ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

 *

       ಮಕ್ಕಳ ಆಟಿಕೆ ಎಂದರೆ ಇಂದು ತಟ್ಟನೆ ಗೋಚರಿಸುವ ಉತ್ತರ ” ಮೊಬೈಲ್ “. ಮಕ್ಕಳ ಬಾಲ್ಯ ಪ್ರಸ್ತುತ ದಿನಮಾನಗಳಲ್ಲಿ ಮೊಬೈಲ್ ವಿಕ್ಷಣೆಯಲ್ಲಿಯೇ ಕಳೆದು ಹೋಗುತ್ತಿದೆ ಎಂಬುದರ ಅರಿವು ಕೂಡ ಬರದಷ್ಟು ರೀತಿಯಲ್ಲಿ ಸಾಗಿದೆ. ಮಕ್ಕಳು ಮೊಬೈಲ್ ಗೆ ಎಷ್ಟು ಅಡಿಕ್ಟ್  ಆಗಿದ್ದಾರೆ ಎಂದರೆ ಅದನ್ನು ಹೇಗೆ ಹೇಳಬೇಕು ಎಂಬುದು ತಿಳಿಯಲಾರದಷ್ಟು ಅನ್ನಬೇಕಷ್ಟೆ.
ಮಕ್ಕಳು ಅಷ್ಟೇ ಅಲ್ಲ ಏನು ಅರಿಯದ ಹಸುಳೆಗಳೂ ಕೂಡ ಮೊಬೈಲ್ ಗೀಳಿಗಿಡಾಗಿವೆ. ನಾನೊರ್ವ ಶಿಕ್ಷಕಿಯಾಗಿ, ಹವ್ಯಾಸಿ ಪತ್ರಕರ್ತೆಯಾಗಿ, ಸಾಹಿತಿಯಾಗಿ,ಸಾಮಾಜಿಕ ಕಾರ್ಯಕರ್ತೆಯಾಗಿ ಸೇವೆ ಸಲ್ಲಿಸುತ್ತಿರುವ ಹಿನ್ನಲೆಯಲ್ಲಿ ಮೊಬೈಲ್ ಹೇಗೆ ಬಳಕೆಯಾಗುತ್ತಿದೆ ಎಂಬುದನ್ನು ಚನ್ನಾಗಿ ಬಲ್ಲೆ. ಇಲ್ಲಿ ಒಂದು ಮಾತು ನೆನಪಾಗುತ್ತದೆ. ರಾಮಾಯಣದಲ್ಲಿ ಅರ್ಜುನನ ಮಗ ಅಭಿಮನ್ಯು ತಾಯಿಗರ್ಭದಲ್ಲಿನೆ ಹೊರಗಿನ ಮಾತುಗಳನ್ನು ಕೇಳಿಸಿಕೊಂಡು ಹೊರಬಂದ ನಂತರ ಕೆಲ ವರುಷಗಳ ನಂತರದಲ್ಲಿ ಚಕ್ರವ್ಯೂಹ ಭೇದಿಸಿದ್ದನ್ನು ತಿಳಿದಿದ್ದೆವೆ. ಈ ದಿಸೆಯಲ್ಲಿ ಮೊಬೈಲ ಪ್ರಯೋಗವನ್ನೂ ಮಾಡಿ ನೋಡಲಾಯಿತು. ಗರ್ಭಧರಿಸಿದ ತಾಯಿಯ ಮೊಬೈಲ್ ರಿಂಗ್ ಟ್ಯೂನ ಒಂದು ಹಾಡನ್ನು ಇಡಲಾಗಿತ್ತು. ಮಗು ಜನಿಸಿದ ನಂತರ ತಾಯಿಯ ಮೊಬೈಲ್ ರಿಂಗ್  ಆದಾಗೊಮ್ಮೆ ಮಗು ಕಣ್ಣಬಿಟ್ಟು ಸುತ್ತ ನೋಡುತಲಿತ್ತು. ಇದರಿಂದ ತಿಳಿಯುತ್ತದೆ ಹೊಟ್ಟೆಯಲಿರುವ ಮಗು ಕೂಡ ಮೊಬೈಲ್ ಗೆ ಸ್ಪಂದಿಸುತ್ತೆ ಅಂತ !ಇನ್ನೂ ಮಕ್ಕಳ ಬಾಲ್ಯವನ್ನು ಕಸಿದುಕೊಳ್ಳದಿರುತ್ತಾ ?
      ಮಕ್ಕಳ ಬಾಲ್ಯ ಅಂದರೆ ಅದು ಸರ್ವಾಂಗೀಣವನ್ನು ಒಳಗೊಂಡಿರುವಂತದ್ದು. ದೈಹಿಕ , ಬೌದ್ಧಿಕತೆಯ ವಿಕಸನವನ್ನು ಮಾಡುವಂತದ್ದಾಗಿರುತ್ತದೆ. ಮಕ್ಕಳ ಬಾಲ್ಯ ಒಂದು ಸುವರ್ಣಘಟ್ಟ. ಮರೆಯಲಾಗದ ಅನುಬಂಧ. ಪ್ರತಿಯೊಬ್ಬರೂ ಕೂಡ ಸಂಭ್ರಮಿಸುವಂತಹದು. ಬಾಲ್ಯ ಎಲ್ಲರಿಗೂ ಸವಿನೆನಪಿನ ಬುತ್ತಿಯನ್ನು ಕಟ್ಟಿಟ್ಟಿರುತ್ತದೆ. ಹಿಂದೆಲ್ಲ ಬಾಲ್ಯದಲ್ಲಿ ಎಷ್ಟೊಂದು ವಿವಿಧತೆಯನ್ನು ಕಲೆಯುವಂತಿತ್ತು. ನೋಡಿ ಅನುಕರಣೆ ಮಾಡಿ ಕಲಿತುಕೊಳ್ಳುತ್ತಿದ್ದರು. ಬಾಲ್ಯದಿಂದಲೆ ಎಲ್ಲವನ್ನೂ ಕಲೆತು, ಕಲಿತು ಬೆಳೆಯುತ್ತಿದ್ದರು. ಆದರೆ ಇಂದು ಕೈಗೊಂದು ಮೊಬೈಲ್ ಕೊಟ್ಟರೆ ಸಾಕು, ಇನ್ನೇನೋ ಅಷ್ಟೇ ಅಲ್ಲ ಹೆತ್ತವರು ಕೂಡ ಬೇಡವಾಗಿ ತಮ್ಮಷ್ಟಕ್ಕೆ ತಮ್ಮನ್ನು ಬಿಟ್ಟರೆ ಸಾಕು ಎನ್ನುವ ಮಕ್ಕಳ ಪರಿಸ್ಥಿತಿ ಇಂದಿನದಾಗಿದೆ.
          ಹಿರಿ-ಕಿರಿಯರೆಲ್ಲರೂ ಇಂದು ಮೊಬೈಲಗೆ ಅಡಿಕ್ಟ್ ಆಗಿರುವುದರ ಪರಿಣಾಮವಾಗಿ ಮಕ್ಕಳು ತಮ್ಮ ಬಾಲ್ಯದಲ್ಲಿ ಹೆತ್ತವರು, ಅಜ್ಜಾಜ್ಜಿಯರು, ಚಿಕ್ಕಪ್ಪ ದೊಡ್ಡಪ್ಪ,ಒಟ್ಟಾರೆ ಕುಟುಂಬದ ಸದಸ್ಯರು ಎತ್ತಿ ಆಡಿಸುವ ಅವಕಾಶ ಈ ಮೊಬೈಲ್  ಕಸಿದುಕೊಂಡಂತಾಗಿದೆ.
      ಮಕ್ಕಳು ಬಾಲ್ಯದಲ್ಲಿ ಆಡಬೇಕಾದ ಆಟಗಳನ್ನು ನಾವಿಂದು ಕಾಣುತ್ತಿಲ್ಲ. ಒಳಾಂಗಣ ಆಟಗಳಾದ ಚೆಸ್ಸ್, ಕೆರಂ, ಲುಡೊ, ಹಾವು ಏಣಿಯಾಟ, ಪಗಡೆ ಮುಂತಾದವು ಹಾಗೂ ಹೊರಾಂಗಣ ಆಟಗಳಾದ ಕುಂಟೆಬಿಲ್ಲೆ, ನೆರಳು-ಬಿಸಿಲು, ಮಂಗನ ಆಟ, ಬುಗರಿ ಆಟ, ಗೋಲಿಯಾಟ, ಚಿನ್ನಿದಾಂಡು, ಉಪ್ಪು ಕೊಡುವಾಟ, ಕೆರೆ-ದಡ, ಲಡ್ಡು ಲಡ್ಡು ಚಿಮ್ಮಯ್ಯ ಹೀಗೆ ಅನೇಕ ಬಾಲ್ಯದ ಆಟಗಳು ಅಳಿದು ಹೋಗುತ್ತಿವೆ. ಇವುಗಳನ್ನು ಮಕ್ಕಳಿಗೆ ಪರಿಚಯಿಸದಿರಲು ಹಾಗೂ ಆಡಲು ಸಿಗಬೇಕಾದ ಸಮಯ ಇವುಗಳನ್ನು ‘ ಮೊಬೈಲ್ ‘ ಕಬಳಿಸಿಕೊಂಡು, ಆಡಿ ನಲಿಯಬೇಕಾದ ಮಕ್ಕಳ ಬಾಲ್ಯದ ಆನಂದ ಇಲ್ಲವಾಗಿದೆ.
       ಬಾಲ್ಯದಲ್ಲಿಯ ಇನ್ನೊಂದು ಪ್ರಮುಖ ಅಂಶವೆಂದರೆ ಕುಟುಂಬದ ಹಿರಿಯರಾದ ಅಜ್ಜ – ಅಜ್ಜಿಯರು ಮಕ್ಕಳನ್ನು ಕೂಡ್ರಿಸಿಕೊಂಡು ಹೇಳುತ್ತಿದ್ದ ರಾಮಾಯಣ, ಮಹಾಭಾರತ, ಪಂಚತಂತ್ರ, ಭಗವದ್ಗೀತೆ , ವಚನ ಮೊದಲಾದವುಗಳನ್ನು ಹೇಳುವುದನ್ನು ಇಂದು ಎಲ್ಲೂ ನೋಡಸಿಗುತ್ತಿಲ್ಲ. ಅದಕ್ಕೆ ಕಾರಣ ಈ ಹಿರಿಯರು ಇವತ್ತು ಮೊಬೈಲ್ ಹಿಡಿದು ಕುಳಿತು ಧಾರವಾಹಿ, ಮನರಂಜನೆ ವಿಕ್ಷಿಸಲು ಅಲ್ಲದೆ ಮಾತನಾಡುತ್ತಲೋ, ಚಾಟ್ ಮಾಡುತ್ತಲೋ ಕುಳಿತುಕೊಳ್ಳುತ್ತಾರೆ. ಇದಕ್ಕೆ ಮೊಬೈಲ್ ನ್ನೆ ಹೊಣೆ ಮಾಡಬೇಕಲ್ಲವೇ?
    ಈ ಕಥೆಗಳನ್ನು ಕೇಳುವುದರಿಂದ ಮಕ್ಕಳಲ್ಲಿ ಶೌರ್ಯ, ಧೈರ್ಯ, ಕುತೂಹಲ ಹುಟ್ಟುಹಾಕುತ್ತಿದ್ದವು. ಅಲ್ಲದೆ ನೈತಿಕ ಮೌಲ್ಯಗಳು ತಿಳಿಯುತ್ತಿದ್ದವು. ಅವುಗಳಲ್ಲಿ ಸಿಗುವ ಆನಂದ ಅಪರಿಮಿತ ಆದರೆ  ಇಂದು ಆ ಬಾಲ್ಯದ ಆನಂದ ಮಕ್ಕಳಿಗೆ ಸಿಗುತ್ತಿಲ್ಲ.
ಇದಕ್ಕೆಲ್ಲ ಕಾರಣ ಮೊಬೈಲ ಅಂತನೇ ಹೇಳಬೇಕು. ಕೋವಿಡ್ ಸಮಯದಲ್ಲಿ ಮಕ್ಕಳ ಕೈಗೆ ನಾವೇ ಮೊಬೈಲ ಇತ್ತೆವು. ಆನ್ ಲಾಯಿನ್  ಶಿಕ್ಷಣಕ್ಕಾಗಿ ಹಿಡಿದ ಮೊಬೈಲ್ ಇಂದು ಮೊಬೈಲನ್ನು ಅಂಗೈಯೊಳಗಿಟ್ಟುಕೊಂಡು  ಪ್ರಪಂಚವನ್ನೆ ಜಾಲಾಡಿಸುವ ಚಟವಾಗಿ ಅಂಟಿಕೊಂಡಿದೆ. ಅವರ ಆಟಪಾಠ ಎಲ್ಲ ಮೊಬೈಲನಲ್ಲಿಯೆ. ಇದರಿಂದ ಮಾನಸಿಕ,ದೈಹಿಕ ಆರೋಗ್ಯ ಹದಗೆಡುತ್ತಿದೆ. ಮಕ್ಕಳಲ್ಲಿ ಬಾಲ್ಯದ ಮುಗ್ದತೆ ನಶಿಸಿ ವಯಸ್ಸಿಗೆ ಮೀರಿದ ಬುದ್ಧಿಯನ್ನು ತೋರಿಸುತ್ತ  ಹಾಸ್ಯಕೊಳ್ಳಪಡುವುದು, ಪೇಚಿಗೆ ಸಿಲುಕುವುದು ನಡೆದಿದೆ.
     ತಮ್ಮ ಅನುಕೂಲಕ್ಕಾಗಿ ಮಕ್ಕಳಿಗೆ ಮೊಬೈಲನ್ನು ಕೊಡುವವರೂ ಇದ್ದಾರೆ. ಮೊಬೈಲನ್ನು ಅತಿಯಾಗಿ ಬಳಸುವುದರಿಂದ ದೈಹಿಕ ನ್ಯೂನತೆಗಳನ್ನು ಅನುಭವಿಸುತ್ತಿದ್ದಾರೆ. ಹಾರ್ಮೋನ್ ಇಂಬ್ಯಾಲನ್ಸ ಆಗಿ ಅನೇಕ ತೊಂದರೆ ಅನುಭವಿಸುತ್ತಿದ್ದಾರೆ. ಒಂದೆಡೆ ಸಮೀಕ್ಷೆ ಮಾಡಿದಾಗ ಸುಮಾರು ೪೦೦ ಮಕ್ಕಳು ಕಣ್ಣಿನ ಸಮಸ್ಯೆ ಅನುಭವಿಸಿ ಕನ್ನಡಕ ಬಳಸುತ್ತಿರುವುದು ತಿಳಿದುಬಂದಿದೆ. ಇತ್ತೀಚೆಗೆ ೭-೮ ವಯಸ್ಸಿನ ಮಕ್ಕಳು ಕನ್ನಡಕ ಬಳಸುವುದನ್ನು ನೋಡಿದರೆ ಮುಂದಿನ ಪೀಳಿಗೆಯ ಗತಿ ಏನು? ಹುಟ್ಟಿನಿಂದಲೆ ಕನ್ನಡಕ ಬಳಸುವಂತಾಗಲಾರದೆ ಎನಿಸುವುದು.
   ಮಕ್ಕಳು ಬಾಲ್ಯದ ಆನಂದವನ್ನು ಎಷ್ಟರ ಮಟ್ಟಿಗೆ ಕಳೆದುಕೊಳ್ಳುತ್ತಿದ್ದಾರೆ ಎಂದರೆ, ಮಡಿಲಲ್ಲಿನ ಮಗುವಿಡಿದು ಕಂಕುಳಲಿನ ಹಾಗೂ ಎರಡನೇಯ ತರಗತಿಯ ಮಕ್ಕಳು ಕೈಗೆ ಮೊಬೈಲಿಟ್ಟರೆ ಮಾತ್ರ ಊಟ, ಹೋಂ ವರ್ಕ ಅಭ್ಯಾಸ ಮಾಡಬೇಕಂದರೆ ಮೊಬೈಲ ಕೊಟ್ಟರೆ ಮಾತ್ರ ಅಭ್ಯಾಸ ಮಾಡುವೆ ಎಂದು ಹೆತ್ತವರನ್ನೆ ಬ್ಲ್ಯಾಕಮೇಲ್ ಮಾಡುವಷ್ಟು ಮುಂದಾಗಿದ್ದಾರೆ. ಇದು ಸರಿ ಅಲ್ಲೇನಿಸಿ ಇದನ್ನು ಬಿಡಿಸಲೇಬೇಕೆಂದು ಹೆತ್ತವರೇನಾದರೂ ಮನಸ್ಸು ಮಾಡಿ ಮೊಬೈಲ ಕೊಡದಿದ್ದರೆ ಪ್ರಾಣವನ್ನೂ ಕಳೆದುಕೊಳ್ಳುವ ಮಟ್ಟಿಗೆ ಹೋಗಿದ್ದಾರೆ. ಅಂಥಹದರಲ್ಲಿ ಇವರಿಗೇನೂ ಗೊತ್ತಾಗುತ್ತೆ ಬಾಲ್ಯದ ಆನಂದದ ರಸಗಳಿಗೆಗಳು. ಬಾಲ್ಯದ ಆನಂದ ಅನುಭವಿಸಿದ  ನಮ್ಮಂತವರು  ಹೇಳಿದಾಗ ಕೇಳಿ ತಿಳಿಯಬೇಕಷ್ಟೆ.
      ನಮಗೆ ಮಾತ್ರ ಬಾಲ್ಯ ತುಂಬ ತಿಳಿಸಿಕೊಟ್ಟಿದೆ. ಆಡುತ್ತ ನಲಿಯುತ್ತ ಕಲಿತ ಕಲಿಕೆ, ಇಂದು ನಮ್ಮ ಬಾಳಿನ ಭವಿಷ್ಯವನ್ನು ರೂಪಿಸಲು ಸಹಕಾರಿಯಾಗಿದೆ. ಬಾಲ್ಯದ ಸವಿ ಆನಂದ ಮೆಲ್ಲಿದಷ್ಟು ಕಡಿಮೆನೆ. . ಬದುಕಿನ ಕೊನೆಯ ಘಟ್ಟದಲ್ಲಿ ಬಾಲ್ಯದ ಆನಂದದ ಬುತ್ತಿಯನ್ನು ಬಿಚ್ಚಿ ಸವಿಯ ಹೊರಟಲ್ಲಿ ಬದುಕಿಗೆ ಸಾರ್ಥಕತೆ ಕಂಡುಕೊಳ್ಳುತ್ತೇವೆ. ಮೊಬೈಲ ಬರೀ ದುಷ್ಪರಿಣಾಮಗಳನ್ನೆ ಬೀರುತ್ತೆ ಅಂತ ನಾನು ಹೇಳಹೊರಟಿಲ್ಲ, ಆದರೆ ಅದು ಹಾಗೆ ಆಗಿರುವುದು ವಾಸ್ತವ. ಸರಿಯಾಗಿ ಬಳಕೆ ಮಾಡಿಕೊಂಡರೆ ಅದರ ಪರಿಣಾಮವೇ ಬೇರೆಯಾಗಿರುತಿತ್ತು.
       ನಮ್ಮ ಆಚಾರ, ವಿಚಾರ, ಸಂಪ್ರದಾಯ , ಸಂಸ್ಕೃತಿ,ಸಂಸ್ಕಾರವನ್ನು   ಬಾಲ್ಯದಲ್ಲಿಯೇ ಬಿತ್ತಿ ಬೆಳೆಸಬೇಕಾದ ಕಾಲಘಟ್ಟ ಬಾಲ್ಯ. ಇವನ್ನೆಲ್ಲ ಕಲಿತು ನಲಿಯಬೇಕಾದ ಮಕ್ಕಳು ತಮ್ಮ ಸಂತೋಷವನ್ನು ಮೊಬೈಲ್ ಕಾರಣಕ್ಕಾಗಿ ಕಳೆದುಕೊಳ್ಳುತ್ತಿದ್ದಾರೆ ಹೀಗಾಗಿ ಮೊಬೈಲ್ ಎಂಬ ಮಾಯಾವಿ ಸಾಧನ ಇಂದು ಮಕ್ಕಳ ಆನಂದವನ್ನು ಕಸಿಕೊಳ್ಳುತ್ತಿದೆ.
       ಮಕ್ಕಳ ದಿನಾಚರಣೆಯ ಈ ಸುಸಂದರ್ಭದಲ್ಲಿ ಈ ಲೇಖನ ಓದಿ ಕೆಲವರಾದರೂ ಇದರ ಒಳಿತಿಗೆ ಆಶಿಸಿಸಿದರೆ ನಮ್ಮ ಮಕ್ಕಳಿಗೆ ನಾವು ಅನುಭವಿಸಿದಂತಹ ಬಾಲ್ಯದ ಆನಂದವನ್ನು ಅನುಭವಿಸುವಂತೆ ಸಹಕಾರಿಯಾದಿತು ಎಂಬುದು ನನ್ನ ಆಶಯ.
   “ಎಲ್ಲ ಮಕ್ಕಳಿಗೂ ಮಕ್ಕಳ ದಿನಾಚರಣೆಯ ಶುಭಾಶಯಗಳು”


ರೋಹಿಣಿ ಯಾದವಾಡ

About The Author

Leave a Reply

You cannot copy content of this page

Scroll to Top