ಗಜಲ್ ಸಂಗಾತಿ
ವಾಣಿ ಯಡಹಳ್ಳಿಮಠ
ತರಹಿ ಗಜಲ್
( ಸಾನಿ ಮಿಸ್ರಾ ಗೋವಿಂದ ಹೆಗಡೆ ಸರ್ ಅವರದ್ದು
ಮನವನು ಚೂರೂ ಕಲಕದಿದ್ದರೆ ಅದೆಂಥ ಕವಿತೆ,,,)

ತರಹಿ ಗಜಲ್
( ಸಾನಿ ಮಿಸ್ರಾ ಗೋವಿಂದ ಹೆಗಡೆ ಸರ್ ಅವರದ್ದು
ಮನವನು ಚೂರೂ ಕಲಕದಿದ್ದರೆ ಅದೆಂಥ ಕವಿತೆ,,,)
ಹಳೆಯ ನೆನಪೊಂದ ಕೆದಕದಿದ್ದರೆ ಅದೆಂಥ ಕವಿತೆ
ಮನವನು ಚೂರೂ ಕಲಕದಿದ್ದರೆ ಅದೆಂಥ ಕವಿತೆ
ಬರೀ ಪದ, ಪ್ರಾಸಗಳ ಆಟ ಬರವಣಿಗೆಯೇ
ಭಾವನೆಯೊಂದನು ಬಡಿದೆಬ್ಬಿಸದಿದ್ದರೆ ಅದೆಂಥ ಕವಿತೆ
ತನ್ನ ಗಾಯವನೇ ಗುನುಗುತಿದ್ದರೆ ಹಾಡಾಗುವುದೇ
ಅನ್ಯರ ನೋವ ಸಂತೈಸದಿದ್ದರೆ ಅದೆಂಥ ಕವಿತೆ
ಚಂದ್ರ ತಾರೆ , ಮಳೆ , ಬಿಸಿಲು, ಭೂಮಿ , ಬಾನು
ಪ್ರಕೃತಿ ಹಾಳೆಯಲಿ ಹೊಳೆಯದಿದ್ದರೆ ಅದೆಂಥ ಕವಿತೆ
ತಲ್ಲಣಿಸುತಿದೆ ಜಗವು ವಿಕೃತ , ವಿಕಾರಗಳಿಂದ
ಮರೆತ ಮಾನವತೆ ಮರಳಿಸದಿದ್ದರೆ ಅದೆಂಥ ಕವಿತೆ
ಒಡೆದು ಹೋಳಾಗುತಿದೆ ಮನುಕುಲ ಧರ್ಮದ ಹೆಸರಲಿ
ಮನುಜರೆದೆಯಲಿ ಪ್ರೀತಿ ಬಿತ್ತದಿದ್ದರೆ ಅದೆಂಥ ಕವಿತೆ
ಅಹಂಕಾರದ ಬೇಡಿಯಿಂದ ಮುಕ್ತವಾಗಲಿ ಆತ್ಮ ‘ವಾಣಿ’
ಅರಿವಿಗೆ ಜಡಿದ ಅಗುಳಿ ಸಡಿಲಿಸದಿದ್ದರೆ ಅದೆಂಥ ಕವಿತೆ
—————————————————————————————-
ವಾಣಿ ಯಡಹಳ್ಳಿಮಠ





ನೈಜ ವಿಚಾರಗಳು, ಬದುಕಿನ ಮೌಲ್ಯ, ಸಾರ್ಥಕ ಜೀವನ ಇನ್ನು ಮುಂತಾದ ಮೌಲ್ಯವನ್ನು ವಾಣಿ ಮೆಡಂ ಅವರು ತಮ್ಮ ಕವಿತೆಯಲ್ಲಿ ಬರೆದಿದ್ದಾರೆ. ಕವಿತೆಯನ್ನು ಓದಿ ಮನಸ್ಸು ತೃಪ್ತವಾಯಿತ್ತು
ಧನ್ಯವಾದಗಳು ಮೇಡಂ