ಅಂಕಣ ಸಂಗಾತಿ
ಸರಣಿ ಬರಹಗಳು
ಅರ್ಜುನ ಉವಾಚ
ಡಾ. ವಿಶ್ವನಾಥ ಎನ್ ನೇರಳಕಟ್ಟೆ
ಕುದುರೆಗಾಗಿ ಕದನ ಕೋಲಾಹಲ

ಕುದುರೆಗಾಗಿ ಕದನ ಕೋಲಾಹಲ
ಸಿಡಿಲು ಸಿಡಿಯಿತು. ಮಳೆ ಸುರಿಯಿತು. ಕಲ್ಲಿನ ಗುಂಡು ಜಡಿಯಿತು. ಕತ್ತಲೆಯ ಪರದೆ ಪೂರ್ಣ ಆವರಿಸಿತ್ತು. ನಡುನಡುವೆ ಹಲವು ಶಸ್ತಾçಸ್ತçಗಳ ಪ್ರಯೋಗ. ಆದರೆ ಮೇಘನಾದನ ಪ್ರತಾಪದ ಮುಂದೆ ಯೌವನಾಶ್ವನ ಸೈನಿಕರ ಪರಾಕ್ರಮದ ಸೊಲ್ಲುಗಳೆಲ್ಲಾ ಇನ್ನಿಲ್ಲವಾದವು. ಯೌವನಾಶ್ವನ ಚತುರಂಗ ಬಲವೂ ಮೇಘನಾದನ ಸಾಹಸದ ಮುಂದೆ ಕಳೆಗುಂದಿತು.
ತನ್ನ ಸೈನಿಕರ ಸೋಲನ್ನು ತಿಳಿದ ಯೌವನಾಶ್ವ ಆಕಾಶವನ್ನು ಪ್ರವೇಶಿಸುವ ಸಾಮರ್ಥ್ಯ ಇರುವ, ಅಲ್ಲಿಯೇ ಕದನಗೈವ ಶಕ್ತಿಯಿರುವ ಎಂಟು ಸಾವಿರ ಮಹಾರಥರನ್ನು ಕಳುಹಿಸಿಕೊಟ್ಟ. “ಸಾಯದಿರು. ಬಿಟ್ಟುಬಿಡು ಕುದುರೆಯನು” ಎಂಬ ಅವರ ಮಾತು ಅಪಥ್ಯವಾಯಿತು ಮೇಘನಾದನಿಗೆ.
“ನೀವು ವೀರರು ನಿಜ. ನಿಮ್ಮರಸನಿಗೆ ಒಳ್ಳೆಯದನ್ನು ಮಾಡಬೇಕೆಂಬ ಇಚ್ಛೆ ನಿಮ್ಮಲ್ಲಿದೆ, ದಿಟ. ಆದರೆ ನಿಮ್ಮ ಪ್ರಾಣದ ಆಸೆ ನಿಮಗಿದ್ದಂತಿಲ್ಲ” ಎಂದ ಘಟೋತ್ಕಚತನಯ ಬಲಿಷ್ಠವಾದ ಗದೆಯಿಂದ ಅನಿತೂ ಮಹಾರಥಿಗಳ ರಥವನ್ನು, ಕುದುರೆಗಳನ್ನು, ಬಿಲ್ಲುಬಾಣಗಳನ್ನು, ಸಾರಥಿಗಳನ್ನು, ಧ್ವಜಗಳನ್ನು ಪುಡಿಗಟ್ಟಿಬಿಟ್ಟ. ಎಂಟು ಸಾವಿರ ರಥಿಕರ ಬಲಕ್ಕೆ ಬೆಲೆಯೇ ಇಲ್ಲದಂತಾಗಿಹೋಯಿತು.
ಈಗ ಮೇಘನಾದನ ಎದುರು ಬಂದವನು ಸುವೇಗ. ಯೌವನಾಶ್ವ ಭೂಪತಿಯ ಮಗ. ಅವನ ಜೊತೆಗೆಯೇ ಯೌವನಾಶ್ವನೂ ರಣರಂಗಕ್ಕೆ ಬಂದ. ಆನೆ, ಕುದುರೆ, ರಥ, ಬಗೆಬಗೆಯ ಶಸ್ತಾçಸ್ತçಗಳನ್ನು ಜೊತೆಮಾಡಿಕೊಂಡು ಅವರು ಬಂದ ಬಗೆ ದಟ್ಟವಾದ ಅರಣ್ಯವೊಂದಕ್ಕೆ ಸಂಚಾರಭಾಗ್ಯ ಒದಗಿಬಂದದ್ದನ್ನು ನೆನಪಿಸುವಂತಿತ್ತು.
ಅಂತಹ ಬಲಕ್ಕೆ ಎದುರಾಗಿ ನಿಂದವರು ಭೀಮ ಮತ್ತು ವೃಷಕೇತು. ಮೇಘನಾದ ಈಗಾಗಲೇ ಅಪಹರಿಸಿದ್ದ ಕುದುರೆಯನ್ನು ಗಿಡದ ಬುಡವೊಂದಕ್ಕೆ ಕಟ್ಟಿಹಾಕಿದ ಇವರಿಬ್ಬರು ಕದನಭೂಮಿಯಲ್ಲಿ ರಣರಂಗೋಲಿಯನ್ನರಳಿಸುವ ಕಾರ್ಯದಲ್ಲಿ ಉತ್ಸುಕರಾದರು. ಮುತ್ತಿಬರುತ್ತಿರುವ ಸೇನೆಗೆ ಮರಣಮುತ್ತುಗಳನ್ನು ನೀಡುತ್ತಲೇ ಶೌರ್ಯ ತೋರಿಸಿದ ಕರ್ಣಸುತ. “ಆ ಕುದುರೆಗಳ್ಳ ಎಲ್ಲಿದ್ದಾನೆ? ಅವನನ್ನು ತೋರಿಸಿ. ಅವನ ಬಿಸಿರಕ್ತವನ್ನು ಈ ಬುವಿಗೆ ಚೆಲ್ಲುತ್ತೇನೆ” ಎಂದು ಅಬ್ಬರಿಸುತ್ತಾ ಬಂದ ಯೌವನಾಶ್ವನ ಮೇಲೆಯೇ ಬಾಣ ಪ್ರಯೋಗಿಸಿದ ವೃಷಕೇತು. ಕಣ್ಣರಳಿಸಿ ಕರ್ಣಸುತನನ್ನು ಕಂಡ ಯೌವನಾಶ್ವ. ಬಾಲಕನ ಬಾಣಪ್ರಯೋಗ ಅವನನ್ನು ಚಕಿತನಾಗಿಸಿತು; ಕೆರಳಿಸಿತು. ನುಗ್ಗಿ ಸಾಗುತ್ತಿರುವ ಮದ್ದಾನೆಗೆ ಕ್ಷÄಲ್ಲಕ ಇರುವೆಯದೊಂದು ಸವಾಲೇ ಎಂಬ ಭಾವ ಅವನೊಳಗೆ. “ಬಾಲಕನು ನೀನು. ನಿನ್ನೊಡನೆ ಒಲ್ಲೆನು ಯುದ್ಧ ನಾನು” ಎಂದ ಯೌವನಾಶ್ವ.
ಹೀಗಳಿಕೆಯ ಮಾತು ಹಿರಿದಾಗುವ ಲಕ್ಷಣ ಕಂಡಿತು. ವೃಷಕೇತು ಕೆರಳಿನಿಂತ. “ತರತಮದ ಮಾತೇಕೆ! ನೀನು ಯಾರೇ ಆಗಿದ್ದರೂ ಕುದುರೆಯನ್ನು ಬಿಡುವವನು ನಾನಲ್ಲ. ನೀನು ವೀರನಾಗಿರುವುದೇ ನಿಜವಾಗಿದ್ದರೆ ಶಸ್ತ್ರಾಸ್ತ್ರಗಳ ಪ್ರಯೋಗದ ಮೂಲಕವೇ ಅದನ್ನು ನಿರೂಪಿಸು. ಮೇಲು ಕೀಳು ಎಂಬ ಮಾತಿನ ಮೂಲಕವಲ್ಲ” ಎಂದ ವೃಷಕೇತು. ಅವನ ಮಾತಿನಲ್ಲೇನೂ ತಪ್ಪಿರಲಿಲ್ಲ. ಕೆಲವೊಮ್ಮೆ ಸಮಾಜದಲ್ಲಿ ಕೆಲವರು ವಯಸ್ಸನ್ನೋ, ಜಾತಿಯನ್ನೋ ಮುಂದುಮಾಡಿಕೊAಡು ಹಿರಿತನವನ್ನು ಪ್ರದರ್ಶಿಸುತ್ತಾರೆ. ನಿಜವಾದ ಹಿರಿತನ ನಿರ್ಧಾರ ಆಗಬೇಕಾದದ್ದು ಯೋಗ್ಯತೆಯ ಆಧಾರದಲ್ಲಿ. ಅದನ್ನೇ ದಿಟ್ಟವಾಗಿ ಆಡಿತೋರಿಸಿದ ಬಾಲಕ ರೂಪದ ಹಿರಿಯ ವೃಷಕೇತು. ರಣರಂಗದಲ್ಲಿ ನಿಂತವನು ತನ್ನ ಅಂತರಂಗವನ್ನೊಮ್ಮೆ ಶೋಧಿಸಿ ನೋಡಿಕೊಳ್ಳುವಂತಹ ಮಾತುಗಳನ್ನೇ ಆಡಿದ್ದ ಆ ಕ್ಷಣದಲ್ಲಿ ಎನ್ನುವುದರಲ್ಲಿ ಯಾವುದೇ ಸಂದೇಹವಿಲ್ಲ. ಮಾತಿನಿಂದ ಯೌವನಾಶ್ವನ ಮನವನ್ನು ಕಲಕಿದ ವೃಷಕೇತು ನುಡಿ ಮುಗಿದ ಮರುಕ್ಷಣವೇ ಬಾಣ ಪ್ರಯೋಗಿಸಿ ಯೌವನಾಶ್ವನ ಶರೀರಕ್ಕೂ ನೋವಿತ್ತ.
“ಇಡಿಯ ಜಗತ್ತಿನಲ್ಲಿ ನನ್ನೊಡನೆ ಹೋರಾಡುವ ಮನಸ್ಸು ಮಾಡುವವರಿಲ್ಲ. ನನ್ನೆದುರಿಗೆ ಧೈರ್ಯದಿಂದ ನಿಂತ ನೀನು ನಿಜಾರ್ಥದ ವೀರ. ಮಗುವೆಂದು ಬಗೆದಿದ್ದೆ ನಿನ್ನನ್ನು. ವೀರರಲ್ಲಿರಬೇಕಾದ ಛಾತಿ ನಿನ್ನಲ್ಲಿದೆ” ಎಂಬ ಮೆಚ್ಚುಗೆಯ ಮಾತುಗಳನ್ನಾಡುತ್ತಲೇ ಬಾಣವನ್ನು ವೃಷಕೇತುವಿನೆಡೆಗೆ ಬಿಟ್ಟ ಯೌವನಾಶ್ವ.
ಹೊಗಳಿಕೆಗೆ ಹೆಚ್ಚಾಗಿ ಹಿಗ್ಗದ ಕರ್ಣತನಯ ಪೂರ್ಣ ಜಾಗೃತಾವಸ್ಥೆಯಲ್ಲಿದ್ದ. ಅವನ ಆ ಬಾಣವನ್ನು ಅರ್ಧದಲ್ಲಿಯೇ ಕತ್ತರಿಸಿದ. ವೃಷಕೇತುವಿನ ಕೈಮೇಲಾಗುವ ಲಕ್ಷಣ ಸ್ಪಷ್ಟವಾಗಿಯೇ ತೋರಲಾರಂಭಿಸಿತು. ಯೌವನಾಶ್ವನ ಕರದಿಂದೀಚೆಗೆ ಬಂದ ಬಾಣಗಳೆಲ್ಲಾ ಮಾರ್ಗಮಧ್ಯೆಯೇ ಪ್ರಾಣ ಕಳೆದುಕೊಂಡವು. ಬಾಣಗಳ ವರ್ಷಧಾರೆಯನ್ನೇ ಸೃಜಿಸಿದ ವೃಷಕೇತು. ಯೌವನಾಶ್ವನ ಸಂಪೂರ್ಣ ರಥ ವೃಷಕೇತು ಸೃಜಿತ ಶರಗಳಿಂದ ತುಂಬಿಹೋದವು. ಯೌವನಾಶ್ವನ ಸಾರಥಿ ನೆತ್ತರನ್ನು ಸುರಿಸುತ್ತಲೇ ಪ್ರಾಣಬಿಟ್ಟ. ಯೌವನಾಶ್ವನ ಶರೀರದಲ್ಲಿ ಉಂಟಾದ ಗಾಯ ವೃಷಕೇತುವಿನ ಪರಾಕ್ರಮ ಜಗತ್ತನ್ನು ದರ್ಶಿಸುವುದಕ್ಕೆ ನೆರವಾಗುವ ಕಿಟಕಿಯಾಗಿತ್ತು.
ದೇಹ ಹೊಕ್ಕಿದ್ದ ಬಾಣವೊಂದನ್ನು ಕಿತ್ತುತೆಗೆದಾಕ್ಷಣ ಯೌವನಾಶ್ವನ ಚಿತ್ತವದು ಕ್ರೋಧದ ಭಿತ್ತಿಯಾಯಿತು. ಮನದ ಮುನಿಸೆಲ್ಲಾ ಮೊಗಮೂಲದಿಂದ ಚಿಮ್ಮಿಬಿಡುವುದೋ ಎಂಬAತೆ ಕೆಂಪುಗಣ್ಣಿನವನಾದ ಯೌವನಾಶ್ವ. ಅದೇ ಕೋಪಾತಿರೇಕದಲ್ಲಿ ಬಾಣ ಪ್ರಯೋಗಿಸಿದ. ಕರ್ಣನ ಮಗ ಮಣಿಯಲಿಲ್ಲ. ವಾರುಣಾಸ್ತçದ ಬಲದಿಂದ ಯೌವನಾಶ್ವನ ಕ್ರೋಧಶರವನ್ನು ತಣ್ಣಗಾಗಿಸಿದ. ಯುದ್ಧ ನಡೆಯುತ್ತಲೇ ಹೋಯಿತು. ಒಂದಾದ ಮೇಲೊಂದರAತೆ ಬಾಣಗಳು. ಪ್ರಾಣಹರಣ ಮಾಡುವ ಕಾತುರತೆ ಆ ಬಾಣಗಳ ಎದೆಯಲ್ಲಿ.
ಆ ಒಂದು ಕ್ಷಣದಲ್ಲಿ ಯೌವನಾಶ್ವ ಪ್ರಜ್ಞೆಯನ್ನೇ ಕಳೆದುಕೊಂಡ. ನಮ್ಮರಸನ ಪ್ರಾಣ ಹೋಯಿತೋ ಏನೋ ಎಂಬ ಹಿರಿದು ಆತಂಕ ಅವನ ಸೈನಿಕರನ್ನು ಕಾಡುವಂತೆ ಮೂರ್ಛೆ ತಪ್ಪಿ ಕೆಳಗೆ ಬಿದ್ದ.
ಪ್ರಾಣ ಹೋಗುವ ಕ್ಷಣದಲ್ಲಿ ಶತ್ರುತ್ವವೂ ಪ್ರಾಣ ಕಳೆದುಕೊಳ್ಳುವ ಅಪೂರ್ವ ಸನ್ನಿವೇಶಕ್ಕೆ ಸಾಕ್ಷಿಯಾಯಿತು ಆ ಗಳಿಗೆ. ವೈರತ್ವವನ್ನು ಮರೆತ ವೃಷಕೇತು ಯೌವನಾಶ್ವನ ಪ್ರಾಣವುಳಿಸುವ ತೆರದಲ್ಲಿ ಉಪಚಾರ ಮಾಡಿದ. ಕರ್ಣಜನ ಹರಕೆ, ಹಾರೈಕೆ ಫಲಿಸಿತು. ಯೌವನಾಶ್ವ ಕಣ್ಣುಬಿಟ್ಟ.
ಧರ್ಮರಾಯ ಮಾಡಹೊರಟಿರುವ ಯಾಗದ ವಿಚಾರವನ್ನು ತಿಳಿದುಕೊಂಡ. ಕೃಷ್ಣನಿಗಾಗಿ ಸರ್ವಸ್ವವನ್ನೂ ಸಲ್ಲಿಸುವ ನಿರ್ಣಯ ಮಾಡಿದ. ಅವನಂತರಂಗದಲ್ಲಿ ನೆಲೆಗೊಂಡ ಕೃಷ್ಣಭಕ್ತಿ ಇನ್ನೊಬ್ಬರನ್ನು ಮಣಿಸಿ ಆಳುವ ರಾಜಶಕ್ತಿಯನ್ನು ತಣಿಸಿಹಾಕಿತು. ಮಂತ್ರಿಗೆ ಪೂರ್ಣ ರಾಜ್ಯಭಾರವನ್ನು ವಹಿಸಿದ ಆತ ಯಜ್ಞಕ್ಕೆ ಸರಿಹೊಂದುವ ಸುಲಕ್ಷಣಯುಕ್ತ ಕುದುರೆಯ ಜೊತೆಗೆ ಸಂಪತ್ತನ್ನೂ ಹೊಂದಿಕೊಂಡು ಹಸ್ತಿನಾವತಿಯನ್ನು ಸೇರಿದ.
ಡಾ. ವಿಶ್ವನಾಥ ಎನ್ ನೇರಳಕಟ್ಟೆ




