ಕಾವ್ಯ ಸಂಗಾತಿ
ಸುರೇಶ ತಂಗೋಡ
ಅವನಲ್ಲ ಅವಳು!


ನಡುವಿನ ಉಡುದಾರ
ಕಿತ್ತೊಗೆದು
ಕಾಲಿಗೆ ಗೆಜ್ಜೆ ಕಟ್ಟಿರುವೆ
ಕೈಗೆ ಬಳೆ ಹಾಕುವ
ಹೊತ್ತಿಗೆ
ದೂರದಲೆಲ್ಲೊ ಅಪಸ್ವರ.//
ಹಣೆಗೆ ವಿಭೂತಿಯ
ಬದಲು ಕುಂಕುಮದ ಬೊಟ್ಟಿಟ್ಟೆ
ತುಂಡು ಕೂದಲು ಉದ್ದ ಬಿಟ್ಟೆ
ಗಂಡಸರುಡುವ ಬಟ್ಟೆಯನ್ನು ಬದಲಿಸಿದೆ
ಸೀರೆಯ ಸೆರಗೂ ಇಷ್ಟವಾಯಿತು.
ನಾಚಿಕೆ ಮೂಡಿತು
ಶ್! ನನ್ನ ಮೇಲಲ್ಲ ಸಮಾಜದ ಮೇಲೆ.//
ನನ್ನೊಳಗಿನ ಹೆಣ್ತನವ ಕಾಪಿಡಲು
ನಾನು ಅದೇಷ್ಟು ಸತ್ತು ಬದುಕಿದ್ದೇನೆ.
ಕುಂತು ಮೂತ್ರ ಮಾಡುವಾಗ
ಬೆರಳುಗಳಿಗೆ ನೆಲ್ ಪಾಲಿಸ್ ಹಾಕಿಕೊಳ್ಳುವಾಗ
ಕೊರಳಿಗೆ ಸರ ತೊಡುವಾಗ
ವಿಚಿತ್ರವಾದ ಹಿಂಸೆ ನನಗೆ.//
ಸೃಷ್ಟಿಯೊಳಗಿನ ಅದ್ಭುತ ನಾನೆಂದು
ಹೇಳಲು ಅವಕಾಶ ನೀಡಲಿಲ್ಲ
ಸೌಂದರ್ಯ ನನ್ನಾಸ್ತಿ
ಎಂದು ತೋರಿಸಲು
ಸಮಯ ನೀಡಲಿಲ್ಲ
ಮಂಗಳಮುಖಿ ಎಂದು
ಅವಮಾನಿಸಿದರು
ಅಪಮಾನಿಸಿದರು
ಆದರೆ
ನನಗೆ ನನ್ನ ಮೇಲೆ ಹೆಮ್ಮೆ
ನಾನು ಅರ್ಧನಾರೀಸ್ವರನ
ಪ್ರತಿರೂಪ
ನನಗೂ ಸುಂದರ ಬದುಕಿದೆ
ಬದುಕಿ ತೋರಿಸುವ ಛಲವಿದೆ.
ಸುರೇಶ ತಂಗೋಡ




