ಹೊಸವರ್ಷ ವಿಶೇಷ
ಸರಸ್ವತಿ ಕೆ ನಾಗರಾಜ್
“ಮೌನ ನಮನ”

ಜೀವನ ಅನ್ನೋದು ಅತ್ಯಂತ ಅಮೂಲ್ಯವಾದದ್ದು. ಹುಟ್ಟಿನಿಂದ ಸಾಯುವವರೆಗೂ ಅನುಭವಿಸುವ ಒಂದೊಂದು ಕ್ಷಣಗಳು ಆಗಾಗ ನೆನಪಿಗೆ ಬರುವಂಥವುಗಳು.
ಅವು ನಮ್ಮ ನೆರಳಿನಂತೆ ಹಿಂಬಾಲಿಸುತ್ತಿರುತ್ತವೆ. ಎಷ್ಟೋ ನೆನಪುಗಳು ಸುಃಖ ತರಬಹುದು;
ಇನ್ನು ಕೆಲವು ದುಃಖತರಬಲ್ಲವುಗಳು.
ಆದರೆ ಎಲ್ಲವೂ ನೆನಪುಗಳೇ ತಾನೆ!
ಕಾಲ ಎಲ್ಲವನ್ನೂ ಮರೆಸುತ್ತದೆ ಎನ್ನುತ್ತಾರೆ,
ಆದರೆ ಕೆಲವು ನೆನಪುಗಳು ಕಾಲವನ್ನೇ ದಾಟಿ ಬರುತ್ತವೆ.
ನಾನು ಹಿಂತಿರುಗಿ ನೋಡಿದಾಗಲೆಲ್ಲ,
ಮನಸು ನಗುವಂತೆ ಮಾಡಲಿ,
“ಹೌದು, ಅದು ಸವಿ ವರ್ಷ” ಎಂದು.
ಬದುಕಿನ ಜಂಜಾಟಗಳ ನಡುವೆ ಕೆಲವೊಂದಿಷ್ಟು ಮೌಲ್ಯವಾದ ನೆನಪನ್ನು ನಾವು ಮರೆಯದೆ ನೆನಪಿಸಿಕೊಳ್ಳೋಣ ಈ ವರುಷದ ಕೊನೆಯ ದಿನದಂದು. 31/12/2025, ಜೀವನದ ಓಟದಲ್ಲಿ ದಿನಗಳು ಎಣಿಕೆಯಾಗಿ ಹಾರಿದರೂ,
ನೆನಪುಗಳು ಮಾತ್ರ ಮನದೊಳಗೆ ನೆಲೆಸುತ್ತವೆ.
ಕೆಲವು ಕಣ್ಣಲ್ಲಿ ನೀರು ತರಿಸಿದರೆ,
ಕೆಲವು ತುಟಿಗಳಲ್ಲಿ ನಗು ಮೂಡಿಸುತ್ತವೆ.
ಕಾಲದ ಹೊಡೆತಕ್ಕೆ ಮಸುಕಾದರೂ,
ಹೃದಯದ ಮೂಲೆಯಲ್ಲಿ ಉಳಿಯುವವು
ಅವುಗಳೇ ನಿಜವಾದ ಸಂಪತ್ತು.
ಪಡೆದದ್ದಕ್ಕಿಂತ ಕಳೆದುಕೊಂಡ ಪಾಠಗಳು
ನಮ್ಮನ್ನು ಇನ್ನಷ್ಟು ಮಾನವನನ್ನಾಗಿಸುತ್ತವೆ.
ಈ ವರುಷದ ಕೊನೆಯ ದಿನದಂದು,
ಅಪೇಕ್ಷೆ,ನಿರೀಕ್ಷೆಗಳ ಗದ್ದಲ ಬಿಟ್ಟು,
ನಮ್ಮನ್ನೇ ನಾವು ಕ್ಷಣಕಾಲ ಆಲಿಸೋಣ.
ಕ್ಷಮೆ ಕೇಳಬೇಕಾದವರಿಗೆ ಮನಸಲ್ಲಿ ಕ್ಷಮೆ ಬೇಡೋಣ,
ಕ್ಷಮಿಸಬೇಕಾದವರನ್ನು ಹೃದಯದಿಂದ ಕ್ಷಮಿಸೋಣ.
ನಾಳೆ ಹೊಸ ವರ್ಷ ಎನ್ನುವ ನಿರೀಕ್ಷೆಯೊಂದಿಗೆ,
ಇಂದಿನ ದಿನವನ್ನು ಕೃತಜ್ಞತೆಯಿಂದ ಮುಗಿಸೋಣ.
ಎಲ್ಲಾ ನೋವುಗಳ ನಡುವೆಯೂ
ನಮ್ಮನ್ನು ಬದುಕಲು ಕಲಿಸಿದ ಈ ವರ್ಷಕ್ಕೆ
ಒಂದು ಮೌನ ನಮನ.
ಸರಸ್ವತಿ ಕೆ ನಾಗರಾಜ್




