ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಅಂದು ಇದೇ ಹಾದಿಯಲ್ಲಿ
ಬೆಂದ ಕಾಲುಗಳು
ಬಸವಳಿದು ರೋಧಿಸಿದವು
ದಿಕ್ಕು ದಿಕ್ಕಿಗೂ ಕೂಗಿ ಕರೆದ ಧ್ವನಿ
ಮರಳಿ ಬಂದಿತು
ನನ್ನದೇ ಕನಸುಗಳ ಹಾದಿಗೆ
ಸಂತಸದ ದಿನಗಳನ್ನು ಮೆಲುಕು ಹಾಕುತ್ತಾ  

ಅಂತರಾತ್ಮದ ಅರಿವಿನ ಪ್ರಜ್ಞೆಗೆ
ಮೂಕ ಸಾಕ್ಷಿಯಾಗಿ
ಕಂಗಳಲ್ಲಿ ತುಂಬಿದ ಕನಸುಗಳಿಗೆ
ಸೋತು ಹೋಗಿದ್ದೇನೆ
ದುಡಿದು ಸವೆಸಿದ ಹಾದಿಗೆ

ಹಸಿರುಕ್ರಾಂತಿಯ ಹರಿಕಾರ
ಬಾಬು ಜಗಜ್ಜೀವನರಾಮ್  
ನೆಹರು ಭೋಸರ ಅಂತರಾತ್ಮದ
ಸ್ವಾತಂತ್ರ್ಯದ ಕಿಚ್ಚಿನ ರಕುತದ
ಕಲೆಗಳು ಮಾಯವಾಗಿಲ್ಲ

ಮಾಯದ ಜಿಂಕೆ ಬೆನ್ನತ್ತಿದ
ರಾವಣನ ಅರಿ ರಾಮನ
ರಾಮರಾಜ್ಯದ ಪರಿಕಲ್ಪನೆ
ಮಹಾತ್ಮಾ ಗಾಂಧೀಜಿಯ
ಕನಸು ನನಸಾಗಲೇ ಇಲ್ಲ

ಸುಡುವ ಕಾಲು ನೆಲದಲ್ಲಿ
ತಂಪು ತಂಗಾಳಿ ಸೂಸಿದ
ಚಳಿ ಮಳೆ ಗಾಳಿ ಬಿಸಿಲಿಗೆ
ಬೆವರು ಸುರಿಸಿದ ಕಂಗಳು
ಇನ್ನೂ ಸಂತಸ ಕಂಡಿಲ್ಲ
ಸಂತರು ಶರಣರು ದಾಸರು
ಇದೆ ಹಾದಿಯಲ್ಲಿ ನಡೆದು ಹೋದ
ಹೆಜ್ಜೆ ಗುರುತು ಪಾದಗಳ ಪೋಟೋ
ನಮ್ಮ ನಮ್ಮ ಜಗುಲಿಯ ಮೇಲೆ
ಹಾಗೇ ಕುಳಿತುಕೊಂಡು
ರಾರಾಜಿಸುತ್ತಿವೆ

ನಮ್ಮದೇ ಕಟ್ಟೆಯೊಳಗೆ ಬಂಧಿಸಿ ಪರದೆಯೊಳಗೆ ಮಡಿ ಮಾಡಿ ಶೋಷಣೆಯ ಸುಲಿಗೆಯೊಳಗೆ ಬಂದಿಖಾನೆ ಆಗಿದ್ದಾವೆ
ನಮ್ಮ ನಮ್ಮ ದೇವರುಗಳು

ನಾಡು ಸಮತೆಯ ಗೂಡು
ಹುಡುಕುತ್ತಿರುವೆ
ಅಲ್ಲಿ ಇಲ್ಲಿ ಬಸವಣ್ಣ ಬುದ್ಧ ಗಾಂಧಿಯ ಪೋಟೋಗಳ ಮೇಲೆ
ಕುಳಿತ ಧೂಳು ವರೆಸುತ್ತ

ಕಣ್ಣಗಲ ಮಾಡಿ ವರುಷಕ್ಕೊಮ್ಮೆ
ತಳಿರು ತೋರಣ ಕಟ್ಟಿ
ಸಿಂಗರಿಸಿ ಧ್ವಜವು ಹಾರಿಸಿ
ಜೈಕಾರ ಕೂಗುವ ನಮ್ಮೆದೆಯ
ಗಟ್ಟಿ ಕೂಗಿಗೆ ಎಚ್ಚರಗೊಳ್ಳಲಿಲ್ಲ

ನಾಡು ತೆಂಗು ಬಾಳೆ ಶ್ರೀಗಂಧದ ಬೀಡು
ಅನೇಕ ಗುಡಿ ಗೋಪುರ ದೊಳಗೆ
ಬಚ್ಚಿಕೊಂಡು ತಿರುಗುವ
ಅಲೆಮಾರಿಯಂತೆ
ನಮ್ಮ ನಮ್ಮ ಬದುಕು
ಎಲ್ಲಿಂದ ? ಬರಬೇಕು
ಸಮ ಸಮಾಜದ ಪರಿಕಲ್ಪನೆ
ಇದು ನಮ್ಮ ಭ್ರಮೆ ಎನ್ನಲೇ?

About The Author

Leave a Reply

You cannot copy content of this page

Scroll to Top