“ಸಾವಿನಲ್ಲೂ ಸಾರ್ಥಕತೆ ಮೆರೆದ…ನೀರಜಾ ಭಾನೋಟ್.” ವೀಣಾ ಹೇಮಂತ್ ಗೌಡ ಪಾಟೀಲ್
ವ್ಯಕ್ತಿ ಸಂಗಾತಿ “ಸಾವಿನಲ್ಲೂ ಸಾರ್ಥಕತೆ ಮೆರೆದ… ನೀರಜಾ ಭಾನೋಟ್.” ವೀಣಾ ಹೇಮಂತ್ ಗೌಡ ಪಾಟೀಲ್ ಸಾವಿನಲ್ಲೂ ಸಾರ್ಥಕತೆ ಮೆರೆದ…ನೀರಜಾ ಭಾನೋಟ್. ಕೇವಲ 22 ವರ್ಷದ ಹರಯದಲ್ಲಿ ಆಕೆ ತನ್ನ ಬದುಕಿನಲ್ಲಿ ಮೊತ್ತ ಮೊದಲ ಬಾರಿಗೆ ಅಂತರಾಷ್ಟ್ರೀಯ ವಿಮಾನ ಯಾನ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸಲು ಆರಂಭಿಸಿದಳು. ಆ ದಿನ ಸಪ್ಟಂಬರ್ 5 1986. ತನ್ನ ಹುಟ್ಟು ಹಬ್ಬಕ್ಕೆ ಎರಡು ದಿನ ಮೊದಲು ಫ್ರಾಂಕ್ ಫರ್ಟ್ ಮೂಲಕವಾಗಿ ನ್ಯೂಯಾರ್ಕ್ ಗೆ ತೆರಳುತ್ತಿದ್ದ ಅಂತರಾಷ್ಟ್ರೀಯ ವಿಮಾನ ಪ್ಯಾನ್ ಆ್ಯಮ್ ವಿಮಾನ ಸಂಖ್ಯೆ 73 ಎಂಬ ಹೆಸರಿನ ಆ ವಿಮಾನವು ಕರಾಚಿಯಲ್ಲಿ ನಸುಕಿನ ಜಾವ ಐದು ಗಂಟೆಯ ಸುಮಾರಿಗೆ ಇಂಧನವನ್ನು ತುಂಬಿಸಲು ರನ್ ವೇಯಲ್ಲಿ ನಿಂತಿತ್ತು. ಆಗ ಸೆಕ್ಯೂರಿಟಿ ಗಾರ್ಡ್ಗಳಂತೆ ವೇಷ ಧರಿಸಿದ ನಾಲ್ವರು ಯುವಕರು ವಿಮಾನವನ್ನು ಪ್ರವೇಶಿಸಿದರು ಒಳ ಬಂದ ನಾಲ್ಕು ಜನ ಯುವಕರು ಜೋರಾಗಿ ಆರ್ಭಟ ಮಾಡಿದಾಗ ಪ್ರಯಾಣಿಕರೆಲ್ಲರೂ ಭಯದಿಂದ ಕಿರುಚಿದರು. ವಿಮಾನದ ಸಿಬ್ಬಂದಿಗಳು ಕೂಡ ನಿಂತಲ್ಲಿಯೇ ತಣ್ಣಗಾದರೂ…. ಆಕೆ ಮಾತ್ರ ಧೈರ್ಯದಿಂದ ಸನ್ನಿವೇಶವನ್ನು ಎದುರಿಸುವ ಮನಸ್ಥಿತಿಯನ್ನು ಹೊಂದಿದ್ದಳು.ವಿಮಾನದ ಮುಖ್ಯ ಫ್ಲೈಟ್ ಅಟೆಂಡೆಂಟಾಗಿ ಕಾರ್ಯನಿರ್ವಹಿಸುತ್ತಿದ್ದ ಕೇವಲ 22 ರ ಹರೆಯದ ಆಕೆ ತನ್ನ ಬದುಕಿನಲ್ಲಿ ಅತಿ ಮುಖ್ಯ ಮಾರ್ಗವನ್ನು ಪ್ರಥಮ ಬಾರಿಗೆ ಪ್ರಯಾಣಿಸಲಿದ್ದಳು…. ಆಕೆಯೇ ನೀರಜಾ ಭಾನೋಟ್. ವಿಮಾನವನ್ನು ಅಪಹರಿಸಿದ ಹೈಜಾಕರ್ ಗಳನ್ನು ನೋಡಿಯೇ ವಿಮಾನದ ಪ್ರಯಾಣಿಕರು ಗಾಬರಿಗೊಂಡರೆ ನೀರಜಾ ಮಾತ್ರ ಕೊಂಚವೂ ಧೃತಿಗೆಡದೆ ನೂರಾರು ಜನರ ಜೀವವನ್ನು ಉಳಿಸಿದಳು. ಅತ್ಯಂತ ಸೂಕ್ಷ್ಮವಾಗಿ ( ಅದರಲ್ಲಿ ಪ್ರಯಾಣಿಸುತ್ತಿರುವ ಪ್ರಯಾಣಿಕರಿಗೆ ಹಾಗೂ ಸಿಬ್ಬಂದಿಗಳಿಗೆ ಹೈಜಾಕರ್ ಗಳಿಗೂ ಕೂಡ ಗೊತ್ತಾಗದಷ್ಟು )ಆಕೆ ಹೈಜಾಕರ್ ಗಳ ಕೋಡ್ ಸಂಖ್ಯೆಯನ್ನು ಇಂಟರ್ಕಾಂನಲ್ಲಿ ತನ್ನ ಮೇಲಧಿಕಾರಿಗಳಿಗೆ ಕಳುಹಿಸಿದ್ದಳು ಕಾಕ್ ಪಿಟ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕ್ರಿವ್ ಸಿಬ್ಬಂದಿಯವರು ಅದರಲ್ಲೂ ವಿಶೇಷವಾಗಿ ಪೈಲೆಟ್ ಗಳು ತಮ್ಮ ತಲೆಯ ಮೇಲಿರುವ ಓವರ್ ಹೆಡ್ ಹ್ಯಾಚ್ಗಳ ಮೂಲಕ ಅಲ್ಲಿಂದ ತಪ್ಪಿಸಿಕೊಂಡು ಹೊರಟು ಹೋದರು…. ಸಾಧಾರಣವಾಗಿ ಹೈಜಾಕರ್ ಗಳ ಕೈಯಲ್ಲಿ ಪೈಲೆಟ್ ಗಳು ಸಿಕ್ಕಾಗ ಹೈಜಾಕರಗಳು ಅವರನ್ನು ವಿಮಾನವನ್ನು ತಮ್ಮಿಷ್ಟ ಬಂದ ಜಾಗಕ್ಕೆ ಹಾರಿಸಲು ಒತ್ತಾಯಿಸುತ್ತಾರೆ… ಅವರ ಈ ತಂತ್ರವನ್ನು ತಡೆ ಹಿಡಿಯಲು ಹಾಗೂ ವಿಮಾನವು ನೆಲದಲ್ಲಿಯೇ ಇರುವಂತೆ ಮಾಡಲು ವಿಮಾನಯಾನ ಸಿಬ್ಬಂದಿಗಳಿಗೆ ಈ ಕುರಿತು ತರಬೇತಿ ನೀಡಲಾಗಿರುತ್ತದೆ…. ಈಗಾಗಲೇ ಪ್ಯಾನ 73 ಎಂಬ ಹೆಸರಿನ ಆ ವಿಮಾನವನ್ನು ಹೈಜಾಕ್ ಮಾಡುವ ತಂತ್ರ ತುಸುಮಟ್ಟಿಗೆ ವಿಫಲಗೊಂಡಿತ್ತು ಆದರೆ 379 ಜನ ಪ್ರಯಾಣಿಕರು ಹಾಗೂ ಇನ್ನುಳಿದ ಗಗನಯಾನ ಸಿಬ್ಬಂದಿಗಳು ಉಗ್ರರ ಕೈಯಲ್ಲಿ ಸಿಲುಕಿದ್ದರು. ಮುಂದಿನ ಸುಮಾರು 17 ಗಂಟೆಗಳ ಕಾಲ ನೀರಜಾ ಉಗ್ರಗಾಮಿಗಳು ಹಾಗೂ ಮುಗ್ಧ ಪ್ರಯಾಣಿಕರ ನಡುವೆ ತಡೆಗೋಡೆಯಾಗಿ ನಿಂತುಕೊಂಡರು. ಆ ಎಲ್ಲ ಹೈಜಾಕರ್ ಗಳು ಅಬು ನಿಡಲ್ ಆರ್ಗನೈಜೇಷನ್ ಎಂಬ ಪ್ಯಾಲಸ್ಟನಿಯನ್ ಮಿಲಿಟರಿ ಗುಂಪಾಗಿತ್ತು. ಅವರ ಪ್ರಮುಖ ಗುರಿ ಅಮೆರಿಕದ ಪ್ರಜೆಗಳಾಗಿದ್ದರು…. ಎಲ್ಲ ಪ್ರಜೆಗಳ ಪಾಸ್ ಪೋರ್ಟ್ ಗಳನ್ನು ಅವರು ಪರೀಕ್ಷಿಸುತ್ತಿದ್ದರು. ನೀರಜಾ ಮತ್ತು ಆಕೆಯ ಸಹೋದ್ಯೋಗಿಗಳು ಅತ್ಯಂತ ಸೂಕ್ಷ್ಮವಾಗಿ ಅಮೆರಿಕದ ಪಾಸ್ಪೋರ್ಟ್ ಹೊಂದಿರುವವರ ಪಾಸ್ಪೋರ್ಟ್ ಗಳನ್ನು ಸಂಗ್ರಹಿಸಿ ಸೀಟುಗಳ ಕೆಳಗೆ ಬಚ್ಚಿಡಲು ಆರಂಭಿಸಿದರು. ಮತ್ತೆ ಕೆಲವರ ಪಾಸ್ಪೋರ್ಟ್ ಗಳನ್ನು ಕಸದ ಬುಟ್ಟಿಗಳ ಹಿಂದೆಯೂ,ತಲೆಯ ಮೇಲಿರುವ ಬ್ಯಾಗುಗಳನ್ನು ಇಡುವ ಕಂಪಾರ್ಟ್ಮೆಂಟುಗಳ ನಡುವೆ ಅಡಗಿಸಿ ಇಟ್ಟರು. ಮತ್ತೆ ಕೆಲ ಪಾಸ್ಪೋರ್ಟ್ ಗಳನ್ನು ಆಕೆ ಟಾಯ್ಲೆಟ್ ನ ನೀರಿನಲ್ಲಿ ಫ್ಲಶ್ ಮಾಡಿ ಇನ್ನಿಲ್ಲದಂತೆ ಮಾಡಿದಳು. ಅತ್ಯಂತ ಚಾಣಾಕ್ಷತೆ ಹಾಗೂ ಶಾಂತ ಮನಸ್ಥಿತಿಯಿಂದ ಆಕೆ ಅಮೆರಿಕದ ನಿವಾಸಿಗಳನ್ನು ಗುರುತಿಸಿ ಅವರನ್ನು ಸೂಕ್ಷ್ಮವಾಗಿ ಎಚ್ಚರಿಸಿದಳು. ಇಡೀ ವಿಮಾನದಲ್ಲಿರುವ ಯಾವುದೇ ಪ್ರಯಾಣಿಕರು ಗಾಬರಿಗೊಳ್ಳದೆ ಇರುವಂತೆ ಅವರನ್ನು ಪ್ರಶಾಂತವಾಗಿ ಇರಿಸಲು ಆಕೆ ಪ್ರಯತ್ನಿಸಿದಳು ಅಳುವ ಚಿಕ್ಕ ಮಕ್ಕಳನ್ನು ಸಮಾಧಾನಿಸಿದ ಆಕೆ ಹಿರಿಯರಿಗೆ ಏನೂ ಆಗುವುದಿಲ್ಲ, ಧೈರ್ಯದಿಂದಿರಿ ಎಂದು ಭರವಸೆ ನೀಡಿದಳು. ಹಿಂದಿ, ಇಂಗ್ಲಿಷ್, ಪಂಜಾಬಿ ಭಾಷೆಗಳಲ್ಲಿ ಪ್ರಬುದ್ಧತೆಯನ್ನು ಹೊಂದಿದ್ದ ಆಕೆ ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರೊಂದಿಗೆ ಲಘು ಸಂಭಾಷಣೆಯಲ್ಲಿ ನಿರತಳಾಗಿ ಅವರ ಭಯವನ್ನು ಹೋಗಲಾಡಿಸಲು ಪ್ರಯತ್ನಿಸಿದಳು. ಆಕಸ್ಮಿಕದಲ್ಲಿ ಬದುಕುಳಿದ ನೂರಾರು ಜನ ಪ್ರಯಾಣಿಕರು ಆಕೆ ಅತ್ಯಂತ ಚಿಕ್ಕ ಹುಡುಗಿಯಾಗಿದ್ದರೂ ಕೂಡ ಹೆದರಿದ್ದರೂ ಕೂಡ ತನ್ನ ಹೆದರಿಕೆಯನ್ನು ಯಾರಿಗೂ ತೋರಿಸದೆ ನಮ್ಮಂತಹ ನೂರಾರು ಜನರಿಗೆ ಧೈರ್ಯ ತುಂಬಿದ ಕಾರಣವೇ ನಾವು ನಮ್ಮ ದುಃಖವನ್ನು ಹೊರ ಹಾಕದೆ ಇರಲು ಸಾಧ್ಯವಾಯಿತು ಎಂದು ಹೇಳಿದರು ಗಂಟೆಗಳ ಕಾಲ ಹೈಜಾಕರ್ಸ್ ಮತ್ತು ವಾಯುಯಾನ ಸಂಸ್ಥೆಯ ನಡುವೆ ಮಾತುಕತೆ, ಸಂಧಾನ ಪ್ರಕ್ರಿಯೆ ನಡೆದು ಒಂದು ಹಂತದಲ್ಲಿ ನಿಲುಗಡೆಯಾಯಿತು. ಇದು ಹೈಜಾಕರ್ಸ್ ಗಳಲ್ಲಿ ತಳಮಳವನ್ನು ಉಂಟು ಮಾಡಿತು ಇದೇ ಸಮಯದಲ್ಲಿ ವಿಮಾನದ ವಿದ್ಯುತ್ ಸಂಪರ್ಕ ಕಡಿತಗೊಳ್ಳುವ ಪರಿಸ್ಥಿತಿ ಒದಗಿತು. ಕ್ಯಾಬಿನ್ ಲೈಟ್ ಗಳು ಪಕ ಪಕ ಮಾಡಲಾರಂಭಿಸಿ ಅಂತಿಮವಾಗಿ ಎಲ್ಲರನ್ನು ಕತ್ತಲೆಗೆ ದೂಡಿ ಆರಿ ಹೋದವು. ಹೀಗೆಯೇ 17 ಗಂಟೆಗಳು ಕಳೆದು ಹೋದವು. ಇದು ಹೈಜಾಕರ್ಸಗಳಲ್ಲಿ ಸಿಟ್ಟು ಮತ್ತು ಆತಂಕವನ್ನು ಹೆಚ್ಚಿಸಿ ಆಗ ಅವರು ಸರ್ಕಾರವನ್ನು ಹೆದರಿಸಲು ಗನ್ ಫೈಯರ್ ಆರಂಭಿಸಿದರು ಜನನಿಬಿಡವಾದ ಕ್ಯಾಬಿನ್ ನಲ್ಲಿ ಒಂದೊಮ್ಮೆ ಗುಂಡಿನ ಮೊರೆತ ಶುರುವಾದಾಗ ಆ ಗಾಢವಾದ ಕತ್ತಲಿನಲ್ಲಿ ಭಯದ ಕೇಕೆ ಹಾಕುತ್ತ ಪ್ರಯಾಣಿಕರು ಸೀಟುಗಳ ಅಡಿಯಲ್ಲಿ ಕಿರುಚುತ್ತಾ ಅಡಗಿಕೊಳ್ಳಲು ಪ್ರಯತ್ನಿಸಿದರು. ಇದೇ ಸಮಯದಲ್ಲಿ ನೀರಜಾ ಅತ್ಯಂತ ಚಾಣಾಕ್ಷತೆಯಿಂದ ಓಡಿ ಹೋಗಿ ವಿಮಾನದ ತುರ್ತು ನಿರ್ಗಮನದ ಬಾಗಿಲನ್ನು ತೆರೆಯಲು ಪ್ರಯತ್ನಿಸಿದಳು. ತೆರೆಯಲು ಅಪಾರ ಶಕ್ತಿಯ ಅವಶ್ಯಕತೆ ಇದ್ದು ಆಕೆ ಪ್ರಯಾಣಿಕರನ್ನು ಬಾಗಿಲಿನ ಕಡೆ ಜೋರಾಗಿ ತಳ್ಳುತ್ತಾ ಆ ಬಾಗಿಲಿನ ಮೂಲಕ ಹಾರಿ ಓಡಿ ತಪ್ಪಿಸಿಕೊಳ್ಳಲು ಕೂಗಿ ಹೇಳಿದಳು ಜೀವಭಯದಿಂದ ತತ್ತರಿಸಿದ ಜನರು ತುರ್ತು ನಿರ್ಗಮದ ಬಾಗಿಲಿನ ಮೂಲಕ ರನ್ ವೇ ಮೂಲಕ ಇಳಿದು ಓಡಿ ಹೋಗಲು ಪ್ರಯತ್ನಿಸಿದರು ಮತ್ತೆ ಕೆಲವರು ಬಿದ್ದು ಗಾಯಗೊಂಡರು. ಕೆಲವರಿಗೆ ಗುಂಡಿನ ಪೆಟ್ಟು ತಗುಲಿತ್ತು.. ಆದರೂ ಕೂಡ ಅವರೆಲ್ಲರೂ ಅಲ್ಲಿಂದ ತಪ್ಪಿಸಿಕೊಂಡಿದ್ದರು.ಇನ್ನೇನು ಎಲ್ಲರೂ ಅಲ್ಲಿಂದ ತಪ್ಪಿಸಿಕೊಂಡಿದ್ದಾರೆ ಎಂಬ ಹೊತ್ತಿಗೆ ನೀರಜಾಳ ಕಣ್ಣಿಗೆ ಮೂರು ಜನ ಪುಟ್ಟ ಮಕ್ಕಳು ತಮ್ಮ ಸೀಟಿಗೆ ಅಂಟಿಕೊಂಡು ಕುಳಿತು ಭಯದಿಂದ ತತ್ತರಿಸುತ್ತಿರುವುದು ಕಂಡು ಬಂತು. ಒಂದು ಕ್ಷಣ ಕೂಡ ಅಳುಕದೆ ಆಕೆ ಆ ಮಕ್ಕಳ ಬಳಿಗೆ ಓಡಿ ಹೋಗಿ ಅವರನ್ನು ಬಳಸಿ ಎತ್ತಿಕೊಂಡು ತುರ್ತು ನಿರ್ಗಮನದ ಬಾಗಿಲ ಬಳಿ ಧಾವಿಸಿ ಅವರನ್ನು ಎತ್ತಿ ಹೊರಗೆ ಹಾಕಿದಳು. ಇದನ್ನು ನೋಡುತ್ತಿದ್ದ ಉಗ್ರರು ಆ ಮಕ್ಕಳತ್ತ ಹಾರಿಸಿದ ಗುಂಡುಗಳು ನೀರಜಾಗೆ ತಗುಲಿದವು. ಆಕೆಯ ಪುಟ್ಟ ದೇಹ ರಕ್ತಸಿಕ್ತವಾಯಿತು.ಆಸ್ಪತ್ರೆಗೆ ತಲುಪುವ ಮುನ್ನವೇ 22 ವರ್ಷ 11 ತಿಂಗಳು 29 ದಿನಗಳ ಇನ್ನೇನು ಮುಂದಿನ ಎರಡು ದಿನಗಳಲ್ಲಿ ತನ್ನ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳಲಿದ್ದ ಆಕೆ ವಿಪರೀತ ರಕ್ತಸ್ರಾವದಿಂದ ಅಸು ನೀಗಿದಳು. . 20 ಜನರು ಆ ದುರ್ಘಟನೆಯಲ್ಲಿ ಮರಣ ಹೊಂದಿದರೆ ಒಟ್ಟು 359 ಪ್ರಯಾಣಿಕರು ರಕ್ಷಿಸಲ್ಪಟ್ಟರು. ದುರ್ಘಟನೆಯಲ್ಲಿ ಮರಣ ಹೊಂದಿದ ಹಾಗೂ ಬದುಕುಳಿದವರ ಸಂಖ್ಯೆಯಲ್ಲಿನ ಅಗಾಧ ವ್ಯತ್ಯಾಸದ ಅನುಪಾತವನ್ನು ನೋಡಿ ಜನ ದಿಗ್ಭ್ರಮೆಗೊಂಡರು…. ಈ ಸಮಯದಲ್ಲಿ ಎಲ್ಲರಿಗೂ ಅರಿವಾಗಿದ್ದು ನೀರಜಾಳ ಸಮಯೋಚಿತ ಆಲೋಚನೆಗಳು ಹಾಗೂ ಅವುಗಳನ್ನು ಕಾರ್ಯರೂಪಕ್ಕೆ ತರುವಲ್ಲಿನ ಪ್ರಯತ್ನ. ಅಂತಿಮ ಘಟ್ಟದಲ್ಲಿ ಪೈಲೆಟ್ ಗಳಿಗೆ ಎಚ್ಚರಿಕೆ ನೀಡಿ ಅವರು ವಿಮಾನದಿಂದ ತಪ್ಪಿಸಿಕೊಂಡು ಹೋಗುವಂತೆ ಮಾಡುವ ಮೂಲಕ ಆಕೆ ಘಟನೆಗೆ ಅತಿ ದೊಡ್ಡ ತಿರುವನ್ನು ನೀಡಿದಳು. ಅತಿ ದೊಡ್ಡ ಹತ್ಯಾಕಾಂಡವಾಗಬೇಕಿದ್ದ ದುರ್ಘಟನೆಯು ಆಕಸ್ಮಿಕ ದುರಂತದಲ್ಲಿ ಪರ್ಯವಸಾನವಾಯಿತು. ಭಾರತ ಮಾತ್ರವಲ್ಲದೆ ಪಾಕಿಸ್ತಾನ ಮತ್ತು ಅಮೆರಿಕದಲ್ಲಿ ಆಕೆಗೆ ಮರಣೋತ್ತರ ಗೌರವವನ್ನು ಸಲ್ಲಿಸಲಾಯಿತು.ಭಾರತ ದೇಶವು ಶಾಂತಿ ಸಮಯದಲ್ಲಿ ನೀಡುವ ಅತ್ಯುನ್ನತ ಗೌರವ ಪ್ರಶಸ್ತಿಯಾದ ಅಶೋಕ ಚಕ್ರ ಪ್ರಶಸ್ತಿಯನ್ನು ಮರಣೋತ್ತರವಾಗಿ ಆಕೆಗೆ ನೀಡಿ ಗೌರವಿಸಿದ್ದು, ನೀರಜಾ ಈ ಗೌರವ ಪಡೆದ ಅತ್ಯಂತ ಚಿಕ್ಕ ವಯಸ್ಸಿನ ವ್ಯಕ್ತಿ ಹಾಗೂ ಮೊದಲ ಮಹಿಳಾ ನಾಗರಿಕಳಾಗಿದ್ದಾಳೆ. ವಿಶ್ವಸಂಸ್ಥೆಯು ಆಕೆಗೆ ವಿಮಾನಯಾನ ಸುರಕ್ಷಾ ಫೌಂಡೇಶನ್ ನಾಯಕತ್ವದ ಪ್ರಶಸ್ತಿಯನ್ನು ನೀಡಿ ( ಫ್ಲೈಟ್ ಸೇಫ್ಟಿ ಫೌಂಡೇಶನ್ ಹೀರೋಯಿಸಂ ಅವಾರ್ಡ್ )ಗೌರವಿಸಿದೆ. ಇದರ ಜೊತೆಗೆ ಜಸ್ಟಿಸ್ ಫಾರ್ ಕ್ರೈಂ ಅವಾರ್ಡ್ ಪ್ರಶಸ್ತಿಯನ್ನು ನೀಡಿದೆ. ಪಾಕಿಸ್ತಾನ ಸರ್ಕಾರವು ಆಕೆಗೆ ತಂಗ ಯೇ ಇನ್ಸಾನಿಯತ್ ( ಅವಾರ್ಡ್ ಫಾರ್ ಹುಮ್ಯಾನಿಟಿ ) ಪ್ರಶಸ್ತಿಯನ್ನು ನೀಡಿ ಗೌರವಿಸಿದೆ ಆದರೆ ಇದೆಲ್ಲಕ್ಕಿಂತ ಮಿಗಿಲಾಗಿ ಆ ದಿನದ ದುರ್ಘಟನೆಯಲ್ಲಿ ರಕ್ಷಿಸಲ್ಪಟ್ಟ ಪ್ರಯಾಣಿಕರಿಂದ ಆಕೆಗೆ ದೊರೆತಿದೆ. ಅಮೆರಿಕದ ಓರ್ವ ಪ್ರಜೆ ಸನ ಶೈನ್ ವೇ ಸುವಾಲ ಎಂಬ ಹೆಣ್ಣು ಮಗಳು ತನ್ನ ಮಗಳಿಗೆ ಆಕೆಯನ್ನು ರಕ್ಷಿಸಿದ ನೀರಜಾ ಎಂಬ ಹೆಸರಿನಿಂದ ಪುನರ್ ನಾಮಕರಣ ಮಾಡಿದಳು. ಸಾಕಷ್ಟು ಜನ ಆಕೆಯನ್ನು ದೈವ ರಕ್ಷಕಿ (ಗಾರ್ಡಿಯನ್ ಏಂಜಲ್) ಎಂದು ಕರೆದರು. ಆಕೆಯಿಂದ ರಕ್ಷಿಸಲ್ಪಟ್ಟ ಮೂರು ಜನ ಮಕ್ಕಳ ಪಾಲಕರು ಆಕೆ ತನ್ನನ್ನು ತಾನು ಬಲಿಕೊಟ್ಟು ನಮ್ಮನ್ನು ಉಳಿಸಿದಳು ಎಂದು ಆಕೆಯನ್ನು ಕೊಂಡಾಡಿದರು 2016ರಲ್ಲಿ ಬಾಲಿವುಡ್ ಆಕೆಯ ಹೆಸರಿನಲ್ಲಿ ನೀರಜಾ ಎಂಬ ಚಿತ್ರವನ್ನು ನಿರ್ಮಾಣ ಮಾಡಿ ಆಕೆಯ ಕಥೆ ಲಕ್ಷಾಂತರ ಜನರಿಗೆ ತಲುಪುವಂತೆ ಮಾಡಿತು. ಏರ್ಪೋರ್ಟ್ ಗಳು, ಸ್ಕಾಲರ್ಶಿಪ್ ಗಳು ಹಾಗೂ ಪ್ರಶಸ್ತಿಗಳು ಆಕೆಯ ಹೆಸರಿನಲ್ಲಿ ನೀಡಲ್ಪಟ್ಟವು. ಇದೆಲ್ಲಕ್ಕಿಂತ ಶಾಶ್ವತವಾದ ನೆನಪನ್ನು ಕೆತ್ತಲಾಗಿದ್ದು ಯಾವುದೇ ಅಮೃತ ಶಿಲೆಯ ಇಲ್ಲವೇ ಕಂಚಿನ ಫಲಕದಲ್ಲಿ ಅಲ್ಲ ಬದಲಾಗಿ 369 ಜನ ಪ್ರಯಾಣಿಕರು ತಮ್ಮ ತಮ್ಮ ಕುಟುಂಬಗಳಿಗೆ ಮರಳಿ ದೊರೆತದ್ದು. ಇಂದಿಗೂ ಆ ಕುಟುಂಬಗಳ ಸಂತೋಷದ ಹುಟ್ಟುಹಬ್ಬ, ವಿವಾಹ ವಾರ್ಷಿಕೋತ್ಸವ ಮುಂತಾದ ಕಾರ್ಯಕ್ರಮಗಳನ್ನು ಆಚರಿಸಿಕೊಳ್ಳಲು ಕಾರಣವಾದದ್ದು ಪಾತಕಿಗಳ ವಿರುದ್ದ ನೀರಜಾಳ ಸೋಲೊಪ್ಪಿಕೊಳ್ಳದಿರುವ ಮನೋಭಾವ. ನೀರಜಾ ಭಾನೋಟ್ ಸೈನಿಕಳಾಗಿರಲಿಲ್ಲ.. ಆಕೆಗೆ ಇಂತಹ ಆಕಸ್ಮಿಕಗಳ ವಿರುದ್ಧ ಹೋರಾಡುವ ಯಾವುದೇ ತರಬೇತಿ ಇರಲಿಲ್ಲ. ಅತ್ಯಂತ ಚಿಕ್ಕ ವಯಸ್ಸಿನ ಸಾಮಾನ್ಯವಾಗಿ ವಿಮಾನ ಪರಿಚಾರಕರು ನಿರ್ವಹಿಸುವ ಕರ್ತವ್ಯದ ಬದ್ಧತೆ ಮಾತ್ರ ಆಕೆಯದಾಗಿತ್ತು….ಆದರೆ ದುಷ್ಟ ಶಕ್ತಿಗಳು ಆಕೆಯ ವಿಮಾನವನ್ನು ಏರಿದಾಗ ಆಕೆ ಅಲ್ಲಿಂದ ಓಡಿ ಹೋಗಲಿಲ್ಲ, ಅಡಗಿಕೊಳ್ಳಲಿಲ್ಲ ಬದಲಾಗಿ ಆಕೆ ಕತ್ತಲು ಮತ್ತು ಬೆಳಕಿನ ನಡುವೆ ಗೋಡೆಯಾಗಿ ನಿಂತಳು…. ಹಾಗೂ ತನ್ನ ಕೊನೆಯ ಉಸಿರಿನವರೆಗೂ ಅಚಲವಾದ ರಕ್ಷಣಾ ಗೋಡೆಯಾಗಿ ಪರಿಣಮಿಸಿದಳು ಆಕೆಯ ಮುಂದೆ ಇಡೀ ಬದುಕು ಇತ್ತು. ಪ್ರೀತಿಸುವ ತಂದೆ ತಾಯಿ ಒಡಹುಟ್ಟಿದವರ ಕಾಳಜಿ ಕೂಡ…. ಆದರೆ ಆಕೆ ತನ್ನ ಬದುಕನ್ನೇ 350ಕ್ಕೂ ಹೆಚ್ಚು ಜನ ಅಪರಿಚಿತ ಪ್ರಯಾಣಿಕರ ಭವಿಷ್ಯಕ್ಕಾಗಿ ಮುಡುಪಾಗಿಟ್ಟಳು ಅದುವೇ ಆಕೆಯ ಮಹತಿ…. ಕರ್ತವ್ಯ ಪ್ರಜ್ಞೆ ಹಾಗೂ ಶಿಸ್ತಿನ ಅತ್ಯಂತ ಶುದ್ಧವಾದ ರೂಪ ನೀರಜಾ ಈ ಜಗತ್ತಿಗೆ ನೀರಜಾ ಭಾನೋಟಿ ಏನೂ ಅಲ್ಲ ಆದರೆ ಆ 359 ಜನ ಪ್ರಯಾಣಿಕರ ಬದುಕಿಗೆ ಆಕೆಯೇ ಎಲ್ಲಾ. ಆಕೆಯಿಂದಲೇ ಅವರೆಲ್ಲ ಇಂದು ಬದುಕಿ ಬಾಳುತ್ತಿರುವುದು…… ಸಾವಿನಲ್ಲೂ ಸಾರ್ಥಕತೆ ಕಂಡವಳು ನೀರಜಾ ಆಕೆಗೆ ನಮ್ಮ ತುಂಬು ಹೃದಯದ ನಮನಗಳು ವೀಣಾ ಹೇಮಂತ್ ಗೌಡ ಪಾಟೀಲ್
“ಸಾವಿನಲ್ಲೂ ಸಾರ್ಥಕತೆ ಮೆರೆದ…ನೀರಜಾ ಭಾನೋಟ್.” ವೀಣಾ ಹೇಮಂತ್ ಗೌಡ ಪಾಟೀಲ್ Read Post »



