ಕನ್ನಡ ಸಂಗಾತಿ
“ಸುಮ್ಮನೆ ಆಗಲಿಲ್ಲ ಕರ್ನಾಟಕದ ಏಕೀಕರಣ”
ಜಿ.ಎಸ್.ಕಲಾವತಿಮಧುಸೂದನ

ನಾವು ನವೆಂಬರ್ ಮಾಸದಲ್ಲಿ ಮಾತ್ರ ನಮ್ಮ ನಾಡ ಹಬ್ಬವನ್ನು ಗೌರಿಗಣೇಶ, ದೀಪಾವಳಿ, ಯುಗಾದಿ ಹಬ್ಬಗಳಂತೆ ಆಚರಿಸಿ ಉಳಿದಂತೆ ಸ್ಥಬ್ಧರಾಗಿಬಿಡುತ್ತೇವೆ. ಆದರೇ ಆ ಹಬ್ಬದ ಹಿನ್ನೆಲೆ, ಅದಕ್ಕಾಗಿ ನಡೆಸಿದ ಹೋರಾಟ, ಹರಿಸಿದ ನೆತ್ತರು, ಅನುಭವಿಸಿದ ಶಿಕ್ಷೆ, ಸಜೆ, ತ್ಯಾಗ, ಬಲಿದಾನ, ಒಗ್ಗಟ್ಟು, ಪಟ್ಟು ಇವುಗಳನ್ನು ಕೇಳಿದಾಗ ಮೈ ರೋಮಾಂಚನಗೊಳ್ಳುತ್ತದೆ. ಅಂತಹ ಮಹಾತ್ಮರಿಗೆ ಜನ್ಮವಿತ್ತ ಕನ್ನಡಾಂಬೆಯ ಬಗ್ಗೆಯೇ ಹೆಮ್ಮೆ ಎನಿಸುವುದಲ್ಲವೇ..?! ಆ ಮಣ್ಣಿನ ಗಾಳಿಯೇ ನಮ್ಮೆಲ್ಲರ ಚೇತನವಾಗಿರುವುದೇ ನಮ್ಮ ಪುಣ್ಯವೆನಿಸುವುದು. ಅಂತಹಾ ಹೆಗ್ಗಳಿಕೆಯ ಹೋರಾಟಗಳ ಆಳ, ಒಳಹೊರಗುಗಳನ್ನು ಸ್ಮರಿಸುವ ಮೂಲಕ ಅರ್ಥಪೂರ್ಣ ಕ್ಷಣಗಳನ್ನು ಆಗಾಗ ಮೆಲುಕು ಹಾಕುತ್ತಾ ಆಚರಿಸುವುದು, ಸಂಭ್ರಮಿಸುವುದು ಸಾರ್ಥಕವಾದೀತು.
ಹೀಗೆ ನಮ್ಮ ನಾಡಿನ ಹಿರಿಮೆಗರಿಮೆಗಳನ್ನು, ಹಿನ್ನೆಲೆಯನ್ನು, ತ್ಯಾಗ ಬಲಿದಾನಗಳಿಂದ ಪಡೆದ ಇತಿಹಾಸದ ವೈಶಿಷ್ಟ್ಯವನ್ನು ಮಕ್ಕಳೊಂದಿಗೆ ಹಂಚಿಕೊಳ್ಳುವ ಮೂಲಕ ನಾಡು ನುಡಿಯ ಬಗೆಗೆ ಭಕ್ತಿ ಪ್ರೀತಿಯನ್ನು ಬೆಳೆಸುವುದು ಪ್ರತಿಯೊಬ್ಬ ಪೋಷಕರ ಶಿಕ್ಷಕರ ಹೊಣೆಗಾರಿಕೆಯಲ್ಲವೇ..? ಏಕೆ ಈ ವಿಷಯದ ಪ್ರಸ್ತಾಪವೆಂದರೇ, ರಾಜ್ಯೋತ್ಸವ ಕುರಿತು ಕವನ ರಚನೆಗೆ ತಿಳಿಸಿದರೇ ಈ ಸಂಭ್ರಮದ ಹಿಂದಿರುವ ಹೋರಾಟದ ಕುರಿತು ಒಂದೆಡೆಯೂ ಒಂದು ಪದವೂ ಪ್ರಸ್ತಾಪ ಇರದಿರುವುದು ಹತಾಶೆಯೊಂದಿಗೆ ವಿಷಾದವೆನಿಸಿ, ಈ ಲೇಖನ ಬರೆಯಲು ಕಾರಣವಾಯಿತು. ಯಾವುದೇ ಸಂಭ್ರಮದ ಹಿಂದಿನ ಸಂಕಟ ಹೋರಾಟಗಳ ಸ್ಮರಣೆ ನಮ್ಮಲ್ಲಿರುವುದು ಮಾನವೀಯತೆ, ಮತ್ತು ಮಾನವನಲ್ಲಿರಬೇಕಾದ ಬಹು ಮುಖ್ಯವಾದ ಉತ್ತಮ ಗುಣ ಕೃತಜ್ಞತೆ. ಉಪಕಾರ ಸ್ಮರಣೆ. ಅದಿಲ್ಲದ ಸಂಭ್ರಮ ಅದರ ಹಿಂದಿರುವ ಶ್ರಮಕ್ಕೆ ತೋರುವ ಅಗೌರವವಲ್ಲವೇ..?ಏನಾದರಾಗು ಮೊದಲು ಮಾನವನಾಗು” ಎಂಬುದು ಬೋಧನೆಗೆ ಬರಹಕ್ಕಷ್ಟೇ ಸೀಮಿತವಾಗದೇ ಕಾರ್ಯಗತವಾದಾಗ ಆ ವಾಕ್ಯ ಸಾರ್ಥಖ್ಯವಲ್ಲವೇ.?.
ಮೂಕಪ್ರಾಣಿಯಾದರೂ ಶ್ವಾನಕ್ಕೆ ಒಂದು ದಿನ ಒಂದು ತುತ್ತು ಅನ್ನ ಹಾಕಿದರೇ ಧನ್ಯತೆಯಿಂದ ಅವರ ಮನೆಯ ಬಾಗಿಲನ್ನು ಕಾಯುವ ಮೂಲಕವಾದರೂ ಕೃತಜ್ಞತೆಯಿಂದ ತನ್ನ ಸೇವೆಯನ್ನು ಸಲ್ಲಿಸುತ್ತದೆ. ಇಂತಹಾ ವಿಷಯದಲ್ಲಿ ಮಾನವ ರಾದ ನಾವು ಕೃತಜ್ಞತೆಯನ್ನು ಮರೆತಾಗ ಮಾನವ ಕುಲಕ್ಕೆ ಅಪಮಾನವಲ್ಲವೇ..? ಹಾಗಾಗಿ ಇಂತಹಾ ವಿಶಿಷ್ಟವಾದ ನಮ್ಮ ಕನ್ನಡ ನಾಡಿನ ಹೆಮ್ಮೆಯ ಅವಿಸ್ಮರಣೀ ಯ ದಿನವನ್ನು ನಾಡಿನಾದ್ಯಂತ ಅತ್ಯಂತ ಸಂಭ್ರಮದಿಂದ ಆಚರಿಸಲ್ಪಡುವ ಕನ್ನಡ ರಾಜ್ಯೋತ್ಸವದ ಸಂದರ್ಭವನ್ನು, ಅದರ ಹಿನ್ನೆಲೆಯನ್ನು, ಇತಿಹಾಸದ ಪುಟಗಳನ್ನು ಹೆಮ್ಮೆಯಿಂದೊಮ್ಮೆ ತೆರೆದು ನೋಡುವ ಮೂಲಕ ಪ್ರಾಥಃಸ್ಮರಣೀಯರ ಸ್ಮರಣೆಯೊಂದಿಗೆ ಸಂಭ್ರಮದ
ಸಮರ್ಪಣೆಯಲ್ಲಿ ಕೃತಜ್ಞತೆ ಸಲ್ಲಿಸೋಣ..
ಶಾತವಾಹನರು ಕನ್ನಡದ ಮೊದಲ ಅರಸು ಮನೆತನದವರು. ನಂತರ ಹಲವು ವರುಷಗಳ ಕಾಲ ತಮಿಳುನಾಡಿನ ಪಲ್ಲವರ ವಶವಾಗಿತ್ತು. ಪಲ್ಲವರ ಅಡಿಯಾಳಾ ಗಿ ಕಷ್ಟದಲ್ಲಿ ಸಿಲುಕಿದ್ದ ಕನ್ನಡಿಗರನ್ನು ಕದಂಬರ ಮನೆತನದ ಅರಸ ಮಯೂರ ವರ್ಮ ಬಿಡುಗಡೆಗೊಳಿಸಿದ್ದಲ್ಲದೇ ಕನ್ನಡಿಗರ ನೆಲೆಯನ್ನು ಭದ್ರಗೊಳಿಸಿದ.
ಆ ಬಳಿಕ ಬಂದ ಚಾಲುಕ್ಯರು, ಗಂಗರು, ಹೊಯ್ಸಳರು, ರಾಷ್ಟ್ರಕೂಟರು, ಹಾಗೂ ವಿಜಯನಗರದ ಅರಸರ ಕಾಲದ ಆಳ್ವಿಕೆಯು ಸ್ವರ್ಣಾಕ್ಷರದಲ್ಲಿ ಬರೆದಿಡುವಂತಹಾ ಬಂಗಾರದ ಯುಗವೆನಿಸಿತ್ತು. ನಾಡು ನುಡಿ ಸಂಸ್ಕೃತಿ, ವೈಭವ ಉತ್ತುಂಗಕ್ಕೇರಿದ ಕಾಲವೇ ಅದಾಗಿತ್ತು. ವಿಜಯನಗರದ ಸಾಮ್ರಾಜ್ಯದ ಅರಸರ ಆಳ್ವಿಕೆಯು ಕೊನೆಗೊಂಡ ನಂತರ ಕನ್ನಡಿಗರು ಬೇರೆಬೇರೆ ಅರಸರುಗಳ ಪಾಲಾಗಿ ಹರಿದು ಹಂಚಿ ಹೋದರು.
ಬ್ರಿಟೀಷರ ಆಳ್ವಕೆಯಲ್ಲಿ ಕನ್ನಡಿರು ಸುಮಾರು ೨೦ ಬೇರೆಬೇರೆ ಆಳ್ವ್ವಿಕೆಯಡಿಯಲ್ಲಿ ಹಂಚಿಹೋದರು. ಬಾಂಬೆ ಪ್ರೆಡೆನ್ಸಿಯ ಆಡಳಿತ ಭಾಷೆ ಮರಾಠಿ. ನಿಜಾಮರದ್ದು ಉರ್ದು. ಹಾಗೂ ತೆಲುಗು, ಮದರಾಸಿನವರದ್ದು ತಮಿಳು. ಹೀಗಿರುವಾಗ ಕನ್ನಡಿಗರಿಗೆ ಎಲ್ಲಿಯ ಸ್ಥಾನ..? ಈಗಿನ ಸ್ಥಿತಿಯೂ ಅದಕ್ಕಿಂತ ಭಿನ್ನವಾಗಿಲ್ಲವೆಂಬುದು ವಿಷಾದಕರವಾದ ಸಂಗತಿ. ಹೀಗೆ
ಕನ್ನಡ ನುಡಿಯೊಂದಿಗೇ ಕನ್ನಡಿಗನೂ ಅನಾಥವಾದಂತಿತ್ತು. ಹಾಗೆಯೇ ಸಂಪೂರ್ಣವಾಗಿ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುವ ಹಂತ ತಲುಪಿದಾಗ, ಕನ್ನಡಾಂಬೆಯ ಕಟ್ಟಾಳುಗಳು ತಮ್ಮದೆಲ್ಲವನ್ನೂ ತೊರೆದು ನಿಸ್ವಾರ್ಥದಿಂದ ನಿಷ್ಠೆಯಿಂದ ನಾಡು-ನುಡಿಗಾಗಿಯೇ ತನುಮನಧನಗಳನ್ನು ಧಾರೆ ಎರೆಯಲು ಸಿದ್ಧರಾದರು.
ಈ ಹಂತದಲ್ಲಿಯೇ ತಲೆ ಎತ್ತಿ ನಿಂತಿದ್ದು “ಕರ್ನಾಟಕ ವಿಧ್ಯಾವರ್ಧಕ ಸಂಘ”. ೧೮೯೦ರಲ್ಲಿ ದಾರವಾಡದಲ್ಲಿ ಆರ್.ಹೆಚ್. ದೇಶಪಾಂಡೆಯವರು ಮೊಟ್ಟ ಮೊದಲಿಗೆ ಹುಟ್ಟು ಹಾಕಿದ ಸಂಘ ಎಂಬ ಹೆಗ್ಗಳಿಕೆ ಈ ಸಂಘದ್ದು. ಇದರ ಕವಲುಗಳಾಗಿ ಹಲವಾರು ಕನ್ನಡ ಸಂಘಗಳು ಹುಟ್ಟಿಕೊಂಡವು. ಕನ್ನಡ ನಾಡುನುಡಿ ಉಳಿಯ ಬೇಕೆಂದರೇ ನಮ್ಮಲ್ಲಿ ಒಗ್ಗಟಿನ ಬಲ ಹೆಚ್ಚಿಸಬೇಕೆಂಬುದನ್ನು ಅರಿತ ಅಂದಿನ ನಮ್ಮ ಹಿರಿಯರು ಕರ್ನಾಟಕ ಏಕೀಕರಣದ ಬೀಜವನ್ನು ಬಿತ್ತಲು ಪ್ರಾರಂಭಿಸಿದರು. ಈ ಚಳುವಳಿಯ ಹೋರಾಟಕ್ಕೆ ಬಲವಾದ ಇಂಬು ಕೊಟ್ಟವರು ದಿಟ್ಟ ಹೋರಾಟಗಾರರಾದ ಆಲೂರು ವೆಂಕಟರಾಯರು. ಇವರು ಕರುನಾಡ ಮೂಲೆ ಮೂಲೆಗಳನ್ನು ಸಂಚರಿಸಿ ಸಭೆಗಳನ್ನು ನಡೆಸಿ ಕರುನಾಡ ಗತವೈಭವವನ್ನು ಸ್ಮರಿಸುತ್ತ, ಇಂದು ನಾಡು ನುಡಿಗೊದಗಿರುವ ದುಸ್ಥಿತಿಯನು ಮನದಟ್ಟಾಗುವಂತೆ ವಿವರಿಸುವ ಮೂಲಕ ಕನ್ನಡಿಗರನ್ನು ಬಡಿದೆಬ್ಬಿಸಿದರು. ಏಕೀಕರಣದ ಕಿಚ್ಚನ್ನು ಹೊತ್ತಿಸಿದರು.
೧೯೧೨ರಲ್ಲಿ “ಕರ್ನಾಟಕ ಗತ ವೈಭವ”ಎಂಬ ಕೃತಿಯನ್ನು ರಚಿಸಿದರು. ಈ ಹೊತ್ತಗೆಯು ಕನ್ನಡದ ಹಿರಿಯರಲ್ಲಿ ಕಿರಿಯರಲ್ಲಿ ಕಿಚ್ಚೆಬ್ಬಿಸಿ ಹುರಿದುಂಬಿಸಿತು. ಇದರ ಸಂಕೇತವಾಗಿ ಈ ಹೋರಾಟದ ತಂಡವೇ ಆಲೂರು ವೆಂಕಟರಾಯರ ಸಹಕಾರದೊಂದಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪನೆಗೆ ಕಾರಣವಾಯಿತು. ಆದರೇ ಇಂದು ಅದರ ಧ್ಯೇಯೋದ್ದೇಶವೇ ಬದಲಾಗಿರುವುದು ವಿಷಾದಕರ ಸಂಗತಿ. ಹೀಗೇ ಆಲೂರರೊಂದಿಗೆ ಗೊರೂರು ರಾಮಸ್ವಾಮಿ ಅಯ್ಯಂಗಾರ್, ಕೌಜಲಗಿ, ಶ್ರೀನಿವಾಸ ರಾವ್ ಮಂಗಳವಾಡೆ, ಅ.ನ.ಕೃ, ಕೆಂಗಲ್ ಹನುಮಂತರಾಯರು, ಎಸ್ ನಿಜಲಿಂಗಪ್ಪ, ಟಿ. ಮರಿಯಪ್ಪ, ಸಾಹುಕಾರ್ ಚೆನ್ನಯ್ಯ, ವೀರಣ್ಣಗೌಡ, ಹೆಚ್.ಸಿ.ದಾಸಪ್ಪ ಇನ್ನು ಹಲವಾರು ಕಟ್ಟಾಳುಗಳ ದಂಡೇ ಟೊಂಕ ಕಟ್ಟಿ ನಿಂತಿತ್ತು. ಇದರೊಂದಿಗೆ ಕನ್ನಡ ಸಾಹಿತ್ಯ ಪರಿಷತ್, ಬೆಂಗಳೂರು, ಕರ್ನಾಟಕ ಸಂಘ, ಶಿವಮೊಗ್ಗ, ಕರ್ನಾಟಕ ಸಮಿತಿ, ಕಾಸರಗೋಡು, ಈ ಮೂರು ಮುಖ್ಯವಾದ ಸಂಘಗಳ ಮೂಲಕ ಕನ್ನಡಿಗರು ಒಂದಾಗಬೇಕೆಂಬ ಬೀಜವನ್ನು ಬಿತ್ತಿದರೆ, ಕುವೆಂಪು, ಬೇಂದ್ರೆ, ಕಾರಂತರು, ಗೋಕಾಕರು, ಜೋಷಿ, ಬೆಟಗೇರಿ ಕೃಷ್ಣ ಶರ್ಮರು, ಗೋವಿಂದ ಪೈ, ಕಯ್ಯಾರ ಕಿಯಣ್ಣರೈ ಇನ್ನು ಮುಂತಾದವರು ತಮ್ಮ ಹರಿತವಾದ ಬರಹಗಳಿಂದ ಏಕೀಕರಣದ ಕಿಚ್ಚಿಗೆ ತುಪ್ಪ ಸುರಿದರು. ಭಾಷೆಯ ಬತ್ತಿಗೆ ತೈಲವಾದರು.
ಇವರೊಂದಿಗೆ ಹಲವಾರು ಮಹಿಳಾಮಣಿಗಳೂ ಸೊಡರಾದರು. ಸ್ವಾತಂತ್ರ್ಯ ಹೋರಾಟದಲ್ಲಿ ವೀರಾವೇಷದಿಂದ ಹೋರಾಡಿದ ಕಿತ್ತೂರು ಚೆನ್ನಮ್ಮ, ಜಾನ್ಸಿರಾಣಿ ಲಕ್ಷ್ಮಿ ಬಾಯಿ, ಅಬ್ಬಕ್ಕರಂತೆ ಕರ್ನಾಟಕದ ಏಕೀಕರಣದಲ್ಲೂ ಜಯದೇವಿ ತಾಯಿ ಲಿಗಾಡೆ, ಬಳ್ಳಾರಿ ಸಿದ್ದಮ್ಮ, ಲಿಂಗವ್ವ, ಗುಲ್ಬರ್ಗ ವಿಮಲ ಬಾಯಿ, ಮೇಲ್ಕೋಟೆ ಮಲ್ಲವ್ವ, ಸರಸ್ವತಿ, ಸುಹಾಸಿನಿ ಬಂಡಾರಿ, ಕಮಲಾಶೆಟ್ಟಿ, ಸಾವಿತ್ರಿ ದೇವಿ ಹಳ್ಳಿಕೇರಿ, ಭಾಗೀರತಿ ಪಾಟೀಲ, ಶಾಂತಾದೇವಿ ಜತ್ತಿ, ಶಕುಂತಲ ಕುರ್ತು ಕೋಟಿ, ಇನ್ನು ಹಲವಾರು ಮಹಿಳೆಯರು ಹೋರಡಿದರು.
ಈ ನಿಟ್ಟಿನ ಹೋರಾಟದಲ್ಲಿ ಏಕೀಕರಣದ ಕಾವು ರಾಜಕೀಯ ಮಟ್ಟದಲ್ಲೂ ಚರ್ಚೆಗೆ ಕಾರಣವಾಗಿ ೧೯೨೦ ರಲ್ಲಿ ದಾರವಾಡದಲ್ಲಿ ನಡೆದ ಕರ್ನಾಟಕ ರಾಜ್ಯ ರಾಜಕೀಯ ಸಭೆಯಲ್ಲಿ ಏಕೀಕರಣದ ಬೇಡಿಕೆಯನ್ನು ಯಾವುದೇ ತಕರಾರಿಲ್ಲದೆ ಜಾರಿಮಾಡಲಾಯಿತು. ಇದರಿಂದ ಉತ್ಸಾಹಿತರಾದ ಕನ್ನಡಿಗರು ನಾಗಪುರದಲ್ಲಿ ನಡೆದ ಕಾಂಗ್ರೆಸ್ ಸಭೆಯಲ್ಲಿ ಪಾಲ್ಗೊಂಡು ಕರ್ನಾಟಕ ಪ್ರದೇಶ ಕಾಂಗ್ರೇಸ್ಸನ್ನು ಹುಟ್ಟು ಹಾಕುವ ನಿರ್ಧಾರವನ್ನು ಕೈಗೊಳ್ಳಲಾಯಿತು.
ಈ ಸಮಿತಿಯು ೧೯೨೪ ರಲ್ಲಿ ಬೆಳಗಾವಿಯಲ್ಲಿ ಸಮ್ಮೇಳನ ನಡೆಸಿ ಏಕೀಕರಣದ ನಿಲುವನ್ನು ಮತ್ತಷ್ಟು ಗಟ್ಟಿಗೊಳಿಸಿತು. ಈ ಸಮ್ಮೇಳನದಲ್ಲಿ ಸೇರಿದ ಸಮುದಾಯದ ಬೇರನ್ನು ಹುಯಿಲಗೋಳ ನಾರಾಯಣರಾಯರು ಬರೆದ “ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು” ಕವಿತೆ, ಮತ್ತಷ್ಟು ಭದ್ರಗೊಳಿಸಿತು. ಈ ಹೋರಾಟದ ಬಿಸಿ ಗಡಿನಾಡ ಕೋಟೆ ದೆಹಲಿಗೂ ಮುಟ್ಟಿತು. ೧೯೨೮ ರಲ್ಲಿ ನೆಹರುರವರು ಒಂದು ತಂಡವನ್ನು ಮಾಡಿ ಬೇಡಿಕೆಯ ಪರಿಶೀಲನೆಗೆ ಕಳುಹಿದರು. ಅದನ್ನು ಪರಿಶೀಲಿಸಿದ ಸಮಿತಿಯು ಏಕೀಕರಣಕ್ಕೆ ಸಮ್ಮತಿಯನ್ನು ಸೂಚಿಸಿತಾದರೂ ಸುಮಾರು ೯ ವರುಷಗಳು ಕಳೆದರು ರಾಜಕೀಯವಾಗಿ ಕಾರ್ಯಗತಗೊಳಿಸದಿರಲು ಹಲವಾರು ಕಾರಣಗಳಿದ್ದವು. ೧೯೩೭ ರ ಚುನಾವಣೆಯಲ್ಲಿ ಏಕೀಕರಣದ ಬೇಡಿಕೆಯನ್ನು ಈಡೇರಿಸುವುದಾಗಿ ಭರವಸೆಯನ್ನಿತ್ತು ಗೆಲ್ಲುವ ಹಂಬಲ ಮಾತ್ರ ಕಾಂಗ್ರೆಸ್ಸಿಗಿತ್ತು. ಹಾಗಾಗಿ ಕನ್ನಡಿಗರು ಒಂದಾಗುವ ಆಸೆ ಕನಸಾಗೇ ಉಳಿದಿತ್ತು.
ಆದರೆ ಹೋರಾಟಗಾರರ ಕಾವೇನೂ ಕುಗ್ಗಿರಲಿಲ್ಲ. ಇದು ರಾಜಕೀಯ ನಾಯಕರ ಅರಿವಿಗೆ ಬಂದ ಕಾರಣ ೧೯೪೬ ರಲ್ಲಿ ಮುಂಬಯಿಯಲ್ಲಿ ನಡೆದ ಏಕೀಕರಣದ ಸಭೆಯಲ್ಲಿ ಸರದಾರ್ ವಲ್ಲಬಾಯಿ ಪಟೇಲರು, “ಇನ್ನೇನು ಕೆಲವೇ ದಿನಗಳಲ್ಲಿ ಬ್ರಿಟೀಷರಿಂದ ಬಿಡುಗಡೆ ಸಿಗಲಿದೆ, ಆಗ ಕರ್ನಾಟಕ ಏಕೀಕರಣ ಸ್ವಾತಂತ್ರ್ಯ ಭಾರತದ ಮೊದಲ ಕೆಲಸ ವಾಗಲಿದೆ” ಎಂದು ಹೇಳಿಕೆ ಕೊಟ್ಟರು. ೧೯೪೭ ರಲ್ಲಿ ಬ್ರಿಟೀಷರಿಂದ ಭಾರತ ಬಿಡುಗಡೆ ಹೊಂದಿತು. ಹಾಗೆಯೇ ಕರುನಾಡೂ ಒಂದಾಗಲಿದೆ ಎಂದು ಕಾದದ್ದೇ ಬಂತು. ನಿಜಾಮರ ತೆಕ್ಕೆಯಲ್ಲಿದ್ದ ಕೆಲವು ಭಾಗಗಳನ್ನು ಅವರು ಬಿಟ್ಟುಕೊಡಲು ಸಿದ್ಧರಿರಲಿಲ್ಲ, ಹಲವು ಸುತ್ತಿನ ಮಾತುಕತೆಯ ನಂತರ ೧೯೪೮ ರಲ್ಲಿ ನಿಜಾಮ ಅರಸರ ಆಳ್ವಿಕೆಯಿಂದ ಬಿಡುಗಡೆ ಸಿಕ್ಕಿತು. ಹೈದರಾಬಾದ್ ನಿಜಾಮರ ಅಡಿಯಲ್ಲಿದ್ದ ಭಾಗಗಳೂ ಒಕ್ಕೂಟದಡಿ ಬರಲು ಸಿದ್ಧವಾದವು. ನಂತರ ರಾಜ್ಯದ ರಚನೆಯ ಕೆಲಸವಾದ ಕರ್ನಾಟಕದ ಏಕೀಕರಣದ ಬೇಡಿಕೆಯನ್ನು ಪರಿಶೀಲಿಸಲು “ದಾರ್” ಕಮಿಟಿಯನ್ನು ರಚಿಸಿತು. ಆದರೆ ಈ ಕಮಿಟಿಯೂ ನುಡಿಯ ಆಧಾರದ ಮೇಲೆ ರಾಜ್ಯಗಳನ್ನಾಗಿ ಮಾಡುವುದನ್ನು ವಿರೋಧಿಸಿತು. ಅದು ಕನ್ನಡಿಗರ ಹೋರಾಟದ ಬಿಸಿಯನ್ನು ಮತ್ತಷ್ಟು ಹೆಚ್ಚಿಸಿತು. ಆ ಬಿಸಿಯನ್ನು ತಣಿಸುವ ಸಲುವಾಗಿ ಒಕ್ಕೂಟ ಸರ್ಕಾರವು ನೆಹರು, ವಲ್ಲಬಾಯಿ ಪಟೇಲ್. ಪಟ್ಟಾಭಿ ಸೀತಾರಾಮ ರನ್ನು ಒಳಗೊಂಡಂತೆ “ಜೆವಿಪಿ” ಕಮಿಟಿಯನ್ನು ಮಾಡಿ ಪರಿಶೀಲಿಸಿತು. ಅಂದೂ ಸಹ ಕಾರ್ಯಗತವಾಗಲಿಲ್ಲಾ.
ಹೀಗೆ ಆಗಾಗ ಕಮಿಟಿಗಳಾಗಿ ದೊಂಬರಾಟವಾಗುತ್ತಿತ್ತು. ಇದು ಹೋರಾಟ ಗಾರರನ್ನು ಮತ್ತಷ್ಟು ಕೆರಳಿಸಿತು. ಅದಕ್ಕಾಗಿ “ಕರ್ನಾಟಕ ಏಕೀಕರಣ ಪಕ್ಷ” ವನ್ನು ಹುಟ್ಟು ಹಾಕಿದರು. ಇಷ್ಟಾದರೂ ಕಾಗ್ರೇಸ್ ಏಕೀಕರಣಕ್ಕೆ ಮನಸ್ಸು ಮಾಡದ ಕಾರಣ ಕಾಂಗ್ರೆಸ್ಸಿನ ಹಿರಿಯರಾದ ಎ.ಜೆ.ದೊಡ್ಡಮೇಟಿಯವರು ರಾಜಿನಾಮೆ ಕೊಟ್ಟರು. ಅವರಿಂದ ತೆರವುಗೊಂಡ ಸ್ಥಾನಕ್ಕಾಗಿ ಮರುಚುನಾವಣೆಯಲ್ಲಿ ಕಾಂಗ್ರೇಸ್ ಹೀನಾಯ ವಾಗಿ ಸೋಲನ್ನು ಕಂಡಿತು. ಕರ್ನಾಟಕ ಏಕೀಕರಣ ಪಕ್ಷ ಹೆಚ್ಚು ಮತಗಳಿಂದ ಗೆಲುವನ್ನು ಸಾಧಿಸಿ ರಾಜಕೀಯವಾಗಿಯೂ ನೆಲೆಗೊಂಡಿತು. ಇಂತಹಾ ಪೆಟ್ಟುಗಳನ್ನು ಪದೇಪದೇ ಕೊಡುತ್ತಲೇ ೫೦ ವರುಷಗಳೇ ದಾಟಿದವು. ಇನ್ನು ಸುಮ್ಮನೆ ಕುಳಿತರಾಗದೆಂದು ಉಪವಾಸದ ಚಳುವಳಿಯನ್ನು ಪ್ರಾರಂಭಿಸಿದರು. ನಾಡಿನೆಲ್ಲೆಡೆ ಇದೇ ಹಾದಿಯನ್ನು ಅನುಸರಿಸಿದರು. ಆದರೆ ಹುಬ್ಬಳ್ಳಿಯಲ್ಲಿ “ಶಂಕರ ಗೌಡ ಪಾಟೀಲರು” ನಡೆಸಿದ ಏಕೀಕರಣದ ಉಪವಾಸ ೨೩ ದಿನಗಳನ್ನೂ ಸುದೀರ್ಘವಾಗಿ ದಾಟಿತ್ತು. ಇದನ್ನೂ ಸರ್ಕಾರ ಲೆಕ್ಕಿಸದಿದ್ದಾಗ, ಇದೇ ಹೊತ್ತಿನಲ್ಲಿ ಹುಬ್ಬಳ್ಳಿಯಲ್ಲಿ ೧೯೫೩ ಏಪ್ರಿಲ್ ೧೯ ರಂದು ನಡೆದ ಕಾಂಗ್ರೆಸ್ ಕಾರ್ಯಕಾರಿಣಿ ಸಭೆಯೊಂದಕ್ಕೆ ಮುತ್ತಿಗೆ ಹಾಕಿ ಬೇಡಿಕೆ ಈಡೇರುವವರೆಗೆ ಹೋರಾಟ ನಿಲ್ಲದೆಂಬ ಸಂದೇಶವನ್ನು ಸರ್ಕಾರಕ್ಕೆ ನೀಡಿತು. ಅಂದು ಮುತ್ತಿಗೆ ಹಾಕಿದ ೨೫೦೦೦ಕ್ಕೂ ಅಧಿಕ ಸಂಖ್ಯೆಯಲ್ಲಿದ್ದ ಕನ್ನಡಿಗರನ್ನು ಕಂಡು ರಾಜಕಾರಣಿಗಳು ಬೆಚ್ಚಿಬಿದ್ದರು. ರಾಜಕೀಯ ನಾಯಕರಾದ ನಿಜಲಿಂಗಪ್ಪನವರನ್ನೊಳಗೊಂಡಂತೆ ಕೆಲವರಿಗೆ ಬಳೆಯನ್ನು ತೊಡಿಸಿ ಚಪ್ಪಲಿ ಸೇವೆಯನ್ನು ಮಾಡಿದರು. ಗುದ್ಲೆಪ್ಪ ಹಳ್ಳಿಕೇರಿಯವರ ಜೀಪಿಗೆ ಬೆಂಕಿ ಇಟ್ಟು ನಾಯಕರಿಗೆ ರಾಜೀನಾಮೆ ಕೊಡಲು ಒತ್ತಾಯಿಸಿದರು. ಯಾರ ಬೆದರಿಕೆಗೂ ಜಗ್ಗದ ಹೋರಾಟಗಾರರನ್ನು ಪೋಲೀಸರು ಮನಬಂದಂತೆ ಲಾಟಿಚಾರ್ಜ ಮಾಡ ತೊಡಗಿದರು. ಮೈಮೇಲೆ ಬಾಸುಂಡೆಗಳು ಬಂದರೂ, ನೆತ್ತರು ಹರಿದರೂ ಜಗ್ಗದೇ ಎದೆಯೊಡ್ಡಿ ನಿಂತರು ಅಂದು ವೀರ ಕೆಚ್ಚೆದೆಯ ಕನ್ನಡಿಗರು. ಮನಬಂದಂತೆ ಥಳಿಸಿ ಥಳಿಸಿ ಕೈನೊಂದ ಪೋಲೀಸರು ೧೪೪ ಸೆಕ್ಷನ್ ಜಾರಿಗೊಳಿಸಿದರು. ಹಲವು ಹಿರಿಯ ಹೋರಾಟಗಾರರನ್ನು ಸೆರೆ ಹಿಡಿದರು. ಹೋರಾಟಗಾರರ ಪರವಾಗಿ ತಮ್ಮ ಶುಲ್ಕವನ್ನು ಪಡೆಯದೇ ವಾದ ಮಾಡಿ ಎಸ್.ಆರ್. ಬೊಮ್ಮಾಯಿಯವರು ತಮ್ಮ ಜಾಣ್ಮೆಯಿಂದ ಅವರನ್ನೆಲ್ಲಾ ಬಿಡಿಸಿದರು. ಆದರೆ ಎಡೆಬಿಡದೆ ಸಭೆಗಳು ಉಪವಾಸಗಳು, ಗಲಭೆಗಳು ಆಗಿಂದಾಗ್ಗೆ ನಡೆಯುತ್ತಲೇ ಇದ್ದವು. ಈ ಬಿಸಿ ಒಕ್ಕೂಟದ ಸರ್ಕಾರವನ್ನು ಸುಡಲಾರಂಭಿಸಿತು. ರಾಜ್ಯಗಳ ಮರು ವಿಂಗಡನೆಯನ್ನು ಪರಿಶೀಲಿಸಲು ಮತ್ತೊಮ್ಮೆ “ಪಜಲ್ಆಲಿ” ಕಮಿಟಿಯನ್ನು ಮಾಡಿ ನುಡಿಯ ಆಧಾರದ ಮೇಲೆ ರಾಜ್ಯಗಳನ್ನು ಮಾಡಲು ಸಲಹೆ ನೀಡಿತು. ಸುಮಾರು ೭೫ ವರ್ಷಗಳಿಗೂ ಮೀರಿದ ಹೋರಾಟದ ಪರಿಣಾಮ ಕಡೆಗೂ ೧೯೫೬ ನವೆಂಬರ್ ೧ ರಂದು ಕರ್ನಾಟಕದ ಏಕೀಕರಣಗೊಳಿಸುವಲ್ಲಿ ನಿಷ್ಠ ಕನ್ನಡಿಗರ ಹೋರಾಟ ಸಫಲವಾಯಿತು. ಕರುನಾಡಾಯಿತು.
ಹೀಗೇ ಕರ್ನಾಟಕದ ಏಕೀಕರಣಕ್ಕಾಗಿ ಹಗಲಿರುಳು ಹೋರಾಡಿದ ಇಂತಹಾ ಹೆಮ್ಮೆಯ ಮಹನೀಯರ ಸ್ಮರಣೆಯೊಂದಿಗೆ ಕನ್ನಡ ರಾಜ್ಯೋತ್ಸವದ ಆಚರಣೆಯ ಅರ್ಪಣೆಯಾಗುವಂತೆ ಅರ್ಥಪೂರ್ಣವಾಗಿ ಆಚರಿಸದಾಗ ಆಚರಣೆ ಸಾರ್ಥಕವಾಗುತ್ತದೆ. ಅಂತಹಾ ಮಹನೀಯರ ಅರ್ಪಣೆಗಾಗಿ ಹೊಮ್ಮಿದ ನನ್ನ ಕವಿತೆ..
“ಕರುನಾಡ ಹುಟ್ಟಿನ ಹಿಂದಣ ಹೆಜ್ಜೆಗಳನ್ನು ಗಟ್ಟಿಯಾಗಿ ಹಿಡಿದಿಟ್ಟಬೇಕಿದೆ..
ಅದು… ಬಿಟ್ಟಿ ಬಂದದ್ದಲ್ಲಾ…!
ನಮ್ಮ ಹಿರಿಯರು ಉಸುರುಗಟ್ಟಿದ ದಿಟ್ಟ ಹೋರಾಟದ ಹಿರಿಮೆಯಿದೆ.
ಪೆಟ್ಟು ತಿಂದ ನೆತ್ತರ ಹೊಳೆಯಿದೆ..,
ನಿದ್ದೆಗೆಟ್ಟು ಕೆಚ್ಚು ತುಂಬಿದ ದಿಟ್ಟ ನಯನಗಳಿವೆ.
ಹೋರಾಟವನೇ ಉಂಡುಟ್ಟ ಹೊಟ್ಟೆಗಳಿವೆ. ಹಣ್ಣಾಗಿ ಮಣ್ಣಾದ ಜೀವಗಳ ಹಸಿವು ನರಳಕೆಗಳಿವೆ..! “ಇದಂ ನ ಮಮ” ಎಂದು ತಮ್ಮ ಬಾಳನೇ ಬಟಾಬಯಲಿಗಿಟ್ಟವರ ನಿಟ್ಟುಸಿರಿನಲಿ
ಕಟ್ಟಿ ಬೆಳೆಸಿ ಉಳಿಸಿದವರ ತ್ಯಾಗದ ಉಡುಗೊರೆಯ ನಾಡ ನುಡಿಯ ನಿರ್ಲಕ್ಷಿಸಿದೊಡೆ ನಮ್ಮ ಉಳಿವೆಂತು..? ನಾಡ ಉಳಿವೆಂತು.. ನುಡಿಯ ಉಳಿವೆಂತು..!!? ನಿಷ್ಠೆಯಲಿ ಉಲಿಯುತಿರಲಿ ಉಸಿರುಸಿರು ನಲುಮೆಯಲಿ ಎಲ್ಲೆಡೆ ಕನ್ನಡದ ಒಲುಮೆ..
ಸಿರಿಗನ್ನಡಂಗೆಲ್ಗೆ ಸಿರಿಗನ್ನಡಂ ಬಾಳ್ಗೆ..
ಜಿ.ಎಸ್.ಕಲಾವತಿಮಧುಸೂದನ




