ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಮೂಲತಃ ಬಳ್ಳಾರಿಯವರಾದ ಚಂದಕಚರ್ಲ ರಮೇಶ್ ಬಾಬು ಅವರು ಹೈದರಾಬಾದ್ ಕನ್ನಡಿಗರು. ಹೊರನಾಡಿನ ಕನ್ನಡ ಪರ ಚಟುವಟಿಕೆಗಳಲ್ಲಿ ಸಕ್ರಿಯರಾಗಿರುವ ಇವರು ಕನ್ನಡ ನಾಟ್ಯ ರಂಗದ ಕಾರ್ಯಕಾರಿ ಸಮಿತಿಯ ಸದಸ್ಯರು, ಕನ್ನಡ ಸಾಹಿತ್ಯ ಪರಿಷತ್, ತೆಲಂಗಾಣ ಘಟಕದ ಸಂಘಟನಾ ಕಾರ್ಯದರ್ಶಿಯೂ ಆಗಿರುವರು. ಇವರು ತೆಲುಗು, ಕನ್ನಡ ಎರಡರಲ್ಲೂ ಪ್ರವೀಣರು. ಕವಿತೆ, ಲಘು ಬರಹಗಳು, ಅಂಕಣಗಳು, ಅನುವಾದ ಕೃತಿಗಳು (ತೆಲುಗಿನಿಂದ ಕನ್ನಡಕ್ಕೆ, ಕನ್ನಡದಿಂದ ತೆಲುಗಿಗೆ)- ಹೀಗೆ ಒಟ್ಟು ಮೂವತ್ತು ಕೃತಿಗಳನ್ನು ರಚಿಸಿದ್ದಾರೆ.

ಆಚೀಚಿನ ಆಯಾಮಗಳು ಸಂಕಲನದಲ್ಲಿ ಒಟ್ಟು ಮೂವತ್ತನಾಲ್ಕು ಲೇಖನಗಳಿವೆ. ಈ ಅಂಕಣ ಗೊಂಚಲಿನಲ್ಲಿ ಬಗೆಬಗೆಯ ಹೂವುಗಳು. ಎಲ್ಲವೂ ದಿನ ನಿತ್ಯ ನಮ್ಮ ತೋಟಗಳಲ್ಲಿ ಸಾಮಾನ್ಯವಾಗಿ ಕಾಣುವಂತಹವು. ಅವುಗಳ ಮೇಲೆ ತುಂತುರು ಹನಿ ಚೆಲ್ಲಿದಂತೆ ತೆಳು ಹಾಸ್ಯ. ಕೆಲವಕ್ಕೆ ವೈಚಾರಿಕತೆಯ ಘಮವಿದ್ದರೆ, ಕೆಲವಕ್ಕೆ ಅಧ್ಯಾತ್ಮದ ಅಗರುಬತ್ತಿಯ ಪರಿಮಳ, ಸಣ್ಣಕ್ಕೆ- ಯಾವುದೂ ಮೂಗಿಗೆ ಬಡಿಯುವಂತದಲ್ಲ. ಹಿತ ಮಿತ, ನವಿರು. ಶ್ರೀಸಾಮಾನ್ಯನ ದೈನಂದಿನ ಜೀವನದಲ್ಲಿ ಬರುವ ಚಿಕ್ಕ ಪುಟ್ಟ ಸವಾಲುಗಳು, ಅನಿವಾರ್ಯತೆಗಳ ಮೇಲೆ ಬರೆದ ಕಿರು ವ್ಯಾಖ್ಯಾನಗಳು- ಮನೆಯನ್ನು ಹೊಕ್ಕ ಇಲಿಯಿಂದ ಹಿಡಿದು ನೆರೆ ಹೊರೆ, ಗತಕಾಲದ ಟೂ ಇನ್ ಒನ್, ಗಾಂಧಿವಾದದ ಪ್ರಸ್ತುತತೆ ವರೆಗೆ – ಇಲ್ಲಿಯ ಬರಹದ ವಸ್ತುಗಳ ಹರವು ವಿಶಾಲ. ದಿಟ್ಟತನದಿಂದ ತನ್ನದೇ ಆದ ಧೋರಣೆಯನ್ನು ಅಭಿವ್ಯಕ್ತಿಸುತ್ತದೆ- “ಮೇರಾ ಭಾರತ್ ಮಹಾನ್”. ಬಯೋಪಿಕ್ ಬಗ್ಗೆ ಹೇಳುವಾಗ- ಚಲನಚಿತ್ರಗಳಲ್ಲಿ ಪುರಾಣ ಪುರುಷರ ಚಿತ್ರಣದಿಂದ ಹಿಡಿದು, ಕ್ರೀಡಾಪಟುಗಳ ರಾಜಕಾರಣಿಗಳ ಮೇಲಣ ಚಲನಚಿತ್ರಗಳನ್ನು ವಿಶ್ಲೇಷಿಸುವ ಬಗೆ ಇವರ ಅಧ್ಯಯನಶೀಲತೆಗೆ ಕನ್ನಡಿ. ಭಾಷೆ, ಅದರಲ್ಲೂ ಕನ್ನಡದ ಮೇಲಿನ ಲೇಖನಗಳಲ್ಲಿ ಕನ್ನಡಾಭಿಮಾನ ತುಂಬಿ ತುಳುಕುವುದು ಮಾತ್ರವಲ್ಲ ಉತ್ತಮ ಸಲಹೆಗಳೂ ಕಾಣುವುವು. ಸ್ವಂತ ಅನುಭವದ ಕುರಿತಾದ “ಆಕಾಶಯಾನವೂ…”, “ನಾವು ಇಲಿಯನ್ನು ಹೊರಗಟ್ಟಿದೆವು…”, “ನೋ ಪಾರ್ಕಿಂಗ್”- ಇತ್ಯಾದಿಗಳು ನಮ್ಮೆಲ್ಲರ ಅನುಭವವನ್ನು ಪ್ರತಿಫಲಿಸುವ ಆಪ್ತತೆ ಹೊಂದಿವೆ.

ನನ್ನ ಮೆಚ್ಚಿನವು- ಶ್ವಾನೋಪಾಖ್ಯಾನ, (ಗ್ರೇಟ್ ಡೇನ್ ಗೆ “ಕಾಲಭೈರವ”, ಪೊಮರೇನಿಯನ್- ಭೂಮಿಗೆ ಸಮಾನಾಂತರವಾಗಿರುವ “ಕುಳ್ಳ ಕುನ್ನಿ” !), ಫೇಸ್ಬುಕ್ ಪ್ರಭಂಜನ, ಬೀಗರು (ಗಟ್ಟಿತನವಿರುವುದರಿಂದ ಬೀಗ ಎಂಬ ಹೆಸರು ಬಂದಿರಬಹುದು ಎಂಬ ಊಹೆ !), ನಿರೂಪಕರ ಪಾತ್ರ – ಕಬಡ್ಡಿ ಆಟಗಾರರಂತೆ ನಿರ್ದಿಷ್ಟ ಮಿತಿಯಲ್ಲಿ ನಡೆಯಬೇಕಾದ ಪರಿಸ್ಥಿತಿ, ಮನೆಕೆಲಸದ ಸಾಮ್ರಾಜ್ಞಿ -(ಮನೆಯೊಡೆಯನನ್ನೆ ರೂಮಿನಿಂದ ಹೊರಗೋಡಿಸಲು ಕೋಲುಧಾರಿಣಿಯಾಗಿ ಒರೆಸಲು ನಿಂತ ಮಹಿಷಾಸುರ ಮರ್ದಿನಿ!), ವಜ್ರದಂತಕ್ಕೊಂದು ಕ್ಷತಿ ( ದಂತಸ್ಥ- ಹಲ್ಕಟ್ ಡಾಕ್ಟರ್!) – ಚಿಕ್ಕ ಚಿಕ್ಕ ಕುಂಚಕಾರಿತನದಿಂದ ಮನ ಸೆಳೆದ ಉದಾಹರಣೆಗಳು.

ಭಾರವೆನಿಸದ ಈ ಲಲಿತ ಕಿರು ( ಯಾವುದೂ ೩-೪ ಪುಟ ಮೀರಿಲ್ಲ) ಪ್ರಬಂಧಗಳಲ್ಲಿ ಅಬ್ಬರವಿಲ್ಲ, ವ್ಯಂಗ್ಯದಲ್ಲಿ ಮೊನಚಿಲ್ಲ, ಹಾಸ್ಯದಲ್ಲಿ ಕಹಿಯಿಲ್ಲ, ಭಾಷೆಯಲ್ಲಿ ಶಬ್ದ ಪ್ರದರ್ಶನವಿಲ್ಲ. ನನಗೆ ಥಟ್ಟಂತ ನೆನಪಾದದ್ದು ಆರ್ .ಕೆ. ಲಕ್ಷ್ಮಣರ ಶ್ರೀಸಾಮಾನ್ಯನ ವ್ಯಂಗ್ಯ ಚಿತ್ರಗಳು. ಅಷ್ಟೇ ಖುಷಿ ಕೊಡುವಂತಹವು.


About The Author

2 thoughts on “ಚಂದಕಚರ್ಲ ರಮೇಶ್ ಬಾಬು ಅವರ ಅಂಕಣ ಬರಹಗಳ ಸಂಕಲನ- “ಆಚೀಚಿನ ಆಯಾಮಗಳು”ಸುಮತಿ ನಿರಂಜನ”

  1. ನನ್ನ ಪುಸ್ತಕದ ಬಗ್ಗೆ ನಿಮ್ಮ ಈ ಸಮೀಕ್ಷೆ ಚೇತೋಹಾರಿಯಾಗಿದೆ ಮೇಡಂ! ಶೀರ್ಷಿಕೆಯಂತೂ ನಿಮ್ಮ ಕವಿ ಮನವನ್ನು ಸೂಚಿಸಿದೆ. ಧನ್ಯವಾದ.

Leave a Reply

You cannot copy content of this page

Scroll to Top