ಅಂಕಣ ಸಂಗಾತಿ
ವೃತ್ತಿ ವೃತ್ತಾಂತ
ಸುಜಾತಾ ರವೀಶ್
ವೃತ್ತಿ ಬದುಕಿನ ಹಿನ್ನೋಟ
ನೋಟ ~ ೨೦
ಮೊಗೆದಷ್ಟೂ ನೆನಪುಗಳು.

ಹೀಗೆ ಸ್ನೇಹಿತರೊಂದಿಗೆ ಜಾಲಿಯಾಗಿ ಪ್ರಯಾಣ ಮಾಡುತ್ತಾ ಆಫೀಸಿನಲ್ಲಿ ಹೊಸ ವ್ಯವಹಾರ ವಿಭಾಗದಲ್ಲಿ ಕೆಲಸ ಕಲಿಯುತ್ತಾ ದಿನಗಳು ಬಹಳ ಬೇಗನೆ ಓಡಿ ಹೋದ ಹಾಗೆ ಅನಿಸುತ್ತಿತ್ತು.
ಆಗ ಬಹಳ ಜನ ಅವಿವಾಹಿತ ಸಹೋದ್ಯೋಗಿಗಳು ಇದ್ದುದರಿಂದ ಅವರ ಮದುವೆ ಸಮಾರಂಭಗಳು ಆಗಾಗ ಆಗುತ್ತಿದ್ದವು. ಅಲ್ಲದೆ ಅವರ ಸೋದರ ಸೋದರಿಯರ ಮದುವೆಗಳು ನಡೆಯುತ್ತಿದ್ದವು .ಹಾಗೆ ನಂಜನಗೂಡಿನಲ್ಲಿ ಇದ್ದಾಗ ಹೋದ ಮದುವೆ ಸಮಾರಂಭಗಳಲ್ಲಿ ಮೊದಲನೆಯದು ಗಾಯತ್ರಿ ದೇವಿ ಅವರ ಅಕ್ಕನ ಮದುವೆ. ಅಂದು ಭಾನುವಾರವಾಗಿದ್ದರಿಂದ ಎಲ್ಲರೂ ಮಾತನಾಡಿಕೊಂಡು ಕೇಂದ್ರ ಬಸ್ ನಿಲ್ದಾಣದಲ್ಲಿ ಸೇರಿ ಅಲ್ಲಿಂದ ಮತ್ತೊಂದು ಬಸ್ನಲ್ಲಿ ಹೋಗಿ ಮದುವೆ ಸಮಾರಂಭ ಮುಗಿಸಿ ಬಂದಿದ್ದೆವು.
ಈ ಮೊದಲೇ ಹೇಳಿದ ಹಾಗೆ ಮಂಡ್ಯದಲ್ಲಿ ಸಹೋದ್ಯೋಗಿಯಾಗಿದ್ದು ಈಗ ನಂಜನಗೂಡಿಗೆ ಬಂದಿದ್ದ ಮಂಜುಳಾ ಅವರ ಮದುವೆ ನಮ್ಮದೇ ಶಾಖೆಯ ರೇವಣ್ಣ ಅವರೊಂದಿಗೆ ನಿಶ್ಚಯವಾಗಿದ್ದು ಮೈಸೂರಿನಲ್ಲಿ ಮದುವೆ ಇತ್ತು. ಅದು ಜುಲೈ ಒಂದರಂದು. ನಮಗೆ ಆಗ ಸಾಂದರ್ಭಿಕ ರಜೆ, ಜುಲೈನಿಂದ ಆರಂಭವಾಗಿ ಜೂನ್ ಗೆ ಕೊನೆಗೊಳ್ಳುತ್ತಿತ್ತು ಹಾಗಾಗಿ ಆ ರಜೆ ವರ್ಷದ ಮೊದಲ ದಿನವೇ ರಜೆ ಹಾಕಲು ಯಾರಿಗೂ ಇಷ್ಟ ಇರಲಿಲ್ಲ. ಬೆಳಿಗ್ಗೆ ಬೇಗ ಹೋಗಿ ಮದುವೆ ಮಂಟಪಕ್ಕೆ ಹಾಜರಾತಿ ಹಾಕಿ 11:30ಗೆ ಶಾಖೆಗೆ ವಾಪಸ್ ಆಗಿದ್ದೆವು. ಹಾಗೆಯೇ ಗೆಳತಿ ಸರಸ್ವತಿಯ ಮದುವೆಯು ಒಂದು ವಾರ ಬಿಟ್ಟು ಜುಲೈ 8ಕ್ಕೆ ಇದುದರಿಂದ ಅವಳ ಮದುವೆಗೆ ಸಹ ಹಾಗೆಯೇ ಬೆಳಿಗ್ಗೆಯೇ ಹೋಗಿ ಆಫೀಸಿಗೆ ಬಂದಿದ್ದೆವು.
11:30ಗೆ ಬಂದೆವು ಎಂದು ಹೇಳಿದೆನಲ್ಲ ಅದರ ವಿವರ ಹೇಳುತ್ತೇನೆ ಕೇಳಿ. ನಮ್ಮ ಉದ್ಯೋಗಿಗಳ ನಿಯಮಾವಳಿ Staff Regulation ಅನುಸಾರ ತಿಂಗಳಿನಲ್ಲಿ ಎರಡು ಬಾರಿ ಬೆಳಗ್ಗಿನ ಹೊತ್ತು ಒಂದು ಗಂಟೆ ಕಾಲ ಪರ್ಮಿಷನ್ ಹಾಗೂ ಸಂಜೆಯ ಹೊತ್ತು ಒಂದು ಗಂಟೆಕಾಲ ಪರ್ಮಿಷನ್ ತೆಗೆದುಕೊಳ್ಳಲು ಅವಕಾಶವಿದೆ .ಅಂದರೆ ತಿಂಗಳಲ್ಲಿ ಎರಡು ಬಾರಿ ಬೆಳಿಗ್ಗೆ 11:30ಗೆ ಬರಬಹುದು ಹಾಗೂ ಎರಡು ಬಾರಿ ನಾಲ್ಕು ವರೆಗೆ ಹೋಗಬಹುದು ಹಾಗೆ ಹೋಗಿದ್ದನ್ನು ಹಾಜರಾತಿ ಪುಸ್ತಕದಲ್ಲಿ ಬರೆಯುತ್ತಾರೆ ಏನಾದರೂ ಅನಿವಾರ್ಯ ತುರ್ತಿನ ಪರಿಸ್ಥಿತಿ ಇದ್ದಲ್ಲಿ ಆ ರೀತಿಯ ಅವಕಾಶವನ್ನು ಬಳಸಿಕೊಳ್ಳಬಹುದು. ಚಿಕ್ಕಬಳ್ಳಾಪುರದಲ್ಲಿ ಇದ್ದಾಗ ಮೈಸೂರಿಗೆ ಬರುವ ಮತ್ತು ವಾಪಸು ಹೋಗುವ ಸಂದರ್ಭದಲ್ಲಿ ಈ ಸೌಲಭ್ಯವನ್ನು ಬಳಸಿಕೊಳ್ಳುತಿದ್ದೆ. ನಂಜನಗೂಡಿಗೆ ರೈಲಿನಲ್ಲಿ ಹೋಗಿ ಬರುತ್ತಿದ್ದುದರಿಂದ ಆ ಸಮಯ ಈ ರೀತಿಯ ಅರ್ಲಿ ಪರ್ಮಿಷನ್ ಮತ್ತು ಲೇಟ್ ಪರ್ಮಿಷನ್ ಗಳಿಗೆ ಹೊಂದದೆ ಇದ್ದದರಿಂದ ಅಲ್ಲಿ ಹೆಚ್ಚು ಈ ಸೌಲಭ್ಯವನ್ನು ಬಳಸಿಕೊಳ್ಳುತ್ತಿರಲಿಲ್ಲ ಒಮ್ಮೊಮ್ಮೆ ದೇವಸ್ಥಾನಕ್ಕೆ ಹೋಗುವಾಗ ಬಳಕೆಯಾಗುತ್ತಿತ್ತು ಅಷ್ಟೇ.

ಮತ್ತೊಂದು ಸಮಾರಂಭದ ನೆನಪು ಎಂದರೆ ಸಹೋದ್ಯೋಗಿ ಪ್ರಕಾಶ್ ಅವರ ಮನೆಯ ಗೃಹಪ್ರವೇಶದ ಸಂದರ್ಭ ಅವರ ಮನೆ ಶ್ರೀ ರಾಮಪುರದ ಮಧುವನ ಲೇಔಟ್ ನಲ್ಲಿ ಕಟ್ಟಿದ್ದರು. ಅರ್ಧ ದಿನ ರಜೆ ಹಾಕಿ ನಾವು ಎಂಟು ಹತ್ತು ಜನದ ಗುಂಪು ಆ ಸಮಾರಂಭಕ್ಕೆ ಬಂದಿದ್ದೆವು. ವಾಪಸ್ ಹೋಗುವಾಗ ಅಲ್ಲಿಂದ ವಿವೇಕಾನಂದ ನಗರಕ್ಕೆ ಬಂದು ಅಲ್ಲಿಂದ ಬಸ್ ಹಿಡಿದು ಹೋಗಿದ್ದು. ಬರೀ ಬಯಲೇ ಕಾಣುತ್ತಿದ್ದ ಆ ಜಾಗ ಈಗ ಅದೆಷ್ಟು ಬ್ಯುಸಿ ಆಗಿದೆ ಎಂದರೆ ನಂಬಲು ಅಸಾಧ್ಯ.
ಈ ಮಧ್ಯೆ ಗೆಳತಿ ಕೃಪಾಳ ಮದುವೆ ನಿಶ್ಚಯವಾಗಿ ನಿಶ್ಚಿತಾರ್ಥವು ಸಹ ನಡೆಯಿತು. ಅವರ ಮನೆಯಲ್ಲೇ ನಡೆದ ನಿಶ್ಚಿತಾರ್ಥಕ್ಕೆ ನಾನು ಮತ್ತು ಶೈಲಾ ಹೋಗಿದ್ದೆವು.
ನಗದು ಗುಮಾಸ್ತೆಯಾಗಿ ಕೆಲಸ ಮಾಡಿದ್ದು ಸಹ ನಂಜನಗೂಡು ಶಾಖೆಯಲ್ಲಿ ಪ್ರಪ್ರಥಮ ಬಾರಿಗೆ. ಸಾಮಾನ್ಯವಾಗಿ ನಿಗಮದ ಎಲ್ಲಾ ಶಾಖೆಗಳಲ್ಲೂ ಕಾಯಂ ಆದ ಕ್ಯಾಶಿಯರ್ ನಗದು ಗುಮಾಸ್ತೆ ಇರುತ್ತಾರೆ. ಅವರು ರಜೆ ಹೋದಾಗ ಮಿಕ್ಕ ಸಹಾಯಕ ಹುದ್ದೆಯಲ್ಲಿರುವ ಉದ್ಯೋಗಿಗಳನ್ನು ಅವರ ಸೀನಿಯಾರಿಟಿ ಪ್ರಕಾರ ಪಟ್ಟಿ ಮಾಡಿ ಒಬ್ಬರಾದ ನಂತರ ಒಬ್ಬರ ಪಾಳಿ ಬರುವಂತೆ ಮಾಡಿರುತ್ತಾರೆ. ಚಿಕ್ಕಬಳ್ಳಾಪುರದಲ್ಲಿ ಇದ್ದಾಗ ಖಾಯಂ ಕ್ಯಾಶಿಯರ್ ಹೆಚ್ಚು ರಜೆ ಹೋಗುತ್ತಿರಲಿಲ್ಲ. ಅಲ್ಲದೆ ಮೊದಲ ಆರು ತಿಂಗಳು ನಮ್ಮನ್ನು ಕ್ಯಾಶಿಯರ್ ಹುದ್ದೆಯಲ್ಲಿ ಕೂಡಿಸುತ್ತಿರಲಿಲ್ಲ. ಹಾಗಾಗಿ ನನಗೆ ಒಂದು ದಿನವೂ ನಗದುಗುಮಾಸ್ತೆಯಾಗಿ ಕೆಲಸ ಮಾಡುವ ಅವಕಾಶ ಸಿಕ್ಕಿರಲಿಲ್ಲ.
ನಂಜನಗೂಡಿನಲ್ಲಿ ಆಗ ವೇಣುಗೋಪಾಲ್ ಎನ್ನುವವರು ಕ್ಯಾಶಿಯರ್ ಆಗಿದ್ದರು. ಅವರ ವೈಯುಕ್ತಿಕ ಕಾರಣಗಳಿಂದಾಗಿ ಅವರು ದೀರ್ಘ ರಜೆ ಹೋಗಿದ್ದರಿಂದ ನಮ್ಮೆಲ್ಲರಿಗೂ ನಗದು ಗುಮಾಸ್ತೆಯ ಸರದಿ ಬಂದಿತ್ತು. ನನಗೋ ನೋಟುಗಳನ್ನು ಕೈಯಲ್ಲಿ ಸರಿಯಾಗಿ ಹಿಡಿಯಲು ಸಹ ಬರುತ್ತಿರಲಿಲ್ಲ. ಅಲ್ಲದೆ ಒಂದು ರೀತಿಯ ಅಂಜಿಕೆ ಬೇರೆ ಆದರೆ ನನ್ನ ಸಹೋದ್ಯೋಗಿಗಳು ತುಂಬಾ ಸಹಕಾರ ನೀಡಿ ನನಗೆ ರಶೀದಿ ಬರೆಯುವ ಕೆಲಸ ಮಾತ್ರ ಬಿಟ್ಟು ರೂಢಿಯಾಗುವವರೆಗೆ ಬೇರೆಯವರೇ ಒಬ್ಬರಾದ ನಂತರ ಒಬ್ಬರು ಬಂದು ಹಣ ಎಣಿಸಿಕೊಳ್ಳುತ್ತಿದ್ದರು. ಇಲ್ಲಿನ ಅನುಭವದ ಮೇಲೆ ಇತ್ತೀಚೆಗೆ ಸಾಹಿತ್ಯ ರಂಗಕ್ಕೆ ಬಂದ ನಂತರ ಒಂದು ಕಥೆ ಬರೆದಿದ್ದೆ.
ಕ್ಯಾಶ್ ಕೌಂಟರ್ ಎಂದಾಗ ಮತ್ತೊಂದು ಘಟನೆ ನೆನಪಿಗೆ ಬರುತ್ತದೆ. ಆಗ ಕ್ಯಾಶ್ ಕೌಂಟರ್ ಗಳಲ್ಲಿ ನಗದು ಗುಮಾಸ್ತೆಯ ಜೊತೆಗೆ ಒಬ್ಬರು ಉನ್ನತ ಶ್ರೇಣಿ ಸಹಾಯಕರು ಸಹ ಇರುತ್ತಿದ್ದರು. ರಶೀದಿಗಳಿಗೆ ಸಹಿ ಹಾಕುತ್ತಿದ್ದು ಅವರೇ. ನಾವು ನಂಜನಗೂಡಿನಲ್ಲಿ ಇದ್ದಾಗ ಮಲಿಕ್ ಅನ್ನುವವರು ಕ್ಯಾಷ್ ಕೌಂಟರಿನ ಉನ್ನತ ಶ್ರೇಣಿ ಸಹಾಯಕರು. ಬೆಂಗಳೂರಿನವರನ್ನು ನಂಜನಗೂಡಿಗೆ ಪೋಸ್ಟ್ ಮಾಡಿದ್ದರು. ಅದು ಮೈಸೂರು ಬೆಂಗಳೂರು ವಿಭಾಗಗಳು ಪ್ರತ್ಯೇಕವಾಗುವ ಮೊದಲು. ಈಗ ಅವರು ಬೆಂಗಳೂರಿಗೆ ವರ್ಗಾವಣೆ ಕೇಳಿದ್ದರು. ಆದರೆ ವಿಭಾಗಗಳು ಬದಲಾಗಿದ್ದರಿಂದ ಸ್ವಲ್ಪ ತಡವಾಗಿತ್ತು. ಅವರು ಪ್ರತಿ ಶನಿವಾರ ಮಧ್ಯಾಹ್ನ ಬೆಂಗಳೂರಿಗೆ ತೆರಳಿ ಸೋಮವಾರ ಬೆಳಿಗ್ಗೆ ಬೆಂಗಳೂರಿನಿಂದ ನಂಜನಗೂಡಿಗೆ ಬರುತ್ತಿದ್ದರು. ಹೀಗೆ ಒಮ್ಮೆ ಬರುವಾಗ ಅವರ ಬಳಿ ಇದ್ದ ಕ್ಯಾಶ್ ಬಾಕ್ಸ್ ನ ಕೀ ಕಳೆದುಕೊಂಡು ಬಿಟ್ಟಿದ್ದರು. ಅದಕ್ಕೆ ತಗಲುವ ವೆಚ್ಚ ಅವರಿಂದ ವಸೂಲು ಮಾಡಿದ್ದು ಅಲ್ಲದೆ ಶಿಸ್ತಿನ ಕ್ರಮ ತೆಗೆದುಕೊಂಡು ಆಗ ಅವರಿಗೆ ಎರಡು ಇಂಕ್ರಿಮೆಂಟ್ ಗಳನ್ನು ಕಡಿತ ಮಾಡಲಾಗಿತ್ತು. ಜವಾಬ್ದಾರಿಯಿಂದ ಕೆಲಸ ಮಾಡಬೇಕು ಎನ್ನುವ ಎಚ್ಚರಿಕೆಯನ್ನು ನಾವು ಕಲಿತದ್ದೇ ಆಗ. ಈಗಲೂ ಕ್ಯಾಶ್ ಕೀ ನನ್ನ ಬಳಿ ಇರುವಾಗ ತುಂಬಾನೇ ಜಾಗ್ರತೆ ವಹಿಸುತ್ತೇನೆ. ಆ ಘಟನೆ ಮನಸ್ಸಿನಿಂದ ಮಾಸಿಯೇ ಇಲ್ಲ.
ಹಾಗೆ ಹೀಗೆ ನೋಡನೋಡುತ್ತಲೇ ನಂಜನಗೂಡಿಗೆ ಬಂದು ಒಂದು ವರ್ಷ ಕಳೆದೇ ಬಿಟ್ಟಿತು.1991 ಅಕ್ಟೋಬರ್ ಒಂದು ವರ್ಗಾವಣೆ ಪಟ್ಟಿ ಬಿಡುಗಡೆಯಾಗಿ ಕೆಲವು ಜನರಿಗೆ ಮೈಸೂರು ನಗರದ ಶಾಖೆಗಳಿಗೆ ವರ್ಗಾವಣೆ ಸಿಕ್ಕಿತು. ಮಧ್ಯೆ ಮಂಡ್ಯಗೆ ಹೋಗಿ ಬಂದಿದ್ದರಿಂದ ನಾನು ಒಂದು ತಿಂಗಳು ತಡವಾಗಿ ನಂಜನಗೂಡಿಗೆ ಬಂದಿದ್ದೆ. ಹಾಗಾಗಿ ನನಗೆ ಆ ಪಟ್ಟಿಯಲ್ಲಿ ಮೈಸೂರಿಗೆ ವರ್ಗಾವಣೆ ಸಿಕ್ಕಿರಲಿಲ್ಲ. ಮತ್ತೊಂದು ವರ್ಷ ಕಾಯಬೇಕಾಗಿತ್ತು. ಆದರೆ ನಂಜನಗೂಡು ಓಡಾಟ ಹೋಗಿದ್ದರಿಂದ ಅಷ್ಟೇನೂ ಬೇಸರ ಆಗಲಿಲ್ಲ.
ಈ ಮಧ್ಯೆ ಗೆಳತಿ ಶೈಲಾಳಿಗೆ ವಿವಾಹವಾಗಿ ಮೈಸೂರಿಗೆ ವರ್ಗಾವಣೆ ಸಿಕ್ಕಿತು. ನಿಗಮದ ನೀತಿಯ ಪ್ರಕಾರ ಕೆಲಸ ಸಿಕ್ಕ ನಂತರ ಮದುವೆಯಾದರೆ ಪತಿ ಇರುವ ಜಾಗಕ್ಕೆ ಆದಷ್ಟು ಬೇಗ ವರ್ಗಾವಣೆ ಸಿಗುತ್ತದೆ. ಹಾಗಾಗಿ ಅವಳ ಪತಿ ಮೈಸೂರಿನಲ್ಲಿ ಇದ್ದಿದ್ದರಿಂದ ತಕ್ಷಣವೇ ಅವಳಿಗೆ ವರ್ಗಾವಣೆ ಸಿಕ್ಕಿತ್ತು. ಹಾಗೆಯೇ ಗೆಳತಿ ಸರಸ್ವತಿಯೂ ಸಹ ವಿವಾಹವಾದ ಒಂದೆರಡು ತಿಂಗಳಲ್ಲಿಯೇ ಮೈಸೂರಿಗೆ ವರ್ಗಾವಣೆ ಹೊಂದಿ ಹೋಗಿದ್ದಳು.
ವಿಭಾಗಿಯ ಕಚೇರಿಗಳಿಂದ ಶಾಖಾ ಕಚೇರಿಗಳಿಗೆ ವರಿಷ್ಠರು ಬಂದು ಇಲ್ಲಿನ ಕೆಲಸ ಕಾರ್ಯಗಳು ಹೇಗೆ ನಡೆಯುತ್ತಿದೆ ಎನ್ನುವುದನ್ನು ಪರಿಶೀಲಿಸುತ್ತಾರೆ. ಏನಾದರೂ ಮಾರ್ಗದರ್ಶನ ಬೇಕಾದರೆ ಕೊಡುತ್ತಾರೆ. ಹಾಗೆ ನಾನು ಹೊಸ ವ್ಯವಹಾರ ವಿಭಾಗದಲ್ಲಿ ಇದ್ದಾಗ ಆಗ ಅಲ್ಲಿನ ಮ್ಯಾನೇಜರ್ ಆಗಿದ್ದ ಆಚಾರ್ಯ ಎನ್ನುವವರು ಮತ್ತು ಆಡಳಿತ ಅಧಿಕಾರಿ ಆಗಿದ್ದ ಎಸ್ಎಂಎಸ್ ಗೋಪಾಲನ್ ಅವರು ಕಚೇರಿಗೆ ಬಂದಿದ್ದರು. ಕೆಲವೊಂದು ಕೆಲಸಗಳು ಮಾಡದೆ ಪೆಂಡಿಂಗ್ ಉಳಿದಿದ್ದನ್ನು ನನಗೆ ಹೇಗೆ ಮಾಡಬೇಕೆಂದು ಹೇಳಿಕೊಟ್ಟು ಮುಗಿಸಲು ಹೇಳಿದ್ದರು. ಹಾಗೆಯೇ ನಾನು ಮಾಡಿ ಮುಗಿಸಿದ್ದೆ ಮತ್ತೆ ಅದಕ್ಕಾಗಿ ಶಾಖಾಧಿಕಾರಿಗಳ ಕೋಣೆಗೆ ಫೋನ್ ಮಾಡಿ ಕರೆಸಿ, ಒಳ್ಳೆಯ ಪ್ರೋತ್ಸಾಹದ ನುಡಿಗಳನ್ನು ಆಡಿದ್ದರು
ನಮ್ಮ ನಿಗಮದಲ್ಲಿ ಯಾವುದೇ ವರ್ಗದಲ್ಲೂ ಬೇರೆ ಹೊಸಬರು ವರ್ಗಾವಣೆಯಾಗಿ ಬಂದಾಗ ಮೊದಲಿನಿಂದ ಶಾಖೆಯಲ್ಲೇ ಇರುವವರಿಗೆ ವಿಭಾಗಗಳಲ್ಲಿ ಬದಲಾವಣೆ ಬೇಕಾಗಿದ್ದರೆ ಮೊದಲ ಆದ್ಯತೆ ಕೊಡುತ್ತಾರೆ. ಹಾಗಾಗಿ ನಾನು ಹೊಸ ವ್ಯವಹಾರ ವಿಭಾಗವನ್ನು ಬಿಟ್ಟು ಪಾಲಿಸಿ ಸೇವೆ ವಿಭಾಗಕ್ಕೆ ಬದಲಾವಣೆ ಕೋರಿಕೊಂಡೆ. ಪಾಲಿಸಿಗಳ ಪುನರುಜ್ಜೀವನ revival ಮಾಡುವ ವಿಭಾಗಕ್ಕೆ ನನಗೆ ಬದಲಾವಣೆ ಸಿಕ್ಕಿತು. ಮೊದಲಿನಿಂದ ನನಗೆ ಪಾಲಿಸಿ ಸೇವಾ ವಿಭಾಗ ಎಂದರೆ ಒಂದು ರೀತಿಯ ಆಕರ್ಷಣೆ ಆದರೆ ಮಂಡ್ಯದಲ್ಲಿ ಅವಕಾಶ ಸಿಕ್ಕಿದ್ದರೂ ಹೆಚ್ಚು ದಿನ ಆ ವಿಭಾಗದಲ್ಲಿ ಕೆಲಸ ಮಾಡಲು ಆಗಿರಲಿಲ್ಲ ಈಗ ನನ್ನಿಷ್ಟದ ವಿಭಾಗ ಸಿಕ್ಕಿತು ಎಂಬ ಖುಷಿಯಿಂದ ಹೊಸ ಕೆಲಸ ಕಲಿಯಲು ಆರಂಭಿಸಿದೆ.
ಪಾಲಿಸಿಗಳ ಪ್ರೀಮಿಯಂ ಕಟ್ಟದೆ 6 ತಿಂಗಳುಗಳ ಕಾಲ ಆಗಿ ಹೋದರೆ ಪಾಲಿಸಿಗಳು ಲ್ಯಾಬ್ಸ್ ಆಗುತ್ತದೆ ಹಾಗೆ ಲ್ಯಾಪ್ಸ್ ಆದ ಪಾಲಿಸಿಗಳನ್ನು ಗೊಳಿಸಲು ಅವರ ಆರೋಗ್ಯದ ಬಗ್ಗೆ ಒಂದು ಡಿಕ್ಲರೇಷನ್ ಅದರಲ್ಲಿ ಏನಾದರೂ ಋಣಾತ್ಮಕ ಸಂಗತಿಗಳು ಇದ್ದರೆ ಅದಕ್ಕೆ ಸಂಬಂಧಿಸಿದ ಮೆಡಿಕಲ್ ರಿಪೋರ್ಟ್ ಇವೆಲ್ಲವನ್ನು ತೆಗೆದುಕೊಂಡು ಮತ್ತೆ ಪ್ರೀಮಿಯಂ ಪಡೆದುಕೊಳ್ಳಲು ಸಾಧ್ಯವೇ ಎಂಬುದನ್ನು ಪರಿಶೀಲಿಸಿ ನಂತರ ಪ್ರೀಮಿಯಂ ಕಟ್ಟಿ ಅದನ್ನು ಚಾಲ್ತಿಗೆ ತರಬೇಕು. ಹಾಗೆ ಪರಿಶೀಲಿಸುವ ಕೆಲಸ ನನ್ನದು. ಮತ್ತೆ ಕೆಲವೊಮ್ಮೆ ಚೆಕ್ ಮುಖಾಂತರ ಅಥವಾ ಪೋಸ್ಟ್ ನಲ್ಲಿ ಕಳಿಸಿದ ಚೆಕ್ಗಳ ಮೊತ್ತಗಳು ತಾಳೆ ಯಾಗದೆ ಅವುಗಳನ್ನು ಪ್ರೀಮಿಯಂಗೆ ಸರಿದೂಗಿಸಲು ಆಗುವುದಿಲ್ಲ ಕೆಲವೊಮ್ಮೆ ಹಣ ಹೆಚ್ಚಾಗಿ ಅದನ್ನು ಡಿಪಾಸಿಟ್ ಎಂದು ಪರಿಗಣಿಸಿ ಇಡಲಾಗುತ್ತದೆ ಆ ತರಹದ ಕೇಸುಗಳನ್ನು ಪರಿಶೀಲಿಸಿ ಮುಂದಿನ ಪ್ರೀಮಿಯಂ ಗಳಿಗೆ ಅಡ್ಜಸ್ಟ್ ಮಾಡುವುದು ಅಥವಾ ಪಾಲಿಸಿದಾರರಿಗೆ ಹಣ ಹಿಂತಿರುಗಿಸುವುದು ಎಂಬುದನ್ನು ನಿರ್ಧರಿಸಿ ಹಾಗೆ ಮಾಡಬೇಕಿತ್ತು ಹಾಗೆಲ್ಲ ಮೊತ್ತಗಳು ಬಹಳ ಕಡಿಮೆ ಇದ್ದುದರಿಂದ ಮನಿ ಆರ್ಡರ್ ಮೂಲಕವೇ ಪಾಲಿಸಿದಾರರಿಗೆ ಹೆಚ್ಚಿನ ಹಣ ಇದ್ದಲ್ಲಿ ಹಿಂದಿರುಗಿಸಲಾಗುತ್ತಿತ್ತು. 8/10 ರೂಪಾಯಿಗಳನ್ನು ಸಹ ಆಗ ಮನಿ ಆರ್ಡರ್ ಮಾಡುತ್ತಿದ್ದೆವು. 40 ಗಳಿಗಿಂತ ಹೆಚ್ಚಾಗಿ ಇದ್ದರೆ ಚೆಕ್ ಮೂಲಕ ವಾಪಸ್ ಮಾಡಲಾಗುತ್ತಿತ್ತು.
ಹೊಸ ವಿಭಾಗಕ್ಕೆ ಬಂದು 15 ದಿನ ಆಗಿತ್ತು ಅಷ್ಟೇ ಒಂದು ದಿನ ಪ್ರಸಾದ್ ಅವರು ಶಾಖೆಗೆ ಬಂದು ಮತ್ತೊಂದು ಪಟ್ಟಿ ಸಹಾಯಕರ ವರ್ಗಾವಣೆಗೆ ಸಿದ್ಧವಾಗುತ್ತಿದೆ ಆ ಪಟ್ಟಿಯಲ್ಲಿ ನನಗೂ ಮೈಸೂರಿಗೆ ವರ್ಗಾವಣೆ ಸಿಕ್ಕಬಹುದು ಎಂಬ ವಿಷಯ ತಿಳಿಸಿದರು ಇದು ತುಂಬಾ ಅನಿರೀಕ್ಷಿತವೇ ಆಗಿತ್ತು ಆದರೆ ಹೆಚ್ಚಿನ ಖುಷಿ ಸಹ ತಂದಿತ್ತು.
ಅಂತೆಯೇ ಪಟ್ಟಿ ಬಿಡುಗಡೆಯಾಗಿತ್ತು. ನನಗೆ ಮೈಸೂರಿನ ವಿಭಾಗ ಕಚೇರಿಯ ಹೊಸ ವ್ಯವಹಾರ ವಿಭಾಗದ ಸಹಾಯಕಳಾಗಿ ವರ್ಗಾವಣೆ ಸಿಕ್ಕಿತು .ನಂತರ ತಿಳಿದ ವಿಷಯ ನನ್ನ ಕಾರ್ಯ ವೈಖರಿ ನೋಡಿದ ಮ್ಯಾನೇಜರ್ ಹಾಗೂ ಆಡಳಿತ ಅಧಿಕಾರಿ ಅವರು ನನ್ನ ಹೆಸರನ್ನು ಅವರ ವಿಭಾಗಕ್ಕೆ ಸೂಚಿಸಿದ್ದರು ಎಂದು. ಕೃಪಾಳಿಗೆ ಮೈಸೂರು ಶಾಖೆ 4 ಸಿಕ್ಕಿತ್ತು ನನ್ನ ತಂಗಿ ಛಾಯಾಳಿಗೆ ಮೈಸೂರು ಶಾಖೆ ಎರಡಕ್ಕೆ ವರ್ಗಾವಣೆ ಸಿಕ್ಕಿತು. ಒಂದು ರೀತಿಯ ನೆಮ್ಮದಿಯ ಭಾವ.
ಒಟ್ಟು ನಾವು ಎಂಟು ಜನ ನಂಜನಗೂಡಿನಿಂದ ವರ್ಗಾವಣೆಯಾಗಿ ಮೈಸೂರಿಗೆ ಬಂದದ್ದು. ನಮ್ಮದೇ ಬ್ಯಾಚ್ನ ಪ್ರಕಾಶ್ ಶ್ರೀಹರಿ ಸುಬ್ರಮಣ್ಯ ನಾನು ಎಲ್ಲಾ ಮೈಸೂರಿಗೆ ವರ್ಗಾವಣೆ ಕೋರಿದ್ದರೂ ಪ್ರಸಾದ್ ಒಬ್ಬರು ಮಾತ್ರ ವರ್ಗಾವಣೆ ಬಯಸದೆ ನಂಜನಗೂಡಿನಲ್ಲಿಯೇ ಉಳಿದುಕೊಂಡಿದ್ದರು. ಮೊದಲಿನಿಂದ ಬಂದ ಅಭ್ಯಾಸದಂತೆ ನಾವು ವರ್ಗಾವಣೆ ಹೊಂದುವವರೆಲ್ಲ ಸೇರಿ ಶಾಖೆಯವರಿಗೆಲ್ಲಾ ಒಂದು ಶನಿವಾರ ಊಟ ಕೊಡಿಸಿದೆವು. ಹಾಗೆಯೇ ಹಾಗೆಲ್ಲ ಶನಿವಾರದ ದಿನವೇ ಬಿಳ್ಕೊಡುಗೆ ಸಮಾರಂಭಗಳು ನಡೆಯುತ್ತಿದ್ದು ಅಂದು ೩೦.೧೧.೧೯೯೧ರಂದು ನಂಜನಗೂಡಿನಿಂದ ವಿದಾಯ ಪಡೆದು ಸೋಮವಾರದ ದಿನ ೦೨.೧೨.೧೯೯೧ ರಂದು ಮೈಸೂರು ವಿಭಾಗ ಕಚೇರಿಗೆ ಹೋಗಲು ಸಿದ್ಧವಾಗಿದ್ದೆ.
ಸುಜಾತಾ ರವೀಶ್






ಅಂಕಣ ಬರಹ ಪ್ರಕಟಿಸಿ ಪ್ರೋತ್ಸಾಹಿಸುತ್ತಿರುವ ಸಂಪಾದಕರಿಗೆ ಧನ್ಯವಾದಗಳು
ಸುಜಾತಾ ರವೀಶ್