ಸ್ಫೂರ್ತಿ ಸಂಗಾತಿ
ಎಂ.ಆರ್. ಅನಸೂಯ
“ವಾಚ್ ಮನ್ ಸಂಸಾರ ಹಾಗೂ ಶೆಡ್”


ಬೆಂಗಳೂರಿನ ನಮ್ಮ ಮಗಳ ಮನೆಯ ಪಕ್ಕದಲ್ಲಿ ಒಂದು ನಾಲ್ಕಂತಸ್ತಿನ ಮಹಡಿ ಮನೆಯನ್ನು ಕಟ್ಟುತ್ತಿದ್ದರು. ಪಕ್ಕದಲ್ಲೆ ಒಂದು ದೊಡ್ಡ ಶೆಡ್ ಕಟ್ಟಲಾಗಿತ್ತು. ಸುಮಾರು 12 x12 ಅಳತೆಯದಾಗಿತ್ತು. ಅದಕ್ಕೆ ಮಧ್ಯದಲ್ಲಿ ಗೋಡೆ ಕಟ್ಟಿ ಎರಡು ಭಾಗ ಮಾಡಿದ್ದರು. ಅದರಲ್ಲಿ ಒಂದು ಭಾಗ ವಾಚ್ ಮನ್ ಕುಟುಂಬಕ್ಕೆ ಮತ್ತೊಂದು ಭಾಗ ಸಿಮೆಂಟ್ ಮೂಟೆ ಹಾಗೂ ಗಾರೆ ಕೆಲಸದ ಸಾಮಗ್ರಿಗಳನ್ನು ಇಡುವ ಗೋಡಾನ್.
ನಾನು ಮಗಳ ಮನೆಗೆ ಹೋದಾಗಲೆಲ್ಲಾ ಅದು ಹೇಗೆ ಆ ಸಣ್ಣ ಶೆಡ್ ನಲ್ಲಿ ಆ ವಾಚ್ ಮನ್ ಕುಟುಂಬವು ವಾಸ ಮಾಡುತ್ತದೆ ಎಂದು ತಿಳಿಯುವ ಹಾಗೂ ನೋಡುವ ಒಂದು ಸಣ್ಣ ಕುತೂಹಲವಿತ್ತು. ನಮ್ಮ ಕುತೂಹಲ ಅವರ ಅಳುಕು ಮತ್ತು ಕೀಳಿರಿಮೆಗೆ ಕಾರಣವಾಗಿ ಅವರು ತಪ್ಪು ತಿಳಿಯ ಬಹುದೆಂಬ ಭಾವನೆಯಿಂದಾಗಿ ಏನನ್ನೂ ಕೇಳದೇ ಪ್ರತಿದಿನ ವಾಕ್ ಹೋಗಿ ಬರುವಾಗ ಹಾಗೇ ಕಣ್ಣು ಹಾಯಿಸಿ ಸುಮ್ಮನೆ ಇದ್ದು ಬಿಡುತ್ತಿದ್ದೆ.
ಆ ಶೆಡ್ ನಲ್ಲಿ ಇದ್ದ ಮುಸ್ಲಿಂ ಕುಟುಂಬದಲ್ಲಿ ಗಂಡ, ಹೆಂಡತಿ ಹಾಗೂ ಒಂದೂವರೆ ವರ್ಷದ ಹೆಣ್ಣು ಮಗು ಇದೆ . ಅವಳು ಪ್ರತಿದಿನ ಸಂಜೆಯ ವೇಳೆ ಮಾತ್ರ ನಮ್ಮ ಮಗಳ ಮನೆಗೆ ಬಂದು ಪಾತ್ರೆ ತೊಳೆದು ಕೊಟ್ಟು ಹೋಗುತ್ತಿದ್ದಳು. ಮನೆ ಕಟ್ಟುವ ಕೆಲಸಕ್ಕೆ ಈಕೆಯೂ ಹೋಗುತ್ತಿದ್ದಳು. ಇಟ್ಟಿಗೆ ಹೊರುವ ಹಾಗೂ ಸಿಮೆಂಟ್ ಮಡ್ಡಿ ಹೊರುವ ಶ್ರಮದ ದುಡಿಮೆಯ ನಂತರವೂ ಸಹಾ ಇದೊಂದು ಸಣ್ಣ ಗಳಿಕೆ. ಅವಳು ಕಷ್ಟಸಹಿಷ್ಣು ಹೆಣ್ಣು ಮಗಳು.
ಈ ಬಾರಿ ಮಗಳ ಮನೆಗೆ ಹೋದಾಗ ಕಟ್ಟುತ್ತಿದ್ದ ಮನೆಯು ಮುಗಿಯುವ ಹಂತಕ್ಕೆ ಬಂದಿತ್ತು. ಅವರು ಇಲ್ಲಿ ಒಂದು ವಾರ ಮಾತ್ರ ಇರುವರೆಂಬ ವಿಷಯ ತಿಳಿಯಿತು. ಇನ್ನು ತಡ ಮಾಡಿದರೆ ಮತ್ತೆ ಅವರು ನನ್ನ ಕೈಗೆ ಸಿಗುವುದು ಅಸಂಭವವೇ ಸರಿ !
ಸಂಜೆ ಮಗಳ ಮನೆಗೆ ಕೆಲಸಕ್ಕೆ ಬಂದಾಗ ಅವಳ ಜತೆ ಮಾತಿಗಿಳಿದೆ. ನಿಮ್ಮ ಸ್ವಂತ ಊರು ಯಾವುದು? ಊರನ್ನು ಬಿಟ್ಟು ಇಲ್ಲಿಗೆ ಬರಲು ಕಾರಣವೇನು? ಎಂದು ಕೇಳಿದಾಗ ಉತ್ತರ ಕರ್ನಾಟಕದ ಒಂದು ಹಳ್ಳಿ ಹೆಸರನ್ನು ಹೇಳಿದಳು. ಅವರ ಊರಲ್ಲಿ ಕೆಲಸ ಸಿಕ್ಕರೂ ಅಲ್ಲಿ ಅವರಿಗೆ ಸಿಗುವ ಕೂಲಿ ಇಲ್ಲಿ ಸಿಗುವ ಕೂಲಿ ಹಣಕ್ಕಿಂತ ಕಡಿಮೆ. ಹಾಗಾಗಿಯೇ ಇಲ್ಲಿಗೆ ಬಂದೆವು. ಅಲ್ಲಿ ಆರು ವರ್ಷದ ಗಂಡು ಮಗನನ್ನು ಅಜ್ಜಿ ತಾತನ ಬಳಿ ಬಿಟ್ಟಿದ್ದಾರೆ. (ಗಂಡನ ತಾಯಿ, ತಂದೆ ) ಅಲ್ಲಿ ಅವನನ್ನು ಶಾಲೆಗೆ ಸೇರಿಸಿದ್ದಾರೆ. ನಾನು ನಿಮ್ಮ ಶೆಡ್ ನೋಡಬೇಕೆಂದು ಅವಳ ಜೊತೆ ಅವಳ ಮನೆಗೆ ಹೋದೆ.
ಅದೊಂದು 6 X 6 ಅಡಿ ಅಳತೆಯ ಪುಟ್ಟ ಕೋಣೆ. ನಾಲ್ಕು ಬದಿಯ ಗೋಡೆಗಳನ್ನು ಆಕೆಯು ಗರಿಷ್ಟ ಮಟ್ಟದಲ್ಲಿ ಸಮರ್ಪಕವಾಗಿ ಉಪಯೋಗಿಸಿಕೊಂಡಿದ್ದಳು. ಶೆಡ್ ನ ಮೂರು ಬದಿಯ ಗೋಡೆಗೆ ಒಂದು ಹಲಗೆಯನ್ನಿಟ್ಟು ಅಟ್ಟ ಮಾಡಿಕೊಕಡಿದ್ದಳು. ಬಾಗಿಲಿಗೆ ಹೊಂದಿಕೊಂಡಂತಿರುವ ಗೋಡೆಯ ಪಕ್ಕವೇ ಮೂರು ನಾಲ್ಕು ಹಂತಗಳಿರುವ ಕಬ್ಬಿಣದ ಬಾಗಿಲಿಲ್ಲದ ಬೀರುವನ್ನು ಇಟ್ಟುಕೊಂಡಿದ್ದಳು. ಕೆಳ ಹಂತದಲ್ಲಿ ಅಡುಗೆ ಸಾಮಗ್ರಿಗಳನ್ನು ಇಡಲಾಗಿತ್ತು. ಎರಡು ಮತ್ತು ಮೂರನೇ ಹಂತದಲ್ಲಿ ಇಡೀ ಸಂಸಾರದ ಒಗೆದ ಎಲ್ಲ ಬಟ್ಟೆಗಳನ್ನು ಒಪ್ಪವಾಗಿ ಜೋಡಿಸಿಟ್ಟಿದ್ದಳು. ಮೇಲಿನ ಹಂತವು ಅಡುಗೆಗೆ ಬೇಕಾದ ಪಾತ್ರೆಗಳು , ಪ್ರೆಷರ್ ಕುಕ್ಕರ್ ತಟ್ಟೆ ಹಾಗೂ ಲೋಟಗಳಿಗೆ ಮೀಸಲಾಗಿತ್ತು. ಅದರ ಪಕ್ಕದ ಗೋಡೆಗಿದ್ದ ಅಟ್ಟದಲ್ಲಿ ಸಂಸಾರಕ್ಕೆ ಬೇಕಾದ ಸರಕುಗಳನ್ನು ಸೂಪರ್ ಚೀಲಗಳಲ್ಲಿ ಅಡಕವಾಗಿಡಲಾಗಿತ್ತು.ಕಬ್ಬಿಣದ ಸರಳುಗಳನ್ನು ಹೊಡೆದು ಹೆಂಚುಗಳು. ಕನ್ನಡಿ , ಸೂಪರ್ ಚೀಲದ ಬ್ಯಾಗ್ ಗಳಲ್ಲಿ ನೀರುಳ್ಳಿ, ಬೆಳ್ಳುಳ್ಳಿ ಇತರೆ ತರಕಾರಿ ಹಾಗೂ ಅಗತ್ಯ ಸರಕುಗಳನ್ನು ಹಾಕಿ ನೇತು ಹಾಕಲಾಗಿತ್ತು. ಮತ್ತೊಂದು ಗೋಡೆಗೆ ಮಾಡಿದ್ದ ಅಟ್ಟದಲ್ಲಿ ಸೂಪರ್ ಚೀಲದ ಬ್ಯಾಗ್ ಗಳು ಮತ್ತು ಚಿಕ್ಕ ಪ್ಲಾಸ್ಟಿಕ್ ಬಕೆಟ್ ಗಳು ಸರಕು ಸಾಮಗ್ರಿಗಳಿಗೆ ಮೀಸಲಾಗಿದ್ದವು. ಆ ಅಟ್ಟದ ಕೆಳಗೆ ಕುಡಿಯುವ ನೀರಿನ ಬಿಸ್ಲೇರಿ ಟ್ಯಾಂಕ್, ಚಿಕ್ಕ ಸಿಲಿಂಡರ್ ಹಾಗೂ ರುಬ್ಬಲಿಕ್ಕೆ ಮಿಕ್ಸಿ ಇಡಲಾಗಿತ್ತು.ಉಳಿದ ಗೋಡೆಯ ಎರಡು ಬದಿಗೆ ಪ್ಲಾಸ್ಟಿಕ್ ಹಗ್ಗವನ್ನು ಕಟ್ಟಿ ಮಲಗುವ ಚಾಪೆ ಹಾಗೂ ಹೊದಿಕೆಗಳಿಗೆ ಅವಕಾಶ ಮಾಡಿಕೊಡಲಾಗಿತ್ತು.
ಕೋಣೆಯ ನೆಲವನ್ನು ಸಿಮೆಂಟ್ ನಿಂದ ನೈಸ್ ಮಾಡಿದ್ದರು. ಕೋಣೆಯ ನೆಲವನ್ನು ಸ್ವಚ್ಛವಾಗಿಡಲಾಗಿತ್ತು. ಕೋಣೆಯ ಬಾಗಿಲಿನ ಒಂದು ಪಕ್ಕಕ್ಕೆ ಗೋಡೆಯ ಹೊರಭಾಗಕ್ಕೆ ಹೊಂದಿಕೊಂಡಂತೆ ಎರಡು ಮರದ ಕಂಬಗಳನ್ನೀಟ್ಟು ಮೇಲೆ ಪ್ಲಾಸ್ಟಿಕ್ ಶೀಟ್ ಗಳನ್ನು ಹೊಂದಿಸಿ ಅಲ್ಲಿ ಅಡುಗೆ ಮಾಡಲು ಒಲೆ ಹಾಕಿಕೊಂಡಿದ್ದರು. ಇನ್ನೊಂದು ಗೋಡೆಗೆ ಹೊಂದಿಕೊಂಡ ಹಾಗೆ ಶೀಟ್ ಗಳನ್ನು ನಿಲ್ಲಿಸಿದ ಬಚ್ಚಲು ಮನೆಯಿತ್ತು. ಇದಿಷ್ಟು ಅವರಿಗಿದ್ದ ಸೌಲಭ್ಯ.
ಆ ಶೆಡ್ ನ ಒಳಗೆ ವಸ್ತುಗಳನ್ನು ಅಡಕವಾಗಿಟ್ಟಿದ್ದ ಮನೆ ಯಜಮಾನಿಯ ಅಚ್ಚುಕಟ್ಟು, ಒಪ್ಪ ಹಾಗೂ ಓರಣ ನನ್ನ ಗಮನ ಸೆಳೆದು ಮೆಚ್ಚುಗೆಯ ಮಾತುಗಳನ್ನು ಆಡಿದಾಗ ಗಂಡ ಹೆಂಡತಿಯ ಮೊಗವರಳಿದವು. ಎಲ್ಲ ಸೌಲಭ್ಯಗಳಿದ್ದು ಮನೆಯನ್ನು ಅಚ್ಚುಕಟ್ಟಾಗಿಟ್ಟುಕೊಳ್ಳುವುದರಲ್ಲಿ ಏನೂ ಹೆಚ್ಚುಗಾರಿಕೆ ಇಲ್ಲ ! ಕನಿಷ್ಠ ಸೌಲಭ್ಯಗಳಿಗೂ ಸಹಾ ಕೊರತೆ ಇರುವ ಆ ಜಾಗದಲ್ಲಿ ಕಂಡಂಥ ಅಲ್ಲಿನ ಅಚ್ಚುಕಟ್ಟುತನವು ಮನೆಯೊಡತಿಯ ಜೀವನೋತ್ಸಾಹಕ್ಕೆ ಸಾಕ್ಷಿಯಾಗಿತ್ತು. ಅದರಲ್ಲೂ ಬೆಳಗಿನಿಂದ ಸಂಜೆಯ ತನಕ ಮಾಡುವ ಮೈ ಮುರಿವಂಥ ದುಡಿಮೆಯ ನಡುವೆ ! ಅಷ್ಟಕ್ಕೂ ಒಪ್ಪ ಓರಣ ಹಾಗೂ ಅಚ್ಚುಕಟ್ಟುತನ ಯಾರೊಬ್ಬರ ಸ್ವತ್ತೇನೂ ಅಲ್ಲವಲ್ಲ! ಬದುಕಿನಲ್ಲಿ ಸಣ್ಣ ಪುಟ್ಟ ಕೊರತೆಗಳಿಗೂ ಗೊಣಗಾಡುವ ನಾವು ಯಾವುದೇ ಸಂದರ್ಭಕ್ಕೂ ಹೊಂದಿಕೊಂಡು ಬದುಕಿ ಬಾಳುವ ಇವರನ್ನು ನೋಡಿ ಕಲಿಯಬೇಕಾಗಿದೆ.
ಮನೆಯ ಮುಂದೆ ಹಾಕಿಕೊಂಡಿದ್ದ ಅಡುಗೆ ಒಲೆಯ ಮೇಲೆ ಚಿತ್ರ ವಿಚಿತ್ರ ಆಕಾರದ ತೂತುಗಳಿದ್ದ ಹೆಂಚನ್ನು ನೋಡಿ ಅದೇಕೆ ಹಾಗೇ ಎಂದು ಕೇಳಿದೆ. ಅಂತಹ ಹೆಂಚಿನ ಮೇಲೆ ಅಡುಗೆ ಮಾಡುವ ಪಾತ್ರೆಗಳನ್ನಿಟ್ಟು ಅಡುಗೆ ಮಾಡಿದರೆ ಪಾತ್ರೆಗಳಿಗೆ ಮಸಿ ಕಟ್ಟುವುದಿಲ್ಲವಂತೆ ! ಒಲೆಗೆ ಸೌದೆಯನ್ನು ಹೊಂದಿಸುವ ಬಗ್ಗೆ ಕೇಳಿದೆ. ಕಟ್ಟಡದ ಮರಗೆಲಸದಲ್ಲಿನ ತ್ಯಾಜ್ಯವನ್ನು ಅಡುಗೆ ಮಾಡಲು ಉಪಯೋಗಿಸುತ್ತಾರೆ ಅದಿಲ್ಲದಿದ್ದಾಗ ಗ್ಯಾಸ್ ಸ್ಟವ್ ಬಳಸುತ್ತಾರೆ .
ಶೆಡ್ ಸಂಸಾರದ ಯಜಮಾನನ ದಿನಗೂಲಿ ರೂ 1100 / ಹೆಂಡತಿಯ ದಿನಗೂಲಿ ರೂ 500 / – ಊರಿನಲ್ಲಿ ಸ್ವಂತ ಮನೆ ಇದೆ.ಆವರ ದುಡಿಮೆಯ ಹಣದಲ್ಲಿ ಅಗತ್ಯವಿದ್ದಷ್ಟು ಬಳಸಿ, ಉಳಿದ ಹಣವನ್ನು ಅವರ ತಂದೆಗೆ ಕಳಿಸುತ್ತಾರಂತೆ. ಅವರ ತಂದೆ ಊರಿನಲ್ಲಿ ನಾಲ್ಕು ಎಕರೆ ಹೊಲ ಖರೀದಿ ಮಾಡಿದ್ದಾರೆ.ಅದಕ್ಕಾಗಿ ಎಂಟು ಲಕ್ಷ ಸಾಲ ಮಾಡಿದ್ದಾರೆ. ಆ ಸಾಲ ತೀರಿಸಲು ಇವನು ಮತ್ತು ಇವರ ತಮ್ಮ ಹಣವನ್ನು ಕಳಿಸುತ್ತಾರೆ. ಇವನು ತಮ್ಮ ಹೈದರಾಬಾದ್ ನಲ್ಲಿ ಇದೇ ಕೆಲಸವನ್ನು ಮಾಡಿಕೊಂಡಿದ್ದಾನೆ. ಮಾಡುವ ಕೆಲಸದಲ್ಲಿ ಪರಿಣತಿ ಹಾಗೂ ದುಡಿದು ತಿನ್ನುವ ಛಲವಿದ್ದರೆ ಯಾರೂ ಎಲ್ಲಿಯಾದರೂ ಬದುಕಿ ಬಾಳಬಹುದು ಎಂಬುದಕ್ಕೆ ಈ ಕುಟುಂಬ ಸಾಕ್ಷಿಯಾಗಿತ್ತು.
ಎಂ.ಆರ್. ಅನಸೂಯ



