ಕಾವ್ಯ ಸಂಗಾತಿ
ಡಾ ತಾರಾ ಬಿ ಎನ್
“ಸಂಕ್ರಾಂತಿ ಸಂಭ್ರಮ”


ಭಾನು ಉದಯಿಸಿ
ಕಿರಣ ಚೆಲ್ಲಿದ ದಿನ
ಶೀತದ ನೆರಳು ಸರಿದು
ಹೊಸ ಕಾಲ ಅದು
ಬೆಳೆದು ನಿಂತ ಪೈರುಗಳು
ನಗುವಿನ ಗೀತೆ ಮುಗುಳು
ಮನೆ ಮನ ತುಂಬಿತು
ಸಂಕ್ರಾಂತಿಯ ಸಂಭ್ರಮ
ಎಳ್ಳು–ಬೆಲ್ಲ ಹಂಚಿ
ಹೃದಯ ಬೆಸೆಯುವ
ಸಂಪ್ರದಾಯ,
ಕಹಿ–ಸಿಹಿಯ ಸಂಗಮವೇ
ಬದುಕಿನ ಸತ್ಯೋಪಾಯ,
ಸಂಕ್ರಾಂತಿಯ ಸಂಭ್ರಮ
“ಎಳ್ಳು ಬೆಲ್ಲ ತಿನ್ನಿ
ಒಳ್ಳೇ ಮಾತಾಡಿ” ಹಾರೈಕೆ,
ಸ್ನೇಹದ ಬೀಜ ಬಿತ್ತುವ
ಮಧುರ ಸಂಸ್ಕೃತಿಯ ಸಖ್ಯ
ಹಸಿರು ಹೊಲಗಳಲ್ಲಿ
ಕಂಗೊಳಿಸುವ ದವಸ,
ಸಂಕ್ರಾಂತಿಯ ಸಂಭ್ರಮ
ರೈತನ ಶ್ರಮಕ್ಕೆ ಸಿಕ್ಕಿತು
ಸಾರ್ಥಕ ಉತ್ಸವ,
ನೇಗಿಲು ಹಿಡಿದ ಕೈಗಳಿಗೆ
ಗೌರವದ ನಮನ,
ಅನ್ನದಾತನ ಬದುಕಿಗೆ
ಬೆಳಕಿನ ಕಿರಣ.
ಸಂಕ್ರಾಂತಿಯ ಸಂಭ್ರಮ
ಗೋ ಮಾತೆಗೂ ಹಬ್ಬ,
ಕೊಂಬುಗಳಿಗೆ ಬಣ್ಣ
ಗಂಟೆಯ ನಾದದಲ್ಲಿ
ತುಂಬಿತು ಹಳ್ಳಿ–ಹಾಡು
ಉತ್ಸಾಹದ ಆಟ–ಪಾಠ
ಸಂಕ್ರಾಂತಿ ತಂದಿತು
ಸಂಕ್ರಾಂತಿಯ ಸಂಭ್ರಮ
ಸಂಭ್ರಮದ ನೋಟ.
ಆಕಾಶದಲ್ಲಿ ಗಾಳಿಪಟ
ಬಣ್ಣದ ಬಣ್ಣದ ಕೂಟ
ಸಕ್ಕರೆ ಕಬ್ಬು ಕೈಯಲ್ಲಿ
ಕನಸ ಮನದಲ್ಲಿ,
ಸಂತಸದ ಸಿಹಿ ಬೆಲ್ಲ
ಎಲ್ಲರ ಬದುಕಿನಲ್ಲಿ.
ಸಂಕ್ರಾಂತಿಯ ಸಂಭ್ರಮ
ಸೂರ್ಯನಿಗೆ ನಮಿಸಿ
ಹೊಸ ದಾರಿಗೆ ಪಯಣ
ಭವಿಷ್ಯ ಕಟ್ಟುವೆವು, ಪಣ
ಒಗ್ಗಟ್ಟಿನ ಸಂದೇಶ ಸಾರುವ
ಪುಣ್ಯದ ಹಬ್ಬ,
ಸಂಕ್ರಾಂತಿ , ಸಂಸ್ಕೃತಿ
ಸಂಭ್ರಮ, ಸೌಭಾಗ್ಯ
ಸಂಕ್ರಾಂತಿಯ ಸಂಭ್ರಮ.
ಡಾ ತಾರಾ ಬಿ ಎನ್



