ಕಾವ್ಯ ಸಂಗಾತಿ
ಗುಣಾಜೆ ರಾಮಚಂದ್ರ ಭಟ್
“ಪೊಡವಿ ಸಗ್ಗ” ಏಳೆ ಕವನ-
*ಛಂದಸ್ಸು: ಏಳೆ:೫೪೩/543/


ಜಗವಿದು ನಮ್ಮದು ಸೊಗಸಿದೆ ಕಾಣಲು
ಖಗಗಳ ಕಂಡು ಗಗನದಿ..
ಮೂಡುವ ನೇಸರ ಬಾಡದ ಚೇತನ
ಕಾಡಿನ ಹಸಿರು ನಂದನ ..
ನೀಲಿಯ ಕಡಲಿದೆ ನಾಲೆಯ ಹರಿವಿದೆ
ಕಾಲನ ನಡೆಯು ಸಂತತ ..
ಹರಿಯುವ ನದಿಗಳು ಕರೆಯುವ ಹಸುಗಳು
ಸುರಿಸುವ ನೋಟ ಸುಂದರ
ಕೆಂಪಿನ ಹೂಗಳು ಕಂಪನು ಪಸರಿಸಿ
ತಂಪನು ನೀಡಿ ಸಾನಂದ..
ಬಣ್ಣದ ಕುಸುಮವು ಕಣ್ಣನು ತುಂಬುತ
ಬಣ್ಣಿಸೆ ಕವನ ಹೊಳಪಂತೆ..
ಮಿಗಗಳು ಕೋಟಿಯ ಅಗಣಿತ ಲೆಕ್ಕದಿ
ಮಿಗಿಲಾದ ಸೃಷ್ಟಿ ವಿಸ್ಮಯ
ಜೀವಿಗೆ ಬಾಳಲು ನಾವಿಹ ಭೂಮಿಯೆ
ತಾವಿದು ಸಗ್ಗ ನಮಗೆಲ್ಲ..
ಮಾನವ ಶ್ರೇಷ್ಠನು ದಾನವನಾದರೆ
ಕಾನನ ರಾಜ್ಯ ತಪ್ಪದು..
——–
ಗುಣಾಜೆ ರಾಮಚಂದ್ರ ಭಟ್




