ಧಾರಾವಾಹಿ ಸಂಗಾತಿ=102
ಒಬ್ಬ ಅಮ್ಮನ ಕಥೆ
ರುಕ್ಮಿಣಿ ನಾಯರ್
ಮಕ್ಕಳ ಸಂತಸ

ಬಂಗಲೆಯಿಂದ ಹೊರಟ ಸುಮತಿ ಅತ್ಯಂತ ಸಂತೋಷದಲ್ಲಿದ್ದಳು. ಆದಷ್ಟು ಬೇಗ ಮನೆ ತಲುಪಬೇಕು ಎನ್ನುವ ತವಕದಲ್ಲಿದ್ದಳು. ಮಕ್ಕಳೊಂದಿಗೆ ಈ ಸಂತೋಷದ ಸಮಾಚಾರವನ್ನು ತಿಳಿಸಬೇಕು ಎನ್ನುತ್ತಾ ಲಗು ಬಗೆಯಿಂದ ನಡೆದಳು. ಆ ಸಂತೋಷದಲ್ಲಿ ದಾರಿ ಸವೆದದ್ದೇ ಅವಳಿಗೆ ತಿಳಿಯಲಿಲ್ಲ. ಮನೆಯ ಕದ ತಟ್ಟಿದಳು ಮಕ್ಕಳಿಬ್ಬರೂ ಹೊರಗೆ ಬಂದರು. ಮಕ್ಕಳನ್ನು ಸಂತೋಷದಿಂದ ಅಪ್ಪಿಕೊಂಡಳು. ಅಮ್ಮ ತಮ್ಮನ್ನು ಅಪ್ಪಿಕೊಂಡಾಗ ಏನೋ ವಿಶೇಷವಿರಬೇಕು ಎನ್ನುವುದು ಮಕ್ಕಳಿಬ್ಬರಿಗೂ ಮನದಟ್ಟಾಯಿತು. ಆದರೂ ಅಮ್ಮನಲ್ಲಿ ಏನನ್ನೂ ಕೇಳದೇ ಅಮ್ಮನ ಸಂತೋಷದಲ್ಲಿ ಭಾಗಿಯಾದರು. ಸ್ವಲ್ಪ ಹೊತ್ತು ಹಾಗೇ ನಿಂತಿದ್ದ ಸುಮತಿ ಮಕ್ಕಳಿಬ್ಬರನ್ನು ಉದ್ದೇಶಿಸಿ….,” ಮಕ್ಕಳೇ ಸಣ್ಣ ಸಾಹುಕಾರರು ನಿಮಗಾಗಿ ಬಟ್ಟೆ ಖರೀದಿ ಮಾಡಲು ಮತ್ತು ಸಿಹಿ ತಿಂಡಿಗಳನ್ನು ಮಾಡಿಕೊಡಲು ನನಗೆ ಸ್ವಲ್ಪ ಹಣವನ್ನು ಕೊಟ್ಟಿದ್ದಾರೆ….ಈ ಗುರುವಾರ ಪೇಟೆಗೆ ಹೋಗಿ ನಿಮಗಿಬ್ಬರಿಗೂ ಹೊಸ ಬಟ್ಟೆಯನ್ನು ಖರೀದಿ ಮಾಡೋಣ….. ಸಿಹಿ ತಿಂಡಿಗಳನ್ನು ಮಾಡಲು ಬೆಲ್ಲ ಹಾಗೂ ಅದಕ್ಕೆ ಬೇಕಾದ ದಿನಸಿಯನ್ನು ಖರೀದಿ ಮಾಡೋಣ”…. ಎಂದು ಖುಷಿಯಿಂದ ಹೇಳಿದಳು.
ಇಬ್ಬರೂ ಸರಿ ಎನ್ನುವಂತೆ ತಲೆಯಾಡಿಸಿ ಅಮ್ಮನನ್ನು ಅಡುಗೆ ಮನೆಯ ಕಡೆಗೆ ಕರೆದುಕೊಂಡು ಬಂದರು. ಒಲೆಯ ಮೂಲೆಯಲ್ಲಿದ್ದ ಸಣ್ಣ ಬಿಸಿ ಒಲೆಯಲ್ಲಿ ಹಾಲು ಕುದಿಯುತ್ತಿತ್ತು. ಎರಡನೇ ಮಗಳು ಅದನ್ನು ಇಳಿಸಿ, ಕಾಫಿ ಮಾಡುವ ಪುಟ್ಟ ಪಾತ್ರೆಯನ್ನು ತೆಗೆದುಕೊಂಡು ಅದಕ್ಕೆ ಸ್ವಲ್ಪ ನೀರನ್ನು ಹಾಕಿ, ಕಾಫಿ ಪುಡಿ ಹಾಗೂ ಒಂದು ಸಣ್ಣ ತುಂಡು ಬೆಲ್ಲವನ್ನು ಸೇರಿಸಿ ಬಿಸಿ ಒಲೆಯ ಮೇಲಿಟ್ಟು, ಕುದಿಸಿ ಸ್ಟೀಲ್ ಲೋಟದಲ್ಲಿ ಸೋಸಿ, ಅದಕ್ಕೆ ಹಾಲನ್ನು ಮಿಶ್ರಣ ಮಾಡಿ ಹಬೆಯಾಡುವ ಕಾಫಿಯನ್ನು ಅಮ್ಮನ ಕೈಗಿಟ್ಟಳು.
ಎರಡನೇ ಮಗಳು ಮಾಡಿಕೊಡುವ ಕಾಫಿ ಎಂದರೆ ಸುಮತಿಗೆ ಬಲು ಪ್ರಿಯ. ಕಾಫಿಯ ಸ್ವಾದವನ್ನು ಆಸ್ವಾದಿಸುತ್ತಾ ಮಕ್ಕಳೇ ನೀವು ಕಾಫಿ ಕುಡಿಯಿರಿ ಎಂದಾಗ….”ಬೇಡಮ್ಮಾ… ನೀನು ಕುಡಿ”… ಎಂದರು. ಸುಮತಿ ಲೋಟವನ್ನು ಮಕ್ಕಳ ಮುಂದೆ ನೀಡುತ್ತಾ,…”ಒಂದೊಂದು ಗುಟುಕಾದರೂ ಕುಡಿಯಿರಿ ಮಕ್ಕಳೇ”…. ಎಂದಳು. ಅಮ್ಮನ ಪ್ರೀತಿಗೆ ಸೋತು ಇಬ್ಬರೂ ಮಕ್ಕಳು ಒಂದೊಂದು ಗುಟುಕು ಕಾಫಿಯನ್ನು ಹೀರಿ ಅಮ್ಮನ ಕೈಗೆ ಕೊಟ್ಟರು. ತಾನೊಂದು ಗುಟುಕು ಕುಡಿದ ಸುಮತಿ….” ಆಹಾ ಈಗ ಕಾಫಿಯ ಸ್ವಾದ ಇನ್ನೂ ಹೆಚ್ಚಿದೆ ಎಂದಳು”…. ನಗುತ್ತಾ. ಮಕ್ಕಳಿಬ್ಬರೂ ಅಮ್ಮನ ಕೆನ್ನೆಯನ್ನು ಸವರಿ ಮುಗುಳ್ನಕ್ಕರು.
ಮೂರನೇ ಮಗಳು…” ಅಮ್ಮಾ ಚಪಾತಿಗೆ ಬೇಕಾದ ಪಲ್ಯವನ್ನು ಮಾಡಿದ್ದೇನೆ… ಇನ್ನು ಹಿಟ್ಟನ್ನು ಕಲೆಸಿ ಚಪಾತಿ ಮಾಡಿ ಮೂವರೂ ತಿಂದರಾಯ್ತು”….ಎಂದಳು. ಮೂರನೇ ಮಗಳು ಅಕ್ಕನ ಕೈಲಿ ಹೆಚ್ಚು ಕೆಲಸವನ್ನು ಮಾಡಿಸುತ್ತಿರಲಿಲ್ಲ. ಅಕ್ಕನಿಗೆ ಟಾನ್ಸಿಲ್ಸ್ ಹಾಗೂ ಅಪೆಂಡಿಸೈಟಿಸ್ ಶಸ್ತ್ರಚಿಕಿತ್ಸೆ ಆದಾಗಿನಿಂದ ಅಕ್ಕ ಹೆಚ್ಚೇನಾದರೂ ಕೆಲಸವನ್ನು ಮಾಡಿದರೆ ಅವಳಿಗೆ ತೊಂದರೆ ಆಗಬಹುದು ಎನ್ನುವ ಭಯ, ಹಾಗಾಗಿ ಅವಳಿಂದ ಕೆಲಸವನ್ನು ಮಾಡಿಸದೆ ಎಲ್ಲವನ್ನು ತಾನೇ ಮಾಡುತ್ತಿದ್ದಳು. ತನಗೇನೂ ತೊಂದರೆಯಾಗದು ಶಸ್ತ್ರಚಿಕಿತ್ಸೆ ಆಗಿ ವರ್ಷಗಳೇ ಕಳೆದಿದೆ ಎಂದರೂ ತಂಗಿ ಮಾತ್ರ ಆ ಮಾತನ್ನು ಕೇಳುತ್ತಲೇ ಇರಲಿಲ್ಲ. ಅಕ್ಕ ಎಂದರೆ ಅವಳಿಗೆ ಪಂಚಪ್ರಾಣ. ಅಕ್ಕ ಯಾವುದೇ ಕೆಲಸವನ್ನು ಮಾಡುವುದು ಬೇಡ ತನ್ನ ಜೊತೆಗಿದ್ದರೆ ಸಾಕು ತನಗದೇ ಆನೆ ಬಲ ಎನ್ನುತ್ತಿದ್ದಳು.
ಗುರುವಾರ ಬಂತು. ಮೂವರೂ ಒಟ್ಟಾಗಿ ಸಕಲೇಶಪುರಕ್ಕೆ ಹೋದರು. ಅಂಗಡಿಯಲ್ಲಿ ಬಟ್ಟೆ ಖರೀದಿ ಮಾಡುವಾಗ ಅಕ್ಕ ತಂಗಿಯರು ಇಬ್ಬರೂ ಒಂದೇ ಒಂದು ಜೊತೆ ಬಟ್ಟೆಯನ್ನು ಆಯ್ಕೆ ಮಾಡಿದರು. ಇಬ್ಬರೂ ಪ್ರತ್ಯೇಕವಾಗಿ ಒಂದೊಂದು ಜೊತೆ ಬಟ್ಟೆಯನ್ನು ಆಯ್ಕೆ ಮಾಡಿ ಎಂದರೆ ಮಕ್ಕಳಿಬ್ಬರೂ ಕೇಳಲೇ ಇಲ್ಲ….. “ಅಮ್ಮಾ ….ದಯವಿಟ್ಟು ನೀನೊಂದು ಸೀರೆಯನ್ನು ಖರೀದಿ ಮಾಡು…. ಏನಿದ್ದರೂ ನಮಗಿರಲಿ ಎಂದು ನೀನು ಯಾವಾಗಲೂ ಹೇಳುತ್ತೀಯಾ…. ದಯವಿಟ್ಟು ಈ ಬಾರಿ ನಮ್ಮ ಮಾತನ್ನು ಕೇಳು”…. ಎಂದು ಅಮ್ಮನಲ್ಲಿ ಮಕ್ಕಳಿಬ್ಬರೂ ಭಿನ್ನವಿಸಿಕೊಂಡರು. ಮಕ್ಕಳ ಮಾತನ್ನು ಕೇಳಿ ಸುಮತಿ “….ಮಕ್ಕಳೇ… ನನಗೆ ಬಂಗಲೆಯ ಅಮ್ಮ ಅವರ ಸೀರೆಗಳನ್ನು ಆಗಾಗ ಕೊಡುತ್ತಾರೆ…. ಮತ್ತೇಕೆ ನನಗೆ ಹೊಸ ಸೀರೆ?… ನೀವಿಬ್ಬರೂ ಶಾಲಾ ಕಾಲೇಜಿಗೆ ಹೋಗುವವರು…. ನಿಮಗೆ ಹೊಸ ಬಟ್ಟೆಯ ಅಗತ್ಯವಿರುತ್ತದೆ ಇಬ್ಬರೂ ಒಂದೊಂದು ಜೊತೆ ಹೊಸ ಬಟ್ಟೆಯನ್ನು ಖರೀದಿಸಿ”…. ಎಂದಳು. ಅಮ್ಮನ ಮಾತನ್ನು ಆಲಿಸಿದ ಮಕ್ಕಳು…” ಅಮ್ಮಾ ….ನಮಗೂ ಅದೇ ರೀತಿಯಲ್ಲಿ ಅವರ ಮಕ್ಕಳ ಬಟ್ಟೆಯನ್ನು ಕೊಡುತ್ತಾರೆ ಅಲ್ಲವೇ?…ನಾವು ಅದನ್ನು ಧರಿಸಿ ಶಾಲೆ ಕಾಲೇಜಿಗೆ ಹೋಗುತ್ತೇವೆ…. ತಂಗಿಗಾದರೆ ವಾರದ ಐದು ದಿನವೂ ಸಮವಸ್ತ್ರವಿರುತ್ತದೆ…. ಒಂದು ದಿನ ಮಾತ್ರ ಬಣ್ಣದ ಬಟ್ಟೆಯನ್ನು ತೊಡುತ್ತಾಳೆ”…. ಎಂದಳು ಎರಡನೇ ಮಗಳು. ಈ ಬಾರಿ ಏನೇ ಆದರೂ ಪರವಾಗಿಲ್ಲ ಅಮ್ಮ ಹೊಸ ಸೀರೆಯನ್ನು ಖರೀದಿ ಮಾಡಲೇಬೇಕು ಎಂದು ಮಕ್ಕಳಿಬ್ಬರೂ ತೀರ್ಮಾನಿಸಿದ್ದರು. ಸುಮತಿ ಹೆಚ್ಚಾಗಿ ಬಿಳಿಯ ಸೀರೆಯನ್ನೇ ಉಡುತ್ತಿದ್ದುದರಿಂದ ಬಿಳಿಯ ಬಣ್ಣದಲ್ಲಿ ಪುಟ್ಟ ಕಪ್ಪು ಹೂಗಳಿರುವ ಸೀರೆಯನ್ನು ಮಕ್ಕಳಿಬ್ಬರೂ ಅಮ್ಮನಿಗಾಗಿ ಆರಿಸಿದರು.
ತಮಗಾಗಿ ಒಂದು ಜೊತೆ ಬಟ್ಟೆಯನ್ನು ಆರಿಸಿಟ್ಟರು. ಏಕೆಂದರೆ ಅಕ್ಕತಂಗಿಯರಿಬ್ಬರೂ ಒಬ್ಬರ ಬಟ್ಟೆಯನ್ನು ಮತ್ತೊಬ್ಬರು ಬದಲಿಸಿ ತೊಡುತ್ತಿದ್ದರು. ಹಾಗಾಗಿ ಈ ಒಂದು ಬಟ್ಟೆಯನ್ನು ಇಬ್ಬರೂ ಒಂದೊಂದು ದಿನ ತೊಡುವುದಾಗಿ ತೀರ್ಮಾನಿಸಿದರು. ಎಷ್ಟೇ ಹೇಳಿದರೂ ಮಕ್ಕಳು ತಮ್ಮ ಹಟವನ್ನು ಬಿಡದೇ ಇರುವುದನ್ನು ಕಂಡು ಕೊನೆಗೂ ಸುಮತಿ, ಸುಮ್ಮನಾಗಬೇಕಾಯಿತು. ಅಮ್ಮ ಸೀರೆ ಖರೀದಿಸುತ್ತಿರುವುದನ್ನು ಕಂಡು ಮಕ್ಕಳಿಗೆ ಇನ್ನಿಲ್ಲದ ಸಂತಸ. ಬಟ್ಟೆ ಅಂಗಡಿಯಿಂದ ಹೊರಟ ಅಮ್ಮ ಮಕ್ಕಳು ದಿನಸಿ ಅಂಗಡಿಗೆ ಹೋದರು. ಮನೆಗೆ ಬೇಕಾದ ದಿನಸಿಯನ್ನು ಖರೀದಿ ಮಾಡಿದರು. ಖುಷಿಯಿಂದ ಅಮ್ಮನ ಕೈಹಿಡಿದು ಇಬ್ಬರೂ ನಡೆದರು. ನೂಕು ನುಗ್ಗಲಿನಲ್ಲಿ ಬಸ್ ಹತ್ತಿ ಅಮ್ಮನಿಗಾಗಿ ಸೀಟು ಹಿಡಿದರು. ಕತ್ತಲೆಯಾಗಿದ್ದರೂ ದಾರಿಯಲ್ಲಿ ಕೈ ಕೈ ಹಿಡಿದು ನಡೆದರು. ಮನೆ ತಲುಪಿದ ಕೂಡಲೇ ಹೊಸ ಬಟ್ಟೆಯನ್ನು ಶ್ರೀ ಕೃಷ್ಣನ ಪಟದ ಮುಂದೆ ಇರಿಸಿದರು. ನಂತರ ಅಕ್ಕ-ತಂಗಿಯರು ಆತುರಾತುರವಾಗಿ ಅಮ್ಮ ಕೊಡಿಸಿದ ಬಟ್ಟೆಯನ್ನು ಒಬ್ಬರ ನಂತರ ಮತ್ತೊಬ್ಬರು ತೊಟ್ಟು ಖುಷಿ ಪಟ್ಟರು. ಸುಮತಿಗೂ ಸೀರೆಯನ್ನು ಉಡಲು ಹೇಳಿದರು. ಸುಮತಿ ಹೊಸ ಸೀರೆ ಉಟ್ಟಾಗ ಮಕ್ಕಳಿಗೆ ಬಹಳ ಸಂತೋಷವಾಯಿತು. ಅಮ್ಮ ತನಗಾಗಿ ಎಂದೂ ಏನನ್ನೂ ಖರೀದಿಸಿದವಳಲ್ಲ. ಇಂದು ತಾವು ಹೇಳಿದಂತೆ ಹೊಸ ಸೀರೆಯನ್ನು ಖರೀದಿ ಮಾಡಿ ಉಟ್ಟಿರುವುದನ್ನು ಕಂಡು ಮಕ್ಕಳ ಕಣ್ಣುಗಳಲ್ಲಿ ಆನಂದಭಾಷ್ಪ ತುಂಬಿದವು. ಇಷ್ಟೆಲ್ಲವನ್ನೂ ಕರುಣಿಸಿದ ಆ ಪರಮಾತ್ಮನಿಗೂ ಸಣ್ಣ ಸಾಹುಕಾರರಿಗೂ ಮನದಲ್ಲಿಯೇ ಮೂವರೂ ವಂದನೆಗಳನ್ನು ಸಲ್ಲಿಸಿದರು.




