ಪ್ರೀತಿ ಸಂಗಾತಿ
ವೀಣಾ ಹೇಮಂತ್ ಗೌಡ ಪಾಟೀಲ್

“ಪ್ರೀತಿಯ ತೀವ್ರತೆ”

ಮದುವೆಯಾಗಿ ಕೆಲ ದಶಕಗಳೇ ಕರೆದು ಹೋದರೂ ತಂದೆಯನ್ನು ಮದುವೆಯಾದ ಹೊಸದರಲ್ಲಿ ಪ್ರೀತಿಸುತ್ತಿದ್ದಷ್ಟೇ ತೀವ್ರತೆಯಿಂದ ಈಗಲೂ ಪ್ರೀತಿಸುವೆಯ ಅಮ್ಮ? ಎಂದು ತನ್ನ ತಾಯಿಯನ್ನು ಆ ಯುವತಿ ಕೇಳಿದಳು.
ಕೆಲ ಕ್ಷಣಗಳ ಮೌನದ ನಂತರ ಆಕೆ ಅತ್ಯಂತ ದೀರ್ಘವಾಗಿ ತನ್ನ ಮಗಳನ್ನು ದಿಟ್ಟಿಸಿ ನೋಡುತ್ತಾ ಮೌನವಾಗಿ ಉಳಿದಳು. ಬಹುಶಹ ನನ್ನ ಪ್ರಶ್ನೆಗೆ ಆಕೆಯ ಬಳಿ ಉತ್ತರ ಇರಲಿಕ್ಕಿಲ್ಲ ಎಂಬ ಭಾವ ಮಗಳಲ್ಲಿ ಉಂಟಾಯಿತು. ಆದರೆ ತಾಯಿ ಕೂಡ ತನ್ನ ಮನದಲ್ಲಿ ಈ ಪ್ರಶ್ನೆಗೆ ಉತ್ತರವನ್ನು ಹುಡುಕುವ ನಿಟ್ಟಿನಲ್ಲಿ ಯೋಚನಾಮಗ್ನಳಾಗಿದ್ದಳು ಎಂದು ಮಗಳಿಗೆ ಗೊತ್ತಾಗಲಿಲ್ಲ. ಇದುವರೆಗೂ ಅರಿಯದ ಯಾರಿಗೂ ತೆರೆಯದ ತನ್ನ ಬದುಕಿನ ಪುಟಗಳನ್ನು ಮಗಳ ಮುಂದೆ ಯಾವ ರೀತಿ ಒಪ್ಪಿಸಬೇಕು ಎಂಬ ಜಿಜ್ಞಾಸೆ ತಾಯಿಯನ್ನು ಕಾಡಿತ್ತು
ಮೌನದಲ್ಲಿಯೇ ಮಧ್ಯಾಹ್ನದ ಊಟ ಮುಗಿಸಿ ವಿಶ್ರಾಂತಿಗೆ ತೆರಳಿದ ಮಗಳು ಒಂದೆರಡು ಗಂಟೆಯ ನಂತರ ತನ್ನ ಕೋಣೆಯಿಂದ ಹೊರಬಂದಾಗ ಡೈನಿಂಗ್ ಟೇಬಲ್ ನ ಮೇಲೆ ಪೇಪರ್ ವೇಟ್ನ ಅಡಿಯಲ್ಲಿದ್ದ ಒಂದು ಗುಲಾಬಿ ಬಣ್ಣದ ಕಾಗದ ಗೋಚರಿಸಿತು. ಪತ್ರವನ್ನು ತೆರೆದು ನೋಡಿದಾಗ
ನನ್ನ ಮುದ್ದು ಮಗಳೇ,
ಈಗಲೂ ನಾನು ಮುಂಚಿನಷ್ಟೇ ನಿನ್ನ ತಂದೆಯನ್ನು ಪ್ರೀತಿಸುತ್ತೇನೆಯೇ ಎಂಬ ನಿನ್ನ ಪ್ರಶ್ನೆ ನನ್ನನ್ನು ಇಕ್ಕಟ್ಟಿಗೆ ಸಿಲುಕಿಸಿದ್ದು ನಿಜ… ಕಾರಣ ಇದರ ಉತ್ತರ ನೀನು ತಿಳಿದುಕೊಂಡಷ್ಟು ಸರಳವಾಗಿಲ್ಲ ಎಂಬುದು.
ನಿಜ…. ನಾನು ನಿನ್ನಪ್ಪನನ್ನು ಪ್ರೀತಿಸುತ್ತೇನೆ, ಆದರೆ ಈ ಮುಂಚಿನಂತೆಯ ಪ್ರೀತಿ ಖಂಡಿತವಾಗಿಯೂ ಅಲ್ಲ.
ಆ ಯೌವನದ ದಿನದ ಹೃದಯ ಬಡಿತಗಳು ಈಗಿಲ್ಲ. ನಿನ್ನ ಅಪ್ಪನ ಒಂದು ಪ್ರೀತಿಯ ಮುತ್ತಿಗೆ, ಒಂದು ಅಪ್ಪುಗೆಗೆ ಕಾಯುತ್ತಾ ಇಡೀ ರಾತ್ರಿ ಕಳೆದ ನಿದ್ದೆ ಇಲ್ಲದ ರಾತ್ರಿಗಳು ಈಗಿಲ್ಲ. ನಮ್ಮ ಪ್ರೀತಿ ಆಳವಾಗಿ ಬೇರೂರಿದ್ದು ಇದೀಗ ನಮ್ಮ ಪ್ರೀತಿ ತೋರಿಕೆಗಾಗಿ ಇಲ್ಲ ಬದಲಾಗಿ ಪರಸ್ಪರರನ್ನು ಬೆಂಬಲಿಸಲು, ಆಸರೆಯಾಗಲು ನಮ್ಮ ಪ್ರೀತಿ ಬಯಸುತ್ತದೆ.
ನಮ್ಮಿಬ್ಬರ ಪ್ರೀತಿಯಲ್ಲಿ ಹೊತ್ತಿ ಉರಿದು ತಣ್ಣಗಾಗುವ ಹರೆಯದ ಕಾಮದ ವಾಸನೆ ಇಲ್ಲ ಆದರೆ ಮನಸ್ಸನ್ನು ಬೆಚ್ಚಗಿಡುವ,ಆಹ್ಲಾದತೆಯನ್ನು ನೀಡುವ ಪ್ರೇಮ ನಮ್ಮದು. ಇದೀಗ ಪ್ರೀತಿ ನಮ್ಮಿಬ್ಬರಲ್ಲಿ ನಡುಕವನ್ನು ಹುಟ್ಟಿಸುವುದಿಲ್ಲ ಬದಲಾಗಿ ನೆಮ್ಮದಿ ಮತ್ತು ತೃಪ್ತಿಯ ಭಾವವನ್ನು ನೀಡುತ್ತದೆ. ಇದೀಗ ನಮ್ಮ ಪ್ರೀತಿ ಯಾವುದೇ ರೀತಿಯ ಷರತ್ತುಗಳ ಮೇಲೆ ನಿಂತಿಲ್ಲ ಬದಲಾಗಿ ನಮ್ಮ ಸುತ್ತಣ ಪ್ರಪಂಚದಲ್ಲಿ ಪ್ರಳಯ ಸಂಭವಿಸಿದರೂ ಅವಘಡಗಳು ಜರುಗಿದರೂ ನಾವಿಬ್ಬರು ಪರಸ್ಪರರಿಗಾಗಿ ಇರುತ್ತೇವೆ ಎಂಬ ಭಾವ ನಮ್ಮನ್ನು ಆಳುತ್ತದೆ.
ನಮ್ಮಿಬ್ಬರ ಬದುಕಿನಲ್ಲಿ ಯಾವುದೇ ರೀತಿಯ ಅಚ್ಚರಿಗಳು ಉಳಿದಿಲ್ಲ ಆದರೆ ದೈನಂದಿನ ವ್ಯವಹಾರಗಳು ಪೂಜೆ ಪುನಸ್ಕಾರಗಳಷ್ಟೇ ಮುಖ್ಯ ಎಂಬಂತಹ ಅತ್ಯದ್ಭುತ ಭಾವಗಳಿಂದ ಮನೆಯೆಂಬ ಆಲಯದಲ್ಲಿ ನಡೆಯುತ್ತವೆ. ಜೊತೆಯಾಗಿ ಕುಳಿತು ಊಟ, ತಿಂಡಿ, ಚಹಾ ಸೇವಿಸುವ, ನಮ್ಮಿಷ್ಟದ ಕಾರ್ಯಕ್ರಮಗಳನ್ನು ದೂರದರ್ಶನದಲ್ಲಿ ನೋಡುವ, ಸಂಜೆಯ ವಾಯು ವಿಹಾರಕ್ಕೆ ಜೊತೆಯಾಗಿ ಹೋಗುವ, ಒಮ್ಮತವಿದ್ದು ಕೂಡ ಪರಸ್ಪರರ ಕಾಲೆಳೆಯುವ, ಸಣ್ಣ ಪುಟ್ಟ ಭಿನ್ನಾಭಿಪ್ರಾಯಗಳಿದ್ದರೂ ಕೂಡ ಒಮ್ಮತಕ್ಕೆ ಬರುವ ಪರಸ್ಪರರ ಕುರಿತ ಮಾಗಿದ ಪ್ರೇಮ ಮತ್ತು ಕಾಳಜಿಯನ್ನು ಹೊಂದಿರುವ ಬದುಕು ನಮ್ಮದಾಗಿದೆ.
ನಾನು ನಿನ್ನ ಅಪ್ಪನ ಮಾತ್ರೆ ಔಷಧಿ ಊಟ ತಿಂಡಿಯ ಕಾಳಜಿ ವಹಿಸಿದರೆ ಆತ ನನ್ನ ಮೊಣಕಾಲು ನೋವು ವಿಪರೀತ ಕೆಲಸಗಳ ಮಧ್ಯದಲ್ಲಿ ತುಸು ವಿಶ್ರಾಂತಿಯನ್ನು ತೆಗೆದುಕೊಳ್ಳಲು ಒತ್ತಾಯಿಸುತ್ತಾ ಮಾಡುವ ಕಾಳಜಿ ಅಪ್ಯಾಯಮಾನತೆಯನ್ನು ತಂದುಕೊಡುತ್ತದೆ. ಇಂತಹ ಸಣ್ಣಪುಟ್ಟ ಪ್ರೀತಿಯ ಮಾತುಗಳು, ಕಾಳಜಿ ಪೂರ್ವಕ ನಡವಳಿಕೆಗಳು ನಮ್ಮಿಬ್ಬರ ಬದುಕನ್ನು ಸದಾ ಹಸಿರಾಗಿಸಿವೆ ಎಂದರೆ ತಪ್ಪಿಲ್ಲ.
ಈ ಇಳಿ ವಯಸ್ಸಿನಲ್ಲಿ ನಮಗೆ ಅತಿ ದೊಡ್ಡ ಬಂಗಲೆ, ಕೈತುಂಬಾ ಹಣ, ಐಷಾರಾಮಿ ಕಾರು, ಆಳು ಕಾಳುಗಳ ಅವಶ್ಯಕತೆ ಇಲ್ಲ. ನಮಗಿಬ್ಬರು ಬೇಕಾಗಿರುವುದು ಪರಸ್ಪರದ ಮಾನಸಿಕ ಸಾಂಗತ್ಯ ಮತ್ತು ದೈಹಿಕ ಸಾಮೀಪ್ಯ. ನನ್ನ ನಲಿವನ್ನು ಸೈರಿಸುವ, ನನ್ನ ನೋವನ್ನು ತಡೆದುಕೊಳ್ಳಲು ತನ್ನ ಪ್ರೀತಿಯ ಮುಲಾಮನ್ನು ಸವರುವ ಸಾಂಗತ್ಯ ಈ ವಯಸ್ಸಿನಲ್ಲಿ ಖಂಡಿತವಾಗಿಯೂ ಬೇಕು.
ನಾವಿಬ್ಬರೂ ಪರಸ್ಪರರ ನೋವುಗಳಿಗೆ ಕಿವಿಯಾಗಿ ನಲಿವಿಗೆ ದನಿಯಾಗಿ ಒಬ್ಬರಿಗೊಬ್ಬರು ಆಸರೆಯ ಊರುಗೋಲಾಗಿ ಬದುಕಬೇಕು. ನಮಗೆ ಎದ್ದು ನಿಲ್ಲಲು ಸಾಧ್ಯವಿಲ್ಲದ ಕಾಲದಲ್ಲಿಯೂ ನಮಗಾಗಿ ಎದ್ದು ನಿಲ್ಲುವ ಸಂಗಾತಿಯ ಪ್ರೀತಿ ಮತ್ತು ಆತ್ಮೀಯ ಸಾಂಗತ್ಯ ನಮಗೆ ಬೇಕು ಹಾಗೂ ಅಂತಹ ಒಳ್ಳೆಯ ಸಾಂಗತ್ಯ ನಮ್ಮದಾಗಿದೆ. ನಾವಿಬ್ಬರೂ ಮಾತಿನಲ್ಲಿ ನಮ್ಮ ಮನದ ಭಾವಗಳನ್ನು ಹೇಳಿಕೊಂಡಿಲ್ಲ…ಬಹುಶಹ ಜಗತ್ತಿನ ಯಾವ ಸಂಗಾತಿಗಳು ಹೇಳಿಕೊಳ್ಳುವುದು ತುಸು ಕಷ್ಟವೇ ಸರಿ, ಆದರೆ ಪರಸ್ಪರದ ಕಾಳಜಿ ಮಾಡುವ ಮೂಲಕ ನಮ್ಮ ಪ್ರೀತಿಯ ವ್ಯಕ್ತ ರೂಪವನ್ನು ತೋರುತ್ತೇವೆ ನಾವಿಬ್ಬರೂ ಒಬ್ಬರಿಗಾಗಿ ಮತ್ತೊಬ್ಬರು ಮಿಡಿಯುತ್ತೇವಲ್ಲ…ಅಷ್ಟು ಸಾಕು ನಮಗೆ.
ಒಂದು ಇಡೀ ಬದುಕನ್ನು ಜೊತೆಯಾಗಿ ಬದುಕುವುದು ರಾಜಕುಮಾರಿಯೊಬ್ಬಳಿಗೆ ಏಳು ಬೆಟ್ಟಗಳ ಆಚೆಗಿನ ರಾಜಕುಮಾರ ಬಂದು ಕರೆದೊಯ್ಯುವ ಸುಂದರವಾದ ಫೇರಿ ಟೇಲ್ ಅಲ್ಲ…. ಬದುಕಿನ ಹಲವಾರು ಏಳು ಬೀಳುಗಳು, ನೋವು ನಲಿವುಗಳು, ಭಾವನೆ ಮತ್ತು ವಾಸ್ತವಗಳ ಸಂಘರ್ಷಗಳನ್ನು, ಸಿಟ್ಟು ಸೆಡವುಗಳನ್ನು ಮತ್ತೆ ಪ್ರೀತಿಯ ರಮಿಸುವಿಕೆಗಳನ್ನು ಒಳಗೊಂಡ ರೋಲರ್ ಕೋಸ್ಟರ್ ನಂತೆ ನಮ್ಮ ಈ ಬದುಕು. ಪ್ರೀತಿ ಎನ್ನುವುದು ರಹಸ್ಯ ಭಾಷೆಯಂತೆ ಅದು ನೂರಾರು ಸಂಘರ್ಷದ ಸಂತೋಷದ ಕಥೆಗಳನ್ನು ಮೌನದಲ್ಲಿಯೇ ಹೇಳುತ್ತದೆ. ಆ ಸಂಘರ್ಷಗಳು, ಕಣ್ಣೀರು ನಮ್ಮನ್ನು ಪರಸ್ಪರರನ್ನು ಬಿಟ್ಟುಕೊಡದಷ್ಟು ಬಲಿಷ್ಠರನ್ನಾಗಿಸುತ್ತವೆ.
ನಿಜ…. ನಾನು ನಿನ್ನ ಅಪ್ಪನನ್ನು ಇಂದಿಗೂ ಪ್ರೀತಿಸುತ್ತೇನೆ. ಆತ ಈ ಮುಂಚೆ ಏನಾಗಿದ್ದ ಎಂಬುದಕ್ಕಿಂತ ಮದುವೆಯಾದ ಆತ ನನ್ನೊಂದಿಗೆ ಹೇಗೆ ಇದ್ದಾನೆ ಎಂಬ ಕಾರಣಕ್ಕಾಗಿ. ನಮ್ಮಿಬ್ಬರ ನಡುವಿನ ಮಾತುಗಳಿಗೆ ನಿಲುಕದೆ ಮಿಡಿಯುವ ಭಾವದ ತಂತಿಗಳು ತುಸು ಬಾಗಿರಬಹುದು…. ಆದರೆ ಮಿಡಿಯುವ ನಾದದಲ್ಲಿ ಶ್ರುತಿ ತಪ್ಪಿಲ್ಲ.
ನಮ್ಮಿಬ್ಬರ ಪ್ರೀತಿ ತುಂಬಿದ ಮನದ ಮೌನ ಸಂಭಾಷಣೆ. ಅಗೋಚರ, ಅಗಮ್ಯ, ಅದ್ವಿತೀಯವಾದದ್ದು. ನಮ್ಮ ಪ್ರೀತಿ ನೂರ್ಕಾಲ ಬಾಳುವಂತಹ ಪರಸ್ಪರರಿಗಾಗಿ ಬದಲಾಗುವಂತಹ ಬೆಳೆಯುವಂತಹ ಮತ್ತು ಬೆಳೆಸುವಂತಹ ಚಿರಂಜೀವಿತ್ವವನ್ನು ಹೊಂದಿದೆ. ಈಗ ಹೇಳು, ನಾನು ನಿನ್ನ ಅಪ್ಪನನ್ನು ಮೊದಲಿನಷ್ಟೇ ಪ್ರೀತಿಸುತ್ತಿದ್ದೇನೆ ಅಥವಾ ಮೊದಲಿಗಿಂತ ಹೆಚ್ಚು ಎಂದು…
ನಿನ್ನ ಅಮ್ಮ

ಪತ್ರದ ಸಾರಾಂಶವನ್ನು ಓದಿದ ಮಗಳಿಗೆ ಪ್ರೀತಿ ಮತ್ತು ನೋವು ಎರಡೂ ಮಿಳಿತವಾದ ಭಾವವೊಂದು ಸ್ಫುರಿಸಿ ಕೂಡಲೇ ತನ್ನ ತಾಯಿಯನ್ನು ತಬ್ಬಿಕೊಳ್ಳಬೇಕು ಎಂಬ ಬಯಕೆ ಮಗಳಿಗೆ ಉಂಟಾಯಿತುಇದಲ್ಲವೇ ಮಾಗಿದ ಪ್ರೀತಿ, ನಿಜವಾದ ದಾಂಪತ್ಯದ ಕಾವಿನಲ್ಲಿ ತೋರಿಕೆಯನ್ನೇ ಪ್ರೀತಿಯೆಂದು ಭಾವಿಸುವ ಹೃದಯಗಳು ನಿಜವಾದ ಪ್ರೀತಿಯ ಅರ್ಥವನ್ನು ಅರಿಯಲು ಜೀವನದ ಕೊನೆಯವರೆಗೂ ಕಾಯಬೇಕು…. ಸಾಗಲಿ ಅವರಿಗೆ ಪ್ರೀತಿಯ ದಿವ್ಯದರ್ಶನ ಉಂಟಾಗುತ್ತದೆ. ಏನಂತೀರಾ ಸ್ನೇಹಿತರೆ?
——————–
ವೀಣಾ ಹೇಮಂತ್ ಗೌಡ ಪಾಟೀಲ್




ಉತ್ತಮ ಬರೆಹ