ಮಹಿಳಾ ಸಂಗಾತಿ ಡಾ.ಸುಮತಿ ಪಿ. “ಹೆಣ್ಣು ಎದುರಿಸುತ್ತಿರುವ ಅತ್ಯಾಚಾರವೆಂಬ ಸವಾಲು” ನಮ್ಮ ಹಿಂದಿನವರು ಹೇಳಿದ್ದನ್ನು ಕೇಳಿದ್ದೆ.”ಹೆಣ್ಣೆಂದರೆ ಸೆರಗಿನಲ್ಲಿ ಕಟ್ಟಿಕೊಂಡ ಕೆಂಡದಂತೆ”ಎಂದು.ಆಗ ಹೆಣ್ಣಿಗೆ ಸ್ವಾತಂತ್ರ್ಯವಿಲ್ಲದ ಸಮಯ.ಮನೆಯ ನಾಲ್ಕು ಗೋಡೆಯ ಒಳಗಿದ್ದು,ಯಾವ ರೀತಿಯ ಮನೋಭಾವ ಇತ್ತೆಂದರೆ ಸ್ವಚಂದವಾಗಿ ಹಾರಾಡುವ ಸ್ವಾತಂತ್ರ್ಯವಿರದ ಪಂಜರದಲ್ಲಿರುವ ಹಕ್ಕಿಯಂತೆ. ಆಗ ಹೆಣ್ಣಿಗೆ ಶಿಕ್ಷಣ ನೀಡುತ್ತಿರಲಿಲ್ಲ. ಏನಿದ್ದರೂ ಮನೆ ಕೆಲಸ,ಅಡುಗೆ, ಗಂಡ, ಮಕ್ಕಳು, ಕುಟುಂಬ,ಸಂಸಾರ, ನೆಂಟರು ಇಷ್ಟಕ್ಕೆ ಅವಳ ಸಂಪರ್ಕ ಸೀಮಿತವಾಗಿತ್ತು.ಈ ಕಾಲದಲ್ಲಿ ಹೆಣ್ಣಿಗೆ ಗಂಡಿನಂತೆಯೇ ಶಿಕ್ಷಣ,ಸ್ವಾತಂತ್ರ ಎಲ್ಲವೂ ಸುಲಭವಾಗಿ ದೊರಕಿದರೂ,ಹೆಣ್ಣಿನೆದುರಿಗೆ ಸವಾಲುಗಳ ಸರಮಾಲೆಯೇ ಇದೆಯೆಂದರೆ ತಪ್ಪಾಗಲಾರದು.ಅದರಲ್ಲಿಯೂ ಬಹುದೊಡ್ಡ ಸವಾಲೆಂದರೆ ಪ್ರಾಣಕಂಟಕವಾದ ಅತ್ಯಾಚಾರ. “ಎಲ್ಲಿ ಸ್ತೀಯರು ಪೂಜಿಸಲ್ಪಡುತ್ತಾರೋ ಅಲ್ಲಿ ದೇವತೆಗಳು ನೆಲೆಸಿರುತ್ತಾರೆ”ಎಂಬ ಮೇರು ಸಂಸ್ಕೃತಿಯ ನಮ್ಮ ಭಾರತ ದೇಶದಲ್ಲಿ ಇದೀಗ ಅತ್ಯಾಚಾರವೆಂಬ ಕತ್ತಲು ಕವಿದಿದೆ.ಮನುಷ್ಯನ ನಾಗರಿಕತೆಗೆ ಮಂಕು ಕವಿದಿದೆಆಧುನಿಕತೆಯ ಹೆಸರಲ್ಲಿ,ಜೀವನ ಕ್ರಮ ಬದಲಾಗುತ್ತಿದೆ. ಸಂಸ್ಕೃತಿ ,ಸಂಸ್ಕಾರ ಮರೆಯಾಗುತ್ತಿದೆ. ಕುಟುಂಬದಲ್ಲಿ, ಸಮಾಜದಲ್ಲಿ ಕಟ್ಟುಪಾಡಿನ ಕ್ರಮಗಳು ಮರೆಯಾಗಿವೆ, ಮದುವೆಯೆನ್ನುವುದು ಚೌಕಟ್ಟು ಮೀರಿದೆ,ಹೆಣ್ಣಿಗೆ ನೀಡಿದ ಸ್ವಾತಂತ್ರ್ಯ ಸ್ವೇಚ್ಛಾಚಾರಕ್ಕೆ ಎಡೆಮಾಡಿಕೊಟ್ಟಂತಾಗಿದೆ. ಅವಿಭಕ್ತ ಕುಟುಂಬ ಜೀವ ಕಳೆದುಕೊಂಡು,ವಿಭಕ್ತ ಕುಟುಂಬದಲ್ಲಿ,ಹೇಳುವವರು ಕೇಳುವವರಿಲ್ಲದೇ, ಸ್ವಾತಂತ್ರ್ಯದ ಹೆಸರಲ್ಲಿ ಯುವಕರು ನಡೆದದ್ದೇ ದಾರಿ ಎಂಬಂತಾಗಿದೆ.ಕಡಿವಾಣವಿಲ್ಲದ ಕುದುರೆಯಂತೆ, ಯೌವನದ ಮರ್ಕಟ ಮನದಲಿ ಉದಿಸುವ ಹುಚ್ಚು ಕನಸುಗಳ ಬೆನ್ನೇರಿ,ಸಾಗುವ ಜೀವನ,ಕನಸುಗಳು ಈಡೇರದೇ,ಸೋಲೊಪ್ಪಲಾಗದೆ ದುರಂತ ಅಂತ್ಯ ಕಾಣುತ್ತಿದೆ. ಪ್ರಸ್ತುತ ಸಮಾಜದಲ್ಲಿ ಅತ್ಯಾಚಾರವೆಂಬುದು ದಿನನಿತ್ಯದ ಸಾಮಾನ್ಯ ಘಟನೆಯೆಂಬಂತೆ ಕಂಡುಬರುವುದು ಕಳವಳಕಾರಿ ಸಂಗತಿ.ದಿನಕಳೆದಂತೆ ಅತ್ಯಾಚಾರದ ಘಟನೆಗಳು ಮಿತಿಮೀರಿ ನಡೆಯುತ್ತಿವೆ.ಒಂದೊಂದು ಪ್ರಕರಣವೂ ನಿಯತ್ತಿನ ಹೆಣ್ಣುಮಕ್ಕಳಲ್ಲಿ ಭಯ ಮೂಡಿಸುತ್ತಿದೆ!. ಅದರಲ್ಲೂ ಹೆಣ್ಣು ಮಗಳೊಬ್ಬಳು ಸ್ವಂತ ಅಣ್ಣ-ತಮ್ಮಂದಿರಿಂದೇಕೆ!,ಜನ್ಮಕ್ಕೆ ಕಾರಣವಾದ ತಂದೆಯಿಂದಲೇ ಅತ್ಯಾಚಾರಕ್ಕೆ ಒಳಗಾಗುತ್ತಿದ್ದರೆ,ಇದಕ್ಕಿಂತ ಹೇಯ,ಹೀನ ಕೃತ್ಯ ಬೇರೆ ಉಂಟೇ? ಹಾಗಾದರೆ ನಾಗರಿಕತೆ ಎತ್ತ ಸಾಗುತ್ತಿದೆ? “ವಿನಾಶ ಕಾಲೇ ವಿಪರೀತ ಬುದ್ಧಿ “ಎಂಬಂತೆ ಇದು ಹೀಗೆ ಮುಂದುವರಿದರೆ ಸಂಸ್ಕೃತಿ ,ಸಂಸ್ಕಾರದಲ್ಲಿ ಜಗತ್ತನ್ನೇ ಗೆದ್ದು ಬೀಗಿ ನಿಂತ ಬಾರತ ಅತ್ಯಾಚಾರದಂತಹ ಹೇಯ ಕೃತ್ಯಗಳಿಂದ ಜಗತ್ತಿನೆದುರು ತಲೆತಗ್ಗಿಸಿ ನಿಲ್ಲುವಂತಾದರೂ ಆಶ್ಚರ್ಯವಿಲ್ಲ.!“ಎರಡೂ ಕೈ ಸೇರಿದಾಗ ಮಾತ್ರ ಚಪ್ಪಾಳೆ” ಎಂಬಂತೆ, ಅತ್ಯಾಚಾರಕ್ಕೆ ಗಂಡನ್ನು ಕಾರಣವಾಗಿಸುವಾಗ,ಹೆಣ್ಣಿನ ತಪ್ಪನ್ನು ಮುಚ್ಚಿಡಲಾಗದು. ಹೆಣ್ಣಿನ ನಡೆ,ನುಡಿ ಕೂಡ ಅವಳ ಅತ್ಯಾಚಾರಕ್ಕೆ ಕಾರಣವಾಗಬಹುದು ಎಂಬುವುದು ಗಮನಿಸಬೇಕಾದ ಅಂಶವಾಗುತ್ತದೆ.ಆದ್ದರಿಂದ ಹೆಣ್ಣಿನ ಅತ್ಯಾಚಾರದಲ್ಲಿ ಗಂಡಿನ ಪಾತ್ರ ಹೆಚ್ಚಿದ್ದರೂ,ಹೆಣ್ಣಿಗೆ ಎಚ್ಚರಿಕೆಯ ನಡೆಯಿರಬೇಕು.ಗಂಡಸರು ಹೆಣ್ಣಿಗೂ ತನ್ನಂತೆ ಮನಸ್ಸು ಇದೆ,ಆಸೆ,ಆಕಾಂಕ್ಷೆಯಿದೆ ಎಂಬುದನ್ನು ಅರಿಯಬೇಕು.ಪರಸ್ಪರ ಗೌರವ, ಸಹಕಾರ, ಸಹಜೀವನ ಇರಬೇಕು.ಕಾನೂನು ಕೂಡ ಕಟ್ಟುನಿಟ್ಟಿರಬೇಕು.ಹೆಣ್ಣು ತನ್ನ ಮೇಲೆ ನಡೆದ ಅತ್ಯಾಚಾರವನ್ನು ಸಾಬೀತುಪಡಿಸುವ ಮನೋಸ್ಥೈರ್ಯ ಮೂಡಿಸಿಕೊಳ್ಳಬೇಕು.ಅತ್ಯಾಚಾರ ಸಾಬೀತಾದರೆ ಮರಣದಂಡನೆ ವಿಧಿಸಬೇಕು.ಸುಳ್ಳು ಸಾಕ್ಷಿ,ಹಣದಿಂದ, ಅಧಿಕಾರ ಪ್ರಭಾವದಿಂದ ನುಸುಳಲು ಬಿಡಬಾರದು.ಒಟ್ಟಿನಲ್ಲಿ ಅತ್ಯಾಚಾರ ತಡೆಯಬೇಕಾದರೆ,ಗಂಡು ಹೆಣ್ಣಿಗೆ ಅರಿವಿನ ಶಿಕ್ಷಣ,ಮಾನಸಿಕ ಚಿಕಿತ್ಸೆ,ಹೆಣ್ಣಿನ ಬಗ್ಗೆ ಬದಲಾಗಬೇಕಾದ ಮನೋಭಾವ,ಕಠಿಣ ಕಾನೂನು,ಪ್ರಜ್ಞಾವಂತ ಸಮಾಜದೊಂದಿಗೆ ,ಹೆತ್ತವರೂ ಜಾಗೃತರಾಗಿರಬೇಕು, ಅತ್ಯಾಚಾರ ಮುಕ್ತ ಸಮಾಜ ನಿರ್ಮಾಣವಾಗಬೇಕು. ಡಾ.ಸುಮತಿ ಪಿ