ನಮ್ಮ ಬೇವಿನ ಮರದ ಎಲಿ ಹಾಕ್ಕೊಂಡು ಜಳಕ ಮಾಡ್ರಿ. ಬೇವು ಬೆಲ್ಲಕ್ಕ ಇದ ಹೂವು ಬಳಸ್ರಿ ಅಂತ ಸುತ್ತ ಮುತ್ತಲಿನ ಮನೆಯವರಿಗೆಲ್ಲ ತಾನೇ ಖುಷಿಯಿಂದ ಹಂಚಿ ಬರುತ್ತಿದ್ದಳು.
ಮೊನ್ನೆ ನನ್ನ ಮಗಳು ಅವ್ವಾ ಅವ್ವಾ ಎಂದು ಅರಚುತ್ತಾ ನೋಡ ಬಾ ಇಲ್ಲೆ ಬೇವಿನ ಮರ ಕಡದು ಹಾಕಾಕತ್ತರ. ಹೇಳ ಬಾ ಅವರಿಗೆ ಕಡಿಬ್ಯಾಡ ಅಂತ ಅಡುಗೆ ಮನೆಯಲ್ಲಿದ್ದ ನನ್ನ ಕೈ ಹಿಡಿದು ದರ ದರ ಎಳೆಯುತ್ತ ಮಲ್ಲಕ್ಕನ ಕಾಂಪೌಡಿಗೆ ತಂದು ನಿಲ್ಲಿಸಿದ್ದಳು. ವಿಚಾರಿಸಿದಾಗ, ಬೇವಿನಗಿಡ ಈ ದಿಕ್ಕಿನ್ಯಾಗ ಇರಬಾರದಂತ. ಇದು ಇಲ್ಲಿದ್ದದ್ದಕ್ಕ ನಮಗ ಸಮಸ್ಯೆ ಹೆಚ್ಚಾಗತಾವು ಅಂತ ವಾಸ್ತು ತಜ್ಞರು ಹೇಳಿದ್ರು ಅದಕ್ಕ ನಿರ್ವಾ ಇಲ್ಲದ ಕಡಸಾಕ ಹತ್ತೆವ್ರಿ ಅಂದಳು.
ಮರಕ್ಕೆ ಕೊಡಲಿ ಪೆಟ್ಟು ಹಾಕಿದಾಗಲೊಮ್ಮೆ ನನಗೇ ಹಾಕಿದಷ್ಟು ನೋವಾಗುತಿತ್ತು. ನಮಗೆಲ್ಲ ಶುದ್ಧ ಉಸಿರು ನೀಡಿದ ಮರ ವಾಸ್ತು ಹೆಸರಿನಲ್ಲಿ ನಿಸ್ಸಹಾಯಕವಾಗಿ ತನ್ನ ಉಸಿರು ಕಳೆದುಕೊಳ್ಳುತ್ತಿರುವದನ್ನು ಕಂಡು ಓಣಿಯ ಮಕ್ಕಳು ದೊಡ್ಡವರೆಲ್ಲ ಮನದಲ್ಲೇ ವಾಸ್ತು ತಜ್ಞರನ್ನು ಶಪಿಸುತ್ತಿದ್ದರು.
ಮನೆಗೆ ತೆರಳುವಾಗ ಮಗಳು, ಅವ್ವಾ ಇನ್ನ ಮ್ಯಾಲೆ ಕೋಗಿಲೆ ಗಿಳಿ ಬರೂದಿಲ್ಲ ಅಲ್ಲ ಎಂದು ಬೇಜಾರಿನಿಂದ ಕೇಳಿದಳು. ನಮ್ಮ ತೆಂಗಿನ ಮರ ದೊಡ್ಡದಾಗತ್ತಲ್ಲಾ ಈ ಸಲ ಅಲ್ಲೆ ಕೋಗಿಲೆ ಗಿಳಿಗಳು ಇರ್ತಾವು ನೋಡ್ತಾ ಇರು ಎಂದೆ. ನಿಜಾನಾ ಅವ್ವಾ ಎಂದು ಕೊಂಚ ಸಾವರಿಸಿಕೊಂಡು ಮುಖ ಅರಳಿಸಿದಳು. ಬರೋ ಯುಗಾದಿಗೋಸ್ಕರ ಮಗಳು ಸಾವಿರ ಕಣ್ಣುಗಳಲ್ಲಿ ಎದುರು ನೋಡುತ್ತಿದ್ದಾಳೆ. ಅವಳೊಂದಿಗೆ ನಾನೂ ಕೂಡ. ಸಸಿಗಳನ್ನು ನೆಡಿ ಮರಗಳನ್ನು ಕಾಪಾಡಿ ಅರಣ್ಯಗಳನ್ನು ರಕ್ಷಿಸಿ ಕಾಡಿದ್ದರೆ ನಾಡು ಅಂತೆಲ್ಲ ಘೋಷಣೆಗಳ ಅಬ್ಬರ ಎಲ್ಲೆಲ್ಲೂ ಕೇಳುತ್ತಲೇ ಇರುತ್ತೆ. ಸಬೆ ಸಮಾರಂಭಗಳಲ್ಲಿ ಉಪನ್ಯಾಸ ಮಾಲಿಕೆಗಳು ಕೇಳುಗರ ಕಿವಿಯ ಬಾಗಿಲಲ್ಲಿ ನಿಂತು ಸರದಿಯ ಪ್ರಕಾರ ಒಂದಾದ ಮೇಲೊಂದು ಬರುತ್ತಿರುತ್ತವೆ.
ಹೀಗಿದ್ದಾಗಲೂ ರಸ್ತೆಯಂಚಿನಲ್ಲಿರುವ ಮರಗಳು ಕರೆಂಟ್ ವಾಯರಿಗೆ ಅಡ್ಡಿ ಪಡಿಸುತ್ತವೆಂದು ತಮ್ಮ ಕೊಂಬೆಗಳನ್ನು ಕಳೆದುಕೊಂಡರೆ ಇನ್ನೂ ಕೆಲವು ರಸ್ತೆ ಅಗಲೀಕರಣದ ಹೆಸರಿನಲ್ಲಿ ಕಟ್ಟಡ ಅಡುಗೆ ಸೌದೆ ಫ್ಯಾಕ್ಟರಿಗೊಸ್ಕರ ಮನುಷ್ಯನ ದುರಾಸೆಗೋಸ್ಕರ ತಮ್ಮ ಜೀವವನ್ನು ಕಳೆದುಕೊಳ್ಳುತ್ತಿರುವ ಮರಗಳನ್ನು ಕಂಡು ಮರ ಮರ ಮರಗುತ್ತದೆ ಜೀವ. ಹಂಚಿಕೊಳ್ಳದಿರೋಕೆ ನನ್ನ ಕೈಲಿ ಆಗಲಿಲ್ಲ. ಮರಗುವ ಜೀವಕೆ ಸಂತೈಸಲು ಸಸಿಗಳನು ಸಾಲು ಸಾಲಾಗಿ ನೆಟ್ಟು ನೀರೆರೆಯುತ್ತಿದ್ದೇನೆ. ಮತ್ತೆ ನೀವು—-?
ಜಯಶ್ರೀ. ಜೆ. ಅಬ್ಬಿಗೇರಿ.



