ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

       ಮಾನವನ ಜೀವನದಲ್ಲಿ ಬಾಲ್ಯ ಅತ್ಯಂತ ಮಧುರವಾದ, ನಿರ್ದೋಷ ಮತ್ತು ಚಿಂತೆರಹಿತ ಕಾಲಘಟ್ಟ ವಾಗಿದೆ . ನಾವು ಕಂಡು ಅನುಭವಿಸಿದ  ನಮ್ಮ ಬಾಲ್ಯ ಮುಂದಿನ ಪೀಳಿಗೆಯವರ ಬಾಲ್ಯವನ್ನು ಹೋಲಿಸಿದರೆ ಅದು ಎರಡು ವಿಭಿನ್ನ ಯುಗಗಳಂತೆ ಕಾಣುತ್ತದೆ. ಕಾಲ ಬದಲಾಗಿದೆ, ತಂತ್ರಜ್ಞಾನ ಬೆಳೆಯಿತು, ಸಮಾಜದ ರೂಪು ಬದಲಾಗಿದೆ. ಈ ಎಲ್ಲವು ಬಾಲ್ಯದ ಸ್ವರೂಪಕ್ಕೂ ದೊಡ್ಡ ಬದಲಾವಣೆಯನ್ನು ತಂದಿವೆ.

      ನಾವು ಕಂಡ ಬಾಲ್ಯ ಸರಳ, ಸಹಜ ಮತ್ತು ಪ್ರಕೃತಿಯೊಂದಿಗೆ ಬೆರೆಯುತ್ತಿದ್ದಂತಹದ್ದಾಗಿತ್ತು. ಶಾಲೆಯಿಂದ ಬಂದು ಹಾಲು ಕುಡಿಯುತ್ತಿದ್ದಂತೆ ಹೊರಗೆ ಓಡಿಹೋಗುತ್ತಿದ್ದೆವು. ಮಣ್ಣಿನಲ್ಲಿ ಆಟ, ಕಬ್ಬಡಿ, ಚಿಲಿಪಿಲಿ, ಹಗ್ಗಜಗ್ಗಾಟ, ಮರದ ಮೇಲೆ ಹತ್ತುವುದು, ಹೊಳೆಯಲಿ ಈಜುವುದು ಇವುಗಳಲ್ಲೇ ನಮ್ಮ ಸಂತೋಷವನ್ನು  ಕಾಣುತ್ತಿದ್ದೆವು. ಮನೆಗಳಲ್ಲಿ ಟೀವಿ ಅಪರೂಪ, ಟಿವಿ ಇದ್ದವರು ಮನೆಗೆ ವಾರದಲ್ಲಿ ಒಂದು ದಿನ ರಾಮಾಯಣ ಮಹಾಭಾರತ ಧಾರಾವಾಹಿ ನೋಡಲು ಹೋಗುತ್ತಿದ್ದೇವು. ಅಕ್ಕಪಕ್ಕದ ಮನೆಯವರೆಲ್ಲ ಒಟ್ಟಿಗೆ ಕೂತು ಚರ್ಚೆ ಮಾಡುತ್ತ ನೋಡುತ್ತಿದ್ದೆವು.  ಮೊಬೈಲ್ ಎಂಬುದು ಇರಲೇ ಇಲ್ಲ.  ನಮ್ಮ ಪೋಷಕರು ಹೆಚ್ಚು ಕಾಳಜಿ ತೋರಿದ್ದರು. ನಮ್ಮ ಸ್ವಾತಂತ್ರ್ಯವನ್ನು ಕಸಿದುಕೊಂಡಿರಲಿಲ್ಲ. ರಜಾದಿನಗಳಲ್ಲಿ ತಾತ-ಅಜ್ಜಿಯ ಮನೆಗೆ ಹೋಗಿ ಅವರ ಕಥೆಗಳನ್ನು ಕೇಳುವುದು,  ಅಜ್ಜಿಯ ಕೈತುತ್ತು ತಿನ್ನುವುದು. ಅಜ್ಜಿಯ ಜೊತೆ ಚಕ್ಕಾವಚ್ಚಿ ಗುಳಿಮನೆ, ಕೇರಂ, ಚದುರಂಗ ಒಂದಾದ ಮೇಲೆ ಒಂದು ಆಟ ಆಡುತ್ತಿದ್ದ ಸಂತೋಷದ ಕ್ಷಣ  ಇವತ್ತಿಗೂ ಕಣ್ಣಮುಂದೆ ಸುಳಿದು ಮಾಯವಾಗುತ್ತದೆ. ಹಳ್ಳಿಯ ಹಬ್ಬಗಳಲ್ಲಿ ಪಾಲ್ಗೊಳ್ಳುವುದು ನಮ್ಮ ಹಬ್ಬದ ಭಾಗವಾಗಿತ್ತು. ಅಂದಿನ ಬಾಲ್ಯದಲ್ಲಿ ಸಹಕಾರ, ಹೊಂದಾಣಿಕೆ, ಸಂಭ್ರಮ ಮತ್ತು ಮಮತೆಯ ಬಾಂಧವ್ಯ ತುಂಬಿಕೊಂಡಿತ್ತು. ಶಾಲೆಗಳಲ್ಲಿ ಶಿಕ್ಷಕರ ಪಾಠ ಕೇಳುವುದು, ಶಿಕ್ಷಕರೊಂದಿಗೆ ಪ್ರವಾಸಕ್ಕೆ ಹೋಗಿದ್ದು, ಶಾಲಾ ನಾಟಕಗಳಲ್ಲಿ ಭಾಗವಹಿಸಿದ್ದು, ಆಶುಭಾಷಣ ಸ್ಪರ್ಧೆಯಲ್ಲಿ ಬಹುಮಾನ ಗೆದ್ದಿದ್ದು, ಅಂತರ್ ಶಾಲಾ ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಬಂದಿದ್ದು ಎಲ್ಲವೂ ಇನ್ನೂ ಹಚ್ಚ ಹಸಿರಾಗಿದೆ.  ನನಗೆ ಯಾರಾದ್ರೂ ಅತಿಥಿಗಳು ಬಂದರೆ ಅವರನ್ನು ಸಂತೋಷದಿಂದ ಬರಮಾಡಿಕೊಳ್ಳುವುದು ಆದರೆ ಆದರಾಥಿತ್ಯ  ಮಾಡುವುದು. ಬಂಧುಗಳಿಂದ ಶಬ್ಬಾಷ್ ಎನಿಸಿಕೊಳ್ಳುವುದು. ಎಲ್ಲವೂ ಬಹಳ ಆನಂದ ಕೊಡುತ್ತಿತ್ತು. ಮನೆಯಲ್ಲಿ ಅಮ್ಮನಿಗೆ ಅಡಿಗೆ ಕೆಲಸದಲ್ಲಿ ಸಹಾಯ ಮಾಡುವುದು, ಅಡಿಗೆ ಮಾಡಲು ಕಲಿತುಕೊಳ್ಳುವುದು ಒಂದು ಹೊಸ ಅನುಭವವನ್ನೇ ತಂದು ಕೊಡುತ್ತಿತ್ತು.  ಕೂಡು ಕುಟುಂಬದಲ್ಲಿ ಎಲ್ಲರೂ ಒಟ್ಟಿಗೆ ಕೂತು ಊಟ ಮಾಡುವುದು ಒಬ್ಬರನ್ನೊಬ್ಬರು ಕಿಟಲೆ ಮಾಡುವುದು, ನಗುನಗುತ್ತ  ಅಕ್ಕ ತಂಗಿ ಅಣ್ಣ ತಮ್ಮಂದಿರೊಂದಿಗೆ ಕಾಲ ಕಳೆಯುವುದು ಇಂದಿನ ಮಕ್ಕಳ ಬಾಲ್ಯದಲ್ಲಿ ಕಾಣಲು ಸಿಗುವುದೇ ಇಲ್ಲ.
ಇಂದಿನ ಮಕ್ಕಳ ಬಾಲ್ಯ ಸಂಪೂರ್ಣ ವಿಭಿನ್ನ. ಅವರ ಜೀವನವು ಡಿಜಿಟಲ್ ಪರದೆಯೊಳಗೆ ಸೀಮಿತವಾಗಿದೆ. ಮೊಬೈಲ್, ಟ್ಯಾಬ್, ಕಂಪ್ಯೂಟರ್, ವಿಡಿಯೋ ಗೇಮ್ಸ್, ಟೀವಿ ಕಾರ್ಟೂನ್  ಇವುಗಳೇ ಅವರ ಆಟದ ಲೋಕ. ಹೊರಗೆ ಹೋಗಿ ಮಣ್ಣಿನಲ್ಲಿ ಆಡಬೇಕೆಂಬ ಆಸೆ ಕಡಿಮೆ. ಕೆಲವೊಮ್ಮೆ ಪೋಷಕರು ಭದ್ರತೆ ಮತ್ತು ಪಾಠದ ಒತ್ತಡದಿಂದ ಮಕ್ಕಳನ್ನು ಹೊರಗೆ ಬಿಡುವುದಿಲ್ಲ. ಮತ್ತೆ ಕೆಲವೊಮ್ಮೆ ಆಟ ಆಡಲು ಮಕ್ಕಳೇ ಇರುವುದಿಲ್ಲ. ಮಕ್ಕಳು ಒಂಟಿತನ ಅನುಭವಿಸಬೇಕಾಗಿದೆ. ಮನೆಗೊಂದೇ ಮಗು ಇರುವ ತುಂಬಗಳೇ ಬಹಳಷ್ಟು ಇವೆ. ಕೂಡಿ ಬಾಳುವ ಸ್ವರ್ಗ ಸುಖ ಇಂದಿನ ಮಕ್ಕಳಿಗೆ ಗೊತ್ತೇ ಇಲ್ಲ.  ಶಾಲೆಯ ಪಾಠಗಳು, ಟ್ಯೂಷನ್, ಹವ್ಯಾಸ ತರಗತಿಗಳು — ಇವುಗಳಲ್ಲಿ ಮಕ್ಕಳು ಸಿಕ್ಕಿಹಾಕಿಕೊಳ್ಳುತ್ತಿದ್ದಾರೆ. ಅವರ ಬಾಲ್ಯದಲ್ಲಿ ನೈಸರ್ಗಿಕ ಅನುಭವಗಳು, ಸಾಮಾಜಿಕ ಬಾಂಧವ್ಯಗಳು ಮತ್ತು ಹಳ್ಳಿಯ ಮಣ್ಣಿನ ಸುಗಂಧದ ಕೊರತೆ ಇದೆ.
ಆದರೆ, ಇಂದಿನ ಪೀಳಿಗೆಯ ಮಕ್ಕಳಿಗೂ ತಮ್ಮದೇ ವಿಶಿಷ್ಟತೆ ಇದೆ. ಅವರು ತಂತ್ರಜ್ಞಾನದಲ್ಲಿ ಚುರುಕು, ಜ್ಞಾನಾರ್ಜನೆಯಲ್ಲಿ ವೇಗದವರು. ಅವರು ಬಾಲ್ಯದಲ್ಲೇ ಅಂತರಜಾಲದ ಮೂಲಕ ವಿಶ್ವವನ್ನು ಕಾಣಬಲ್ಲರು. ವಿಜ್ಞಾನ, ಕಲಿಕೆ, ಸಂವಹನ — ಎಲ್ಲದರಲ್ಲೂ ಹೊಸ ಅವಕಾಶಗಳು ದೊರೆತಿವೆ. ಆದರೆ ಈ ವೇಗದ ಬದುಕಿನಲ್ಲಿ ಅವರ ಮನಸ್ಸು ಮಗುತನ ಕಳೆದುಕೊಳ್ಳುತ್ತಿರುವಂತೆ ಕಾಣುತ್ತದೆ.

ನಾವು ಕಂಡ ಬಾಲ್ಯ ಮತ್ತು ಇಂದಿನ ಬಾಲ್ಯ ಎರಡಕ್ಕೂ ತಮ್ಮದೇ ಆದ ಸೌಂದರ್ಯ ಹಾಗೂ ಸವಾಲುಗಳಿವೆ. ಅಂದಿನ ಬಾಲ್ಯ ಪ್ರಕೃತಿಯ ಮಡಿಲಿನದು, ಇಂದಿನದು ತಂತ್ರಜ್ಞಾನದ ಮಡಿಲಿನದು. ಒಂದು ಸರಳತೆ ತುಂಬಿದ ಯುಗ, ಮತ್ತೊಂದು ವೇಗದಿಂದ ಓಡುವ ಯುಗ.

ಆದರೆ, ಎರಡರಲ್ಲಿಯೂ ಮುಖ್ಯ ಪಾಠವೆಂದರೆ  ಮಕ್ಕಳ ಬಾಲ್ಯವನ್ನು ಸಂತೋಷಭರಿತ, ಆತ್ಮೀಯ ಮತ್ತು ಸಮತೋಲನಯುತವಾಗಿಡುವುದು ಪೋಷಕರು ಮತ್ತು ಸಮಾಜದ ಜವಾಬ್ದಾರಿ. ತಂತ್ರಜ್ಞಾನವನ್ನೂ ಕಲಿಕೆಯನ್ನುೂ ಸಮತೋಲನದಲ್ಲಿಟ್ಟರೆ, ಮುಂದಿನ ಪೀಳಿಗೆಯ ಮಕ್ಕಳೂ ಸಹ ನಿಜವಾದ ಬಾಲ್ಯವನ್ನು ಅನುಭವಿಸಬಹುದು.

     ಬಾಲ್ಯ ಎಂದರೆ ಬದುಕಿನ ಬುನಾದಿ. ನಾವು ಕಂಡ ಬಾಲ್ಯದಲ್ಲಿದ್ದ ಸೌಹಾರ್ದ, ಪ್ರಕೃತಿ ಪ್ರೀತಿ, ಆಟದ ಸಂತೋಷ  ಇವುಗಳನ್ನು ಮುಂದಿನ ಪೀಳಿಗೆಯ ಮಕ್ಕಳಿಗೂ ನೀಡಲು ಪ್ರಯತ್ನಿಸೋಣ. ಅಷ್ಟೇ ಆಗ ಅವರ ಬಾಲ್ಯವೂ ನಿಜವಾದ ಮಧುರ ಸ್ಮರಣೆಯಾಗುತ್ತದೆ. ಅದು ಎಂದೂ ಸವೆಯದ ಅಕ್ಷಯಪಾತ್ರೆ.

About The Author

Leave a Reply

You cannot copy content of this page

Scroll to Top