ಕಾವ್ಯ ಸಂಗಾತಿ
ಅನುರಾಧಾ ರಾಜೀವ್ ಸುರತ್ಕಲ್
ಗಜಲ್


ಬೆಳೆವ ಭಾವವು ಮರೆತು ಬೀಗಲು
ಎದೆಯು ನೋಯುತಿದೆ ನೋಡು
ಕಳೆದ ಕ್ಷಣವು ಬೆಂಬಿಡದೆ ಕಾಡಲು
ಚಿಂತೆಯು ಬೇಯುತಿದೆ ನೋಡು
ಬದುಕ ಪಯಣವು ಕಲ್ಲು ಮುಳ್ಳಿನ
ಬೇಲಿಯ ತಂತಿಯಲ್ಲವೇ
ಮದಿರೆ ನಿಶೆಯಲಿ ನಿದಿರೆ ಕಾಣದೆ
ಮನವು ಕಾಯುತಿದೆ ನೋಡು
ಬೇಗುದಿ ತುಂಬಿರೆ ತಿಳಿಸಿ ಹೇಳುವ
ಪರಿಯ ಅರಿಯೆನು ನಾನು
ನೀಗದ ಹಸಿವು ದಾಹದಿ ಬರಿದೆ
ಕನಸು ಸಾಯುತಿದೆ ನೋಡು
ಕತ್ತಲೆ ತುಂಬಿದೆ ದಾರಿಯು ಕಾಣದೆ
ಕುಸಿದು ಬಿದ್ದಿರೆ ಪಾತಾಳಕೆ
ಸುತ್ತುತ ಜೇಡವು ಮರಳಿ ಯತ್ನದಿ
ಬಲೆಯ ನೇಯುತಿದೆ ನೋಡು
ಕಂಗಳ ನೋಟಕೆ ರಾಧೆಯ ಒಲುಮೆ
ಗೆಲ್ಲುವ ಭರವಸೆ ಮೂಡಿದೆ
ತಿಂಗಳ ಬೆಳಕಿನ ಶೀತಲ ತಂಪಲಿ
ಪ್ರೇಮದಿ ಮೀಯುತಿದೆ ನೋಡು
ಅನುರಾಧಾ ರಾಜೀವ್ ಸುರತ್ಕಲ್




