ಪುಸ್ತಕ ಸಂಗಾತಿ
ಮಧು ಮಾಲತಿ.
ಗೊರೂರು ಅನಂತರಾಜು ಅವರ
“ತಲಕಾಡು ಪಂಚಲಿಂಗ ದರ್ಶನ
ಮತ್ತುಇತರೆ ಪ್ರವಾಸಿ ಲೇಖನಗಳು”


“ದೇಶ ಸುತ್ತು ಕೋಶ ಓದು”” ಎಂಬ ಜನಜನಿತ ನುಡಿಯಂತೆ ವಿವಿಧ ಪ್ರದೇಶಗಳನ್ನು ಸುತ್ತುವುದರಿಂದ ಅಲ್ಲಿಯ ಜನರ ನಡೆ-ನುಡಿ ˌಸಂಪ್ರದಾಯ ˌ ಆಚಾರ ವಿಚಾರಗಳೆಲ್ಲವನ್ನು ಅರಿತು ಅನುಭವಿಸಿ ರೂಢಿಸಿಕೊಳ್ಳುವಲ್ಲಿ ಈ ಪ್ರಯಾಣ ಯಶಸ್ವಿಯಾಗುತ್ತದೆ. ಅಂತೆಯೇ ದೇಶ ಸುತ್ತಲು ಅಸಾಧ್ಯವಾದವರೂ ಕೂಡ ಪ್ರವಾಸ ಕಥನಗಳನ್ನು ಓದಿ ದೇಶ ಸುತ್ತಿದಷ್ಟೇ ಅನುಭವವನ್ನು ರೋಮಾಂಚನವನ್ನು ಅನುಭವಿಸುವುದು ಖಂಡಿತ ಸಾಧ್ಯ .ಈ ನಿಟ್ಟಿನಲ್ಲಿ ಶ್ರೀ ಗೊರೂರು ಅನಂತರಾಜುರವರ ಈ ಕೃತಿ ಅಚ್ಚುಮೆಚ್ಚಿನದಾಗುತ್ತದೆ .ಅನೇಕ ಸಾಹಿತಿಗಳ ಪ್ರವಾಸ ಕಥನಗಳು ಸಹ ಸಾಹಿತ್ಯ ಲೋಕಕ್ಕೆ ಅವಿರತವಾಗಿ ಅರ್ಪಣೆಯಾಗುತ್ತಿವೆ. ಇವೆಲ್ಲವುಗಳ ಪೈಪೋಟಿಗಳ ನಡುವೆ ಅನುಭವಿ ˌಹಿರಿಯರು ˌ ಸಾಹಿತಿಗಳು ˌಅಂಕಣಕಾರರು ಆದ ಶ್ರೀ ಗೊರೂರು ಅನಂತರಾಜುರವರ ಈ ಕೃತಿ ಎಲ್ಲರ ಗಮನವನ್ನು ಹಿಡಿದಿಟ್ಟುಕೊಂಡು ಓದಿಸಿಕೊಂಡು ಹೋಗುತ್ತದೆ . ಇಲ್ಲಿ ಮೂಡಿ ಬಂದಿರುವ ಅನೇಕ ಪ್ರಸಿದ್ಧ ಸ್ಥಳಗಳ ಬಗ್ಗೆ ಕೂಲಂಕುಶವಾಗಿ ಅಧ್ಯಯನಗೈದು ಓದುಗ ಪ್ರಭು ಅಲ್ಲಿಯೇ ಸ್ವತಹ ನಡೆದಾಡಿದಂತೆ ಭಾಸವಾಗುವಂತೆ ತಮ್ಮ ಅನುಭವಗಳನ್ನು ಇಲ್ಲಿ ಕಟ್ಟಿಕೊಡುವಲ್ಲಿ ಶ್ರೀಯುತರು ಯಶಸ್ವಿಯಾಗಿದ್ದಾರೆ. ಕಾವೇರಿ ತೀರದ ಅರ್ಕೇಶ್ವರನ ಬಗ್ಗೆ ಮಾಹಿತಿ ಹಂಚಿಕೊಳ್ಳುತ್ತಾ ಕೆ. ಆರ್.ನಗರದ ಅರ್ಕೇಶ್ವರ ದೇವಾಲಯ ಜಗತ್ತಿನ ಎರಡನೇ ಸೂರ್ಯ ದೇವಾಲಯ. ಗಂಗ ˌ ಚೋಳˌ ಹೊಯ್ಸಳˌ ವಿಜಯನಗರ ಮುಂತಾದ ಅರಸರ ಆಡಳಿತಕ್ಕೆ ಒಳಪಟ್ಟ ಈ ಸ್ಥಳದಲ್ಲಿ ಅರ್ಕೇಶ್ವರ ಸ್ವಾಮಿ ಸೂರ್ಯದೇವನಿಂದ ಪ್ರತಿಷ್ಠಾಪಿಸಲ್ಪಟ್ಟು ಭತ್ತದ ನಾಡೆಂದೇ ಹೆಸರುವಾಸಿಯಾಗಿದೆ .
ಶ್ರೀಯುತರು ಮುಂದುವರೆಯುತ್ತಾ ಮೂಗೂರು ತ್ರಿಪುರ ಸುಂದರಿ ಮುಸ್ಲಿಂ ಪಾಳೇಗಾರ ನಿರ್ಮಿಸಿದ ಹಿಂದೂ ದೇವಾಲಯಕ್ಕೆ ಸದ್ದಿಲ್ಲದೆ ನಮ್ಮನ್ನು ಕರೆದೊಯ್ಯುತ್ತಾರೆ . ಆದಿಶಕ್ತಿ ಅವತಾರವಾದ ತ್ರಿಪುರ ಸುಂದರಿ ದೇವಿಯ ಕೃಪಾಕಟಾಕ್ಷಕ್ಕೆ ನಾವೆಲ್ಲರೂ ಒಳಗಾಗುವುದು ಖಚಿತ. ಎಲ್ಲೆಡೆ ಸುತ್ತಾಡಿ ತಲಕಾಡಿನ ಪಂಚಲಿಂಗೇಶ್ವರನ ದರ್ಶನ ಮಾಡಿಸದಿರುತ್ತಾರೆಯೇ ? ಪಂಚಲಿಂಗ ದೇವರ ಅದ್ಭುತ ಕಲಾಕೃತಿಗಳು ಶಿವನ ವಿಷ್ಣುವಿನ ಲೀಲೆಗಳ ವಿಗ್ರಹಗಳು ಎಲ್ಲರ ಮನ ಸೆಳೆಯುತ್ತವೆ . “ಕಾಶಿಗೆ ಹೋಗಿ ಪರಶಿವನ ಕಾಣದೆ ಬರಲಾದೀತೇ” ಅಂತೆಯೇ ತಲಕಾಡಿಗೆ ಹೋಗಿ ಪಂಚಲಿಂಗೇಶ್ವರನ ದರ್ಶನ ಮಾಡಿದರೆ ಮುಕ್ತಿ ಎನ್ನುತ್ತಾರೆ.
ಮುಂದುವರೆದು ಗುಂಜ ನರಸಿಂಹನನ್ನು ಕೂಡ ತಮ್ಮ ಕೃತಿಯಲ್ಲಿ ನಮಗೆ ದರ್ಶನ ಭಾಗ್ಯ ಕೊಡಿಸಿರುತ್ತಾರೆ. ಬಿಳಿಗಿರಿರಂಗನ ಬೆಟ್ಟದ ಸೌಂದರ್ಯವನ್ನೆಲ್ಲ ತಮ್ಮ ಅನುಭವದ ಈ ಕೃತಿಯಲ್ಲಿ ಹಿಡಿದಿಟ್ಟಿರುವುದು ಚಾರಣ ಪ್ರಿಯರಿಗೆ ರಸದೌತಣವನ್ನೇ ನೀಡುತ್ತದೆ .
ಉದ್ಭವ ಗಂಗೆಯಿಂದೇ ಪ್ರಸಿದ್ಧಿ ಪಡೆದಿರುವ ಹಾಲುರಾಮೇಶ್ವರ ಸನ್ನಿಧಾನದ ಗಂಗಾ ಕೊಳವೆಂದೇ ಪ್ರಸಿದ್ಧಿಯಾದ ಹಾಲು ರಾಮೇಶ್ವರ ಜನಸಾಮಾನ್ಯರಿಂದ ಹಿಡಿದು ಜನ ಪ್ರತಿನಿಧಿಗಳವರೆಗೂ ಇಲ್ಲಿನ ಕೊಳದ ಪ್ರಸಾದವೇ ಬೇಡಿಕೆ ಈಡೇರಿಕೆಯ ಸಂಕೇತ.
ಮುಂದೆ ತಮ್ಮ ಹುಟ್ಟೂರಾದ ಗೊರೂರಿನ ತ್ರಿಕೂಟೇಶ್ವರ ದೇವಾಲಯಕ್ಕೆ ನಮ್ಮನ್ನು ಸೆಳೆಯುತ್ತಾರೆ .ಹೊಯ್ಸಳರ ಕಾಲದ ಈ ತ್ರಿಕೂಟಲಿಂಗೇಶ್ವರ ದೇವಾಲಯ ಒಂದಷ್ಟು ಅಭಿವೃದ್ಧಿಯತ್ತ ಸಾಗಬೇಕಿದೆ.
ಹೀಗೆ ಸಾಗುತ್ತಾ ಸಾಗುತ್ತಾ ಲೇಖಕರು ಇತಿಹಾಸ ಪ್ರಸಿದ್ಧ ಚುಂಚನಕಟ್ಟೆಗೆ ಕರೆದೊಯ್ಯುತ್ತಾರೆ .ಚುಂಚ ಚುಂಚಿ ಎಂಬ ಬೇಡ ದಂಪತಿಗಳ ವಧೆಯಿಂದಾಗಿ ಬಂದ ಹೆಸರು ಚುಂಚಾರಣ್ಯವೆಂಬ ಐತಿಹಾಸ ಪಡೆದ ಇತಿಹಾಸವಿದೆ.
ತೇರು ಹರಿದಾವೋ ತಾನಕ್ಕೆ ನಿಂತಾವೋ
ತಾರೋ ಚನ್ನಯ್ಯ ಜವನವಾ
ತಾರೋ ಚೆನ್ನಯ್ಯ ಜವನವಾ
ಬಾಳೆಹಣ್ಣು
ಬೇಡಿ ಕೊಳ್ಳೆ ಮಗಳೇ ಸೆರಗೊಡ್ಡಿ
ಎನ್ನುತ್ತಾ
ಗೊರೂರು ಶ್ರೀ ಯೋಗಾನರಸಿಂಹಸ್ವಾಮಿಯ ರಥೋತ್ಸವ ಅದ್ಧೂರಿಯಾಗಿ ಭಕ್ತಾದಿಗಳಿಂದ ತುಂಬಿ ತುಳುಕುತ್ತದೆ .
ಹೀಗೆ ಲೇಖಕರು ಬಸವನಹಳ್ಳಿ ಆಂಜನೇಯˌ ಹೊಳೆನರಸೀಪುರದ ಬನಶಂಕರಿ ಮುಂತಾದ ದೇವಾಲಯಗಳ ಇತಿಹಾಸಗಳನ್ನು ಓದುಗರೆದುರು ಆಳವಾಗಿ ತೆರೆದಿಡುತ್ತಾರೆ .
ನಂತರ ಲೇಖಕರು ತಮ್ಮ ಪದಗಳ ಚಮತ್ಕಾರದಿಂದ ಅರಸಿಕಟ್ಟೆ ಅಮ್ಮನ ನಕ್ಷತ್ರವನ, ಕಪ್ಪಡಿ ಕ್ಷೇತ್ರ ˌಉಮಾ ಮಹೇಶ್ವರನ ಕ್ಷೇತ್ರ ಎಲ್ಲವನ್ನು ದರ್ಶನ ಮಾಡಿಸಿ ಮಂತ್ರಮುಗ್ದರನ್ನಾಗಿಸುತ್ತಾರೆ.
ಜೊತೆ ಜೊತೆಗೆ ಸಂಕಲಾಪುರದ ಮಠ, ದಸರಿಘಟ್ಟ ಶ್ರೀ ಚೌಡೇಶ್ವರಿ ದೇವಸ್ಥಾನ, ಅಡಿ ಬೈಲು ರಂಗನಾಥ ಸ್ವಾಮಿ ಬೆಟ್ಟˌಗಳನ್ನು ಸುತ್ತಿಸುತ್ತ
ರಂಗನಾಥ ಸ್ವಾಮಿಯ ಮದುವೆಗೆ ಭೂಮಿ ಚಪ್ಪರ ಮಾಡಿ
ದಾಳಿಂಬೆ ಹಣ್ಣು ಹಸೆ ಮಾಡಿ ರಂಗಯ್ಯ
ಸ್ವಾಮಿ ನಿನ್ನ ಮದುವೆ ಶನಿವಾರ
ಎಂದು ಹಾಡಿ ಹೊಗಳುತ್ತಾರೆ.
ರಂಗಾನ ತೇಜಿಗೆ ಹೊಂಬಾಳೆ ಒಡ್ಯಾಣ
ದುಂಡು ಮಲ್ಲಿಗೆ ಮಕರಂದ
ಬೇಟ್ಗಾರ
ರಂಗನೇರ್ಯಾನೆ ಹೊಸ ತೇರು
ಹೀಗೆ ಹೇಳುತ್ತಾ ಕೆಂಡಗಣ್ಣೇಶ್ವರˌ ಮಂಟೆರಾಯಸ್ವಾಮಿ ˌಗೌಡಗೆರೆ ಚಾಮುಂಡೇಶ್ವರಿˌ ಕೊಂಡಜ್ಜಿ ˌಪುರದಮ್ಮˌ ಹೇಮಾವತಿ ತೀರದ ಹೇಮಗಿರಿ ಹೀಗೆ ಹಲವಾರು ಕ್ಷೇತ್ರಗಳನ್ನು ಸುತ್ತಿಸಿ 48 ಪುಣ್ಯಕ್ಷೇತ್ರಗಳ ಮಾಹಿತಿ ನೀಡುತ್ತಾ ನೀಡುತ್ತಾ ನಾವು ಅದರೊಳಗೊಂದಾಗಿ ಬಿಟ್ಟು ಬಿಡದಂತೆ ಪ್ರವಾಸಕ್ಕೆ ಕರೆದೊಯ್ಯುತ್ತಾರೆ .ಓದುತ್ತಾ ಓದುತ್ತಾ ಓದುಗ ಪ್ರಭು ಪ್ರವಾಸವನ್ನು ಸ್ವತಃ ಅನುಭವಿಸಿ ಸಂತಸಗೊಳ್ಳುತ್ತಾನೆ .ಈ ನಿಟ್ಟಿನಲ್ಲಿ ಇಂದು ಸಮಾಜಕ್ಕೆ ಅತ್ಯವಶ್ಯಕವಾದ ಕೃತಿಯೊಂದನ್ನು ಸಾರಸ್ವತ ಲೋಕಕ್ಕೆ ಕೊಡುಗೆ ಇತ್ತ ಶ್ರೀ ಗೊರೂರು ಅನಂತರಾಜುರವರ ಈ ಕೃತಿ ಸಾರಸ್ಪತಲೋಕ ಉಪಯೋಗಪಡಿಸಿಕೊಳ್ಳಲ್ಲಿ ಎಂದು ಆಶಿಸುವೆ.
ಮಧುಮಾಲತಿ ರುದ್ರೇಶ್




