ಕಾವ್ಯ ಸಂಗಾತಿ
ನಾಗರಾಜ ಬಿ ನಾಯ್ಕ
“ತಕದಿಮಿತ”


ತಕದಿಮಿತ
ಎದೆಯ ಕವಿತೆಯೊಳಗೆ
ಭಾವದ ತಕದಿಮಿತ
ಮೋಡ ಮಲ್ಲಿಗೆಯ ದಾಟಿ
ಗಾಳಿ ವೀಣೆಯ ನುಡಿಸಿ
ಪಲ್ಲವಿಯ ಹಿಡಿದೆಬ್ಬಿಸಿ
ಜಗದ ಒಲವಿಗೆ
ಬಾಳುವುದ ಕಲಿಸಿ
ನಾದದಿ ಮತ್ತೆ ನಾದವಾಗಿ
ಉಲಿವ ತಕದಿಮಿತ
ಸುಳಿವ ತೇರಿನ ನೆರಳು
ಮುಂಗುರುಳ ಮಾತಾಡಿಸಿ
ಮೌನದಲಿ ಹಬ್ಬಿರುವ
ನಗೆಯ ನಗುವಾಗಿಸಿ
ಕುಣಿವಂದದ ಕುಣಿತದಿ
ಮೇಲ್ಮುಗಿಲ ತೋರಣದಿ
ಹೆಜ್ಜೆಗೊಂದು ಕರಗಳ ಹಿಡಿದು
ನಡೆ ನಂಬಿ ಬಂದ ಹಕ್ಕಿಗೆ
ಗೂಡೊಳಗೆ ಸವಿನಿದ್ದೆ
ಬೆಟ್ಟದ ತುದಿಯ
ಕಲ್ಲು ಮಂಚದ ಮೇಲೆ
ಮಲಗಿದ್ದ ಉಸಿರಿನ
ಬಡಿತವೂ ಒಂದು ತಕದಿಮಿತ
ಹೂವರಳಿ ನಿಂತಂದಕೆ
ಬೇರೊಳಗೆ ಸಂಚಲನ
ಬೇರು ಮಣ್ಣೊಳಗೆ
ಜೊತೆಗಿರುವ ಅನುಬಂಧ
ಮಾತು ಮಾತಿಗೆ
ಗೆರೆಯಾಗದ ಸಂಬಂಧ
ಗರಿಗಳ ನಡುವೆ ಬೀಸುವ
ತಂಗಾಳಿಯ ಪಿಸುಮಾತು
ಕೂಡ ಒಂದು ತಕದಿಮಿತ
ನಾಗರಾಜ ಬಿ ನಾಯ್ಕ



