ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಗಿಲ್ಲಿ ನಟ ಗೆದ್ದಿದ್ದಾರೆ. ದಡದಪುರದ ಹಳ್ಳಿಯ ರೈತಾಪಿ ಕುಟುಂಬದ ಹುಡುಗ ಗೆಲುವಿನ ದಡ ಸೇರಿದ್ದಾರೆ. ಗಿಲ್ಲಿ ಗೆಲುವನ್ನು ಹಾಗೆ ಮೆಲುಕು ಹಾಕುತ್ತಾ ಹೋದೆ. ಹಲವು ಸಿನಿಮಾ ದೃಶ್ಯಗಳು ನೆನಪಾದವು. ಸಿನಿಮಾ ಕಥೆಗೂ ಬಾಸ್ ಬಾಸ್ ಶೋಗೂ ವ್ಯತ್ಯಾಸ ಇದೆ. ಅಂತೆಯೇ ಸಾಮ್ಯತೆಯೂ ಇದೆ. ಆದರೂ ಟಿವಿ ವೀಕ್ಷಕರಾದ ನಮಗೆ ಎರಡೂ ಒಂದೇ. ಸಿನಿಮಾದಲ್ಲಿ ಕಟ್ ಅಂಡ್ ಆಕ್ಷನ್ ಇರುತ್ತದೆ. ಇಲ್ಲಿ ಇರುವುದಿಲ್ಲ ಅಷ್ಟೇ. ನಮ್ಮ ಬಾಲ್ಯ ಜೀವನದಲ್ಲಿ ಟಿವಿ ಇರಲಿಲ್ಲ. ಆಗೆಲ್ಲಾ ನಮಗೆ ಮನರಂಜನೆ ನೀಡುತ್ತಿದ್ದಿದ್ದು ಸಿನಿಮಾಗಳೇ. ಗಿಲ್ಲಿಯಂತೆ ಸಿನಿಮಾ ನೋಡುವ ಚಟಕ್ಕೆ ಬಿದ್ದು ಓದಿನಲ್ಲಿ ಹಿಂದೆ ಬಿದ್ದು ಜಸ್ಟ್ ಪಾಸ್ ಸ್ಟೂಡೆಂಟ್‌ಗಳು ನಾವು. ಸಿನಿಮಾವೊಂದರಲ್ಲಿ ಪ್ರೇಮಕತೆಯನ್ನು ಕೇಂದ್ರವಾಗಿಸಿ ಪೋಷಕ ಪಾತ್ರಗಳಿಂದ ಸಾಂಸರಿಕ ಕಥೆಯನ್ನು ಹೆಣೆಯಲಾಗುತ್ತ ಬಂದಿರುವುದನ್ನು ಕಾಣಬಹುದು. ಒಬ್ಬ ಹೀರೋನನ್ನು ಸೃಷ್ಟಿಸುವವಳು ಹೀರೋಯಿನ್. ಪ್ರೇಮಕಾವ್ಯದ ಹಾಡುಗಳು, ಮರ ಸುತ್ತವ ಪ್ರೇಮಿಗಳು, ಇವರ ಹಾಡು ನೃತ್ಯದ ದೃಶ್ಯಗಳಿಗೆ ಹಿನ್ನಲೆಯಲ್ಲಿ ಪ್ರಕೃತಿ ಸಿರಿಯ ಸೊಬಗನ್ನು ಸೆರೆ ಹಿಡಿಯುವುದು ಸಿನಿಮಾದ ಒಂದು ಭಾಗ. ಇಲ್ಲಿ ನಾವು ಪುಟ್ಟಣ ಕಣಗಾಲ್‌ರನ್ನು ನೆನೆಯಲೇ ಬೇಕು. ಒಳ್ಳೆಯ ಹೀರೋ ಎನಿಸಿಕೊಳ್ಳಬೇಕಿದ್ದರೆ ಅವನೆದರು ವಿಲನ್ ಇಲ್ಲವಾದರೇ ಹೀರೋ ಜೀರೋ ಹೌದಷ್ಟೇ. ಇದಷ್ಟೇ ಆದರೆ ಸಿನಿಮಾ ರಂಜಿಸುವುದೇ..? ಇಲ್ಲಾ ಅಲ್ಲೊಬ್ಬ ಗಿಲ್ಲಿ ನಟನಂತಹ ಹಾಸ್ಯ ನಟ ಇರಬೇಕು. ಈ ಫಾರ್ಮುಲಾಗಳಲ್ಲೇ ಸಿನಿಮಾ ರೀಲು ಸುತ್ತಿಕೊಂಡು ಬಂದಿವೆ. ಇಂತಹ ಫಾರ್ಮುಲಾಗಳು ಬಿಗ್ ಬಾಸ್‌ನಲ್ಲಿ ಗೋಚರಿಸುತ್ತವೆ. ಇಲ್ಲಿಯ ಲವ್ ತರಹದ ಸ್ಟೋರಿ ರೆಡಿಮೇಡ್ ಅಗಿರಲಿಲ್ಲಾ. ಆದರೂ ಜನರಿಗೆ ಇಷ್ಟವಾಯ್ತು. ರಾಜಕುಮಾರ್ ಭಾರತಿ ಅಭಿನಯದ ಬಂಗಾರದ ಮನುಷ್ಯ ಭಲೆ ಜೋಡಿ ಸಿನಿಮಾ ನೋಡಿದಂತಾಯಿತು. ಸಂಪತ್ತಿಗೆ ಸವಾಲ್ ಸಿನಿಮಾದಲ್ಲಿ ಜಗಳಗಂಟಿ ಮಂಜುಳ ಮತ್ತು ರಾಜಕುಮಾರ್ ನಟನೆಯನ್ನು ನೆನಪಿಸಿದ್ದು ಗಿಲ್ಲಿನಟ ಅಶ್ವಿನಿಗೌಡರ ಜಗಳದ ಜುಗಲ್‌ಬಂದಿ. ಗಿಲ್ಲಿ ರಘು ಜೋಡಿ ಸಾಧು ಕೋಕಿಲ ದೊಡ್ಡಣ್ಣರ ಹಾಸ್ಯ ಜೋಡಿ ಎನಿಸಿತು. ಇನ್ನೂ ಮಕ್ಕಳಿಗೆ ಟಾಮ್ ಅಂಡ್ ಜರ‍್ರಿ ಕಾರ್ಟೂನ್ ಫಿಲಂ ನೋಡಿದಷ್ಟೇ ಖುಷಿ. ಗಿಲ್ಲಿ ಎಂಬ ಎರಡಕ್ಷರದ ಹೆಸರು ಮಕ್ಕಳ ನಾಲಿಗೆಯಲ್ಲಿ ನಲಿಯಿತು. ರಕ್ಷಿತಾಶೆಟ್ಟಿ ಗಿಲ್ಲಿ ನಡುವಿನ ಬಾಂಧವ್ಯ ಸಿನಿಮಾ ಕಥೆಯ ಅಣ್ಣ ತಂಗಿಯರಂತೆ ಗೋಚರಿಸಿತು. ರಾಜಕುಮಾರ್ ಅಭಿನಯದ ಮೇಯರ್ ಮುತ್ತಣ್ಣ ಸಿನಿಮಾದಲ್ಲಿ ಜಡೆಯಂತೆ ಕೂದಲು ಬಿಟ್ಟ ಮುತ್ತಣ್ಣನನ್ನು ಊರು ಬಿಟ್ಟು ಓಡಿಸಲಾಗುತ್ತಿದೆ. ಮುತ್ತಣ್ಣ ಬೆಂಗಳೂರಿಗೆ ಬಂದು ಮೇಯರ್ ಆದಂತೆ ಗಿಲ್ಲಿ ವಿನರ್ ಆಗಿದ್ದಾರೆ. ಅಲ್ಲಿ ಭಾರತಿ ಮುತ್ತಣ್ಣನ ಜಡೆ ಕಟ್ ಮಾಡಿದರೆ ಇಲ್ಲಿ ಕಾವ್ಯ ಶೈವ ಗಿಲ್ಲಿಗೆ ತಲೆ ಬಾಚಿಕೊಳ್ಳಲು ಬಾಚಣಿಕೆ ಪ್ರಸೆಂಟ್ ಮಾಡುತ್ತಾರೆ. ಆದರೂ ತಲೆ ಬಾಚಿಕೊಳ್ಳದೇ ಇದ್ದಾಗಲೇ ಗಿಲ್ಲಿ ಚೆನ್ನಾಗಿ ಕಾಣಿಸುತ್ತಿದ್ದರು ಎಂದಿತು ಒಂದು ಹುಡುಗಿ. ಆಗಿನ ವಿಲನ್ ನಾಗಪ್ಪನಂತೆ ವೀಕ್ಷಕರಿಗೆ ಗೋಚರಿಸಿದ್ದು ಧ್ರುವಂತ್. ಬಂಗಾರದ ಪಂಜರ ಸಿನಿಮಾದಲ್ಲಿ ಕುರಿ ಕಾಡು ಹಳ್ಳಿಯ ಬದುಕಿನೊಂದಿಗೆ ಹೊಂದಿಕೊಂಡ ಪಾತ್ರ ನಗರಕ್ಕೆ ಬಂದು ಎಷ್ಟೇ ಶ್ರೀಮಂತಿಕೆ ಐಷರಾಮಿ ಬದುಕು ಇದ್ದರೂ ಹೊಂದಿಕೊಳ್ಳಲಾಗದೇ ಹಳ್ಳಿಯ ಬದುಕೇ ನನಗಿಷ್ಟ ಎಂದು ಒದ್ದಾಡುತ್ತದೆ. ಬಂಗಾರದ ಪಂಜರದಲ್ಲಿ ಕೂಡಿ ಹಾಕಿದಂತೆ ಬಿಗ್ ಬಾಸ್ ಮನೆಯಲ್ಲೂ ಕೂಡಿ ಹಾಕಿ ಒಂದಿಷ್ಟು ಟಾಸ್ಕ್ ನೀಡಿ ಉಳಿದಂತೆ ಅಲ್ಲಿ ನಡೆಯುವ ಗಲಾಟೆ ಗದ್ದಲ, ವಿರಸ ಸರಸ ಸಲ್ಲಾಪ ದೃಶ್ಯಗಳನ್ನೇ ಹೆಕ್ಕಿ ತೆಗೆದು ತೋರಿಸಲಾಗುತ್ತದೆ. ನಾವಾದರೂ ಅಷ್ಟೇ ಒಂದು ಒಳ್ಳೆಯ ಭಾಷಣ ಇದೆ ಕೇಳಲು ಬನ್ನಿ ಎಂದರೆ ಬರುವರೇ ? ಅದೇ ಎಲ್ಲಾದರೂ ಜಗಳ ನಡೆಯುತ್ತಿರಲಿ ಅದನ್ನು ನಿಂತು ನೋಡುವವರೇ ಹೆಚ್ಚು. ಜಗಳ ಮನುಷ್ಯನನ್ನು ಕುತೂಹಲದಿಂದ ಆಕರ್ಷಿಸುವುದು ಇದಕ್ಕೆ ಕಾರಣ. ಹಳ್ಳಿಯ ಅರಳಿಕಟ್ಟೆಯಲ್ಲಿ ಊರಿನ ಜಗಳ ವಿಷಯ ಚರ್ಚೆಗೆ ಬರುವುದು ಸರ್ವೆ ಸಾಮಾನ್ಯ. ಸೀರಿಯಸ್ ಆದ ಜಗಳದ ವಿಷಯವನ್ನು ವಿಡಂಬಿಸಿ ಹೇಳುವುದು ಒಂದು ಕಲೆ. ಅದು ಸಮಯಪ್ರಜ್ಞೆ. ತಮಾಷೆಯಾಗಿ ಮಾತನಾಡುವ ವ್ಯಕ್ತಿಯ ಸುತ್ತಾ ಜನ ಸೇರಿ ನಗುವುದು ಸಹಜವೇ. ಮನೆ ಜಗುಲಿಯಲ್ಲಿ ಹೆಂಗಸರು ಅವರಿವರ ಮನೆ ವಿಷಯ ಮಾತನಾಡಿಕೊಳ್ಳುತ್ತಾ ಅವರೆಕಾಯಿ ಸುಲಿಯುತ್ತಿರುವುದನ್ನು ನೋಡುವುದಿಲ್ಲವೇ? ಹಿಂದೆ ನಾನೊಂದು ಹನಿಗವನ ಬರೆದಿದ್ದೆ.
ನಮ್ಮೂರಿನ ಕೆಲ ಹೆಂಗಸರು
ಕಟು ವಿಮರ್ಶಕರು
ದಿನ ಚಾವಡಿಯಲ್ಲಿ
ನೆರೆಮನೆ ಕತೆಯನ್ನು
ಕಟುವಾಗಿ ವಿಮರ್ಶಿಸುತ್ತಿರುತ್ತಾರೆ
ಹಾಸ್ಯವಾಗಿ ಮಾತನಾಡುವುದು ಒಂದು ಕಲೆಗಾರಿಕೆ. ಇನ್ನೊಬ್ಬರ ನಡೆನುಡಿಯನ್ನು ಅನುಕರಿಸಿ ಅಣಕಿಸಿ ಮಿಮಿಕ್ರಿ ಮಾಡುವುದು ನೋಡಿದ್ದೇವೆ. ಅದು ಒಂದು ಕಲೆ. ಹಾಸ್ಯದ ಒಂದು ಪ್ರಕಾರ. ಇದು ಗಿಲ್ಲಿಯಲ್ಲಿದ್ದ ಒಂದು ಗುಣ ಲಕ್ಷಣ. ಅವರ ಮುಖವಾಡವಿಲ್ಲದ ಗ್ರಾಮೀಣ ಭಾಷೆ ನಡೆನುಡಿ ಗ್ರಾಮೀಣ ಜನರಿಗೆ ಇಷ್ಟವಾಯಿತು. ಪ್ರಾರಂಭದಲ್ಲಿ ನಾನು ಬಿಗ್ ಬಾಸ್ ನೋಡದೇ ಮಲಗಿಬಿಡುತ್ತದೆ. ಒಂಬತ್ತೂವರೆಗೆ ಮಲಗುವುದು ನನ್ನ ದಿನಚರಿ. ಐದಾರು ವಾರಗಳ ನಂತರ ನಿಧಾನವಾಗಿ ನೋಡುತ್ತಾ ಕಡೆಕಡೆಗೆ ಪೂರ್ತಿ ನೋಡಿಯೇ ಮಲಗುತ್ತಿದ್ದೆ. ಗಿಲ್ಲಿಯ ಸುತ್ತಲೇ ಕ್ಯಾಮರಗಳು ಗಿರಕಿ ಹೊಡೆಯಲು ಗಿಲ್ಲಿನಟನ ಹಾಸ್ಯಪ್ರಜ್ಞೆಗೆ ಆಕರ್ಷಿತನಾದೆ. ಸಾಮಾಜಿಕ ಜಾಲ ತಾಣಗಳಲ್ಲಿ ಗಿಲ್ಲಿ ಗೆಲ್ಲುವ ಮಾತು ಜೋರಾಗಿ ಅವರ ಹಿಂದಿನ ಕಾಮಿಡಿ ಶೋ ಶಾರ್ಟ್ ಫಿಲಂಗಳನ್ನು ನೋಡಿದೆ. ಎಲ್ಲೋ ಒಂದು ಕಡೆ ನರಸಿಂಹರಾಜು, ಮಿಸ್ಟರ್ ಬೀನ್, ಚಾರ್ಲಿ ಚಾಪ್ಲಿನ್, ಸಾಧು ಕೋಕಿಲರ ಹಾಸ್ಯಾಭಿನಯ ಸ್ಮರಿಸಿ ಅವೆಲ್ಲವೂ ಗಿಲ್ಲಿ ನಟನೆಯಲ್ಲಿ ಗೋಚರಿಸಿದವು. ಒಂದು ಕಾಲದಲ್ಲಿ ನಮ್ಮ ಹಳ್ಳಿಗೆ ತೊಗಲುಗೊಂಬೆ ಮೇಳದವರು ಬಂದು ಮನರಂಜನೆ ನೀಡುತ್ತಿದ್ದರು. ಊರಲ್ಲಿ ಜಾತ್ರೆ ಹಬ್ಬಕ್ಕೆ ಹುಡುಗರು ನಾಟಕ ಕಲಿಯುತ್ತಿದ್ದರು. ಕಲಿಯುವುದಕ್ಕೆ ಮೂರು ತಿಂಗಳು ಊರಲ್ಲಿ ಮನರಂಜನೆ. ನಂತರ ಸಿದ್ಧತೆ ಪ್ರದರ್ಶನದ ಸಂತೋಷದ ಕ್ಷಣಗಳನ್ನು ವರ್ಷವಿಡಿ ನೆನಪಿಸಿಕೊಳ್ಳುತ್ತೇವೆ. ನಾಟಕ ಅಂದು ದೊಡ್ಡ ಮನರಂಜನೆ. ನಾಟಕ ರಂಗದಿಂದಲೇ ಬಂದ ಕಲಾವಿದರು ಸಿನಿಮಾ ರಂಗದಲ್ಲಿ ಪ್ರಸಿದ್ಧರಾದರು. ಆದರೆ ಸಿನಿಮಾವೇ ನಾಟಕಕ್ಕೊ ದೊಡ್ಡ ತೊಡಕಾಯಿತು. ಟಿವಿ ಮನೆಗೆ ಬಂತು. ಬಿಟ್ಟಿ ಸಿನಿಮಾ ಮನೆಯಲ್ಲೇ ನೋಡುವಾಗ ದುಡ್ಡು ಕೊಟ್ಟು ನೋಡಲು ಜನ ಥಿಯೇಟರ್‌ಗೆ ಬರುತ್ತಿಲ್ಲ. ನ್ಯೂಸ್ ಚಾನಲ್‌ಗಳು ಮಹಿಳೆಯರಿಗೆ ಪ್ರಿಯವಾಗದೇ ಧಾರಾವಾಹಿಗೆ ಮೊರೆಹೋದರು. ಧಾರಾವಾಹಿ ಕಲಾವಿದರು ಬಿಗ್‌ಬಾಸ್‌ಗೆ ಬಂದರು. ಇವರಿಗೆ ಪ್ರತಿಸ್ಫರ್ಧಿಗಳಾಗಿ ಮಾತಿನ ಮಲ್ಲರು, ಸಾಮಾಜಿಕ ಜಾಲತಾಣದ ಜಾಣರು, ಗಾಯಕರು ಮಿಕ್ಸಿಂಗ್ ಆದರು. ಉಪ್ಪು, ಕಾರ, ಹುಳಿ, ಬೆಳ್ಳುಳ್ಳಿ ಬೆರೆತು ರುಚಿಯಾದ ಊಟ ಅಡಿಗೆ ಮನೆ ಬೆಳಕಿಗೆ ಬಂತು. ನಲ್ಲಿ ಮೂಳೆ ತಿಂದು ಗಿಲ್ಲಿ ಗೆದ್ದರು. ಜಾಣ ವಿದ್ಯಾರ್ಥಿಯಂತೆ ಯಾರ ತಂಟೆಗೂ ಹೋಗದೆ ಟಾಸ್ಕ್ನಲ್ಲಿ ಫಸ್ಟ್ ಕ್ಲಾಸ್ ಬಂದರೂ ಧನುಷ್ ವೀಕ್ಷಕರ ಹೃದಯ ಗೆಲ್ಲಲು ವಿಫಲರಾದರು. ಗಿಲ್ಲಿ ಗೆಲುವಿಗೆ ಕಾವ್ಯ ಶೈವ, ಅಶ್ವಿನಿಗೌಡ, ರಘು, ರಕ್ಷಿತ ಶೆಟ್ಟ ಮತ್ತು ರಜತ್ ಅವರ ಪಾತ್ರ ಅದು ನೆಗಟಿವ್ ಆಗಿರಲಿ ಪಾಸಿಟಿವ್ ಆಗಿರಲಿ ಪರೋಕ್ಷವಾಗಿ ನೆರವಾಗಿದೆ. ಅದು ಒಂದು ಧಾರವಾಹಿಯಂತೆ, ಸಿನಿಮಾದಂತೆ ಜನರಿಗೆ ಮನರಂಜನೆ ನೀಡಿದೆ. ಮೊದಲೇ ಪರೀಕ್ಷೆಗೆ ಸಿದ್ಧವಾಗಿ ಬಂದಿದ್ದ ಗಿಲ್ಲಿನಟ ಸಂದರ್ಭ ಸನ್ನಿವೇಶಗಳನ್ನು ತಮ್ಮ ಅನುಕೂಲಕ್ಕೆ ಸೂಕ್ತವಾಗಿ ಬಳಸಿಕೊಂಡು ಹಾಸ್ಯ ವಿಡಂಬನೆ ಮಾತಿನಿಂದಲೇ ಜನಮನ ಗೆದ್ದರು.


About The Author

Leave a Reply

You cannot copy content of this page

Scroll to Top