ಕಾವ್ಯ ಸಂಗಾತಿ
ಪ್ರಶಾಂತ್ ಬೆಳತೂರು
“ಪ್ರಣಯವೊಂದರ ಚರಮ ಗೀತೆ”

ಹೋಗು..
ಒಲವಿನ ಹಕ್ಕಿಯೇ
ನಿನಗೆ ಜಗದ ಬಯಲಿನಲ್ಲಿ
ಹೊಸ ದಾರಿ ತೆರೆದಿದೆ..!
ಇನ್ನೆಷ್ಟು ಕಾಲ
ಈ ಬರಿದಾದ ಮರದಲ್ಲೊಂದು
ಹೊಸ ಹಸುರುಟ್ಟತ್ತದೆಂದು
ಪ್ರೇಮದ ಹೊಸ್ತಿಲಲ್ಲೇ ನಿಂತು
ಚಡಪಡಿಸುವೆ..!
ಮುಪ್ಪಾದೀತು
ನಿನ್ನ ನಿರೀಕ್ಷೆಗಳ ರೆಕ್ಕೆ
ಹುಸಿ ಕನಸುಗಳ ಹೆಕ್ಕುತ್ತಾ
ತಲ್ಲಣಿಸಬಹುದು ಜೀವ..!
ಭರವಸೆಗಳು ಪ್ರೇಮದಲ್ಲಿ
ಒಳ್ಳೆಯದಲ್ಲ..!
ವೇದನೆಯಲ್ಲಿಯೇ ನರಳುವ
ಬೋಳು ಮರದ
ಅಪರಾತ್ರಿಗಳ ವಿರಹದ ಹಾಡಿಗೆ
ಇನ್ನೆಷ್ಟು ಕಾಲ
ಹೃದಯದ ತಂತುಗಳನ್ನು
ಮೀಟುತ್ತಾ ಮರುಗುವೆ?
ಪಟ್ಟು ಹಿಡಿಯಬೇಡ
ಠಿಕಾಣಿ ಹೂಡಿರುವ
ಹೇಮಂತನ ಮುಂದೆ ಮಂಡಿಯೂರಿ
ಪ್ರೇಮದ ಆಯುಷ್ಯವನ್ನು ಎಣಿಸುತ್ತಾ
ಈ ಬರಡು ಮರದೊಂದಿಗೆ
ಸುಖಾಸುಮ್ಮನೆ ದಣಿಯಬೇಡ..!
ಈ ಕೂಡಲೇ
ನಿನ್ನ ಮುದುರಿದ ರೆಕ್ಕೆಗಳನ್ನು
ಗರಿಗೆದರುತ್ತಾ ಬಿಚ್ಚಿಬಿಡು
ಕವಿದಿರುವ
ಪ್ರೇಮದ ಮಬ್ಬು ಹರಿದು
ಹೊಸ ಬೆಳಕಿಗೆ ಮೈಯೊಡ್ಡಿ ಬಿಡು
ಆಕಾಶದ ಅನಂತತೆಯಲ್ಲಿ
ಅರಸುತ್ತಾ
ನವ ವಸಂತವೊಂದು
ನಿನಗಾಗಿಯೇ ಎದುರಾಗಬಹುದು..!
ಆ ಹಚ್ಚ ಹಸಿರಿನ ನಡುವೆ
ನೆಮ್ಮದಿಯ ಗೂಡೊಂದು
ದೊರೆಯಬಹುದೆನೋ ನಿನಗೂ..!
ಈ ಕ್ಷಣವೇ ಹೊರಡು
ಗೆದ್ದಿಲಿಡಿದು ಢಾಳಾಗಿಹ
ಈ ಮರದ ಕೊಂಬೆಗಳಿನ್ನೂ
ಒಂದೊಂದಾಗಿ ಮುರಿದು ಬೀಳುತ್ತಾ
ಪ್ರಣಯವೊಂದರ ವಿಷಾದದ
ಚರಮಗೀತೆಗೆ ಸಾಕ್ಷಿಯಾಗುತ
ಈ ಮಣ್ಣಲ್ಲಿ ಮಣ್ಣಾಗಿ ಹೋಗಲಿ…!
——————–
ಪ್ರಶಾಂತ್ ಬೆಳತೂರು




