ಕಾವ್ಯ ಸಂಗಾತಿ
ಸುಮನಾ ರಮಾನಂದ
“ಭಾವಲಹರಿಯ ಚಿತ್ತಾರ”


ಕಡಲಕಿನಾರೆಯ ತಂಪಾದ ಗಾಳಿ
ಹಾರುವ ಮುಂಗುರುಳ ಸ್ಪರ್ಶಿಸಿರಲು!
ಕಾಲನಪ್ಪುವಲೆಗಳು ಮರಳನು ಸೆಳೆದೊಯ್ಯಲು..
ಮನದಲಿ ಪುಟಿಯುವುದು ನಿನ್ನ ಹೆಸರು!!
ಸಾಗರದ ಅದಮ್ಯ ಉತ್ಸಾಹದಲಿ
ಕಡಲ ಮರಳನು ಅಲೆಗಳಪ್ಪಿರಲು!
ನೊಂದ ಮನವು ಶಾಂತಿಯನರಸಲು..
ಹೃದಯದಲವಿತ ನಿನಾದವೇ ನಿನ್ನ ಹೆಸರು!!
ಅಂಬರದ ಚಿತ್ತಾರವ ಕಂಡು
ಸಮುದ್ರವು ಪ್ರತಿಫಲಿಸಿ ಮುಗುಳ್ನಗಲು!
ಅಲೆಗಳಬ್ಬರಕೆಂದೂ ಬೆಚ್ಚದ ಬಂಡೆಗಳಿರಲು..
ಅಂತರಾಳದ ಮೊರೆತವೇ ನಿನ್ನ ಹೆಸರು!!
ಪರಮಾತ್ಮನಲಿ ಮನವು ಆವರಿಸಿ
ಭಕ್ತಿಯಲಿ ಅಂತರ್ಮನ ಜಪಿಸಿರಲು!
ಬೇರೇನೂ ಈ ಜೀವಕೆ ಬೇಡವಾಗಿರಲು..
ನನ್ನಾತ್ಮದಲಿ ವಿಲೀನವಾಗಿದೆ ನಿನ್ನ ಹೆಸರು!!
ಸುಮನಾ ರಮಾನಂದ,ಕೊಯ್ಮತ್ತೂರು



