ಸರಣಿ ಬರಹಗಳು
ಅರ್ಜುನ ಉವಾಚ
ಡಾ. ವಿಶ್ವನಾಥ ಎನ್ ನೇರಳಕಟ್ಟೆ
ಅಶ್ವವೂ ಬಂತು; ಅಶ್ವದೊಡೆಯನೂ ಬಂದ


ಹಸ್ತಿನಾವತಿಗೆ ಬಂದ ಯೌವನಾಶ್ವನ ಕಣ್ಣುಗಳಲ್ಲಿ ಕಿಲಕಿಲಿಸುವ ಶಿಶುಗಳು ಕೊಂಡಾಟವಾಡುತ್ತಿದ್ದವು. ಮೇರೆ ಮೀರಿದ ಉತ್ಸಾಹ ಅವನಲ್ಲಿತ್ತು. ಧರ್ಮವೀರನ ಮೆರೆದಾಟವನ್ನು ಕಣ್ತುಂಬಿಸಿಕೊಳ್ಳುವ ಕೌತುಕದ ಗಳಿಗೆಗಾಗಿ ಅವನ ಚಿತ್ತ ಹಂಬಲಿಸುತ್ತಿತ್ತು. ಶ್ರೀಕೃಷ್ಣನ ವದನಾರವಿಂದವನ್ನು ಕಂಡು ಆನಂದ ಹೊಂದುವ ಚಣಕ್ಕಾಗಿ ಕಾತರಿಸುತ್ತಿದ್ದವನು ಯೌವನಾಶ್ವ.
ಅದೇ ಸಮಯಕ್ಕೆ ಯುದಿಷ್ಠಿರ ಬಂದವರಿಗೆಲ್ಲಾ ದಾನವನಿತ್ತ. ತನ್ನ ತಮ್ಮಂದಿರನ್ನು ಜೊತೆಮಾಡಿಕೊಂಡ. ಮಂತ್ರಿ, ಸೇನಾಧಿಪತಿ, ಸಾಮಂತ, ಗುರುಗಳು, ಪುರೋಹಿತರು, ಸೇವಕರನ್ನೆಲ್ಲಾ ಒಡನೆ ಸೇರಿಸಿಕೊಂಡ. ಶ್ರೀಕೃಷ್ಣ ಬಲವೂ ಅವನದಾಯಿತು. ಪರ್ವತದಂತಿದ್ದ ಗಜರಾಜನನ್ನು ಏರಿ ಕುಳಿತ ಧರ್ಮರಾಜ. ಸಿಂಗರಿಸಿಕೊಂಡ ಅಂಗನೆಯರ ಸಮೂಹ ಲಾಲಿತ್ಯಪೂರ್ಣವಾದ ನಡಿಗೆಯೆಡೆಗೆ ಗಮನ ನೀಡಿತ್ತು. ಅವರೆಲ್ಲರೂ ದ್ರೌಪದಿಯನ್ನು ಮುಂದುಮಾಡಿಕೊಂಡಿದ್ದರು. ಮಂಗಳ ವಾದ್ಯ ಮೊಳಗಲಾರಂಭಿಸಿತು. ಹಸ್ತಿನಾವತಿ ನಗರಿಯೇ ಗಜಗಮನ ನಡೆಸಿದಂತೆ ಮೆರವಣಿಗೆಯ ಆ ಚೆಲುವು ತೋರಿಬಂತು. ಪರ್ವತಸದೃಶ ಆನೆಯ ಮೇಲೇರಿ ಕುಳಿತಿದ್ದ ಯುದಿಷ್ಠಿರ ಮೂಡಣ ಪರ್ವತದಲ್ಲಿ ಈಗ ತಾನೇ ಉದಯಿಸುತ್ತಿರುವ ಸೂರ್ಯನನ್ನು ಸ್ಮರಣೆಗೆ ತಂದ.
ಸಂಭ್ರಮವನ್ನು ಎದುರುಗೊಳ್ಳುವ ಭಾವವದು ಯೌವನಾಶ್ವನ ಹೃದಯವನ್ನು ಪುಳಕಗೊಳಿಸಿತ್ತು. ಸಂತಸದಿಂದ ನಗುನಗುತ್ತಾ ತಂಗಾಳಿಯಂದದಿ ಮುಂದೆ ಮುಂದೆ ಬಂದ ಯೌವನಾಶ್ವನಿಗೆ ಮೊದಲು ಎದುರಾದವನು ವಾಯುಪುತ್ರ. ಅಶ್ವಮೇಧ ಯಾಗಕ್ಕೆ ಸಹಾಯಕನಾಗಿ ನಿಂತ ಯೌವನಾಶ್ವನನ್ನು ಮನದುಂಬಿ ಸ್ವಾಗತಿಸಿದ ಭೀಮ. ಅನಿಲಜಾತನೊಡನೆ ಆತ್ಮೀಯ ಭಾವದಲಿ ತನ್ನೆಡೆಗೆ ನಡೆದುಬರುತ್ತಿರುವ ಯೌವನಾಶ್ವನನ್ನು ಕಂಡ ಮಹಾಗಜದ ಮೇಲಿದ್ದ ಧರ್ಮರಾಯ. ಗಜದ ಮೇಲಿದ್ದವನಿಗೆ ಯೌವನಾಶ್ವನ ಸಂತಸದ ಜಗ ಕಂಡಿತು. ಆನೆಯಿಂದ ಇಳಿದ. ಯೌವನಾಶ್ವನ ಮುಂದೆ ಬಂದು ನಿಂತ.
ಧರ್ಮವೀರನನ್ನು ಕಂಡ ಭದ್ರಾವತಿ ನಗರಿಯ ಶೂರನಲ್ಲಿ ಮೂಡಿದ್ದು ಗೌರವದ ಭಾವ. ತಂದಿದ್ದ ಕಾಣಿಕೆಗಳನ್ನು ಯುದಿಷ್ಠಿರನ ಪಾದಗಳಿಗೆ ಸುರಿದ. ಕೈಯ್ಯನ್ನು ಮುಗಿದ. ಒಲವಿನಿಂದ ಯೌವನಾಶ್ವನನ್ನು ಅಪ್ಪಿಕೊಂಡ ಧರ್ಮಜ “ನನ್ನ ನಾಲ್ಕು ಮಂದಿ ಸಹೋದರರಿಗೆ ಸಮಾನ ನೀನು. ನನಗೆ ನಮಿಸಬೇಕಾದ ಅಗತ್ಯ ಇಲ್ಲ. ನಿನ್ನ ನಮನ ಕಮಲವೇನಿದ್ದರೂ ಸಲ್ಲಬೇಕಾದದ್ದು ಈ ಕಮಲನಾಭನಿಗೆ” ಎಂದು ಶ್ರೀಕೃಷ್ಣನೆಡೆಗೆ ಕೈತೋರಿದ.
ಸ್ವಾಮಿಭಕ್ತಿಯಲ್ಲಿ ಮೈಮರೆತಿದ್ದ ಯೌವನಾಶ್ವನೀಗ ದೈವಭಕ್ತಿಯಲ್ಲಿ ಧನ್ಯನಾದ. ಶ್ರೀಕೃಷ್ಣನನ್ನು ಕಂಡ. ಕಣ್ತುಂಬಿಕೊಂಡ. ಕಿರೀಟಸಹಿತವಾದ ತನ್ನ ಶಿರವನ್ನು ಶ್ರೀಕೃಷ್ಣನ ಪಾದಪದುಮದಲ್ಲಿಟ್ಟು ಆತ್ಮತೃಪ್ತಿ ಪಡೆದ.
ಈಗ ಯೌವನಾಶ್ವ ಕಾಣಬಯಸಿದ್ದು ನನ್ನನ್ನು. ಶ್ರೀಕೃಷ್ಣನನ್ನು ಕಂಡ ಅವನಿಗೆ ಆ ಕ್ಷಣವೇ ನನ್ನ ನೆನಪು ಮೂಡಿತು. “ಇಂತಹ ಶ್ರೀಕೃಷ್ಣನನನ್ನೇ ಸಾರಥಿಯಾಗಿಸಿಕೊಂಡ ಭಾಗ್ಯವಂತ ಅರ್ಜುನ ಎಲ್ಲಿದ್ದಾನೆ?” ಎಂದು ಭೀಮನಲ್ಲಿ ಕೇಳಿದ. ತಕ್ಷಣವೇ ನಾನು ಅವನ ಮುಂದೆ ಹೋದೆ. ಮುಗುಳುನಗು ಬೀರಿದೆ. ಮಾತನಾಡಿಸಿದೆ. ಹರಿಸಂಗಾತವನ್ನು ಸತತ ಪಡೆದುಕೊಂಡ ನನ್ನನ್ನು ಮನಸಾರೆ ಹೊಗಳಿದ ಹಯದೊಡೆಯ ಯೌವನಾಶ್ವ. ನಕುಲ ಸಹದೇವರೂ ಅವನ ಪ್ರೀತಿಯ ನುಡಿಯಲ್ಲಿ ಕರಗಿಹೋದರು.
ಹೀಗೆ ಸಂಭ್ರಮ ತುಂಬಿ ತುಳುಕುತ್ತಿರುವಾಗಲೇ ಆನಂದ ಇನ್ನಷ್ಟು ಅಂದಗೊಳ್ಳುವAತೆ ಯೌವನಾಶ್ವನ ಮಗ ಸುವೇಗ ಯಾಗಕ್ಕೆ ಬೇಕಾದ ಆ ಅತಿವಿಶಿಷ್ಟ ಕುದುರೆಯನ್ನು ತಂದು ನಮ್ಮೆಲ್ಲರ ಸಮ್ಮುಖದಲ್ಲಿ ನಿಲ್ಲಿಸಿದ. ಅಲ್ಲಿದ್ದ ಎಲ್ಲಾ ಜನರಿಗೂ ಅಚ್ಚರಿ. ಅತಿ ವಿಸ್ಮಯ ಭಾವದಲ್ಲಿಯೇ ಅವರೆಲ್ಲರೂ ಕುದುರೆಯನ್ನು ವೀಕ್ಷಿಸತೊಡಗಿದರು.
ಕುಂತಿ ದ್ರೌಪದಿ ಸುಭದ್ರೆ ಮೊದಲಾದ ಪಾಂಡವಾಂಗನೆಯರ ಸಮೂಹಕ್ಕೆ ಸಕಲ ಸಮ್ಮಾನಗಳನ್ನಿತ್ತು ಗೌರವಿಸಿದಳು ಯೌವನಾಶ್ವನ ರಾಣಿ. ಯಾಗಕ್ಕೆ ಬೇಕಾದ ಕುದುರೆ ಹಸ್ತಿನಾವತಿಯನ್ನು ಸೇರಲು ಕಾರಣಕರ್ತರಾದ ಪರಾಕ್ರಮಿಗಳಾದ ವೃಷಕೇತು ಮೇಘನಾದರನ್ನು ಅಪ್ಪಿ ಕೊಂಡಾಡಿದ ಧರ್ಮಜ ಯೌವನಾಶ್ವನ ಸಂಪೂರ್ಣ ಪರಿವಾರವನ್ನು ಆದರದಿಂದ ಉಪಚರಿಸಿ ಅರಮನೆಗೆ ಕರೆತಂದ. ಅಶ್ವಮೇಧ ಯಾಗಕ್ಕೆ ಶುಭವನ್ನು ಹಾರೈಸಿದ ಶ್ರೀಕೃಷ್ಣ ಅಗತ್ಯ ಇದ್ದಾಗ ಬರುವೆನೆಂಬ ಅಭಯವನ್ನು ಕೊಟ್ಟು ದ್ವಾರಕೆಗೆ ತೆರಳಿದ.
ಹೀಗಿದ್ದಾಗ ನನ್ನಣ್ಣ ಧರ್ಮಜನಿಗೆ ಈ ಮೊದಲು ಅದ್ಧೂರಿಯಾಗಿ ಅಶ್ವಮೇಧ ಯಾಗವನ್ನು ಮಾಡಿದ್ದ ಮರುತ್ತ ರಾಜನ ಬಗೆಗೆ ತಿಳಿದುಕೊಳ್ಳುವ ಕುತೂಹಲ ಮೂಡಿತ್ತು. ವ್ಯಾಸಮುನಿಗಳನ್ನು ಕರೆಸಿದ. ಮರುತ್ತರಾಯನ ಕಥೆಯನ್ನು ಕೇಳಿದ. ಅವರು ಹೇಳತೊಡಗಿದರು.
ಸೂರ್ಯವಂಶದಲ್ಲಿ ಜನಿಸಿದವನು ಕರಂಧಮ ಎಂಬ ಅರಸ. ಅಂಗೀರಸ ಮುನಿಯ ಸಹಾಯ ಪಡೆದ ಆತ ನೂರು ಅಶ್ವಮೇಧ ಯಾಗಗಳನ್ನು ಕೈಗೊಂಡು ಸುರಪದವಿಗೆ ಪಾತ್ರನಾದ. ಇಂತಹ ವೀರನ ಮಗನಾದ ಮರುತ್ತ ತನ್ನ ಶೌರ್ಯದಿಂದ ಮೂರು ಲೋಕಗಳಲ್ಲಿಯೂ ಖ್ಯಾತಿಯನ್ನು ಗಳಿಸಿದ. ಧರ್ಮದ ಚೌಕಟ್ಟನ್ನು ಮುರಿಯದೆಯೇ ಆಡಳಿತವನ್ನು ನೀಡುತ್ತಿದ್ದ. ಹೀಗಿದ್ದವನಿಗೆ ತನ್ನ ತಂದೆಯAತೆಯೇ ಅಶ್ವಮೇಧ ಯಾಗದಿಂದ ಸುರಪದವಿಯನ್ನು ಹೊಂದಬೇಕೆಂಬ ಆಕಾಂಕ್ಷೆಯುಂಟಾಯಿತು. ದೇವತೆಗಳ ಗುರುಗಳೆನಿಸಿಕೊಂಡ ಬೃಹಸ್ಪತಿಗಳನ್ನು ಕೇಳಿದ. ಅಂಗೀರಸನ ಸುತ ಎನಿಸಿಕೊಂಡವರು ಬೃಹಸ್ಪತಿ ಮಹರ್ಷಿ. ಅವರೇನೋ ಒಪ್ಪಿಕೊಂಡರು. ಆದರೆ ಅವರ ಸಹಾಯಕ ಬೇರೆಯದೇ ಸಲಹೆಯನ್ನಿತ್ತ. ಮನುಷ್ಯಮಾತ್ರರ ಯಾಗವದು ತಮಗೆ ಯೋಗ್ಯವಾದದ್ದಲ್ಲ ಎಂದು ಅವರನ್ನು ತಡೆದ. ಬೃಹಸ್ಪತಿಗಳಿಗೂ ಅದು ನಿಜ ಎನಿಸಿತು. ಯಾಗದ ಪುರೋಹಿತನಾಗಲಾರೆ ತಾನು ಎಂದರು. ಮರುತ್ತನಿಗಾದದ್ದು ಅಪಮಾನ.
ಬೇಸರಗೊಂಡ ಅವನು ಹೋಗಿ ಕಂಡದ್ದು ನಾರದಮುನಿಗಳನ್ನು. ಅವರು ಉಪಾಯವೊಂದನ್ನು ಉಸುರಿದರು. ಬೃಹಸ್ಪತಿಯ ದಾಯಾದಿಯಾಗಿದ್ದ ಸಂವರ್ತನೆಂಬವನ ಬಗೆಗೆ ವಿವರಿಸಿದರು. ಕಾಶಿಯಲ್ಲಿರುವ ಸಂವರ್ತನನ್ನು ಯಜ್ಞಕ್ಕೆ ಪುರೋಹಿತನಾಗಿಸುವ ಯುಕ್ತಿಯನ್ನು ತಿಳಿಸಿಕೊಟ್ಟರು. ಅದರಂತೆಯೇ ಕಾಶಿಗೆ ಹೋದ ಮರುತ್ತ ನಾರದರು ಹೇಳಿಕೊಟ್ಟಂತೆ ಹೆಣವೊಂದನ್ನು ಹೆಬ್ಬಾಗಿಲಲ್ಲಿಟ್ಟ. ಅದನ್ನು ಕಂಡು ಹೇಸಿದವನೇ ಸಂವರ್ತ ಎನ್ನುವುದನ್ನು ಅರಿತ. ಅವನ ಬೈಗುಳ ತಿರಸ್ಕಾರಕ್ಕೆ ಅಂಜದೆ ಅಳುಕದೆ ತನ್ನನ್ನು ನಾರದರು ಕಳುಹಿಸಿಕೊಟ್ಟದ್ದಾಗಿ ತಿಳಿಸಿದ ಮರುತ್ತರಾಯ.
ಕೆಂಡದAತಿದ್ದ ಸಂವರ್ತ ನೀರಿನಂತಾದ. ಮರುತ್ತನ ಯಾಗಕ್ಕೆ ಪುರೋಹಿತನಾಗಲು ಒಪ್ಪಿಕೊಂಡ. ಶಿವನನ್ನು ಪ್ರಾರ್ಥಿಸಿ ಯಾಗಕ್ಕೆ ಬೇಕಾದ ಸಂಪತ್ತನ್ನು ಸಂಪಾದಿಸುವಂತೆ ಸಲಹೆಯಿತ್ತ. ಅದರಂತೆ ಮರುತ್ತ ಈಶ್ವರ ದಯೆಯಿಂದ ಮೂಜಗಕ್ಕೂ ಸಲ್ಲುವಷ್ಟು ಸಂಪತ್ತನ್ನು ಪಡೆದ.
ಹೀಗಿದ್ದಾಗಲೇ ತನ್ನ ದಾಯಾದಿ ಸಂವರ್ತನ ನೇತೃತ್ವದಲ್ಲಿ ಮರುತ್ತನ ಅಶ್ವಮೇಧ ಯಾಗ ನಡೆಯಲಿದೆ ಎಂಬ ವಿಚಾರ ಬೃಹಸ್ಪತಿ ಮಹರ್ಷಿಗಳನ್ನು ತಲುಪಿತು. ತನ್ನ ದಾಯಾದಿ ಯಾಗಕ್ಕೆ ಪುರೋಹಿತನೆನಿಸಿಕೊಂಡು ಅಪಾರ ಸಂಪತ್ತನ್ನು ಗಳಿಸುತ್ತಾನೆ ಎನ್ನುವುದನ್ನು ತಡೆದುಕೊಳ್ಳಲಾಗಲಿಲ್ಲ ಅವರಿಗೆ. ಋಷಿ ಹೃದಯದಲ್ಲಿ ಈರ್ಷ್ಯೆ ಹೆಡೆಯೆತ್ತಿತು…
ಡಾ. ವಿಶ್ವನಾಥ ಎನ್ ನೇರಳಕಟ್ಟೆ



