ಗಾದೆ ಸಂಗಾತಿ
ವನಜಾ ಮಹಾಲಿoಗಯ್ಯ
“ಅದೃಷ್ಟವಶಾತ್ ಹುಲ್ಲು ಸಿಕ್ಕರೆ
ಮುದಿ ಎಮ್ಮೆಯೂ ಮೇಯುತ್ತೆ!”


“ಪುಕ್ಕಟೆ ಸಿಕ್ಕರೆ ಮೈಯೆಲ್ಲಾ ಬಾಯಿ” ಎಂಬಗಾದೆಯನ್ನು ಕೇಳಿದ್ದೀರಿ. ಕಷ್ಟಪಡದೆ ಏನು ಸಿಕ್ಕರೂ ನಮಗೆ ಬೇಕು. ಕೆಲಸಕ್ಕೆ ಹೋಗದೆ ಸಂಬಳ ಬರುತ್ತದೆ ಅಂತಾದರೆ ನಮ್ಮಷ್ಟು ಸುಖಿಗಳು ಈ ಜಗತ್ತಿನಲ್ಲಿ ಯಾರು ಇಲ್ಲ ಅಂದುಕೊಳ್ಳುತ್ತೇವೆ. ಆದರೆ, ಕೂತು ಉಣ್ಣುವವರನ್ನು ಸೂಕ್ಷ್ಮವಾಗಿ ಗಮನಿಸಿ ನೋಡಿ.ಅವರಿಗೆ ನಿಜಕ್ಕೂ ಅದರ ಸುಖವೇ ಅರಿವಿಗೆ ಬರುತ್ತಿರುವುದಿಲ್ಲ.ಏಕೆಂದರೆ ಆ ಊಟ ಗಳಿಸಲು ಅವರು ಕಷ್ಟಪಟ್ಟಿಲ್ಲ.
ಸುಖವನ್ನು ಮನಸಾರೆ ಅನುಭವಿಸಬೇಕು ಅಂದರೆ ನಮಗೆ ಕಷ್ಟದ ಅನುಭವವೂ ಇರಬೇಕು. ಇಲ್ಲವಾದರಸುಖ ಅರ್ಥವಾಗುವುದಿಲ್ಲ. ಆಗಭ೯ ಶ್ರೀಮಂತನಿಗೆಮೃಷ್ಟಾನ್ನ ಭೋಜನ ಮಾಡಿಸುವುದರಿಂದ ಯಾವ ವಿಶೇಷ ಆಸಕ್ತಿಯೂ ಇಲ್ಲದೆ ಅದನ್ನು ಊಟ ಮಾಡುತ್ತಾನೆ. ಬಡವನಿಗೆ ಬಡಿಸಿದರೆ ಹತ್ತು ದಿನವಾದರೂ ನೆನಪಿಟ್ಟುಕೊಂಡು ಸುಖಿಸು ತ್ತಾನೆ.
ಅದೃಷ್ಟ ದಿಂದ ಬರುವುದಕ್ಕೆ ಮಹತ್ವವಿಲ್ಲ.ಲಾಟರಿಯಿಂದ ಬಂದ ದುಡ್ಡು ಬಹಳ ದಿನ ಉಳಿಯುವುದಿಲ್ಲ. ಆದರೆ ಕಷ್ಟಪಟ್ಟು ಗಳಿಸುವುದಕ್ಕೆ ನಿಜಕ್ಕೂ ತುಂಬಾ ಮಹತ್ವವಿದೆ. ಜೀವನವಿಡೀ ಹಣ ಉಳಿಸಿ ಮನೆ ಕಟ್ಟಿದವನು ಅದನ್ನು ಅರಮನೆಯoತೆಅನುಭವಿಸುತ್ತಾನೆ ಮತ್ತು ಕಾಪಾಡಿಕೊಳ್ಳುತ್ತಾನೆ. ಯಾವ ಪ್ರಯತ್ನವನ್ನು ಮಾಡದೆ ಹಣ ಸಿಕ್ಕರೆ ಅದನ್ನು ಅನುಭವಿಸುವುದರಲ್ಲಿ ಏನು ಸುಖವಿದೆ ?
ಎಮ್ಮೆ ಮುದಿಯಾಗಿದೆ. ಜೀರ್ಣ ಶಕ್ತಿ ಕುಂದಿದೆ, ಕಾಲಿನಲ್ಲಿ ಕಸುವಿಲ್ಲ, ಮೇವು ಹುಡುಕಲು ಚೈತನ್ಯವಿಲ್ಲ. ಕೊನೆದಿನಗಳನ್ನು ಎಣಿಸುತ್ತಾ ಕೊಟ್ಟಿಗೆಯಲ್ಲಿ ಬಿದ್ದುಕೊಂದಿದೆ. ಆಗ ಯಾರಾದರೂ ಎರಡು ಹಿಡಿ ಹುಲ್ಲು ಹಾಕಿದರೆ ಅದನ್ನು ಜೀರ್ಣಿ ಸಿಕೊಳ್ಳಲು ಶಕ್ತಿ ಇಲ್ಲದಿದ್ದರೂ ತಿನ್ನುತ್ತದೆ. ಏಕೆಂದರೆ ಅದು ಪ್ರಯತ್ನ ಪಡದೆ ಸಿಕ್ಕಿದ್ದು. ಬೇಕೋ ಬೇಡವೋ ಅದನ್ನು ತಿನ್ನಬೇಕು ಎಂದು ಅದರ ಮನಸ್ಸು ಹೇಳುತ್ತದೆ. ಆದರೆ ತಿಂದ ಮೇಲೆ ಜೀರ್ಣಸಿಕೊಳ್ಳಲಾಗದೆ ಒದ್ದಾಡುತ್ತದೆ.
ಕೆಲವು ರಾಜಕಾರಣಿಗಳು, ಕೆಲವು ಅಧಿಕಾರಿಗಳು, ಕಳ್ಳರು ಹೀಗೆ, ತಿಂದಿದ್ದನ್ನು ಜೀರ್ಣಿಸಿಕೊಳ್ಳಲಾಗದೆ ಒದ್ದಾಡುತ್ತಿರುವ ಎಷ್ಟೋ ನಿದರ್ಶನ ಗಳು ನಮ್ಮ ಕಣ್ಣಮುಂದಿವೆ. ಪುಕ್ಕಟೆ ಸಿಕ್ಕುತ್ತೆ ಅಂತ ಹೊಟ್ಟೆಬಿರಿಯೆ ತಿಂದವರು ಅವರುಗಳು. ಕಷ್ಟಪಟ್ಟು ಗಳಿಸಿದ್ದವರಿಗೆ ಜೀರ್ಣಿಸಿಕೊಳ್ಳುವ ಪ್ರಮೇಯವೇ ಬರುವುದಿಲ್ಲ. ಜೊತೆಗೆ ಗಳಿಸಿದ್ದನ್ನು ಮನಸಾರೆ ಉಣ್ಣುವ ಸುಖವೂ ಸಿಗುತ್ತಿತ್ತು.
ಕೊನೆಯಲ್ಲಿ ನಾನು ಹೇಳುವುದೊಂದೆ ಅದೃಷ್ಟ ಅನ್ನುವುದು ಒಂದು ಭ್ರಮೆ. ಭ್ರಮೆ ಎನ್ನುವುದೊಂದು
ಮಾಯೆ. ಅದರ ಹಿಡಿತಕ್ಕೆ ಸಿಕ್ಕಿಹಾಕಿಕೊಳ್ಳುವ ಮುನ್ನ ಹುಷಾರು.
ವನಜಾ ಮಹಾಲಿoಗಯ್ಯ




ಸರಿಯಾದ ವಿಚಾರ