ಕಾವ್ಯಸಂಗಾತಿ
ಜಯಶ್ರೀ ಭಂಡಾರಿ
ಗಜಲ್


ಜಾತ್ರೆಯಲ್ಲಿ ಬಲೂನು ಮಾರಲು ಬಂದಿಹಳು ಬಾಲೆ.
ಧಾತ್ರಿಯಲ್ಲಿ ಜನರು ಕೊಳ್ಳುವರೆಂದು ತಂದಿಹಳು ಬಾಲೆ.
ತೊಟ್ಟ ಬಟ್ಟೆಯ ನೋಡಿದರೆ ಬಡತನ ಅರಿವಾಗದೆ
ಬಿಟ್ಟ ಕಂಗಳಿಂದ ನೋಡುತ ನಿಂದಿಹಳು ಬಾಲೆ.
ಬಟ್ಟಬಯಲಿನ ಮೇಳದಲಿ ಕಣ್ಣು ಕೋರೈಸುವ ಬೆಳಕಿದೆ.
ನಿಟ್ಟುಸಿರ ಚೆಲ್ಲುತ ಅಲೆದಲೆದು ನೊಂದಿಹಳು ಬಾಲೆ
ಕೆದರಿದ ಕೂದಲು ಸಪ್ಪೆಯ ಮುಖ ಮನಕಲಕುವಂತಿದೆ.
ಬೆದರುತ ಭವಿಷ್ಯದ ಪರಿಸ್ಥಿತಿಗೆ ಕುಂದಿಹಳು ಬಾಲೆ
ದಯನೀಯ ಪರಿಸ್ಥಿತಿ ಮಕ್ಕಳಿಗೆಂದಿಗೂ ಬರದಿರಲಿ ಜಯಾ
ದಯಾಮಯ ದೇವನೇ ಸಲಹೆಂದು ಬೆಂದಿಹಳು ಬಾಲೆ
ಜಯಶ್ರೀ ಭಂಡಾರಿ ಬಾದಾಮಿ





ಅಭಿನಂದನೆಗಳು. ಚೆನ್ನಾಗಿದೆ.