ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

 ನವಂಬರ್ 25 ರಿಂದ ಡಿಸೆಂಬರ್ ನಾಲ್ಕರವರೆಗೆ ರಾಜಸ್ಥಾನದ ಜೈಪುರದ ಸವಾಯಿ ಮಾನಸಿಂಗ್ ಕ್ರೀಡಾಂಗಣದಲ್ಲಿ ಖೇಲೋ ಇಂಡಿಯಾ ರಾಷ್ಟ್ರ ಮಟ್ಟದ ಕ್ರೀಡಾ ಕೂಟ ನಡೆಯಿತು. ಭವಿಷ್ಯದ ಕ್ರೀಡಾಪಟುಗಳನ್ನು ಗುರುತಿಸುವ ಗುರುತರ ಜವಾಬ್ದಾರಿಯನ್ನು ಹೊಂದಿರುವ ಈ ಕ್ರೀಡಾಕೂಟದಲ್ಲಿ ಬಹುತೇಕ ರಾಷ್ಟ್ರದ ಎಲ್ಲಾ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ಭಾಗವಹಿಸಬೇಕಿತ್ತು. ಆದರೆ ಬೆರಳೆಣಿಕೆಯಷ್ಟು ಜನರು ಮಾತ್ರ ಒಂದೊಂದು ಆಟಗಳಲ್ಲಿ ಭಾಗವಹಿಸಿದ್ದರು. ಮತ್ತೆ ಕೆಲವರು ಆಯ್ಕೆಯಾಗಿದ್ದರು ಕೂಡ ಕ್ರೀಡೆಯಲ್ಲಿ ಭಾಗವಹಿಸಲಿಲ್ಲ. ಈ ಕುರಿತ ವಿಡಿಯೋ ಒಂದನ್ನು ನೋಡಿದಾಗ ತುಸು ಆಶ್ಚರ್ಯದ ಜೊತೆಗೆ  ಜಾಗೃತಿಯನ್ನು ಉಂಟುಮಾಡುವ ಅವಶ್ಯಕತೆಯನ್ನು ಮನಗಂಡು ಮಾಹಿತಿಯನ್ನು ಪಡೆದ ನಂತರ ಮೂಡಿದ ಲೇಖನ ನಿಮ್ಮ ಓದಿಗೆ.

ಖೇಲೊ ಇಂಡಿಯಾ ತರಬೇತಿ ಸಂಸ್ಥೆಗಳು ಹಾಗೂ ಕ್ರೀಡಾ ಅಕಾಡೆಮಿಗಳು ಖೇಲೋ ಇಂಡಿಯಾ ಯೋಜನೆಯಡಿ ಆಯ್ಕೆಯಾದ ನಂತರ ಅವರಿಗೆ ತರಬೇತಿಯ ಜೊತೆಗೆ ಆರ್ಥಿಕ ಧನ ಸಹಾಯ ಹಾಗೂ ಪ್ರತಿ ತಿಂಗಳು ನಿಗದಿತ ಮೊತ್ತದ ಪಾಕೆಟ್ ಅಲೋವೆನ್ಸ್ ದೊರೆಯುತ್ತದೆ. ರಾಷ್ಟ್ರಮಟ್ಟದಲ್ಲಿ ನಡೆಯುವ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಮೊದಲ ಮೂರುಸ್ಥಾನ ಗಳಿಸುವವರಿಗೆ ಸರ್ಕಾರದ ವಿವಿಧ ಇಲಾಖೆಗಳಲ್ಲಿ ನೌಕರಿಯ ಅನುಕೂಲತೆಯನ್ನು ಕೂಡ ಒದಗಿಸಲಾಗುತ್ತದೆ ಹಾಗೂ ಪದಕ ವಿಜೇತರಿಗೆ ನಿಗದಿತ ಮೊತ್ತವನ್ನು ಕೊಡ ಮಾಡಲಾಗುತ್ತದೆ.

ಭಾರತ ದೇಶದಲ್ಲಿ ಕ್ರೀಡಾ ಸಂಸ್ಕೃತಿಯನ್ನು ಉತ್ತೇಜಿಸುವ ಹಾಗೂ ಪ್ರತಿಭೆಗಳನ್ನು ಗುರುತಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಮಹತ್ವದ ಯೋಜನೆಯಾಗಿ ಗುರುತಿಸಲ್ಪಟ್ಟ ಖೇಲೋ ಇಂಡಿಯಾ ಕಾರ್ಯಕ್ರಮವು ಕೇಂದ್ರದ ಯುವಜನ ಮತ್ತು ಕ್ರೀಡಾ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ.  ವಿಶಾಲವಾದ ಖೇಲೊ ಇಂಡಿಯಾ ಎಂಬ  ಬೃಹತ್ ಪ್ರಮಾಣದ ಕ್ರೀಡಾ ಕೂಟಗಳನ್ನು ಭಾರತದ ಫನ ಸರ್ಕಾರವು ಆಯೋಜಿಸುತ್ತದೆ. ಪ್ರತಿ ಎರಡು ಜಿಲ್ಲೆಗಳಿಗೆ ಒಂದರಂತೆ ಒಟ್ಟು ಇಡೀ ದೇಶದಾದ್ಯಂತ 1041  ಖೇಲೋ ಇಂಡಿಯಾ ತರಬೇತಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ.

ಖೇಲೋ ಇಂಡಿಯಾ ಕಾರ್ಯಕ್ರಮದ ಅಡಿಯಲ್ಲಿ ವಿವಿಧ ಹಂತದ ಕ್ರೀಡಾಪಟುಗಳು 2025ರ ಸಾಲಿನಲ್ಲಿ ನಡೆದಿದ್ದು ಮುಖ್ಯವಾಗಿ ಮೂರು ಪ್ರಮುಖ ರೀತಿಯಕ್ರೀಡಾಕೂಟಗಳನ್ನು ಆಯೋಜಿಸಲಾಗಿತ್ತು, ಇದರಲ್ಲಿಖೇಲೊ ಇಂಡಿಯಾ ಯೂತ್ ಗೇಮ್ಸ್ ಎಂಬುದು ಯುವ ಕ್ರೀಡಾಪಟುಗಳಿಗಾಗಿ ನಡೆಸುವ ಪ್ರಮುಖ ಸ್ಪರ್ಧೆಯಾಗಿದ್ದು ಮೇ ತಿಂಗಳಲ್ಲಿ ಈ ಕ್ರೀಡಾಕೂಟವು ಬಿಹಾರ ರಾಜ್ಯದಲ್ಲಿ ನಡೆಯಿತು. 17 ವರ್ಷ ವಯಸ್ಸಿಗಿಂತ ಕಡಿಮೆ ಹಾಗೂ 21 ವರ್ಷ ವಯಸ್ಸಿಗಿಂತ ಕಡಿಮೆ ಇರುವ ವಿಭಾಗಗಳಲ್ಲಿ ಸ್ಪರ್ಧಿಸುವ ಅವಕಾಶವನ್ನು ಇಲ್ಲಿ ಕಲ್ಪಿಸಲಾಗುತ್ತದೆ. 28 ಬಗೆಯ ವಿವಿಧ ಕ್ರೀಡೆಗಳು ಇದರಲ್ಲಿ ಸೇರ್ಪಡೆಯಾಗಿದ್ದು ಯುವ ಜನತೆಯಲ್ಲಿ ಕ್ರೀಡೆಯ ಕುರಿತಾದ ಆಸಕ್ತಿಯನ್ನು ಹೆಚ್ಚಿಸಲು ಹಾಗೂ ಭವಿಷ್ಯದ ಕ್ರೀಡಾಪಟುಗಳನ್ನು ತಯಾರಿಸುವ ನಿಟ್ಟಿನಲ್ಲಿ ಇದೊಂದು ಅತ್ಯುತ್ತಮ ಪ್ರಯತ್ನವಾಗಿದೆ.

ಖೇಲೋ ಇಂಡಿಯಾ ವಿಂಟರ್ ಗೇಮ್ಸ್ ಎಂಬುದು ಚಳಿಗಾಲದ ಕ್ರೀಡೆಯಾಗಿದ್ದು 2025 ಈ ಆವೃತ್ತಿಯು  ಹಾಗೂ ಜಮ್ಮು ಮತ್ತು ಕಾಶ್ಮೀರ, ಹಾಗೂ ಲಡಾಕ್ ಗಳಲ್ಲಿ ಎರಡು ಹಂತಗಳಲ್ಲಿ ನಡೆಯಿತು.

ಖೇಲೋ ಇಂಡಿಯಾ ಬೀಚ್ ಗೇಮ್ಸ್ ಎಂಬ ಮತ್ತೊಂದು ವಿಶೇಷವಾದ ಸ್ಪರ್ಧೆಯು ಕಡಲ ತೀರದ ಕ್ರೀಡೆಗಳಿಗಾಗಿ ಮೀಸಲಾಗಿದ್ದು ದಾದರ್ ಹಾಗೂ ನಗರ ಹವೇಲಿ ಮತ್ತು ದಮನ್ ಮತ್ತು ಡಯು ಕೇಂದ್ರಾಡಳಿತ ಪ್ರದೇಶಗಳಲ್ಲಿ ನಡೆಯಿತು.
ಕಡಲ ತೀರದಲ್ಲಿ ಆಡುವ ಆಟಗಳಾದ ವಾಲಿಬಾಲ್, ಬಾಸ್ಕೆಟ್ ಬಾಲ್, ಮಲ್ಲಕಂಬ, ಹಗ್ಗ ಜಗ್ಗಾಟ ಹಾಗೂ ಈಜುಗಳು ಇದರಲ್ಲಿ ಸೇರಿದ್ದವು.

 ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ ಗಳು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ನಡೆಯುವ ಸ್ಪರ್ಧೆಯಾಗಿದ್ದು 2025ರ ಡಿಸೆಂಬರ್ ನಾಲ್ಕರವರೆಗೆ ಸುಮಾರು 11 ದಿನಗಳ ಕಾಲ ರಾಜಸ್ಥಾನದ ಜೈಪುರದಲ್ಲಿ ಈ ಕ್ರೀಡಾಕೂಟವು ನಡೆಯಿತು.

ಸುಮಾರು 23ಕ್ಕೂ ಹೆಚ್ಚು ವಿವಿಧ ಬಗೆಯ ಸ್ಪರ್ಧೆಗಳು ಈ ಕ್ರೀಡಾಕೂಟದಲ್ಲಿ ನಡೆದಿದ್ದು, ಭಾರತ ದೇಶದ ಇನ್ನೂರಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳಿಂದ ನಾಲ್ಕುವರೆ ಸಾವಿರದಿಂದ ಏಳು ಸಾವಿರ ವಿದ್ಯಾರ್ಥಿಗಳು ಭಾಗವಹಿಸಿರುವ ಈ ಕ್ರೀಡಾಕೂಟದಲ್ಲಿ ಭಾಗವಹಿಸಿದ ಬಹುತೇಕ ವಿದ್ಯಾರ್ಥಿಗಳು ಆಟದಲ್ಲಿ ಪಾಲ್ಗೊಳ್ಳದೆ ಹೋಗಿದ್ದಾರೆ.

400 ಮೀಟರ್ ಓಟದಲ್ಲಿ ಕುರುಕ್ಷೇತ್ರ ವಿಶ್ವವಿದ್ಯಾಲಯದಿಂದ ಬಂದ ಕೇವಲ ಓರ್ವ ವಿದ್ಯಾರ್ಥಿನಿ ಓಡಿದ್ದರೆ ಅದೇ 400 ಮೀಟರ್ ಹರ್ಡಲ್ಸ್ ನಲ್ಲಿ ಕೇವಲ ಓರ್ವ ವಿದ್ಯಾರ್ಥಿ ಓಡಿದ್ದು ತನ್ನ ಹಿಂದಿನದಾಖಲೆಯನ್ನು ಮುರಿದು ಹೊಸ ದಾಖಲೆಯನ್ನು ಸೃಷ್ಟಿಸಿದ್ದಾನೆ. ಆದರೆ ಈ ಇಬ್ಬರು ಓಟಗಾರರಿಗೂ ಮೆಡಲುಗಳು ದೊರೆತಿಲ್ಲ.

 ನಿಯಮದ ಪ್ರಕಾರ ಎಲ್ಲಾ ಯುನಿವರ್ಸಿಟಿಗಳ ಭಾಗವಹಿಸಿದ ವಿದ್ಯಾರ್ಥಿಗಳಲ್ಲಿ ಒಂದೊಂದು ಅಥ್ಲೆಟಿಕ್ ಕ್ರೀಡೆಯಲ್ಲಿಯೂ ಅತಿ ಹೆಚ್ಚು ಪಾಯಿಂಟ್ಗಳನ್ನು ಗಳಿಸಿರುವ ಕ್ರೀಡಾಪಟುಗಳಿಗೆ ಆಯ್ಕೆಯಲ್ಲಿ ಅವಕಾಶವಿದ್ದು ಈ ಹಿಂದೆ ನಡೆದಿರುವ ಯೂನಿವರ್ಸಿಟಿ ಮಟ್ಟದ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಅಂತಿಮ ಘಟ್ಟವನ್ನು ತಲುಪಿರುವ ಮೊದಲ ಎಂಟು ಜನ ವಿದ್ಯಾರ್ಥಿಗಳನ್ನು ಇಲ್ಲಿ ಆಯ್ಕೆ ಮಾಡಿಕೊಳ್ಳಲಾಗುತ್ತದೆ.

 ಹೀಗೆ ರಾಷ್ಟ್ರ ಮಟ್ಟದಲ್ಲಿ ಖೇಲೋ ಇಂಡಿಯಾ ಕಾರ್ಯಕ್ರಮದ ಅಡಿಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ಆಟದ ಮೈದಾನಕ್ಕೆ ಬರದೆ ಹೋಗುವುದು ವಿಪರ್ಯಾಸದ ಸಂಗತಿ. ಇದಕ್ಕೆ ಕಾರಣಗಳು ಹಲವಾರು.

* ಈಗಾಗಲೇ ಸರಕಾರಿ ನೌಕರಿ ದೊರೆತಿರುವ ಕಾರಣ ಅಂತಹವರಿಗೆ ಅವಕಾಶವನ್ನು ನಿರಾಕರಿಸಲಾಗುತ್ತದೆ.

*ಮುಂದಿನ ದೊಡ್ಡ ಕ್ರೀಡಾ ಚಟುವಟಿಕೆಗೆ ಸಿದ್ಧತೆ ಮಾಡಿಕೊಳ್ಳುತ್ತಿರುವವರು ಕೂಡ ಈ ಕ್ರೀಡಾಕೂಟದಲ್ಲಿ ಭಾಗವಹಿಸುವುದನ್ನು ನಿರಾಕರಿಸಬಹುದು.

*ಮಾದಕ ವಸ್ತು ಸೇವನೆಯ ಪರೀಕ್ಷೆ. ರಾಷ್ಟ್ರೀಯ
ಮಾದಕ ದ್ರವ್ಯ ಸೇವನೆ ವಿರೋಧಿ ಸಂಸ್ಥೆಯಾದ ‘ನ್ಯಾಷನಲ್ ಆಂಟಿ ಡೋಪಿಂಗ್ ಏಜೆನ್ಸಿ’ಯಿಂದ ನಡೆಸಲ್ಪಡುವ ಮಾದಕ ದ್ರವ್ಯ ಸೇವನೆಯ ಪರೀಕ್ಷೆಯ ಭಯದಿಂದ ಕ್ರೀಡಾಕೂಟದಿಂದಲೇ ಹೊರ ನಡೆಯುವುದು.

ಇಲ್ಲಾಗಿದ್ದೂ ಅದೇ. ಎಷ್ಟೋ ಬಾರಿ ಆಹಾರ ಸೇವನೆಯ ವ್ಯತ್ಯಾಸದಿಂದಾಗಿ ಕೂಡ ಹಾರ್ಮೋನುಗಳಲ್ಲಿ ಬದಲಾವಣೆಯನ್ನು ಕಂಡುಕೊಳ್ಳಬಹುದು ಅಥವಾ ವೈದ್ಯರು ಹೇಳಿರುವ ಔಷಧಿಗಳಲ್ಲಿ, ಕೆಲ ನಿಷೇಧಿತ ವಸ್ತುಗಳಲ್ಲಿ ನಾಡಾ ಸಂಸ್ಥೆಯು ಅಂಗೀಕರಿಸದೆ ಇರುವಹಾರ್ಮೋನುಗಳನ್ನು ಹಾಗೂ ದೈಹಿಕ ಬಲವನ್ನು ಪ್ರಚೋದಿಸುವ ಔಷಧಿಗಳನ್ನು ಸೇವಿಸಿದ ಕುರಿತು ಕ್ರೀಡಾಪಟುವಿನ ರಕ್ತ ಮತ್ತು ಮೂತ್ರದ ಸ್ಯಾಂಪಲ್ ಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಅಂತರಾಷ್ಟ್ರೀಯ ಗುಣಮಟ್ಟದ ಪ್ರಯೋಗಾಲಯಗಳಲ್ಲಿ ಪರೀಕ್ಷಿಸಲ್ಪಡುವ ರಕ್ತ ಹಾಗೂ ಮೂತ್ರದ ಮಾದರಿಗಳಲ್ಲಿ ಸಂಸ್ಥೆಯು ನಿಷೇಧಿಸಿರುವ ಯಾವುದಾದರೂ ಒಂದು ಮಾದಕ ದ್ರವ್ಯವನ್ನು ಹೊಂದಿದ್ದರೆ ಆಟಗಾರರನ್ನು ಕೆಲ ತಿಂಗಳು ಇಲ್ಲವೇ ಕೆಲ ವರ್ಷಗಳ ಕಾಲ ಆಟದಿಂದ ಹೊರಗಿಡಬಹುದು. ಕ್ರೀಡೆಯಿಂದಲೇ ನಿಷೇಧಿಸಬಹುದು. ನೋವು ಅಪಮಾನಗಳು ಅವರನ್ನು ಬೆನ್ನಟ್ಟಬಹುದಾದ ಸಾಧ್ಯತೆಗಳು ಬಹಳ.

ಬಹುತೇಕ ಕ್ರೀಡಾಪಟುಗಳು ತಮ್ಮ ದೈಹಿಕ ಸಾಮರ್ಥ್ಯವನ್ನು, ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಕೂಡ ಇಂತಹ ಮಾದಕ ದ್ರವ್ಯಗಳ ಸೇವನೆಯಲ್ಲಿ ತೊಡಗಿಕೊಂಡಿರುತ್ತಾರೆ, ಮತ್ತೆ ಕೆಲವೊಮ್ಮೆ ಬಹು ರಾಷ್ಟ್ರೀಯ ಕಂಪನಿಗಳ ತಯಾರಿಕೆಯ ಆಹಾರ ಪದಾರ್ಥ ಹಾಗೂ ಕೂಲ್ ಡ್ರಿಂಕ್ ಗಳಲ್ಲಿ ಹೆಚ್ಚಿನ ಮಟ್ಟದ ನಿಷೇಧ ಪದಾರ್ಥಗಳು ಇರುವುದು ಇವುಗಳ ಸೇವನೆಯಿಂದಲೂ ಕೂಡ ಕ್ರೀಡಾಪಟುಗಳು ತೊಂದರೆಯನ್ನು ಅನುಭವಿಸುತ್ತಾರೆ. ಎಷ್ಟೋ ಬಾರಿ ಯಾವ ಆಹಾರವನ್ನು ಸೇವಿಸಬೇಕು ಯಾವುದನ್ನು ಸೇವಿಸಬಾರದು ಎಂಬ ಅರಿವಿನ ಕೊರತೆಯಿಂದಲೂ ಇಂತಹ ತೊಂದರೆಗಳು ಉದ್ಧವಿಸುತ್ತವೆ…ಆದ್ದರಿಂದಲೇ ಬಹಳಷ್ಟು ವಿದ್ಯಾರ್ಥಿಗಳು ಈ ಪರೀಕ್ಷೆಯನ್ನು ತಪ್ಪಿಸುವ ಸಲುವಾಗಿ ಕ್ರೀಡೆಯಿಂದಲೇ ಹೊರಗೆ ಉಳಿಯುತ್ತಾರೆ.

ಇಲ್ಲಾದದ್ದು ಕೂಡ ಅದೇ. ಬಹುತೇಕ ರಾಷ್ಟ್ರಮಟ್ಟದ ಅಥ್ಲೆಟಿಕ್ ಕ್ರೀಡಾಕೂಟಗಳಲ್ಲಿ ಮೂರು ಇಲ್ಲವೇ ಅದಕ್ಕಿಂತಲೂ ಹೆಚ್ಚಿನ ಪ್ರಮಾಣದ ಕ್ರೀಡಾಪಟುಗಳು ಇರಲೇಬೇಕು ಎಂಬುದು ನಿಯಮ…. ಹಾಗಿದ್ದರೆ ಮಾತ್ರ ಅವರಿಗೆ ಸ್ಥಾನಮಾನ ಹಾಗೂ ಪದಕ ಗೆಲ್ಲಲು ಅವಕಾಶ.ಆದರೆ ಖೇಲೋ ಇಂಡಿಯಾದಲ್ಲಿ ಕ್ರೀಡಾಕೂಟದ ಆರಂಭದ ದಿನ ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಭಾಗವಹಿಸದೇ ಇರುವುದು ಇದೇ ಕಾರಣಕ್ಕೆ. ಇದೊಂದು ಅಪಾಯಕಾರಿ ಬೆಳವಣಿಗೆ ಅಲ್ಲವೇ?? ಇದೇ ರೀತಿ ಪರಿಸ್ಥಿತಿ ಮುಂದುವರೆದರೆ ಮುಂದಿನ ದಿನಗಳಲ್ಲಿ ಭಾರತ ದೇಶದಲ್ಲಿ ಕ್ರೀಡೆಗಳಲ್ಲಿ ಭಾಗವಹಿಸುವವರ ಸಂಖ್ಯೆ ಗಣನೀಯವಾಗಿ ಇಳಿಮುಖವಾಗುತ್ತದೆ. ಮೌಲ್ಯಗಳೇ ಬದುಕು ಎಂದು ಉಸಿರಾಡುವ ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಅಜ್ಞಾನ ಮತ್ತು ಅರಿವಿನ ಕೊರತೆಯ ಕಾರಣದಿಂದಾಗಿ ಬಹಳಷ್ಟು ಕ್ರೀಡಾಪಟುಗಳು ತಮ್ಮ ಕ್ರೀಡಾ ಬದುಕಿಗೆ ವಿದಾಯ ಹೇಳಿದ್ದಾರೆ. ಮತ್ತೆ ಕೆಲವರು ಪುಟಿದೆದ್ದ ಚಂಡಿನಂತೆ, ಸುಟ್ಟ ಬೂದಿಯಲ್ಲಿ ಮರು ಹುಟ್ಟು ಪಡೆದುಕೊಳ್ಳುವ  ಫೀನಿಕ್ಸ್ ನಂತೆ ಮರಳಿ ಅಂಗಳಕ್ಕೆ ಇಳಿದು ಯಶಸ್ಸು ಕಂಡುಕೊಂಡಿದ್ದಾರೆ.

ಈ ನಿಟ್ಟಿನಲ್ಲಿ ಸರ್ಕಾರ ಗಂಭೀರವಾಗಿ  ಯೋಚಿಸಬೇಕಾಗಿದೆ. ಕ್ರೀಡಾಪಟುಗಳಲ್ಲಿ ಕ್ರೀಡೆಗೆ ಅತ್ಯವಶ್ಯಕವಾದ ಶಿಸ್ತು, ಪರಿಶ್ರಮ, ಶ್ರದ್ಧೆ, ಸ್ಥಿರತೆಯ ಜೊತೆ ಜೊತೆಗೆ ಮೌಲ್ಯಗಳನ್ನು ಕೂಡ ಅಭಿವೃದ್ಧಿಪಡಿಸಬೇಕಾದ ಅವಶ್ಯಕತೆಯನ್ನು ಮನಗಂಡು ಅವರಿಗೆ ತರಬೇತಿ ಕೊಡಬೇಕು.

ಜಾಗತಿಕ ಜನಸಂಖ್ಯೆಯಲ್ಲಿ ಎರಡನೇ ಸ್ಥಾನವನ್ನು ಪಡೆದಿದ್ದರೂ ಕೂಡ ಕ್ರೀಡೆಯ ವಿಷಯದಲ್ಲಿ ಪ್ರಪಂಚದ 190ಕ್ಕೂ ಹೆಚ್ಚು ದೇಶಗಳ ಕ್ರೀಡಾಪಟ್ಟಿಯಲ್ಲಿ ಅತ್ಯಂತ ಕೆಳಗಿನ ಸ್ಥಾನವನ್ನು ಗಳಿಸಿರುವ ಭಾರತ ಮುಂದಿನ ದಿನಗಳಲ್ಲಿ ಮತ್ತಷ್ಟು ಶೋಚನೀಯ ಪರಿಸ್ಥಿತಿಗೆ ಇಳಿಯುವುದನ್ನು ತಪ್ಪಿಸಬೇಕು. ಇದು ನಮ್ಮ ಭಾರತ ಫನ ಸರ್ಕಾರದ ಆದ್ಯತೆಯ ಪಟ್ಟಿಯಲ್ಲಿ ಮಂಚೂಣಿಯಲ್ಲಿ ಇರಬೇಕಾದ ವಿಷಯವಾಗಿದ್ದು ಈ ನಿಟ್ಟಿನಲ್ಲಿ ವಿವಿಧ ಕ್ರೀಡಾ ಸಂಸ್ಥೆಗಳು ಹಾಗೂ ಸರ್ಕಾರದ ಯುವಜನ ಮತ್ತು ಕ್ರೀಡಾ ಇಲಾಖೆ ಸಂಯುಕ್ತವಾಗಿ ಯೋಜನೆಗಳನ್ನು ರೂಪಿಸುವ, ಅವುಗಳನ್ನು ಅನುಷ್ಠಾನಕ್ಕೆ ತರುವ ಮೂಲಕ ಭಾರತದಲ್ಲಿ ಕ್ರೀಡೆಗಳ ಅಭಿವೃದ್ಧಿಗೆ ನಾಂದಿ ಹಾಡಲಿ ಎಂಬ ಆಶಯದೊಂದಿಗೆ


About The Author

Leave a Reply

You cannot copy content of this page

Scroll to Top