ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ನಾನು ಮತ್ತೆ ಮತ್ತೆ ಏನನ್ನಾದರೂ ಬರೆಯಲೇಬೇಕು ಎಂದುಕೊಂಡಾಗಲೆಲ್ಲ.., ಬರಿಲಿಕ್ಕೇನಿದೆ? ಎಂಬ ಪ್ರಶ್ನೆ ಧುತ್ತೆಂದು ಕಣ್ಮುಂದೆ ಬಂದು ನಿಲ್ಲುತ್ತದೆ! ಈಗಾಗಲೇ ಸಾಕಷ್ಟು ಜನ ಬರೆದು-ಹೊಟ್ಟೆ ಹೊರೆದು ಹಾಕಿದ್ದು ಎದುರಿಗೆ ಗುಡ್ಡೆಬಿದ್ದಿರುವಾಗ ನಾನಿನ್ನೂ ಓದೋದು ಬಾಳಷ್ಟಿದೆ ಅನಿಸುವ ಹೊತ್ತಲೇ ನನ್ನ ಆತ್ಮೀಯರಲ್ಲೋರ್ವರು ಯಾವುದೋ ಸಮಯ-ಸಂದರ್ಭದ ನಿಮ್ಮಿತ್ತ ಲೇಖನವೊಂದನ್ನು ಬರೆದುನೀಡುವಂತೆಯೂ, ಹಾಗೆನೇ ವಿಷಯವಸ್ತುವೊಂದನ್ನು ಸೂಚಿಸಿದರು ಕೂಡ; ಉದಾ: ಬೇಂದ್ರೆ ಸಾಹಿತ್ಯದಲ್ಲಿ ಸ್ತ್ರೀ ಎಂದಿಟ್ಟುಕೊಳ್ಳೋಣ. ಇಲ್ಲಿ ಬೇಂದ್ರೆ ಎಂಬ ಹೆಸರನ್ನು ತೆಗೆದು ಕನ್ನಡದ ಖ್ಯಾತನಾಮ ಯಾವೊಬ್ಬ ಕವಿ-ಸಾಹಿತಿಯ ಹೆಸರು ಸೇರಿಸಿದರೂ ಸರಿಯೆ! ಪತ್ರಿಕಾ ವರದಿ, ದತ್ತಕಾರ‍್ಯ ರೂಪದ, ಅಕಾಡೆಮಿಕ್ ರೀತೀಯಲ್ಲಿ ಸಂಶೋಧನಾ ಲೇಖನಗಳನ್ನು ಯಾರೂ ಕೂಡ ಬರೆಯಬಹುದೆಂದು ಯೋಚಿಸುತ್ತಿರುವಾಗಲೇ.., ಒಂದು ಸಾಮಾನ್ಯ ಸರಳ ಸೂತ್ರವೆಂಬಂತೆ – ತಾಯಿ, ಪ್ರೇಯಸಿ, ಗೃಹಿಣಿ, ಮೃದು ಸ್ವಭಾವ, ಮಮತೆ ಮತ್ತು ವಾತ್ಸಲ್ಯದ ಪ್ರತಿರೂಪದ, ಗುಣವತಿ, ಸಹನಶೀಲೆ, ಕ್ಷಮಯಾ ಧರಿತ್ರಿ, ದೈವೀಶಕ್ತಿರೂಪಿಣಿ ಎಂಬ ಸ್ತ್ರೀರೂಪಗಳು ಎಲ್ಲ ಕಾಲ ಮತ್ತು ಕವಿ-ಸಾಹಿತ್ಯದಲ್ಲೂ ಕಂಡುಬರುವಂತಹ ಗಮನೀಯ ಅಂಶಗಳು ಎಂದೆನ್ನಬಹುದೇ? ಇಲ್ಲವೇ ಸ್ತ್ರೀ ವಾಸ್ತವ ಬದುಕಿನ ಅನಾವರಣ-ಚಿತ್ರಣವೆಂದೆನ್ನಬಹದೇ?
ಚಾರ್ಲ್ಸ್ ಡಾರ್ವಿನ್‌ನ ಸಿದ್ಧಾಂತದನ್ವಯ ಆದಿಮಾನವನಿಂದ್ಹಿಡಿದು ಆಧುನಿಕ ಮತ್ತು ಆಧುನಿಕೋತ್ತರ ಮಾನವನ ಜೀವವಿಕಸನದ ಹಾದಿಯನ್ನೊಮ್ಮೆ ಸಿಂಹಾವಲೋಕನ ಕ್ರಮದಿ ಗ್ರಹಿಸಿದಾಗ ಮಾತು ಮತ್ತು ಬುದ್ಧಿಬಲದ ದೆಸೆಯಿಂದ ಪ್ರಾಣಿಪ್ರಪಂಚದಿಂದ ಭಿನ್ನವೆನಿಸಿಕೊಂಡು ಮುನ್ನಡೆಯ ಹಾದಿಯಲ್ಲಿ ಜೈವಿಕ ಆಧಾರದಿ ಗಂಡು-ಹೆಣ್ಣೆಂಬ ಭೇದ, ಬಲಿಷ್ಠರು-ಅಶಕ್ತರು ಎಂಬ ವರ್ಗ ಸಂಘರ್ಷದಿ ಮೇಲೂ-ಕೆಳಗೂ, ಕೆಳಗೂ-ಮೇಲಾಗಿ ಸಾಗುತ್ತಲೇ ಸಂಘಜೀವಿ ಮನುಷ್ಯ ಸುತ್ತಣ ತನ್ನದೇ ಆದ ಗುಂಪು ಅಥವಾ ಸಮುದಾಯ ಅದಕ್ಕೊಂದು ಆಚಾರ-ವಿಚಾರ, ರೀತಿ-ನೀತಿ-ನಿಯಮಗಳೆಂಬ [ವಿವಾಹ, ಕುಟುಂಬ, ಜಾತಿ, ಮತ, ಧರ್ಮ] ಸಾಮಾಜಿಕ ಚೌಕಟ್ಟನ್ನು ನಿರ್ಮಿಸಿಕೊಂಡ; ಈ ಚೌಕಟ್ಟಿನೊಳಗಡೆ ಸ್ತ್ರೀ ತನಗೊದಗಿದ ಪಾತ್ರಗಳನ್ನು ಅತ್ಯಂತ ಮನೋಜ್ಞವಾಗಿ ಅನುಭವಿಸುತ್ತ.., ಅಭಿನಯಿಸುತ್ತ ತನ್ನ ಬದುಕಿನ ಪಾಡನ್ನೇ ಹಾಡನ್ನಾಗಿಸಿ ಹಾಡುತ್ತ ಹೆಜ್ಜೆಯ ಹಿಂದೆ ಹೆಜ್ಜೆಯ ಗೆಜ್ಜೆನಾದವಗೈಯುತ ಸಾಗುತ್ತಲೇ ಗಂಡಿನ ಅವಜ್ಞೆಗೆ ಗುರಿಯಾದಳೆಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ.
ಈ ಅವಜ್ಞೆಯ ದೆಸೆಯಿಂದಾಗಿಯೇ ಸ್ತ್ರೀ ಮನುಕುಲ-ವಂಶೋದ್ಧಾರದ ತಂತ್ರವಾಗಿಯೂ, ಮಕ್ಕಳನ್ನು ಹೆರುವ ಯಂತ್ರವಾಗಿಯೂ, ಬೋಗ-ಲಾಲಸೆಯ ವಸ್ತುವಾಗಿಯೂ, ಬಿಕರಿಯ ಸರಕಾಗಿಯೂ; ಬಾಲ್ಯ, ಯವ್ವೌನ ಮತ್ತು ಮುಪ್ಪನ್ನು ಕ್ರಮವಾಗಿ ತಂದೆ-ಗಂಡ ಮತ್ತು ಮಕ್ಕಳ ಸಂರಕ್ಷಣೆಯಲ್ಲಿಯೇ ಬಾಳಿ ಬದುಕಬೇಕಾದ ದುಸ್ಥಿತಿಯನ್ನು ತಲುಪಿದ ಸಂದರ್ಭ – ವಚನ ಮತ್ತು ದಾಸ ಸಾಹಿತ್ಯದ ಜ್ಞಾನಪ್ರಕಾಶದಿ ಅಂದಕಾರವ ಕಳೆದು ಬೆಳಕಿನ ಯುಗಾದಿಯೆಡೆಗೆ ಪಯಣಿಸಿ.., ನವ್ಯ, ನವೋದಯ, ಪ್ರಗತಿಶೀಲ, ದಲಿತ ಮತ್ತು ಬಂಡಾಯ, ತರುವಾಯ ಅಸ್ಮಿತೆಯ ಕುರುಹಾಗಿ ಬೆಳೆದುಬಂದ ಸ್ತ್ರೀವಾದಿ ಸಾಹಿತ್ಯ ಇತ್ಯಾದಿ ಪ್ರಕಾರಗಳು ಬೆಳೆದುಬಂದದ್ದು ಕಣ್ಮುಂದಿನ ಇತಿಹಾಸ.
ಕನ್ನಡ ಭಾಷೆ ಮತ್ತು ಸಾಹಿತ್ಯದ ಸಂದರ್ಭದಿ ಸ್ತ್ರೀ-ಹೆಣ್ಣನ್ನು ನೋಡುವುದಾದರೆ.., ಮುಖ್ಯವಾಗಿ ಹೆಣ್ಣನ್ನು ಪುರುಷ ಅಥವಾ ಪುರುಷ ಪ್ರಧಾನ ಸಮಾಜ ಕಂಡಿರುವ ದೃಷ್ಟಿ, ಹೆಣ್ಗಳ್ಳಿನ ಪುರುಷ ಹೆಣ್ಣನ್ನು ಕಂಡಿರುವ ದೃಷ್ಟಿ, ಹೆಣ್ಣನ್ನು ಹೆಣ್ಣು ಕಂಡಿರುವ ದೃಷ್ಟಿ ಎಂದು ಈ ಮೂರು ಆಯಾಮಗಳಲ್ಲಿ ಅವಲೋಕಿಸುವುದು ಉತ್ತಮ ಮಾರ್ಗವಾದೀತು ಎಂದು ನನಗನಿಸುತ್ತೆ. ನಾವು ಹೀಗೆ ಆಲೋಚಿಸುವಾಗ ಜನ್ಮದತ್ತವಾಗಿ ವರವಾಗಿಯೋ ಶಾಪವಾಗಿಯೋ ನಮಗಂಟಿಕೊಂಡು ಬಂದಿರುವ ಪೂರ್ವಾಗ್ರಹಗಳು ಯಾವುದೇ ಒಂದು ವಸ್ತು-ವಿಷಯ-ಸಂಗತಿಯ ಕುರಿತಾಗಿ ಕೇಳುವಾಗ, ಮಾತನಾಡುವಾಗ, ಓದುವಾಗ, ಬರೆಯುವಾಗ; ಚರ್ಚಿಸಲು, ತರ್ಕಿಸಲು, ವಿಶ್ಲೇಷಿಸಲು ತೊಡಗಿದಾಗ ಶೂನ್ಯದಿಂದ ಏನನ್ನೂ ಸೃಷ್ಟಿಸಲಾಗದು ಎಂಬ ಮಾತಿಗೆ ಮಣೆಹಾಕುತ್ತ.., ಹಲ-ಕೆಲವು ಪೂರ್ವಾಗ್ರಹಗಳನ್ನು ಹೊತ್ತುಕೊಂಡೇ ಮುನ್ನಡೆಯುತ್ತೇವೆ; ನೀವು ಏನೇ ಮಾತಾಡಿದರೂ ಆ ಮಾತಿನ ಲಯ ಮತ್ತು ದಾಟಿ, ಏನೇ ಬರೆದರೂ ಆಬರಹದ ಓಘ ಅಥವಾ ಶೈಲಿಯಿಂದಲೇ ಎಡ-ಬಲ-ಮಧ್ಯಂತರಗಳೆಂಬ ಕವಲಿಗೆ ಸಿಕ್ಕಿಹಾಕಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ. ಈ ಒಂದು ಖಯಾಲಿಯಿಂದ ಹೊರಬಂದರೇ ಮಾತ್ರ ಈ ಮೂರು ಆಯಾಮಗಳಲ್ಲಿ ಸ್ತಿçÃಯನ್ನು ಸಮಗ್ರವಾಗಿ ಗ್ರಹಿಸಬಹುದು ಎಂಬುದು ನನ್ನ ಮನದಿಂಗಿತವಾಗಿದೆ.

ಹೆಣ್ಣನ್ನು ಪುರುಷ ಅಥವಾ ಪುರುಷ ಪ್ರಧಾನ ಸಮಾಜ ಕಂಡಿರುವ ದೃಷ್ಟಿ:
ಅನುಕೂಲ ಮತ್ತು ಅನನಕೂಲ, ಸಮ್ಮತಿ-ಅಸಮ್ಮತಿಯ ಹಿನ್ನಲೆಯಲ್ಲಿ ಹೆಣ್ಣು ಒಲಿದರೆ ನಾರಿ ಮುನಿದರೆ ಮಾರಿ, ಹೆಣ್ಣಿಗೆ ಹಣ್ಣೇ ಶತ್ರು, ಎರಡು ಜಡೆಯನ್ನು ಕೂಡಿಸಲಾಗದು, ಹೆಣ್ಮಕ್ಕಳ ಬುದ್ಧಿ ಮೊಣಕಾಲ ಕೆಳಗೆ ಎಂದು ಜರೆಯುವ, ಹೆಣ್ಣು ಗಂಡಿನ ಬಾಳಿಗೆ ಕಣ್ಣಾಗುವ ಅದೇ ಹೆಣ್ಣು ಹುಣ್ಣಾಗುವ ಇಬ್ಬದಿತನದ ಧೋರಣೆಯ ಪೂರ್ವಾಗ್ರಹಗಳಿಂದ, ಕಣ್ಣಿಗೆ ಮಣ್ಣೆರೆಚುವ ಮಾತುಗಳ ಪ್ರೇರೇಪಣೆಯಿಂದ ನೋಡಿದಾಗ; ತಾಯಿಯಾದವಳು ಮಗ-ಸೊಸೆಯನ್ನು, ಮಗಳು-ಅಳಿಯನನ್ನು ಕಾಣುವ ಬಗೆ, ಅತ್ತೆ ಒಡೆದ ಕಂಚಿಗೆ ಬೆಲೆಯಿಲ್ಲ ಎಂಬ ಮನೋಧೋರಣೆ, ಅದೇ ಸೊಸೆ – ಅತ್ತೆ-ಮಾವ-ನಾದಿನಿ-ಮೈದುನನ್ನು ಕಾಣುವ ಬಗೆಗೂ ಅದೇ ತನ್ನ ಅಣ್ಣ-ತಮ್ಮ, ಅಕ್ಕ-ತಂಗಿಯರನ್ನು ಕಾಣುವ ಬಗೆಗೂ ತುಂಬ ವ್ಯತ್ಯಾಸವನ್ನು ಕಾಣಬಹುದು. ಅಂಗೀಯ ಮ್ಯಾಲಂಗಿ ಚಂದೇನೋ ನನ ರಾಯ ಎಂಬ ಗರತಿಯು ಸವತಿಯನ್ನು ಕಾಣುವ ಬಗೆ, ಗಂಡನಾದವನು ಮತ್ತೊಬ್ಬಾಕೆಯ ಸಂಗಡದಲ್ಲಿರುವುದನ್ನು ತಿಳಿದು ಆಕೆಯನ್ನು ಕಾಣುವ ಬಗೆ, ತಾಯಿ ಸತ್ತಮ್ಯಾಲೆ ತಂದೆ ಚಿಗಪ್ಪ ಅಂತ! ಮಲತಾಯಿ ಆ ತಬ್ಬಲಿ ಮಕ್ಕಳನ್ನು ಹಾಗೂ ತನ್ನ ಹೊಟ್ಟೆಯ ಮಕ್ಕಳನ್ನು ಕಾಣುವ ಬಗೆಯನ್ನು ಕತೆ, ಕವಿತೆ, ಕಾದಂಬರಿಗಳಲ್ಲಿ ಅಷ್ಟೇ ಅಲ್ಲದೇ ಕಿರುತೆರೆ ಮತ್ತು ಹಿರಿತೆರೆಗಳಲ್ಲಿ ಎಳೆಎಳೆಯಾಗಿ ಬಿಚ್ಚಿಟ್ಟಿದ್ದು ಈ ಮೇಲಿನ ಆಯಾಮದಲ್ಲಿ ನೋಡಬಹುದಾಗಿದೆ.
ಹೆಣ್ಣನ್ನು ತಾಯ್ಗಳ್ಳಿನ ಅಥವಾ ಹೆಣ್ಗಳ್ಳಿನ ಪುರುಷ ಕಂಡಿರುವ ದೃಷ್ಟಿ:
ಹೆಣ್ಣು ಅಂದಂದಿನ ಕಾಲಘಟ್ಟದಿ ಕೌಟುಂಬಿಕ ಮತ್ತು ಸಾಮಾಜಿಕ ಜನ-ಜೀವನದಲ್ಲಿ ಅನುಭವಿಸಿದ ಯಮ-ಯಾತನೆಗಳನ್ನು ತುಂಬ ಹತ್ತಿರದಿಂದ ಕಂಡುಂಡ ತಾಯ್ಗಳ್ಳಿನ ಅಥವಾ ಹೆಣ್ಗಳ್ಳಿನ ಹೃದಯ ಆದ್ರವಾಗಿ ಮಿಡಿದ ಭಾವನೆಗಳ ಒಟ್ಟಂದದಿ ಚಿತ್ರಿತವಾದ ಸ್ತ್ರೀ–ತಾಯಿ, ಪ್ರೇಯಸಿ, ಸದ್ಗೃಹಿಣಿಯಾಗಿ ಕಂಡಿರುವಂತದ್ದು. ಒಟ್ಟಾರೆಯಾಗಿ ಬೇಂದ್ರೆ ಸಾಹಿತ್ಯವನ್ನು ಅವಲೋಕಿಸಿದಾಗ ಈ ಮೇಲಿನ ಆಯಾಮದಲ್ಲಿ ಮೂಡಿಬಂದಿರುವಂತದ್ದು ಎಂಬುದರಲ್ಲಿ ಎರಡು ಮಾತಿಲ್ಲ.
ಸೌಂಧರ‍್ಯವೆಂಬುದು
ಕಣ್ಣಿನ ತುತ್ತಲ್ಲ
ಕಣ್ಣಿಗೂ ಕಣ್ಣಾಗಿ
ಒಳಗಿಹುದು
ರೂಪ-ಲಾವಣ್ಯಕೆ
ಅಳೆಯಲುಬಾರದು
ಅವುಗಳೇ
ಇದರೊಂದು ಕಣವಿಹವು
.
ಸೌಂಧರ‍್ಯ ಎಂದರೆ ಅದು ಬರೀ ಕಣ್ಣು ಸೆರೆಹಿಡಿಯುವ ಹೊರದೃಶ್ಯವಲ್ಲ, ಕಣ್ಣು ನೋಡುವುದಕ್ಕಿಂತ ಗಾಡವಾಗಿ, ಮನಸ್ಸು, ಹೃದಯದಿಂದ ಮಾತ್ರವೇ ಗ್ರಹಿಸಬಹುದಾದ ಒಳಗಿನ ಗುಣವೇ ನಿಜವಾದ ಸೌಂಧರ‍್ಯ. ಅದನ್ನು ನಾವು ತೂಕ, ಬಣ್ಣ, ಮುಖದ ರೀತಿ ಇತ್ಯಾದಿಗಳಿಂದ ಅಳೆಯಲು ಸಾಧ್ಯವಿಲ್ಲ, ನಾವು ಕಾಣುವ ರೂಪ-ಲಾವಣ್ಯವು ಆ ನಿಜವಾದ ಸೌಂಧರ‍್ಯದ ಒಂದು ಚಿನ್ನದ ಕಣ, ಸಣ್ಣ ಭಾಗ ಮಾತ್ರವೇ ಆಗಿದೆ. ನಿಜವಾದ ಸೌಂಧರ‍್ಯ ಕಣ್ಣಿಗೂ ಮೀರಿದ, ಹೃದಯದಿ ಅನುಭವವಾಗುವ, ಒಳಗಿನ ಮೌನ-ಮೌಲ್ಯಗಳಲ್ಲಿ ಅಡಗಿದೆ. ಮನುಷ್ಯನ ಸೌಂಧರ‍್ಯ ಬಾಹ್ಯ ರೂಪದಲ್ಲಿಲ್ಲ; ಹೃದಯ, ಗುಣ, ಸ್ವಭಾವ, ಆಂತರ‍್ಯದ ಪ್ರಕಾಶ – ಇವುಗಳೇ ನಿಜವಾದ ಸೌಂರ‍್ಯ ಎಂಬರ್ಥದಿ ಬೇಂದ್ರೆಯವರು ಸ್ತ್ರೀಯನ್ನು ಚಿತ್ರಿಸಿದ್ದಾರೆ.

ಮಾತಿನಲ್ಲಿರುವಂಥ
ಮೌನದ ಧ್ವನಿಯಿಂದ
ವಿವ್ಹಲತೆ
ಬೆಳೆಯುವುದಿಬ್ಬರಲಿ
ಇಬ್ಬರ ಮನವಾಗ
ಇಬ್ಬಗೆಯಾಗುವುದು
ಒಬ್ಬರಿಗೂ ಸುಖವಿಲ್ಲ
ಬದುಕಿನಲಿ.

ಮಧುರವಾದ ಸಂಬಂಧದಲ್ಲಿ ಹೇಳದಿರುವ ಮೌನ, ಒಡೆದ ಮಾತುಗಳು, ವ್ಯಕ್ತಗೊಳ್ಲದ ನೋವು-ನಲಿವು, ಇವು ಎರಡು ಹೃದಯ[ಮನಸ್ಸು]ಗಳನ್ನು ದೂರ ಮಾಡುತ್ತವೆ. ಮಾತುಕ[ವಿ]ತೆ, ನೇರ ಸಂಭಾಷಣೆಯಿರದ ಸಂಬಂಧದಲ್ಲಿ ಇಬ್ಬರೂ ಸುಖವನ್ನು ಕಾಣಲಾಗದು, ಗಂಡ-ಹೆಂಡಿರ ಗಂಧಾ ತೀಡಿದ್ಹಂಗ ಇರಬೇಕಾ, ಗಂಡ-ಹೆಂಡತಿ ಜಗಳ ಉಂಡು ಮಲಗುವ ತನಕ ಎಂಬ ಜನಪದರ ಗಾದೆಮಾತು ಸುಳ್ಳಾಗೇ.., ಅದು ವಿಚ್ಛೇದನದಿ ರ‍್ಯಾವಸಾನಗೊಳ್ಳುತ್ತದೆ ಎಂಬ ಎಚ್ಚರಿಕೆಯನ್ನು ನೀಡುತ್ತಾರೆ.
ಪಾದ ಪದ್ಧತಿಯಲ್ಲಿ
ಪದ ಕೂಡಿ ಬರುವಾಗ
ಯಾರಾರೆ ಗುರು-
ಲಘು ಎಣಿಸುವರೆ?
ಯಾ ರಾಗವೆಂದರು
ಯಾ ರಾಗ ಕೇಳುವರು
ಅನುರಾಗವನುರಣಿಸಿ
ತಣಿಸುತಿರೆ!.

ಪದಗಳ ನಿಯಮ, ಛಂದಸ್ಸು, ಗುರು-ಲಘು, ರಾಗ-ತಾಳ ಇವೆಲ್ಲವೂ ಕೇವಲ ತಾಂತ್ರಿಕ ಇತಿ-ಮಿತಿಗಳು, ಆದರೆ ಸಂಕಷ್ಟದ ಬದುಕಿನ ಪಾಡೇ ಹಾಡಾಗಿ ಹೃದಯದಿ ಹುಟ್ಟುವ ಪದವು [ಅನುರಾಗ, ಭಾವ, ಪ್ರೀತಿ, ನಿಸ್ಸಳ ಸ್ಪಂದನೆ] ಪಾದ ಪದ್ದತಿಯಲ್ಲಿ ಅಂದರೆ ಕಾಲ್ನಡಿಗೆಯ ರೂಪದಿ ಎಡ-ಬಲವೆಂದೆಣಿಸದೆ ಜತೆಗೂಡಿ ಮುನ್ನಡೆಯುತ್ತಿರಾಗ.., ಗುರು-ಲಘು ಎಣಿಸುವರೆ? ಇಲ್ಲಿ ನಿಯಮಗಳಿಗಿಂತ ಭಾವ ತೀವ್ರತೆಯೇ ಕವಿತೆಯ ಜೀವವಾಗಿ, ರಾಗಕೆ ಶ್ರವಣ, ಮನಸ್ಸಿಗೆ ತಣಿ[ಮುದ]ವನ್ನು ನೀಡುತ್ತದೆ ಎಂಬರ್ಥದಿ ಗಂಡು-ಹೆಣ್ಣಿನ ಅನುರಾಗ-ದಾಂಪತ್ಯ ಜೀವನಕ್ಕೆ ಮುನ್ನಡಿ ಬರೆಯುತ್ತ..,
ನಾನು ಬಡವಿ ಆತ ಬಡವ
ಒಲವೆ ನಮ್ಮ ಬದುಕು
ಬಳಸಿಕೊಂಡೆವದನೆ ನಾವು
ಅದಕು ಇದಕು ಎದಕು.
ಆತ ಕೊಟ್ಟ ವಸ್ತು ಒಡವೆ
ನನಗೆ ಅವಗೆ ಗೊತ್ತು
ತೋಳುಗಳಿಗೆ ತೋಳ ಬಂದಿ
ಕೆನ್ನೆ ತುಂಬ ಮುತ್ತು.
ಕುಂದು ಕೊರತೆ ತೋರಲಿಲ್ಲ
ಬೇಕು ಹೆಚ್ಚಿಗೇನು?

ಹೊಟ್ಟೆಗಿತ್ತ ಜೀವ ಫಲವ
ತುಟಿಗೆ ಹಾಲು ಜೇನು
.
ಎಂದು ಒಲವೆ ನಮ್ಮ ಬದುಕು ಎಂಬೀ ಕವಿತೆಯ ಮೂಲಕ ಸಮರಸವೇ ಜೀವನವೆಂಬ ಸಾಮರಸ್ಯದ ಬದುಕಿಗೆ ಕನ್ನಡಿ ಹಿಡಿಯುತ್ತಾರೆ.
ಪುಟ್ಟ ವಿಧವೆ:
ಬಾಲ್ಯವಿವಾಹ, ಸತಿ ಪದ್ಧತಿ ನಿಷೇಧ, ಮಹಿಳಾ ಶಿಕ್ಷಣ, ವಿಧವಾ ಪುನರ್ವಿವಾಹ, ಮಹಿಳಾ ಹಕ್ಕುಗಳ ಪರ ಹೋರಾಟ, ಮಹಿಳಾ ಸ್ವಾತಂತ್ರ್ಯ, ಸ್ವಾವಲಂಬನೆ, ಸ್ವಾಭಿಮಾನಕ್ಕೆ ಒತ್ತಾಯ, ಗ್ರಾಮಗಳಲ್ಲಿ ಮಹಿಳಾ ಆರೋಗ್ಯ ಮತ್ತು ಅರಿವು ಎಂಬಿತ್ಯಾದಿ ವಿಚಾರಗಳ ದಿಸೆಯಲ್ಲಿನ ಸಮಾಜ ಸುಧಾರಣೆಯ ಮೊದಲ ಪ್ರಮುಖ ಧ್ವನಿಯೆಂದರೆ – ರಾಜಾ ರಾಮ್‌ಮೋಹನ್ ರಾಯ್, ತದನಂತರದಿ ಈಶ್ವರಚಂದ್ರ ವಿದ್ಯಾಸಾಗರ, ಮಹಾತ್ಮ ಗಾಂಧಿ, ಜ್ಯೋತಿರಾವ್ ಫುಲೆ ಮತ್ತು ಸಾವಿತ್ರಿ ಬಾಯಿ ಫುಲೆ, ಅನ್ನಿಬೆಸೆಂಟ್, ದ್ವಾರಕನಾಥ್ ಗಂಗೂಲಿ, ಕಸ್ತೂರಬಾ ಗಾಂಧಿ, ಕರ್ನಾಟಕದಲ್ಲಿ ಟಿ.ನರಸಿಂಹಾಚಾರ‍್ಯ, ಡಿ.ವಿ.ಗುಂಡಪ್ಪ ಈ ಎಲ್ಲ ಮಹನೀಯರ ಹೋರಾಟದ ಫಲವೆಂಬಂತೆ; ಹರಬಿಲಾಸ್ ಸರ್ಡಾ ಅವರು ಮಂಡಿಸಿದ – ೧೯೨೯ ರ ಸರ್ಡಾ ಕಾಯ್ದೆ / ಅhiಟಜ ಒಚಿಡಿಡಿiಚಿge ಖesಣಡಿಚಿiಟಿಣ ಂಛಿಣ  – ಇದು ಭಾರತೀಯ ಬಾಲ್ಯವಿವಾಹ ನಿಯಂತ್ರಣದ ಮೊದಲ ಕಾನೂನು ಜಾರಿಯಾಯಿತು.
ಈ ಹಿನ್ನಲೆಯಲ್ಲಿ ಹೆಣ್ಣಿನ ವೈದವ್ಯದ ಬಾಳಿನ-ಗೋಳಿನ ಕತೆಯನ್ನು ನೋಡಲಾಗದೆ ಇದನ್ನು ಕಾನೂನಾತ್ಮಕವಾಗಿ ಸಂಪೂರ್ಣವಾಗಿ ತೊಡೆದುಹಾಕಲು ಶ್ರಮಿಸಿದವರು ಪ್ರಾತಃ ಸ್ಮರಣೀಯರು. ಇಂತದ್ದೇ ಒಂದು ನೈಜ ಘಟನೆ ಬೇಂದ್ರೆಯವರ ಮನಕಲಕಿದ್ದರ ಪರಿಣಾಮ – ಪುಟ್ಟವಿಧವೆ ಕವಿತೆಯಲ್ಲಿ ಚಿತ್ರಿಸಿದ್ದಾರೆ;
ಆಕೆಯಿದ್ದಳು ಕೂಸು; ಈತನಿನ್ನೂ ಹುಡುಗ
ಅವರ ತಾಯ್ತಂದೆಗಳ ಹಿಗ್ಗು ಎಷ್ಟು!
ಧರ್ಮದಾ ಹೆಸರಿನಲಿ ಅವರ ಕೈಕೂಡಿಸಲು
ಇವರಿಗೆನಿಸಿತು ಹರ್ಷ ಹಬ್ಬದಷ್ಟು.
ಹತ್ತು ದಿವಸಕೆ ಹಾಳು ಮುತ್ತೈದೆತನ ಹೋಗಿ
ವೈದವ್ಯ ಸಂಪತ್ತು ಪಡೆದಳಾಕೆ;
ಮನೆಯವರು ವೈದಿಕರು, ಊರು ಧರ್ಮದ ತವುರು;
ಶಾಸ್ತ್ರವಿರೆ ಬೇರೆಯ ವಿಚಾರವೇಕೆ
?
ಕುರುಡು ಧರ್ಮಕ್ಕೆ ಸ್ಮಾರಕವು ನಿಂತಂತಾಕೆ
ಮೈಮರೆತು ನಿಂತಾಗ ಗೂಗೆ ಹಾಡಿತ್ತು,
ಮುದ್ರೆಯೊತ್ತುವ ಕಣ್ಣು ಮೋರೆ ನೋಡಿತೊಮ್ಮೆ
ಊರ ಕೃಷ್ಣನ ಕಥೆಗೆ ಕೋಡು ಮೂಡಿತ್ತು
.
ಈ ಒಂದು ಕವಿತೆ: ತಂದೆ-ತಾಯಂದಿರ ಜವಾಬ್ದಾರಿ, ಕನ್ಯಾದಾನ, ಕೌಟುಂಬಿಕ ರಕ್ಷಣೆ, ಅನಿಶ್ಚಿತತೆಯ ಬಾಳು, ಅಕಾಲಿಕ ಮರಣ, ವೈದವ್ಯ ಪ್ರಾಪ್ತಿ, ಸಾಮಾಜಿಕ ಪಿಡುಗಾಗಿ ಪರಿಣಮಿಸಿದ್ದು, ನಮ್ಮ ಅಜ್ಞಾನಕ್ಕೆ ಹೆಣ್ಣಿನ ಬಾಳು ಆಹುತಿಯಾದುದರ ಕುರುಹಾಗಿ ಪುಟ್ಟ ವಿಧವೆ ನಮ್ಮ ಕಣ್ಮುಂದೆ ನಿಲ್ಲುತ್ತಾಳೆ, ಕಂಬನಿ ಮಿಡಿಯುವಂತೆ ಮಾಡುತ್ತಾಳೆ,
ಹುಬ್ಬಳ್ಳಿಯಾಂವಾ:
ಬೇಂದ್ರೆಯವರ ಪ್ರತಿಕಾ ಓದಿನ ಅಭಿರುಚಿ ಎಷ್ಟಿತ್ತೆಂದರೆ.., ಅದೊಂದು ಗೀಳಾಗಿ ಅಂಟಿಕೊಂಡಿತ್ತೆಂದು ಹೇಳಬಹುದೆನೋ, ಹುಬ್ಳಿಯಿಂದ ವಾರಕ್ಕೆ ಮೂರು ದಿನ ಅಚ್ಚಾಗಿ ಹೊರಡುತ್ತಿದ್ದ ಪತ್ರಿಕೆ ಅನಿವರ‍್ಯ ಕಾರಣಗಳಿಂದ ಅಚ್ಚಿನ ಮನೆಯಲ್ಲಿ ಬೆಚ್ಚಗೆ ಕುಳಿತದ್ದರಿಂದ; ಪತ್ರಿಕೆ ಬಾರದೇ ಇದ್ದಾಗ, ಓದದೇ ಇದ್ದಾಗ ಆಗುನ ಮನಸ್ಸಿನ ಚಡಪಡಿಕೆ; ಇಲ್ಲಿ ಸಾಗಂತ್ಯ ತೊರೆದು ಹೋದ ಇನಿಯನ ನೆನವರಿಕೆ, ಕನವರಿಕೆ ಭಾವ ತೀವ್ತೆಯಿಂದ ಹೊರಹೊಮ್ಮಿದ ಕವಿತೆ ಈ ಹುಬ್ಬಳ್ಳಿಯಾಂವಾ ಎಂದು ಹೇಳಬಹುದು.
ಮಾತು ಮಾತಿಗೆ ನಕ್ಕನಗಿಸಿ ಆಡಿಸ್ಯಾಡಾಂವಾ
ಏನೋ ಅಂದರ ಏನೋ ಕಟ್ಟಿ ಹಾಡ ಹಾಡಾಂವಾ.

ಇರು ಅಂದರ ಬರತೇನಂತ ಎದ್ದು ಹೊರಡಾಂವಾ
ಮಾರೀ ತೆಳಗ ಹಾಕಿತೆಂದರ ಇದ್ದು ಬಿಡಾಂವಾ

ಚಹಾದ ಜೋಡಿ ಚೂಢಾಧಾಂಗ ನೀ ನನಗಂದಾಂವಾ
ಚೌಡಿಯಲ್ಲ ನೀ ಚೂಡಾಮಣಿಯಂತ ರಮಿಸ ಬಂದಾಂವಾ

ಕಣ್ಣಿನಾಗಿನ ಗೊಂಬೀಹಾಂಗ ಎದ್ಯಾಗ ನಟ್ಟಾಂವಾ
ಇನ್ನೂ ಯಾಕ ಬರಲಿಲ್ಲವ್ವಾ ಹುಬ್ಬಳ್ಳಿಯಾಂವಾ?

ಇಲ್ಲಿ ಗಂಡಿನ ಅನುರಾಗದಿ ಮಿಂದೆದ್ದ ಹೆಣ್ಣಿನ ಮನದಾಳದ ಇರಿಸು-ಮುರಿಸು, ಮುನಿಸು, ಸರಸ-ಸಲ್ಲಾಪ-ಸಂಭಾಷಣೆಯ ನೆನಹು, ಇನಿಯನ ಬರವಿನ ನಿರೀಕ್ಷೆ, ಕಾತರ, ಕಾವಳ ಭಾವದಿ ಬರುವ ಹಾದಿಯ ಎದುರು ನೋಡುತ್ತಾ ನಿಂತ ಪ್ರೇಯಸಿಯ ಮನದಾಳದಿ ಬಚ್ಚಿಟ್ಟ ಭಾವನೆಗಳನ್ನು ನಮ್ಮೆದುರಿಗೆ ಬೇಂದ್ರೆಯವರು ಬಿಚ್ಚಿಟ್ಟಿದ್ದಾರೆ.
ಹುಣ್ಣಿವಿ ಚಂದಿರನ ಹೆಣ:
ಮಗ ಸತ್ತ ಸುದ್ದಿ ತಿಳಿದು ದಿಗ್ಭ್ರಮೆಗೊಂಡು, ಕಂಬನಿಗರೆಯದೆ ಕಲ್ಲಾಗಿ ಮೂಲೆಹಿಡಿದು ಕೂತ ಹೆಂಡತಿಯ ಮುಖಭಾವವನ್ನು – ನೀ ಹೀಂಗ ನೋಡಬ್ಯಾಡ ನನ್ನ ನಿನ್ನ ನೇರ ದಿಟ್ಟಿಯನ್ನು ಎದುರಿಸುವ ಶಕ್ತಿ ನನಗಿಲ್ಲ, ಎಂದು ಪರಿಪರಿಯಾಗಿ ಸಂತೈಯಿಸುತ್ತ – ನಕ್ಯಾಕ ಮರಸತೀ ದುಃಖ? ಎದೆ ಬಡಿಸಿ ಕೆಡವು ಬಿರಿಗಣ್ಣು ಬ್ಯಾಡ ತುಟಿಕಚ್ಚಿ ಹಿಡಿಯದಿರು ಬಿಕ್ಕ ಎಂದು ಹೆಣ್ಣಿನ ನಗುವಿನ ಹಿಂದೆಯೂ ಕಣ್ಣೀರಿನ ಕಡಲು ಅಡಗಿರುತ್ತೆಂಬುದನ್ನು ಅರಿತ ಹೆಣ್ಗಳ್ಳಿನ ಬೇಂದ್ರೆಯವರು ತಮ್ಮ ದುಃಖವನ್ನು ಬದಿಗಿಟ್ಟು ಸಾಂತ್ವಾ ನೀಡಿದ್ದು ಜೀವ-ಭಾವದ ಗೀತೆಯಾಗಿ ಹೊರಹೊಮ್ಮಿದೆ. ಚಂದ್ರನನ್ನು ಅನಾದಿಕಾಲಂದಿದಲೂ ಹೆಣ್ಣು-ಗಂಡಿನ ರೂಪವಾಗಿ ಚಂದ್ರಮುಖಿ-ಪ್ರಾಣಸಖಿಯಾಗಿ, ಚಂದಾಮಾಮ ಚಕ್ಕುಲಿ ಮಾಮನಾಗಿ ಚಿತ್ರಿಸಿದ್ದು ಮುಂದುವರೆದು ಬೇಂದ್ರೆಯವರು ಮಗನ ರೂಪವನ್ನು ಚಂದ್ರನಲ್ಲಿ ಕಂಡಿದ್ದು; ತಾಯಿಯ ರಕ್ತ-ಮಾಂಸವ ಹಂಚಿಕೊಂಡು ಬಂದ ಮಗ ಮತ್ತು ಜೀವಕ್ಕೆ ಜೀವವೇ ಆದ ಹೆಂಡತಿ ಮೇಲಿನ ಅಗಾಧ ಪ್ರೇಮವನ್ನು ಈ ಕವಿತೆಯಲ್ಲಿ ಕಾಣಬಹುದಾಗಿದೆ.
ತಾಯಿ:
ತಾಯಿಗಿಂತ ಯಾರು ಹೆಚ್ಚು?
ಬಸಿರ ಕುತ್ತು ಹೊತ್ತುಕೊಂಡು
ಬಯಕೆಗಾಗಿ ಕಾಡಿಬೇಡಿ
ಬೇನೆತಿಂದು ಬಳಲಿ ಹೆತ್ತು
ನಕ್ಕರಾರೋ ನನ್ನ ಚೆನ್ನ?
ಮಗನ ದುಃಖಕ್ಕಾಗಿ ಕೊರಗಿ
ಮಗನ ಸುಖಕ್ಕಾಗಿ ಸೊರಗಿ
ಮಗುವೆ ಜಗವದಾಗಿ ತೋರಿ
ಬೆಳೆದರಾರೊ ನನ್ನ ಚೆನ್ನ?
ನಲ್ಲನಿತ್ತ ಮುತ್ತನೊಂದ
ತನ್ನ ಹಾಲಿನಿಂದ ತೊಳೆದು
ಕಣ್ಣ ಬೆಳಗಿನಿಂದ ಬೆಳಗಿ
ಕುಣಿದರಾರೊ ನನ್ನ ಚೆನ್ನ?
ಲಕ್ಷಕೋಟಿ ಅಬ್ಜ ವರ್ಷ

ದಿಂದ ಬಂದ ಜನುಮದೊಂದೆ
ಕಡಲಿನೊಡಲ ಸಿಂಪಿನAತೆ
ನನ್ನ ನಿನ್ನ ಅವನ ತಾಯಿ
.
ಬೇಂದ್ರೆಯವರು ತಮ್ಮ ತಾಯಿ ಕವಿತೆಯಲ್ಲಿ ತಾಯಿಗಿಂತ ಯಾರು ಅದಾರು ಹೆಚ್ಚು ಈ ಜಗದಲಿ? ಎಂದು ಪ್ರಶ್ನೆ ಕೇಳುತ್ತಲೇ..,
ಮಕ್ಕಳಿಗಾಗಿ ತನ್ನಿಡೀ
ಬದುಕು ಮುಡಿಪಿಟ್ಟ
ಜೀವವದು,
ತನ್ತಾನುರಿದು
ಬೆಳಗೊ ಮೋಬಂತ್ತಿ
ರೂಪಕ,
ಎಣ್ಣೆ ತೀರಿ
ಬತ್ತಿವಳಿದುಳಿದ
ಕಪ್ಪು ಹಣತೆ,
ಮಕ್ಕಳಳವಿಗೆ ಮಿಡಿವ

ಜೀವ-ಭಾವದ
ಹೃದಯ ಗೀತೆ,
ಅವಳೆ ಅವಳೇ
ತಾಯಿ, ಬರಿಯೆ ತಾಯಲ್ಲ
ಮಹಾತಾಯಿ; ಮಹಾಮಾಯೆ!

ಎಂದು ಇಡೀ ಜಗತ್ ಸೃಷ್ಟಿಯ ಶಕ್ತಿಯಾದ ತಾಯಿ ಮಹತ್ ಅನ್ನು ಎಳೆ ಎಳೆಯಾಗಿ ಕಟ್ಟಿಕೊಟ್ಟಿದ್ದಾರೆ.
ಅರ್ಪಣೆ:
ಪಾಂಡಚೇರಿ ವಿಜ್ಞಾನ ಪೀಠದ ಆರ್ವಿಭಾವ ಶಕ್ತಿಯಾದ ತಾಯಿಯ ತೊಂಭತ್ತರ ವರ್ಧಂತಿ ವರ್ಷದಲ್ಲಿ [೧೯೬೮] ಸಮಾಜ ಪುಸ್ತಕಾಲಯ, ಧಾರವಾಡ ಇವರು ಬೆಳಕಿಗೆ ತಂದ ಶ್ರೀಮಾತಾ ಎಂಬ ಕವನಸಂಕಲನವನ್ನು ಬೇಂದ್ರೆಯವರು; ಶ್ರೀಮಾತೆ ಭೂಮಾತೆ ಕನ್ನಡ ಮಾತೆ ನಿಮಗಲ್ಲದೆ ಯಾರಿಗಿದು ಅರ್ಪತ? ಎಂದು ಆ ಕೃತಿಪುಷ್ಪವನ್ನು ಸಮರ್ಪಣೆ ಮಾಡಿದ್ದು -ಸ್ತ್ರೀಯನ್ನು ಹೆತ್ತಾಯಿ [ತಾಯಿರೂಪ], ಹೊತ್ತಾಯಿ [ಭೂತಾಯಿ], ತೊದಲ ಮುತ್ತಾಯಿ [ಕನ್ನಡಮಾತೆ ಭೂವನೇಶ್ವರಿ] ಕಂಡಿರುವಂತದ್ದು ನಾಡು-ನುಡಿ-ತಾಯಿಮೇಲಿನ ಅದಮ್ಯ ಪ್ರೀತಿ, ವಿಶ್ವಾಸ, ಗೌರವ-ಅಭಿಮಾನ ಹೊಂದಿರುವುದನ್ನು ಕಾಣಬಹುದಾಗಿದೆ.
ಮೊದಲಗಿತ್ತಿ:
ಮೊದಲಗಿತ್ತಿಯಂತೆ ಮೆರೆಯುವಿಯೇ ತಾಯೆ,
ಮೊದಲಗಿತ್ತಿಯಂತೆ ನೆರೆಯುತಿಹೆ.
ನಿನ್ನ ತೇಜದ ಮುಂದೆ ರಾಜತೇಜವು ಕೂಸು,
ಹದಿನಾರು ರಾಜರು ತಲೆಕೆಳಗಾದರೂ
ಮೊದಲಗಿತ್ತಿಯಂತೆ ಮೆರೆಯುತಿಹೆ ತಾಯೆ –
ಎಂದು ಬೇಂದ್ರೆಯವರು ತಮ್ಮ ಮೊದಲಗಿತ್ತಿ ಕವನದಿ;ಸ್ತ್ರೀ ಯನ್ನು ಭೂಮಿ ಹಾಗೂ ಪ್ರಕೃತಿಮಾತೆ ರೂಪದಿ, ಸೃಜನಾತ್ಮಕ ಶಕ್ತಿಯಾಗಿ ಕಂಡಿದ್ದಾರೆ.
ಭೂಮಿ ತಾಯಿ ಚೊಚ್ಚಲ ಮಗ:
ದಿನವು ಸಂಜೆಗೆ

ಬೆವರಿನ ಜಳಕ,
ಉಸಿರಿನ ಕೂಳಿಗೆ
ಕಂಬನಿ ನೀರು!
ಹೊಟ್ಟೆಯು ಹತ್ತಿತು
ಬೆನ್ನಿನ ಬೆನ್ನು
ಎದೆಯ ಗೂಡಿನೊಳು
ಚಿಂತೆಯ ಗೂಗಿ!
ಮಿದುಳಿನ ಮೂಲೆಗೆ
ಲೊಟ ಲೊಟ ಹಲ್ಲಿ!
ಕೊರಳಿಗೆ ಸುತ್ತಿದೆ

ಸಾಲದ ಶೂಲ!
ಆದರೂ ಬರದೋ
ಯಮನಿಗೆ ಕರುಣ
ಉಸಿರಿಗೆ ಒಮ್ಮೆ
ಆನನಾ ಮರಣಾ..,

ಎಂದು ನಾಡಿನ ಅನ್ನದಾತ ರೈತನನ್ನು ಭೂಮಿ ತಾಯಿಯ ಚೊಚ್ಚಲಮಗನೆಂದು; ತಮ್ಮ ಕವಿತೆಯಲ್ಲಿ ಸಾಲದ ಸುಳಿಗೆ ಸಿಲುಕಿ ಪರದಾಡುತ್ತಿರುವ ರೈತನ ಚಿಂತಾಜನಕ ಸ್ಥಿತಿಯಲ್ಲಿರುವುದನ್ನು ಕಂಡು; ತಾಯಿ ಮಗನ ದುರಾವಸ್ಥೆಯ ಕಂಡು ಮಮ್ಮಲ ಮರುಗುವಂತೆ, ಮೂಲೆಹಿಡಿದು ಕೂತು ಕೊರಗುವಂತೆ, ಆಕ್ರಂದನ ಮುಗಿಲು ಮುಟ್ಟುವಂತೆ ಚಿತ್ರಿಸಿದ್ದಾರೆ ಎನ್ನುವದಕ್ಕಿಂತಲೂ; ರೈತನ ಬವಣೆಯ ಬದುಕಿಗೆ ಕನ್ನಡಿಯ ಹಿಡಿಯುತ್ತ, ಕಂಬನಿ ಗರೆದಿದ್ದಾರೆ ಎಂದು ಹೇಳಬಹುದು.

ಮನದನ್ನೆ:
ವಾದಕ್ಕೆ ಬೇಸತ್ತು
ಮರ್ಮಾಘಾತಕ್ಕೆ ಸತ್ತು
ಉಳಿದು ಬಂದೆ;
ವಾದಕ್ಕೆ ಪ್ರತಿವಾದ
ಸಾಕು ವಾದ-ವಿವಾದ,
ಜೀವ ಸಂವಾದಕ್ಕೆ
ಹಸಿದು ಬಂದೆ
ನೀಡು ಸಿಪ್ಪೆಯ
ಸುಲಿದು ತಿಳಲನೊಂದೆ.
ಇದಿರಾಡದಿರು ಮತ್ತೆ

ಎದಿರಾಡದಿರು ಇತ್ತ
ಮಾಡದಿರು ಬಾಳನ್ನು ಬೇಳೆಯಂತೆ
ಕೂಡಿರಲಿ ಬಾಳು ಇಡಿಗಾಳಿಯಂತೆ
ನಾನೇದರೂ ಒಂದೆ
ನೀನೇದರೂ ಒಂದೆ,
ಹೊಸಹುಟ್ಟು ಬರುವುದಿದೆ
ಇನ್ನು ಮುಂದೆ ಆಗೋಣ
ಆ ಜಗದ ತಾಯಿ-ತಂದೆ.

ಎಂದು ಬಡತನದ ಬಾಳಿಗೆ ಜೊತೆಯಾಗಿ ಬಂದ ಮನದನ್ನೆಗೆ ಪರಿಪರಿಯಾಗಿ ಬಿನ್ನವಿಹಿಸಿಕೊಳ್ಳುತ್ತ.., ಎದುರಾಡದಿರು ಮತ್ತೆ ಎದುರಾಡದಿರು ಮತ್ತೆ.., ಮುಂದೆ ಒಳ್ಳೆಯ ದಿನಗಳು ನಮಗಾಗಿ ಬಂದೇ ಬರುತ್ತವೆ ಎಂದು ಜೀವನದ ಬಗ್ಗೆ ತುಂಬು ಭರವಸೆಯನ್ನು ನೀಡುತ್ತ.., ಸರಸವೇ ಜನನ ವಿರಸವೇ ಮರಣ ಸಮರಸವೇ ಜೀವನವೆಂಬ ಸರಳ ಸೂತ್ರದಿ ಕವಿತೆ ಹೆಣೆದಿದ್ದಾರೆ.  
ಬೇಂದ್ರೆಯವರ ಒಟ್ಟು ಕಾವ್ಯ-ಸಾಹಿತ್ಯದಲ್ಲಿ ಮುಖ್ಯವಾಗಿ ಸ್ತ್ರೀ ಎರಡು ರೂಪಗಳಲ್ಲಿ ಗೋಚರಿಸುತ್ತಾಳೆ. ಮಾನವ ಸ್ತ್ರೀ ತಾಯಿ, ಪ್ರೇಯಸಿ, ಸದ್ಗೃಹಿಣಿ, ಸಂಕೇತ ರೂಪದ ಸ್ತ್ರೀ ಹಾಗೂ ಬ್ರಹ್ಮಾಂಡ ಸ್ತ್ರೀ- ಪ್ರಕೃತಿ, ಬುವಿ, ಜನನಿ ಹಾಗೂ ದೈವೀಶಕ್ತಿ; ಸ್ತ್ರೀ ಕೇವಲ ದೇಹಧಾರಿಣಿಯಾಗಿ ನೋಡದೆ ಬೇಂದ್ರೆಯವರು ಆಕೆಯನ್ನು ಜೀವ-ಜೀವನ ಶಕ್ತಿ, ಸೃಜನಾತ್ಮಕ ತತ್ತ್ವ, ಪೃತಿಯ ಒಡಲ ಮುತ್ತಾಗಿ ಕಾಣುತ್ತಾರೆ. ಇದು ಸಹಜವಾಗಿಯೇ ಅವರ ಕಾವ್ಯಕ್ಕೆ ಮೃದುಗಂಧ, ಭಾವನಾತ್ಮಕತೆ ಹಾಗೂ ಅಕ್ಷರಾತೀತ ಆಳ-ಅಗಲ, ಬಹು ವಿಸ್ತಾರತೆಯನ್ನು ಒದಗಿಸಿದೆ ಎಂದು ಹೇಳಬಹುದು. ಆನಪದರ ಕಡುಕಷ್ಟದ ಬದುಕಿನ ಚಿತ್ರಣದಲ್ಲಿ ಗ್ರಾಮೀಣ ಸ್ತ್ರೀ ನೋವು-ನಲಿವು, ಅವರ ಪಟ್ಟ ಪಾಡನ್ನು ಹಾಡಾಗಿಸಿದ್ದಾರೆ. ಬೇಂದ್ರೆಯವರ ಕಾವ್ಯದಲ್ಲಿ ಸ್ತ್ರೀ ಕೇವಲ ಒಂದು ಪಾತ್ರವಲ್ಲ; ಕಾವ್ಯದ ಮೂಲಶಕ್ತಿ, ಭಾವನದ ನಾಭಿ, ಜೀವದ ನಾಡಿ, ಪ್ರಕೃತಿಯ ನಗು, ಬ್ರಹ್ಮಾಂಡದ ಸತ್ಯವೇ ಆಗೆದೆ ಎಂದರೆ ತಪ್ಪಿಲ್ಲ.
ಹೆಣ್ಣು ಹೆಣ್ಣನ್ನು ಕಂಡಿರುವ ದೃಷ್ಟಿ:
ಈ ಮೇಲಿನ ಎರಡು ಆಯಾಮಗಳಿಂತ ತುಸು ಭಿನ್ನವೆಂದೇ ಹೇಳಬಹುದಾದ ದೃಷ್ಟಿಯಿದು, ಹಿಂದೂ ಪುರಾಣ ಕಥಾನಕಗಳ ನಂಬುಗೆಯಂತೆ ಬುವಿಯ ಕೆಳಗೆ ಪಾತಾಳಲೋಕಗಳೇಳು [ಅತಳ, ವಿತಳ, ಸುತಳ, ತಳಾತಳ, ಮಹಾತಳ, ರಸಾತಳ ಮತ್ತು ಪಾತಾಳ] ಇವೆಯಂತೆ; ಅದೇ ರೀತಿ ಊರ್ಧ್ವಲೋಕಗಳೇಳು [ಭುಲೋಕ, ಭುವರ ಲೋಕ, ಸುವರ್-ಸಗ್ಗ ಲೋಕ, ಮಹರ್ ಲೋಕ, ಜನರ್ ಲೋಕ, ತಪೋಲೋಕ ಮತ್ತು ಸತ್ಯ-ಬ್ರಹ್ಮಲೋಕ] ಒಟ್ಟು ಹದಿನಾಲ್ಕು ಲೋಕಗಳಿಯಂತೆ! ಇವುಗಳನ್ನು ಮೀರಿದ ಯಾರ ಅಳವಿಗೂ ಸಿಗದ, ಯಾರೂ ಕೂಡ ಬೇಲಿ ಹಾಕಲಾಗದ ಮತ್ತೊಂದು ಲೋಕ ಪ್ರತಿಯೊಬ್ಬರಳಗೂ ಇದೆಯಂತೆ ಅದುವೇ ಮನೋಲೋಕ! ಇದಕ್ಕೆ ಹೆಣ್ಣೂ ಹೊರತಾಗಿಲ್ಲ. ಅಂತೆಯೇ ಹೆಣ್ಣಿನ ಆ ಮನೋಲೋಕವನ್ನು ಹೊಳಹೊಕ್ಕು ಭಾವನೆಗಳನ್ನು ಹೆಕ್ಕಿತೆಗೆವುದು ಗಂಡಿಗೆ ಕಷ್ಟಸಾಧ್ಯ; ಹೆಣ್ಣು ಮಾತ್ರವೇ ಆ ಮನೋಲೋಕದಿ ಸಹಪುಣಿಗಳಾಗಿ ಸಾಗಿ ಹೊಳಹೊಕ್ಕು ಆಂತರ‍್ಯದ ತುಮುಲಗಳನ್ನು ಹಿಡಿದಿಡಬಹುದಾಗಿದೆ; ಈ ಹಿನ್ನಲೆಯಲ್ಲಿ ಮೂಡಿ ಬಂದಿರುವ ಸಾಹಿತ್ಯವೇ ಮೂರನೇ ಆಯಾಮದ್ದಾಗಿದೆ.
ಈ ನೆಲೆಯಲ್ಲಿ ಸಾಹಿತ್ಯಕೃಷಿಗೈದಿರುವವರ ಸಾಲಿನಲ್ಲಿ ಅಕ್ಕ ಮಹಾದೇವಿಯಕ್ಕ ಅಗ್ರಗಣ್ಯಳು! ಅಂದಿನಿಂದ್ಹಿಡಿದು ಇಂದಿಗೂ ಆ ಪರಂಪರೆಯನ್ನು ಮುಂದುವರೆಸಿಕೊಂಡು ಬಂದವರು ಅನೇಕರಲ್ಲಿ ಕೆಲವರನ್ನು ಹೆಸರಿಸಬಹುದಾದರೆ.., ಗೀತಾ ನಾಗಭೂಷಣ, ಸಾರಾ ಅಬೂಬ್‌ಕ್ಕರ್, ಬಾನು ಮಷ್ತಾಕ್, ಮೀನಾಕ್ಷಿ ಬಾಳಿ. ಪ್ರತಿಭಾ ನಂದಕುಮಾರ, ಎಂ.ಆರ್.ಕಮಲಾ ಮುಂತಾದವರು.


ಡಾ.ಯಲ್ಲಮ್ಮ ಕೆ.

About The Author

1 thought on “‌”ಸ್ತ್ರೀ ಮತ್ತು ಬೇಂದ್ರೆ ಸಾಹಿತ್ಯ” ವಿಶೇಷ ಲೇಖನ, ಡಾ.ಯಲ್ಲಮ್ಮ ಕೆ”

Leave a Reply

You cannot copy content of this page

Scroll to Top