ಸಿನಿಮಾ ಸಂಗಾತಿ
ಶಶಿಕಾಂತ್ ಪಟ್ಟಣ ರಾಮದುರ್ಗ
“ಬಾಲಿವುಡ್ ಬೆಡಗಿಯಾಗಿ ಮೆರೆದ
ಕನ್ನಡದ ಹುಡುಗಿ ಶಾಂತಾ ಹುಬ್ಳಿಕರ”

ಮಹಾರಾಷ್ಟ್ರ ಮತ್ತು ಭಾರತೀಯ ಚಿತ್ರ ರಂಗಕ್ಕೆ ಕನ್ನಡದ ಕೊಡುಗೆ ಅಪಾರ. ಅಮೀರ್ ಬಾಯಿ ಕರ್ನಾಟಕಿ
ಗುರು ದತ್ತ ಶ್ಯಾಮ ಬೆನಗಲ್ ಗಿರೀಶ್ ಕಾರ್ನಾಡ ವಿ ಶಾಂತಾರಾಮ ರೋಹಿಣಿ ಹಟ್ಟಂಗಡಿ ಇನ್ನೂ ಅನೇಕರು
ಮತ್ತು ಇತ್ತೀಚಿನ ವರ್ಷಗಳಲ್ಲಿ ನಟಿಸಿದ ಸುನೀಲ್ ಶೆಟ್ಟಿ ಐಶ್ವರ್ಯ ರೈ ಶಿಲ್ಪಾ ಶೆಟ್ಟಿ ಮುಂತಾದವರು ಇಂತವರ ಸಾಲಿನಲ್ಲಿ ಬ್ರಿಟಿಷರ ಕಾಲದಲ್ಲಿ ಮುಂಬೈ ಚಲನ ಚಿತ್ರದಲ್ಲಿ ನಾಯಕಿ ನಟಿಸಿದ್ದವರು ನಮ್ಮ ಕರ್ನಾಟಕ ಮೂಲದವರು. ಅವರೇ ಶಾಂತಾ ಹುಬ್ಳಿಕರ ಹುಬ್ಬಳ್ಳಿ ತಾಲೂಕಿನ ಅದರಗುಂಚಿ ಗ್ರಾಮದಲ್ಲಿ ಹುಟ್ಟಿದ ರಾಜಮ್ಮ ಎಂಬ ಲಿಂಗಾಯತ ಶೆಟ್ಟರ ಹುಡುಗಿ ಮುಂದೆ ಬಾಲಿವುಡ್ ಬೆಡಗಿಯಾಗಿ ಮೆರೆಯುತ್ತಾಳೆ ಎಂದು ಯಾರೂ ಊಹಿಸಿರಲಿಲ್ಲ.
ರಾಜಮ್ಮ (1914ಏಪ್ರಿಲ್, – 17 ಜುಲೈ, 1992), ತಮ್ಮ ತೆರೆಮೇಲಿನ ಶಾಂತಾ ಹುಬ್ಳೀಕರ್ ಎಂಬ ಹೆಸರಿನಿಂದ ಖ್ಯಾತರಾದ ಚಿತ್ರನಟಿ ಮತ್ತು ಗಾಯಕಿ. ಸ್ವಾತಂತ್ರ್ಯಪೂರ್ವದ ಭಾರತೀಯ ಚಿತ್ರರಂಗದ ಅಭಿನೇತ್ರಿಯಾಗಿ ಹಿಂದಿ ಮತ್ತು ಮರಾಠಿ ಚಿತ್ರಗಳಲ್ಲಿನ ತಮ್ಮ ಅಭಿನಯಕ್ಕೂ ಮತ್ತು ಹಾಡುಗಾರಿಕೆಗೂ ಹೆಸರಾದ ಶಾಂತಾ ಕನ್ನಡ ಮೂಲದವರು.
ನಟಿಗಾಯಕಿಯಾಗಿ ಪ್ರಸಿದ್ಧಿ ಪಡೆದ ಶ್ರೇಷ್ಠ ಕಲಾವಿದೆ.
ಬಾಲ್ಯ
ಶಾಂತಾ ಹುಟ್ಟಿದ್ದು ಹುಬ್ಬಳ್ಳಿ ಬಳಿಯ ಅದರಗುಂಚಿ ಎಂಬ ಊರಿನಲ್ಲಿ 1914 ಏಪ್ರಿಲ್ 14ರಂದು. ಅವರ ಹುಟ್ಟುಹೆಸರು ರಾಜಮ್ಮ ಬಡ ಲಿಂಗಾಯತ ಶೆಟ್ಟರ ಕುಟುಂಬದಲ್ಲಿ ಜನಿಸಿದಳು. ಶಾಂತಾ ಮೂರನೇ ವಯಸ್ಸಿನಲ್ಲಿದ್ದಾಗ ಅವರ ತಂದೆ ತಾಯಿ ನಿಧನರಾಗಿ, ಅಜ್ಜಿಯ ಆಶ್ರಯದಲ್ಲಿ ಬೆಳೆದರು. ಮೂವರು ಅಕ್ಕತಂಗಿಯರಲ್ಲಿ ಮಧ್ಯದವರಾದ ಶಾಂತಾ ಮತ್ತು ಅವರ ತಂಗಿಯನ್ನು ಹುಬ್ಬಳ್ಳಿಯ ಹತ್ತಿರದ, ಮಕ್ಕಳಿಲ್ಲದ ಸಂಬಂಧಿಕರೊಬ್ಬರಿಗೆ ದತ್ತು ಕೊಟ್ಟು ಸಾಕುವ ವ್ಯವಸ್ಥೆಯಾಗಿ, ದತ್ತುತಾಯಿಯ ಕಟ್ಟುನಿಟ್ಟಿನ ಪರಿಸರದ ಮಧ್ಯೆಯೇ ಪ್ರೌಢಶಾಲೆಯ ತನಕ ಶಾಂತಾ ಓದಿದರು.
ಸಂಗೀತಾಭ್ಯಾಸ
ಎಳವೆಯಿಂದ ಹಾಡುವ ಆಸಕ್ತಿ ಹೊಂದಿದ್ದ ಶಾಂತಾ, ಪ್ರಸಿದ್ಧ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತಗಾರರಾದ ಅಬ್ದುಲ್ ಕರೀಂ ಖಾನ್ ಸಾಹೇಬರ ಬಳಿ ನಾಲ್ಕು ವರ್ಷ ಹಿಂದೂಸ್ತಾನಿ ಸಂಗೀತಾಭ್ಯಾಸ ಮಾಡಿದರು. ಅಜ್ಜಿಯಿಂದ ಜನಪದ ಗೀತೆ ಮತ್ತು ವಚನಗಳನ್ನು ಕಲಿತಿದ್ದ ಅವರಿಗೆ ಮುಂದೆ ಗಾಯಕಿಯಾಗುವ ಅವಕಾಶಗಳಲ್ಲಿ ಈ ಸಂಗೀತಾಭ್ಯಾಸ ನೆರವಾಯಿತು.
ಯೌವನಕ್ಕೆ ಕಾಲಿಡುವ ಸಮಯದಲ್ಲಿ ಯಾರೂ ದಿಕ್ಕಿಲ್ಲದ ಈ ಅನಾಥೆ ಹುಡುಗಿಗೆ ಒಬ್ಬ ವೃದ್ಧನಿಗೆ ಕೊಟ್ಟು ಮದುವೆ ಮಾಡಿಕೊಡಬೇಕೆಂಬ ವಿಚಾರ ಪ್ರಸ್ತಾಪವಾಯಿತು. ಇದನ್ನು ಸೂಕ್ಷ್ಮವಾಗಿ ಗಮನಿಸಿದ ಬಾಲಕಿ ರಾಜಮ್ಮ ಮನೆ ಬಿಟ್ಟು ಹೋಗಿ ಶ್ರೀ ಗುಬ್ಬಿ ವೀರಣ್ಣನವರ ಆಶ್ರಯ ಪಡೆದಳು.
ನಟಿಯಾಗಿ
ರಂಗಭೂಮಿ ನಟಿಯಾಗಿ ಶಾಂತಾ ಮೊದಲು ರಂಗನಟಿಯಾಗಿ ಹುಬ್ಬಳ್ಳಿ ಧಾರವಾಡದಾದ್ಯಂತ ಹೆಸರು ಮಾಡಿದರು. ಗುಬ್ಬಿ ವೀರಣ್ಣನವರ ಗುಬ್ಬಿ ಕಂಪನಿ ಸೇರಿದ ಶಾಂತ, ರಂಗಲೋಕದಲ್ಲಿ ಚಿಕ್ಕ ಚಿಕ್ಕ ಪಾತ್ರಗಳನ್ನು ಮಾಡುತ್ತಾ ಮುಂದೆ ಪ್ರಮುಖ ಪಾತ್ರಗಳನ್ನು ಪಡೆದರು ಮಾತ್ರವಲ್ಲ, ಒಳ್ಳೆಯ ಗಾಯಕಿ ಎಂದೂ ಹೆಸರಾದರು.
ಶಾಂತಾ ಅವರ ಹೆಸರು ಉತ್ತರ ಕರ್ನಾಟಕ ಭಾಗದಲ್ಲಿ ಪ್ರಸಿದ್ಧಿಗೆ ಬರುತ್ತಲೇ ಪುಣೆಯ ಚಿತ್ರನಿರ್ಮಾಪಕರಿಂದ ಶಾಂತಾ ಅವರಿಗೆ ಅವಕಾಶಗಳು ಬಂದವು. ತಮ್ಮ 18ನೇ ವಯಸ್ಸಿನಲ್ಲಿ ಕರ್ನಾಟಕ ಬಿಟ್ಟು, ಸಿನಿಮಾ ಅವಕಾಶಗಳಿಗೆ ಪುಣೆಗೆ ಶಾಂತಾ ಬಂದರು.
ಸಿನಿಮಾ ನಟಿಯಾಗಿ1934ರಲ್ಲಿ ನಿರ್ಮಾಣಗೊಂಡ, ಮರಾಠಿ ಮತ್ತು ಹಿಂದಿ ಎರಡರಲ್ಲೂ ತೆರೆಕಂಡ ಭೇಡಿ ರಾಜಕುಮಾರ/ತಾಕ್ಸೇನ್ ರಾಜಪುತ್ರ ಶಾಂತಾ ಅವರ ಮೊದಲ ಸಿನಿಮಾ. ಇಲ್ಲಿ ಸಣ್ಣ ಪಾತ್ರ ಮಾಡಿದ್ದ ಅವರಿಗೆ ಸಿಕ್ಕ ಮೊದಲ ಗಮನಾರ್ಹ ಸಿನಿಮಾ ಎಂದರೆ 1937ರಲ್ಲಿ ಬಂದ ಮರಾಠಿ ಚಿತ್ರ ಕನ್ಹೋಪಾತ್ರ. ಇದು ಮರಾಠಿ ಸಂತೆ ಕನ್ಹೋಪಾತ್ರಳ ಮೇಲೆ ಮಾಡಿದ ಸಿನಿಮಾವಾಗಿತ್ತು. ಇಲ್ಲಿ ಶಾಂತಾರ ನಟನೆ ಮತ್ತು ಹಾಡುಗಾರಿಕೆ ಹೆಚ್ಚಿನ ಪ್ರಶಂಸೆ ಗಳಿಸಿತು. ಇದು ಪುಣೆಯ ಅತಿದೊಡ್ಡ ಚಿತ್ರಸಂಸ್ಥೆಯಾಗಿದ್ದ ‘ಪ್ರಭಾತ್ ಫಿಲ್ಮ್ ಕಂಪನಿ’ಯವರ ಗಮನ ಸೆಳೆಯಿತು.
ಪ್ರಭಾತ್ ಫಿಲ್ಮ್ ಕಂಪನಿಯ, ಖ್ಯಾತ ಮರಾಠಿ ಚಿತ್ರ ನಿರ್ದೇಶಕ ವಿ. ಶಾಂತಾರಾಂ ಅವರು ತಮ್ಮ ಮಾಝಾ ಮೂಲಗಾ /ಮೇರಾ ಲಡ್ಕ (1938) ಚಿತ್ರದ ನಾಯಕಿಯಾಗಿ ಶಾಂತಾರನ್ನು ಆಯ್ಕೆ ಮಾಡಿದರು. ಕಂಪನಿಯ ಒಳಗೆ ಮತ್ತು ಹೊರಗೆ ಶಾಂತಾರಾಂ ಅವರ ಈ ನಿರ್ಧಾರ ಜನರಲ್ಲಿ ಅಚ್ಚರಿಗೆ, ಚರ್ಚೆಗೆ ಕಾರಣವಾಗಿತ್ತು. ಅದಾಗಲೇ ಕಂಪನಿಯ ಬಹುಪಾಲು ಎಲ್ಲಾ ಚಿತ್ರಗಳ ಯಶಸ್ವೀ ನಾಯಕಿಯಾಗಿ ಹೆಸರು ಮಾಡಿದ್ದ ಖ್ಯಾತ ಮರಾಠಿ ನಟಿ ಶಾಂತಾ ಆಪ್ಟೆ ಇದ್ದರೂ ಸಹಿತ ಅವರನ್ನು ಬಿಟ್ಟು ಹೊಸ ಮತ್ತು ಮರಾಠಿ ಬಾರದ ಕನ್ನಡದ ಹುಡುಗಿಯನ್ನು ಆರಿಸಿಕೊಂಡಿದ್ದು ಚಿತ್ರದ ಮೇಲೆ ಹೆಚ್ಚಿನ ನಿರೀಕ್ಷೆ , ಗಮನ ಬರುವಂತಾಯಿತು. ಶಾಂತಾರಾಂ ನೀಡಿದ ಈ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡ ಶಾಂತಾ ಒಳ್ಳೆಯ ಅಭಿನಯ ಮತ್ತು ಹಾಡುಗಳನ್ನು ಹಾಡಿ ಶಾಂತಾರಾಂ ಅವರನ್ನೂ ಸೇರಿದಂತೆ ಎಲ್ಲಾ ಮರಾಠಿ ಮತ್ತು ಹಿಂದಿ ಪ್ರೇಕ್ಷಕರ ಅಪಾರ ಮೆಚ್ಚುಗೆ ಗಳಿಸಿದರು.
1939 ರಲ್ಲಿ ಶಾಂತಾರಾಂ ನಿರ್ದೇಶಿಸಿದ ಮಹತ್ವಪೂರ್ಣ ಸಿನಿಮಾ ‘ಮನೂಸ್/ಆದ್ಮಿ’. ಇದು ವೇಶ್ಯೆಯೊಬ್ಬಳ ಜೀವನವನ್ನು ಕುರಿತಾದ ಸಿನಿಮಾವಾಗಿದ್ದು, ವಸ್ತು-ವಿಷಯ ಮತ್ತು ನಿರೂಪಣೆಗಳೆರಡೂ ಸವಾಲಿನಿಂದ ಕೂಡಿದ್ದಾಗಿತ್ತು. ಬಿಡುಗಡೆಗೊಂಡ ಆ ಚಿತ್ರ ಶಾಂತಾ ಹುಬ್ಳೀಕರರಿಗೆ ಭಾರತದಾದ್ಯಂತ ಅಪಾರ ಜನಪ್ರಿಯತೆ ತಂದುಕೊಟ್ಟಿತು. ಆ ಚಿತ್ರದಲ್ಲಿ ಶಾಂತಾ ಹಾಡಿದ ಕಶಾಲಾ ಉದ್ಯಾಚಿ ಬಾತ್/ಕಿಸಿಲಿಯೇ ಕಲ್ಕಿ ಬಾತ್ ಹಾಡು ಜನಜನಿತವಾಯಿತು.ಇದಾದ ಬಳಿಕ ಸಾಲು ಸಾಲಾಗಿ ಮರಾಠಿ ಚಿತ್ರಗಳಲ್ಲಿ ಅತ್ಯಂತ ಬೇಡಿಕೆಯ ನಟಿಯಾಗಿ ಶಾಂತಾ ನಟಿಸಿದರು.
ಕನ್ನಡ ಚಿತ್ರರಂಗದಲ್ಲಿ
ಭಾರತದಾದ್ಯಂತ ಶಾಂತಾ ಹುಬ್ಳೀಕರ್ ಹೆಸರು ಮುನ್ನೆಲೆಗೆ ಬರುತ್ತಿದ್ದಂತೆ ಕನ್ನಡದ ಹಲವರು ಶಾಂತಾ ಅವರನ್ನು ಕರೆತರುವ ಯತ್ನ ಮಾಡಿದರಾದರೂ ಬಿಡುವಿಲ್ಲದ ಶಾಂತಾ ಮರಾಠಿಯಲ್ಲೇ ಮಗ್ನರಾದರು. ಆದರೆ ಗುಬ್ಬಿ ವೀರಣ್ಣ ಅವರು ಸ್ವತಂತ್ರ ನಿರ್ಮಾಪಕರಾಗಿ ನಿರ್ಮಾಣ ಮಾಡುತ್ತಿದ್ದ ಜೀವನ ನಾಟಕ (1942) ಚಿತ್ರಕ್ಕೆ ಶಾಂತಾ ಅವರನ್ನು ಕರೆತಂದು ಚಿತ್ರ ಮಾಡಿದರು. ಈ ಚಿತ್ರದಲ್ಲಿ ಕೆಂಪರಾಜ ಅರಸ್ ಮೊದಲ ಬಾರಿಗೆ ನಾಯಕನಾಗಿ ನಟಿಸಿದ್ದರು. ಇವರೊಂದಿಗೆ ಎಂ. ವಿ. ರಾಜಮ್ಮ, ಬಿ. ಜಯಮ್ಮ ಮತ್ತು ಶಾಂತಾ ಹುಬ್ಳೀಕರ್ ನಟಿಸಿದರು. ಇದು ಶಾಂತಾ ನಟಿಸಿದ ಏಕೈಕ ಕನ್ನಡ ಚಲನಚಿತ್ರ.

ಮರಾಠಿ ಹಿಂದಿಯ ಸಿನಿಮಾಗಳಲ್ಲಿ ಅತ್ಯಂತ ಬೇಡಿಕೆಯ ನಾಯಕಿ ನಟಿಯಾಗಿ ಹೆಸರು ದುಡ್ಡು ಪದವಿ ಆಸ್ತಿ ಎಲ್ಲವನ್ನೂ ಪಡೆಯುತ್ತಾ ದಾಪುಗಾಲು ಹಾಕುತ್ತಾ ನಡೆದ ಶಾಂತಾ ಹುಬ್ಳಿಕರ ಅವರಿಗೆ ಅವರೇ ಮಾದರಿಯಾಗಿದ್ದರು. ಇಂತಹ ಸಂದರ್ಭದಲ್ಲಿ ಅವರು ತನ್ನ ಪತಿಯನ್ನಾಗಿ ಸಂಗಾತಿಯನ್ನಾಗಿ ಉದ್ಯಮಿ
ಬಾಪುಸಾಹೇಬ್ ಗೀತೆ ಅವರನ್ನು ಮದುವೆಯಾಗಲು ನಿರ್ಧರಿಸಿದರು. ಬಹುಶಃ ಶಾಂತಾ ಹುಬ್ಳಿಕರ ಅವರ ಜೀವನದಲ್ಲಿ ಇದು ಮಾಡಿದ ದೊಡ್ಡ ತಪ್ಪು ಎನಿಸಿತು. ಗಂಡ ಬಾಪುಸಾಹೇಬ ನಿರ್ಮಾಪಕರಲ್ಲಿ ಶಾಂತಾ ಹುಬ್ಳಿಕರ ಮಾಡಿದ ಚಲನ ಚಿತ್ರಗಳ ಸಂಭಾವನೆಯನ್ನು ಮುಂಚಿತವಾಗಿ ಪಡೆದು ಕೊಳ್ಳುತ್ತಾ ತನ್ನ ಐಷ್ಯಾರಾಮಿ ಜೀವನವನ್ನು ನಡೆಸ ಹತ್ತಿದನು . ಇದೆ ಹೊತ್ತಿನಲ್ಲಿ ಒಂದು ಗಂಡು ಮಗು ಹುಟ್ಟಿತು.ಅವನೂ ಕೂಡ ಮುಂದೆ ತನ್ನ ತಾಯಿಯನ್ನು ಮನೆ ಬಿಟ್ಟು ಹೊರ ಹಾಕಿದನು .
ಜೀವನದಲ್ಲಿ ರಾಣಿಯಾಗಿ ಮೆರೆಯಬೇಕಾದ ಶಾಂತಾ ಹುಬ್ಳಿಕರ ಎಂಬ ಮರಾಠಿ ಹಿಂದಿಯ ಸಿನಿಮಾಗಳಲ್ಲಿ ನಟಿಸಿದ್ದ ದಂತ ಕಥೆ ಮುಂದೆ ಅನಾಥೆಯಾಗಿ ಬಿಟ್ಟಳು .
ಆದರೂ ಧೃತಿಗೆಡಲಿಲ್ಲ ಸಣ್ಣ ಪುಟ್ಟ ಪಾತ್ರ ಮಾಡುತ್ತ ತನ್ನ ಜೀವನ ನಿರ್ವಹಣೆಗೆ ಪುಣೆಯಲ್ಲಿ ಆರಂಭದಲ್ಲಿ ಒಂದು ಪುಟ್ಟ ಬಾಡಿಗೆಯ ಮನೆ ಮಾಡಿ ಕೊಂಡು ಜೀವನ ನಡೆಸಿದಳು .ಇವಳ ಗಂಡ ಮಗ ಇವಳ ಆಸ್ತಿ ಕಡೆದುಕೊಂಡು ಬೀದಿಗೆ ತಳ್ಳಿದರು. ಕೊನೆಗೆ ಪುಣೆಯ ಅನಾಥಾಶ್ರಮದಲ್ಲಿ ತನ್ನ ಜೀವಿತ ಕಾಲದ ಕೊನೆಯವರೆಗೂ ಕಾಲ ಕಲೆಗೂ 1992 ರಲ್ಲಿ ಬಯಲಾದಳು. ಇಡೀ ಮುಂಬೈ ನಗರಿಗೆ ಬೇಕಾದ ಈ ಚೆಲುವೆ ಹೀಗೆ ಮುಂದೆ ಅನಾಥ ಶವವಾಗುತ್ತಾಳೆ ಎಂದು ಯಾರೂ ಊಹಿಸಿರಲಿಲ್ಲ. ಅನಾಥಾಶ್ರಮದಲ್ಲಿ ಇರುವಾಗಲೇ ತನ್ನ ಆತ್ಮ ಕಥೆಯನ್ನು ಬರೆದಳು. ನಟನೆ ಗಾಯನ ಒಂದು ತಪಸ್ಸು ಅದು ತನಗೆ ಒಲಿದು ಬಂದಿತ್ತು ಜನರನ್ನು ಪ್ರೇಕ್ಷಕರನ್ನು ರಂಜಿಸಿ ಸಂತೋಷ ತಂದಿರುವೆನು. ನನ್ನ ಕೆಲಸ ಅಷ್ಟೆ. ಜೀವನದಲ್ಲಿ ಬಡತನ ಕಷ್ಟ ಅನುಭವಿಸಿದ ತಾನು ನಟನೆಯಲ್ಲಿ ಎಲ್ಲವನ್ನೂ ಮರೆತೇನು ಎಂದು ಹೇಳುತ್ತಾ ನಾಳೆಯ ಚಿಂತ್ಯಾಕೆ ಎಂಬ ಕನ್ನಡಕ್ಕೆ ಅನುವಾದಗೊಂಡ ಮೂಲ ಕೃತಿ ಕಶಾಲಾ ಉದ್ಯಾಚಿ ಬಾತ್’ ಎಂಬ ಕೃತಿಯಲ್ಲಿ ಎಲ್ಲವನ್ನೂ ದಾಖಲಿಸಿ ಈ ಭೂಮಿಯ ಮೇಲೆ ತಾನು ಬದುಕಿ ಉಳಿದವರಿಗೆ ಸಂತೋಷವನ್ನು ಕೊಟ್ಟು ನಿರ್ಗಮಿಸ ಬೇಕು. ಅಂತಹ ಮಹಾರಾಣಿಯನ್ನು ಗೆಳತಿಯರು ಸಹ ಕಲಾವಿದರು ಮೇಲಿಂದ ಮೇಲೆ ನಿನ್ನ ಪರಿಸ್ಥಿತಿ ಮುಂದೆ ಹೇಗೆ ಏನು ಎಂಬ ಹಲವು ಪ್ರಶ್ನೆಗಳಿಗೆ ಯಾಕೆ ನಾಳೆಯ ಮಾತು ಚಿಂತೆ ಎಂದು ಮುಗುಳು ನಗುತ್ತಾ ಉತ್ತರ ನೀಡಿದ ನಟಿ ಎಲ್ಲಾ ಸಿಹಿ ಕಹಿ ಅನುಭವ ಘಟನೆಗಳನ್ನು ತಮ್ಮ ಆತ್ಮ ಚರಿತ್ರೆಯಲ್ಲಿ ದಾಖಲಿಸಿ ತೆರೆಯ ಮರೆಗೆ ಸರಿದಳು.
*ಸಾಹಿತ್ಯ ಕ್ಷೇತ್ರದಲ್ಲಿ ಕೃಷಿ*
ಶಾಂತಾ ತಮ್ಮ ಆತ್ಮಕಥೆ ‛ *ಕಶಾಲಾ ಉದ್ಯಾಚಿ ಬಾತ್’* ಮರಾಠಿಯಲ್ಲಿ ಬರೆದಿದ್ದಾರೆ. ಇದರ ಕನ್ನಡಾನುವಾದ ‛ನಾಳೀನ ಚಿಂತ್ಯಾಕ ’ ಪುಸ್ತಕವನ್ನು ಅಕ್ಷತಾ ಹುಂಚದಕಟ್ಟೆ ಅವರು ತಮ್ಮ ಅಹರ್ನಿಶಿ ಪ್ರಕಾಶನದಿಂದ ಪ್ರಕಟಿಸಿದ್ದಾರೆ.
*ನಿಧನ*
ತಮ್ಮ ಕೊನೆಯ ದಿನಗಳನ್ನು ಪುಣೆಯ ವೃದ್ಧಾಶ್ರಮದಲ್ಲಿ ಕಳೆದ ಶಾಂತಾ ಜುಲೈ 19, 1992ರಂದು ನಿಧನವಾದರು.
*ಶಾಂತಾ ಹುಬ್ಳಿಕರ ಅವರು ನಟಿಸಿದ ಆಯ್ದ ಚಲನ ಚಿತ್ರಗಳ ಪಟ್ಟಿ*
ಶಾಂತಾ ನಟಿಸಿದ ಆಯ್ದ ಚಿತ್ರಗಳು:
ಭೇಡ್ಕ ರಾಜಕುಮಾರ್ (1934)
ಕನ್ಹೋಪಾತ್ರ (1937)
ಮೇರಾ ಲಡ್ಕ (1938)
ಮನೂಸ್/ಆದ್ಮಿ (1939)
ಜೀವನ ನಾಟಕ ಕನ್ನಡ ಚಲನ ಚಿತ್ರ (1942)
ಹೀಗೆ ಹಲವಾರು ನಾಟಕ ಚಲನ ಚಿತ್ರಗಳಲ್ಲಿ ನಟಿಸಿದ ಶಾಂತಾ ಹುಬ್ಳಿಕರ ಇವರು ಮಣ್ಣಲ್ಲಿ ಹುಟ್ಟಿ ಮಣ್ಣ ಮೇಲೆ ಬೆಳೆದು ಮಣ್ಣಲ್ಲಿ ಮಣ್ಣಾಗಿ ಹೋದರು. ಕನ್ನಡಿಗರು ಮರೆತ ದೈತ್ಯ ಪ್ರತಿಭೆ ಶಾಂತಾ ಹುಬ್ಳಿಕರ ಅವರಿಗೆ ನಮ್ಮ ಭಾವ ಪೂರ್ಣ ಶ್ರದ್ಧಾಂಜಲಿ
ಡಾ ಶಶಿಕಾಂತ ಪಟ್ಟಣ ರಾಮದುರ್ಗ




