ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

                 ಭೀಮಸೇನನ ಅಂತರಂಗವನ್ನು ಅಲುಗಿಸಿತು ಆ ಅಶ್ವ!

ನಿರಾಸೆಯಾಗಿತ್ತು ಭೀಮನಿಗೆ. ಬಯಸಿದ್ದು ಸಿಗದಾದಾಗ ಆಗುವ ಸಹಜ ಭಾವವದು. ಕುದುರೆಯನ್ನು ತಂದೊಪ್ಪಿಸುತ್ತೇನೆಂದು ತಾನಾಡಿದ ವೀರನುಡಿ ಅದೆಲ್ಲಿ ಸುಳ್ಳಾಗುವುದೋ ಎಂಬ ಅಳುಕು ಅವನಲ್ಲಿ ಮೂಡತೊಡಗಿತ್ತು.

     ಯೌವನಾಶ್ವನ ಭದ್ರಾವತಿ ನಗರದ ಅಶ್ವವನ್ನು ಕರೆತರುತ್ತೇನೆ ಎಂದು ಭೀಮ ಹೇಳಿದ್ದು ವ್ಯಾಸಮುನಿಗಳ ಎದುರಲ್ಲಿ. ಕುದುರೆಯನ್ನೀಗ ಕರೆದುಕೊಂಡು ಹೋಗದೇ ಇದ್ದರೆ ಗುರುದ್ರೋಹ ಎಸಗಿದಂತಾಗುತ್ತದೆ. ಶ್ರೀಕೃಷ್ಣನಲ್ಲಿಯೂ ಹೇಳಿದ್ದ. ಹಾಗಿದ್ದಮೇಲೆ ಅದು ದೈವದ್ರೋಹ. ಧರ್ಮರಾಯ ಭೀಮನಿಗೆ ಅಣ್ಣ ಮಾತ್ರವಲ್ಲ; ದೊರೆಯೂ ಸಹ. ಅವನಿಗೆ ಹೇಳಿದ ಮಾತನ್ನು ಉಳಿಸಿಕೊಳ್ಳದಿದ್ದರೆ ಅದು ಸ್ವಾಮಿದ್ರೋಹ. ತಾನು ಗೈದ ವೀರಪ್ರತಿಜ್ಞೆಯನ್ನು ಭೀಮ ಪೂರೈಸಲಾರದೇ ಹೋದರೆ ಅದು ಆತ್ಮದ್ರೋಹ. ಅವನಿಗೆ ಅವನೇ ಮಾಡಿಕೊಂಡ ದ್ರೋಹ. ಇನಿತೂ ದ್ರೋಹವನ್ನೆಸಗಿದವನು ತಾನಾಗುವುದನ್ನು ನೆನೆದು ತಲ್ಲಣಿಸಿಹೋಯಿತು ಭೀಮಕಾಯ. 

  ಪಾಪದ ಕೆಲಸ ಮಾಡಿದ ಪಾತಕಿಗೆ ಸುಳ್ಳು ನುಡಿ ಎದುರಾಗುತ್ತದೆ. ಪರಸ್ತ್ರೀಯ ಸಹವಾಸ ಮಾಡಿದವನ ಎಣಿಕೆ ತಪ್ಪಾಗುತ್ತದೆ. ಗುರುಗಳಿಗೆ ದ್ರೋಹ ಮಾಡಿದವನಿಗೆ ಸಂಪತ್ತು ಕಾಣಿಸದಂತಾಗುತ್ತದೆ. ಇದಾವ ಬಗೆಯ ತಪ್ಪುಗಳನ್ನೂ ಎಸಗದ ತನ್ನ ಕಣ್ಣಿಗೆ ಆ ವಿಶಿಷ್ಟ ಕುದುರೆಯದೇಕೆ ಗೋಚರವಾಗುತ್ತಿಲ್ಲ ಎಂಬ ಪ್ರಶ್ನೆ ಭೀಮಶಿರವನ್ನೇರಿ ಕುಳಿತಿತ್ತು. 

ಹೀಗೆ ಚಿಂತಾವಾರಿಧಿಯಲ್ಲಿ ಬಿದ್ದು ಭೀಮ ತೊಳಲಾಡುತ್ತಿದ್ದಾಗಲೇ ಅದೊಂದು ಅಪೂರ್ವ ದೃಶ್ಯ ಅವನೆದುರು ಕಾಣಿಸಿಕೊಂಡದ್ದು. ಸೈನಿಕರಿದ್ದರು ಎಡಬಲದಲ್ಲಿ; ಹಿಂದೆ ಮುಂದೆ ಎಲ್ಲಾ ದಿಶೆಯಲ್ಲಿ. ಬಗೆಬಗೆಯ ವಾದ್ಯಗಳು ವಿಶಿಷ್ಟಾತಿವಿಶಿಷ್ಟ ಧ್ವನಿಯನ್ನು ಹೊಮ್ಮಿಸುತ್ತಿದ್ದವು. ಹೊಗಳುಭಟರು ವಿಧವಿಧದ ಹೊಗಳಿಕೆಯ ಸೊಗಸಿನಲ್ಲಿ ತಲ್ಲೀನರಾಗಿದ್ದರು. ಬಗೆಬಗೆಯ ವಸ್ತç ಆಭರಣಗಳ ಅಲಂಕಾರ. ಪತ್ರ ಚಾಮರಗಳ ಬೀಸುವಿಕೆಯ ಸೌಂದರ್ಯ. ರಾಜಕುವರರು ಲಗಾಮನ್ನು ಹಿಡಿದಿದ್ದಾರೆ. ಅದೋ ಅಲ್ಲಿ ಭೀಮನೇತ್ರಗಳಿಗೆ ಗೋಚರವಾದದ್ದು ಆ ಅಪೂರ್ವ ಅಶ್ವ!

ಕುದುರೆಯ ಅಕ್ಕಪಕ್ಕ ಮನೆಮಾಡಿದ್ದ ಸಂಭ್ರಮ ಭೀಮನ ಮೊಗದಲ್ಲಿಯೂ ಕಾಣಿಸಿಕೊಂಡಿತು. ಚಂದಿರನನ್ನು ಕಂಡ ಸಮುದ್ರದೆದೆಯಲ್ಲಿ ಉಬ್ಬರ ಉಂಟಾದಂತೆ ಭೀಮ ಹೃದಯದಲ್ಲಿ ಸಂತಸದ ಹಿಗ್ಗು. ಮೂರು ಲೋಕಗಳಲ್ಲಿಯೂ ಈ ತರಹದ ತುರಗವಿರಲಾರದು ಎಂಬ ಯೋಚನೆ ಅವನದ್ದಾಯಿತು. 

ಆಗಲೇ ಭೀಮನ ಪಾದಗಳಿಗೆ ಮಣಿದ ಮೇಘನಾದ ಯುದ್ಧಕ್ಕೆ ಸಿದ್ಧನಾದ. ಕ್ಷಿಪ್ರಗತಿಯಲ್ಲಿ ಕುದುರೆಯನ್ನು ಅಲ್ಲಿಂದ ಕರೆದೊಯ್ಯುವ ಹಂಬಲ ಅವನದ್ದು. ಮೇಘನಾದ ಬೀಸಿದ ಮಾಯಾಜಾಲದಿಂದಾಗಿ ಯೌವನಾಶ್ವ ಅರಸನ ಸೈನಿಕರೆಲ್ಲರೂ ಕಂಗೆಡುವಂತಾಯಿತು. ಎಲ್ಲಿ ನೋಡಿದರಲ್ಲಿ ಪ್ರಳಯಕಾಲದ ಮೋಡಗಳು. ಅಲ್ಲಲ್ಲಿ ಬರಸಿಡಿಲಿನ ಆರ್ಭಟ. ಬಿರುಗಾಳಿಯ ಬಿರುಸಿಗೆ ಏಳೇಳುತ್ತಿರುವ ಧೂಳು. ಯೌವನಾಶ್ವನ ಪೂರ್ಣ ಸೇನೆಗೆ ಕಣ್ದೆರೆಯಲಾರದ ಸ್ಥಿತಿ. ದಿಕ್ಕನ್ನು ತಿಳಿಯಲಾರದ ಗೊಂದಲ. ಇದಾವ ಬಗೆಯ ಮಾಯೆ ಎನ್ನುವುದೇ ಅರ್ಥವಾಗಲಿಲ್ಲ ಅನಿತೂ ಸೈನಿಕರಿಗೆ. 

ಘಟೋತ್ಕಚಸುತ ಮೇಘನಾದನ ಈ ಬಗೆಯ ಮಾಯೆಗೆ ಅಳುಕಿದ ದೇವತೆಯೊಬ್ಬ ಭಯದಿಂದ ಹೋಗಿ ಸುದ್ದಿಯನ್ನು ಮುಟ್ಟಿಸಿದ್ದು ಇಂದ್ರನಿಗೆ. ಇದೇನಿದು ಹೊಸಬಗೆಯ ಸಮಾಚಾರ ಎಂದು ಸೇವಕರ ಅಟ್ಟಿದ ಸುರರೊಡೆಯನಿಗೆ ಧರ್ಮರಾಯ ಮಾಡಹೊರಟಿರುವ ಯಾಗದ ವಿಚಾರ ತಿಳಿಯುವುದಕ್ಕೆ ಹೆಚ್ಚು ಸಮಯವೇನೂ ಬೇಕಿರಲಿಲ್ಲ. ನಸುನಕ್ಕ ಇಂದ್ರ ದೇವತೆಗಳೆಲ್ಲರನ್ನೂ ಜೊತೆಮಾಡಿಕೊಂಡು ಯುದ್ಧ ನೋಡುವುದಕ್ಕೆಂದು ಬಂದುನಿಂತ. 

ಕುದುರೆಯನ್ನು ಕಾಯುತ್ತಿದ್ದ ಸೈನಿಕರನ್ನೂ, ಲಗಾಮು ಹಿಡಿದಿದ್ದ ರಾಜಕುವರರನ್ನೂ ಕ್ಷಣದಲ್ಲಿ ವಂಚಿಸಿದ ಮೇಘನಾದ ಕುದುರೆಯನ್ನು ಅಪಹರಿಸಿ ಆಕಾಶಮಾರ್ಗದಲ್ಲಿ ಹೊರಟ. ಅವನ ಸಾಹಸ ಭೀಮನನ್ನೂ ವೃಷಕೇತುವನ್ನೂ ವಿಸ್ಮಯದೆಡೆಗೆ ನೂಕಿತು. ತಮ್ಮ ಸಾಮರ್ಥ್ಯವನ್ನು ಸರಿಯಾಗಿ ಅರಿಯದೆ ಕೆಣಕಿದವನಿಗೆ ಸರಿಯಾದ ಗತಿಯನ್ನೇ ಒದಗಿಸುತ್ತೇವೆ ಎಂಬ ಶೌರ್ಯದ ನುಡಿ ಯೌವನಾಶ್ವನ ಸೈನಿಕರೆಡೆಯಿಂದ ಬಂತು. ವೀರಾವೇಶದ ಮಾತುಗಳನ್ನಾಡಿದ ಅವರು ಮೇಘನಾದನ ಕಣ್ಣಿಗೆ ಯಮನನ್ನು ಬೆನ್ನಟ್ಟುವ ಶವಸಮಾನರಾದರು. ಕಲ್ಲಿನ ಮಳೆಗಳನ್ನೇ ಸುರಿಸಿದ. 

ಬಗೆಬಗೆಯ ಯುದ್ಧವಾದ್ಯಗಳು ಮೊಳಗಿದವು. ಯುದ್ಧದ ಕುದುರೆಗಳ ಪಾದಗಳಿಂದ ಬಲವಾದ ಸದ್ದು ಎದ್ದಿತು. ರಥಗಳ ಚಕ್ರಗಳ ಧ್ವನಿ ಜೋರಾಗಿಯೇ ಕೇಳಿಬಂತು. ಭುಜಬಲವನ್ನು ನಿರೂಪಿಸುವಂತೆ ಸೈನಿಕರು ತಮ್ಮ ತೋಳುಗಳನ್ನು ಬಲವಾಗಿ ತಟ್ಟಿ ತೋರಿಸಿದರು. ಸೈನಿಕರ ಬಿಲ್ಲು ಬಾಣಗಳು ಸದ್ದುಮಾಡಿದವು. ಈ ಎಲ್ಲಾ ಬಗೆಯ ಸದ್ದು ಗದ್ದಲಗಳು ಒಂದಾದಾಗ ಬ್ರಹ್ಮಾಂಡವೇ ಒಡೆದುಹೋದೀತೋ ಎನ್ನುವಂತಹ ಸನ್ನಿವೇಶ ನಿರ್ಮಾಣವಾಯಿತು. ಅವರ ಆರ್ಭಟವನ್ನು ಮೇಘನಾದನೇನೂ ಮನಸ್ಸಿಗೆ ಹಚ್ಚಿಕೊಳ್ಳಲಿಲ್ಲ. 

ಯೌವನಾಶ್ವ ಭೂಪತಿಯ ಸೈನಿಕರಾದ ತಾವು ಅಳುಕುವವರಲ್ಲ ಎಂಬ ಕೆಚ್ಚು ಆ ಸೈನಿಕರಲ್ಲೀಗ ಮೂಡಿನಿಂತಿತು. “ಪ್ರಾಣದ ಮೇಲೆ ಆಸೆಯಿದ್ದರೆ ಕುದುರೆಯನ್ನು ಬಿಟ್ಟುಬಿಡು. ಇಲ್ಲವಾದರೆ ಮಹಾಯುಧಧರನಾಗಿ ಯುದ್ಧಕ್ಕೆ ಮುಂದಾಗು” ಎಂಬ ಎಚ್ಚರಿಕೆಯ ಮಾತುಗಳನ್ನು ಹೇಳಿದ ಅವರು ಬಾಣಗಳ ಮಳೆಯನ್ನೇ ಸುರಿಸಿದರು. 

ಅಳುಕುವ ಗುಂಡಿಗೆಯಲ್ಲ ಮೇಘನಾದನದ್ದು. “ನಿಮ್ಮ ಅರಸನ ಪರಿವಾರದಲ್ಲಿ ನೀವೇ ಧೈರ್ಯವಂತರೋ! ಇಲ್ಲಾ ಇನ್ನಷ್ಟು ಗಟ್ಟಿಯೆದೆಯವರು ಇದ್ದಾರೋ!” ಎಂದು ಹಂಗಿಸಿದ ಅವನು “ನಾನೇನೂ ಕುದುರೆಯನ್ನು ಕದ್ದುಕೊಂಡು ಹೋಗುತ್ತಿಲ್ಲ. ನಿಮ್ಮ ಮುಂದೆಯೇ ಕೊಂಡೊಯ್ಯುತ್ತಿದ್ದೇನೆ. ನಿಮ್ಮಲ್ಲಿ ಶಕ್ತಿ ಇರುವುದೇ ಹೌದಾದರೆ ಬಿಡಿಸಿಕೊಳ್ಳಿ” ಎಂಬ ಸವಾಲನ್ನೊಡ್ಡಿದ. ಮೇಘನಾದ ಭಯದ ಮೋಡವನ್ನೇ ಬಿತ್ತಿದ ಸೈನ್ಯದ ಎದೆಯೊಳಗೆ… 


About The Author

Leave a Reply

You cannot copy content of this page

Scroll to Top