ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಉಕ್ಕಿನ ಮನುಷ್ಯ  2006 ರಲ್ಲಿ ಶ್ರೀ ಹಳ್ಳಿಕೇರಿ ಗುದ್ಲೆಪ್ಪನವರ ಶತಮಾನೋತ್ಸವ ಆಚರಣೆ ಸಂದರ್ಭದ ಸಂಸ್ಮರಣ ಗ್ರಂಥಪುಷ್ಪವಿದು.ಡಾ.ಎಂ.ಎಂ.ಕಲಬುರ್ಗಿ,ಡಾ.ಸಿದ್ಧಲಿಂಗಪಟ್ಟಣಶೆಟ್ಟಿ,ಪ್ರೊ.ಆರ್.ವಿ.ಹೊರಡಿ,ಡಾ.ಎಸ್.ಎಚ್.ಪಾಟೀಲ,ಡಾ.ವಿ.ವಿ.ಹೆಬ್ಬಳ್ಳಿ,ಶ್ರೀ.ನಿರಂಜನ ವಾಲಿಶೆಟ್ಟರವರು ಈ ಕ್ರೃತಿಯ ಸಂಪಾದಕರು.

“ಗಾಂಧೀಜಿದರ್ಶನದ ರೋಮಾಂಚನವೆ ನಾಂದಿ
ಹಳ್ಳಿ-ಕೇರಿಯ ಮೀರಿ ಹ್ರೃದಯದಲಿ ಪುಟಿದೆದ್ದ
ದೇಶಭಕ್ತಿಯ ಚಿಲುಮೆ!ಹೋರಾಟಕ್ಕೆ ಗುದ್ದ-
ಲಿ ಪೂಜೆ,ಸೆರೆಮನೆಯ ವಾಸ,ಖಾದಿಯೆ ಹಾದಿ
ದೀನದಲಿತರಿಗೆ ಸಂವಾದಿ,ಹಗಲೂರಾತ್ರಿ ದುಡಿಮೆ”……

– ಡಾ.ಚನ್ನವೀರ ಕಣವಿ. ಅವರ ಈ ಕವಿವಾಣಿಯಂತೆ  ಅಪೂರ್ವ ಸೇವೆಯಲಿ ಜೀವ ತೇಯ್ದ ಪ್ರಾತಃಸ್ಮರಣೀಯರು, ಪರುಷ ಮಣಿ ಹರುಷದ ಖಣಿ, ರಾಜಕೀಯ ಕ್ಷೇತ್ರದ ರ್ಯಾಂಗ್ಲರ್, ವೀರ ಸ್ವಾತಂತ್ರ್ಯಸೇನಾನಿ, ರಾಷ್ಟ್ರೀಯತೆಯ ಹರಿಕಾರ, ದಿಟ್ಟ ಹೃದಯದ ಗಟ್ಟಿ ಜೀವ, ಚುಂಬಕ ಶಕ್ತಿಯ ವ್ಯಕ್ತಿ, ಅದ್ವಿತೀಯ ಕಾಯಕ ಜೀವಿ, ಗಾಂಧೀಜಿಯವರ ತತ್ವಗಳಂತೆ ಜೀವಿಸಿದ ಅಸಾಮಾನ್ಯ ವ್ಯಕ್ತಿತ್ವವುಳ್ಳವರು, ಕಿಂಗ್ ಮೇಕರ್, ಹಳ್ಳಿ ಹಳ್ಳಿಗೂ ಸ್ವಾತಂತ್ರ್ಯ ಸಮರದ ಕಿಚ್ಚು ಹಚ್ಚಿದವರು,ಕರ್ನಾಟಕದ ಹುಲಿ ಭಾರತದ ಕಲಿ, ಅದಮ್ಯ ಶಕ್ತಿಯ ಚೈತನ್ಯ ಮೂರ್ತಿ, ದೇಶ ಬಂಧು, ಗುಣಗ್ರಾಹಿ ಮುಂದಾಳು, ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕರು, ಜನರಿಂದ ಜನರಿಗಾಗಿ ಜನರ ನಡುವೆ ಬೆಳೆದ ಸುಭಟರು, ಕರ್ನಾಟಕದ ಕೇಸರಿ, ಆದರ್ಶ  ಧೀಮಂತ ಜನನಾಯಕರು, ರಾಷ್ಟ್ರ ಪ್ರೇಮಿ, ಗಾಂಧೀ ತತ್ವ ಅನುಷ್ಠಾನದ ನೆಲೆ ವಿದ್ಯಾರ್ಥಿ ಸ್ಪೂರ್ತಿಯ ಸೆಲೆ,ಸತ್ಯನಿಷ್ಠ ದೇಶಪ್ರೇಮಿ ಹಾಗೂ ಗಾಂಧಿವಾದಿ, ಸಂಘಟನಾ ಚತುರರು, ಕರ್ನಾಟಕದ ಕರ್ಮಯೋಗಿವರ್ಯರು, ಮಾನವೀಯ ಅನುಕಂಪ ಭರಿತ ಜನನಾಯಕರೆಂದೇ ಪ್ರಖ್ಯಾತರಾದ ‘ಉತ್ತರ ಕರ್ನಾಟಕದ ಉಕ್ಕಿನ ಮನುಷ್ಯರೆಂದೆ’ ಚಿರಪರಿಚಿತರಾದವರು ಸನ್ಮಾನ್ಯ ಶ್ರೀ.ಗುದ್ಲೆಪ್ಪ ಹಳ್ಳಿಕೇರಿಯವರು.

oplus_10485792

            ಶ್ರೀ.ವೀರಪ್ಪ-ವೀರಮ್ಮ ದಂಪತಿಗಳ ಪುಣ್ಯಗರ್ಭದಲ್ಲಿ ಕೊನೆಯ ಸುಪುತ್ರರಾಗಿ ದಿ.6-6-1906 ರಲ್ಲಿ ಹಾವೇರಿ ಜಿಲ್ಲೆಯ ಹೊಸರಿತ್ತಿಯಲ್ಲಿ ಜನಿಸಿರುವ ಗುದ್ಲೆಪ್ಪನವರು ಧಾರವಾಡದ ಶ್ರೀಗುರು ಮೃತ್ಯುಂಜಯಪ್ಪಗಳವರ ಮುರುಘಾಮಠದ ವಿದ್ಯಾರ್ಥಿನಿಲಯದಲ್ಲಿ ವಿದ್ಯಾಭ್ಯಾಸ ಆರಂಭಿಸಿದರು. ಮೊದಲು ಧಾರವಾಡದ ಕರ್ನಾಟಕ ಹೈಸ್ಕೂಲು, ಆನಂತರ ಆರ್.ಎಲ್.ಎಸ್. ಹೈಸ್ಕೂಲಿನಲ್ಲಿ ವಿದ್ಯಾಭ್ಯಾಸ ಪಡೆದ ಶ್ರೀಯುತರು ಗಣಿತ ವಿಷಯದಲ್ಲಿ ಅದ್ಭುತ ಸ್ಮರಣ ಮತ್ತು ಮೇಧಾ ಶಕ್ತಿಯಿಂದಾಗಿ ‘ಬೆಳೆವ ಸಿರಿ ಮೊಳಕೆಯಲ್ಲಿ ನೋಡು’ ಎಂಬ ಉಕ್ತಿಯಂತೆ ಪ್ರತಿಭಾವಂತ ವಿದ್ಯಾರ್ಥಿಯೆಂದು ಪ್ರಖ್ಯಾತರಾಗಿದ್ದರು.

1924 ರಲ್ಲಿ ಬೆಳಗಾವಿಯ ಕಾಂಗ್ರೆಸ್ ಅಧಿವೇಶನದಲ್ಲಿ ಸ್ವಯಂಸೇವಕರಾಗಿ ಭಾಗವಹಿಸಿದರು.ಗಾಂಧೀಜಿಯವರನ್ನು ಕಂಡು ಅವರ ವ್ಯಕ್ತಿತ್ವಕ್ಕೆ ಪ್ರಭಾವಿತರಾದರು. ಗಣಿತಶಾಸ್ತ್ರದಲ್ಲಿ ಇಂಗ್ಲೆಂಡಿನ  ರ್ಯಾಂಗ್ಲರ್ ಪದವಿ ಪಡೆಯುವ ಸದವಕಾಶವನ್ನು ಕಡೆಗಣಿಸಿ ಭಾರತದ ಸ್ವಾತಂತ್ರ್ಯ ಆಂದೋಲನದಲ್ಲಿ ಧುಮುಕಿದರು. ಅಪ್ಪಟ ಗಾಂಧಿವಾದಿಯಾಗಿ,ಕಾಂಗ್ರೆಸ್ಸಿಗರಾಗಿ ರೂಪುಗೊಂಡರು.

1928-1942 ರ ಅವಧಿಯಲ್ಲಿ ಹೊಸರಿತ್ತಿಯಲ್ಲಿ ಭಾರತೀಯ ತರುಣ ಸಂಘ ಸ್ಥಾಪಿಸಿದರು. ಸಾಬರಮತಿ ಆಶ್ರಮದ ಮಾದರಿಯಲ್ಲಿ ಹೊಸರಿತ್ತಿಯಲ್ಲಿ ಗಾಂಧಿ ಆಶ್ರಮ ಹಾಗೂ ಗ್ರಾಮೀಣ ಮಕ್ಕಳಿಗಾಗಿ ಪ್ರೌಢಶಾಲೆ ಸ್ಥಾಪಿಸಿದರು. ರಾಷ್ಟ್ರೀಯ ವಿದಾಯಕ ಕಾರ್ಯಗಳಲ್ಲಿ ನಿರತರಾಗಿ ದಂಡಿಯಾತ್ರೆ, ಉಪ್ಪಿನ ಸತ್ಯಾಗ್ರಹ ಹಾಗೂ ಚಲೇಜಾವ್ ಚಳುವಳಿಯಲ್ಲಿ ಭಾಗವಹಿಸಲು ಕರ್ನಾಟಕದಿಂದ ಕಾಂಗ್ರೆಸ್ಸಿನ ಏಕೈಕ ಸರ್ವಸ್ವಾಮ್ಯ ವ್ಯಕ್ತಿ ಎಂದು ರಾಷ್ಟ್ರಪಿತ ಮ. ಗಾಂಧೀಜಿಯವರಿಂದ ಆಯ್ಕೆಯಾದರು.ನಂತರ ಸತ್ಯಾಗ್ರಹದ ನಿಷ್ಠ ಅನುಯಾಯಿಯಾಗಿ ಉಪವಾಸ ಅನುಭವಿಸಿ ಜೈಲುವಾಸಿಯಾದರು.

1930 ರಲ್ಲಿ ಉಪ್ಪಿನ ಸತ್ಯಾಗ್ರಹದಲ್ಲಿ ಎರಡು ಸಲ ಜೈಲುವಾಸಿಯಾದರು. ಆಗ ಪ್ರತಿದಿನ 70 ಪೌಂಡ್ ಜೋಳ ಬೀಸುತ್ತಿದ್ದರು.1932 ರಲ್ಲಿ ಅಸಹಕಾರ ಆಂದೋಲನದಲ್ಲಿ ಎರಡು ವರ್ಷ ಜೈಲುವಾಸಿಯಾಗಿ ಜೈಲಿನಲ್ಲಿ ಎಲ್ಲರೂ ಭಂಗಿ ಕಾರ್ಯ ಮಾಡಲು ಆಗ್ರಹಿಸಿ 13 ದಿನ ಉಪವಾಸವಿದ್ದರು.

1937 ರಲ್ಲಿ ಅಕ್ಟೋಬರ್ 2 ರಂದು ಗಾಂಧೀ ಜಯಂತಿಯಂದು ಹೊಸರಿತ್ತಿಯ ಹರಿಜನ ಕೇರಿಯಲ್ಲಿ ರಾಷ್ಟ್ರಧ್ವಜದಡಿ ಖಾದಿ ವಸ್ತ್ರಧಾರಣೆ ಮತ್ತು ಖಾದಿ ಮಾಲೆ ವಿನಿಮಯ ಮಾಡುವುದರೊಂದಿಗೆ ಇಟಗಿಯ ಸ್ವಾತಂತ್ರ್ಯಯೋಧ ಶ್ರೀ ಬಸವಣ್ಣೆಪ್ಪ ಸಾಣೆಕೊಪ್ಪ ಅವರ ಭಗಿನಿ ಗಂಗಾದೇವಿಯವರೊಡನೆ ವಿಶಿಷ್ಟ ರೀತಿಯಲ್ಲಿ ವಿವಾಹವಾದರು.

1942 ರಲ್ಲಿ ಭಾರತ ಬಿಟ್ಟು ತೊಲಗಿ ಆಂದೋಲನದಲ್ಲಿ ಮೂರು ವರ್ಷ ಸೆರೆಮನೆ ವಾಸ ಅನುಭವಿಸಿದರು.ಆಗ ಮಹಾತ್ಮ ಗಾಂಧೀಜಿ ಕೈಕೊಂಡ ಉಪವಾಸಕ್ಕೆ ಅನುಗುಣವಾಗಿ 21 ದಿನ ಉಪವಾಸನಿರತರಾದರು.

                  1946-1960 ರ ವರೆಗೆ ಅಖಂಡ ಒಂದುವರೆ ದಶಕ ಧಾರವಾಡ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿದ್ದರು. 1952 ರಲ್ಲಿ ಹಾವೇರಿ ತಾಲೂಕಿನಿಂದ ಮುಂಬೈ ರಾಜ್ಯ ವಿಧಾನಸಭೆಗೆ ಆಯ್ಕೆಯಾದರು. ಅಖಿಲ ಕರ್ನಾಟಕ ಏಕೀಕರಣ ಚಳುವಳಿಯ ಸಂಘಟಕ ಮತ್ತು ಮುಂಚೂಣಿಯ ನಾಯಕರೆನಿಸಿದ್ದರು.1954 ರಲ್ಲಿ ಚೀನಾ ದೇಶಕ್ಕೆ ರಾಷ್ಟ್ರೀಯ ನಿಯೋಗದ ಪ್ರತಿನಿಧಿಯಾಗಿ ಭೇಟಿಯಾಗಿದ್ದರು. 1950-1955 ರ ವರೆಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್ಸಿನ ಪ್ರಧಾನ ಕಾರ್ಯದರ್ಶಿಯಾಗಿದ್ದರು.

1956-1960 ರ ವರೆಗೆ ಕರ್ನಾಟಕ ರಾಜ್ಯ ಖಾದಿ ಗ್ರಾಮೋದ್ಯೋಗ ಮಂಡಳಿಯ ಅಧ್ಯಕ್ಷರಾಗಿದ್ದರು. 1960 ರಲ್ಲಿ ಮೈಸೂರು ರಾಜ್ಯ ವಿಧಾನ ಪರಿಷತ್ತಿಗೆ ಆಯ್ಕೆಯಾಗಿದ್ದ ಸಂದರ್ಭದಲ್ಲಿ ಇಂಗ್ಲೆಂಡ್ ಜರ್ಮನಿ ಈಜಿಪ್ತ  ದೇಶಗಳಿಗೆ ರಾಷ್ಟ್ರೀಯ ನಿಯೋಗದ ಪ್ರತಿನಿಧಿಯಾಗಿ ಭೇಟಿಯಾಗಿದ್ದರು. 1962-1966 ರ ವರೆಗೆ ಕರ್ನಾಟಕ ವಿಧಾನ ಪರಿಷತ್ತಿನ ಸಭಾಪತಿಯಾಗಿದ್ದರು.1967 ರಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷರಾಗಿದ್ದರು. ದಕ್ಷಿಣ ಭಾರತದ ಹಿಂದಿ ಪ್ರಚಾರ ಸಭಾ ಕರ್ನಾಟಕ ಪ್ರಾಂತ್ಯಾಧ್ಯಕ್ಷರಾಗಿದ್ದರು. ದಕ್ಷಿಣ ಮಧ್ಯ ರೈಲ್ವೆ ಹಾಗೂ ರಾಜ್ಯ ರಸ್ತೆ ಸಾರಿಗೆ ಕಾರ್ಮಿಕ ಸಂಘಟನೆಗಳ ಅಧ್ಯಕ್ಷರಾಗಿದ್ದರು.1971 ರಲ್ಲಿ ದ್ವಿತೀಯ ಅವಧಿಗೆ ವಿಧಾನ ಪರಿಷತ್ತಿನ ಸಭಾಪತಿಯಾಗಿದ್ದರು.

            “ನನ್ನ ಕ್ರಿಯಾಶಕ್ತಿ ತನ್ನ ತೀವ್ರತೆಯನ್ನು ಎಂದು ಕಳೆದುಕೊಳ್ಳುವದೋ ಅಂದೇ ನನ್ನ ಕೊನೆಯ ಗಳಿಗೆಯಾಗಲಿ”ಎಂಬ ಶ್ರೀಯುತರ ಹೇಳಿಕೆಯಂತೆ 1971 ರಲ್ಲಿ ಲಿಂಗೖಕ್ಯರಾದ ಶ್ರೀಯುತರು ತಮ್ಮ  ಜೀವಿತಾವಧಿಯಲ್ಲಿ ಹುಬ್ಬಳ್ಳಿಯ ಕರ್ನಾಟಕ ವೈದ್ಯಕೀಯ ಮಹಾವಿದ್ಯಾಲಯ, ಬೆಳಗಾವಿಯ ಜವಾಹರಲಾಲ ನೆಹರು ವೈದ್ಯಕೀಯ ಮಹಾವಿದ್ಯಾಲಯ, ಬೆಂಗಳೂರಿನ ನಿಜಲಿಂಗಪ್ಪ ಮಹಾವಿದ್ಯಾಲಯ ಮತ್ತು ಕರ್ನಾಟಕದ ಪ್ರಪ್ರಥಮ ಬಿಜಿನೆಸ್ ಮ್ಯಾನೇಜಮೆಂಟ್ ಕಾಲೇಜ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಪ್ರತಿಷ್ಠೆಯ ಮ.ಗಾಂಧೀಜಿಯ ವಿಚಾರ ಪ್ರಣಾಳಿಕೆಯ ಜೀವನ ಶಿಕ್ಷಣ ತತ್ವಾಧಾರಿತ ಗಾಂಧೀ ಗ್ರಾಮೀಣ ಗುರುಕುಲ ನಾಡಿಗೆ ಧಾರೆಯೆರೆದ ಕೀರ್ತಿಶಾಲಿಗಳು. ಗ್ರಾಮೀಣ ವಿದ್ಯಾರ್ಥಿಗಳ ಶಿಕ್ಷಣಾಭಿವೃದ್ಧಿಗಾಗಿ ಶ್ರೀಯುತರು ಹೊಂದಿದ್ದ ಕಳಕಳಿಯ ಪ್ರತೀಕದಂತೆ ಶ್ರೀಯುತರ ಕೊಡುಗೆಗಳು ಕಂಗೊಳಿಸುತ್ತಲಿರುವದು ಅನುಕರಣೀಯವೇ ಸರಿ.

           ಹುಬ್ಬಳ್ಳಿ ಧಾರವಾಡ ಪರಿಸರವನ್ನು ಕರ್ಮಭೂಮಿಯನ್ನಾಗಿಸಿಕೊಂಡಿರುವ ಶ್ರೀ.ಹಳ್ಳಿಕೇರಿ ಗುದ್ಲೆಪ್ಪನವರು  ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ, ಹಾಗೂ ರಾಜಕೀಯಕ್ಷೇತ್ರಗಳನ್ನು ತಮ್ಮ ಜೀವನದ ಅವಿಭಾಜ್ಯ ರಾಷ್ಟ್ರೀಯ ಅಂಗಗಳನ್ನಾಗಿಸಿಕೊಂಡಿದ್ದರು. ಕರ್ನಾಟಕ ವಿಶ್ವವಿದ್ಯಾಲಯ, ಕರ್ನಾಟಕ ಕೃಷಿ ಮಹಾವಿದ್ಯಾಲಯ, ಕೆಎಲ್ಇ ಶಿಕ್ಷಣ ಸಂಸ್ಥೆಗೆ ಶ್ರೀಯುತರು ಸಲ್ಲಿಸಿದ ಸೇವೆ ಅಪಾರ ಹಾಗೂ ಅನನ್ಯವಾದುದೆಂಬುದಕ್ಕೆ ಶ್ರೀ.ಎಂ.ಎಫ್.ಉಪನಾಳವರ ಕಾವ್ಯ ಸಾಕ್ಷಿಯಂತಿದೆ.ಉದಾ:

“ಸ್ವಾತಂತ್ಯಸಂಗ್ರಾಮದ ಹುಲಿ
ಕರ್ನಾಟಕದ ಗಂಡುಗಲಿ
ಹೋರಾಟದ ಶಿಕ್ಷಣ ಸಾಬರಮತಿಯಲಿ ಕಾರ್ಯಕ್ಷೇತ್ರ,ಕರ್ನಾಟಕದಲಿ//
ಮಾಡಿದಿರಿ ವಿದೇಶ ಪರ್ಯಟನ
ಪಯಣದಲಿ ರಾಷ್ಟ್ರದ ಚಿಂತನ
ಹೊಸರಿತ್ತಿಯು ಗುರುಕುಲವಾಗಿದೆ ಚಂದನ ಪ್ರಗತಿಗಿಲ್ಲಿಲ್ಲ ಅದಾವ ಬಂಧನ”//.

ಈ ಕವನ ಶ್ರೀಯುತರ ಅಪೂರ್ವ ಸೇವೆಗೆ ಹಿಡಿದ ಕೖಗನ್ನಡಿಯಾಗಿರುತ್ತದೆ.

About The Author

Leave a Reply

You cannot copy content of this page

Scroll to Top